Fight to save Aravalli: Congress protests across Rajasthan; What is the problem? Why the fight?
x

ಅರಾವಳಿ ಬೆಟ್ಟಗಳ ಸಾಲು

ಅರಾವಳಿ ಉಳಿಸಿ ಹೋರಾಟ: ರಾಜಸ್ಥಾನದಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ; ಏನಿದು ಸಮಸ್ಯೆ? ಯಾಕೆ ಹೋರಾಟ?

ರಾಜ್ಯದ ‘ಪರಿಸರ ಶ್ವಾಸಕೋಶ’ ಎಂದೇ ಕರೆಯಲ್ಪಡುವ ಅರಾವಳಿ ವ್ಯಾಪ್ತಿಯನ್ನು ಕುಗ್ಗಿಸುವ ಈ ನಡೆ, ಗಣಿಗಾರಿಕೆಗೆ ಹಾದಿ ಸುಗಮ ಮಾಡಿಕೊಡಲಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪ.


Click the Play button to hear this message in audio format

ದೇಶದ ಅತ್ಯಂತ ಹಳೆಯ ಪರ್ವತ ಶ್ರೇಣಿಯಾದ ಅರಾವಳಿ ಬೆಟ್ಟಗಳನ್ನು ಸಂರಕ್ಷಿಸುವ ವಿಚಾರ ಈಗ ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಮತ್ತು ಸಾಮಾಜಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಒಪ್ಪಿಕೊಂಡಿರುವ ಅರಾವಳಿ ಬೆಟ್ಟಗಳ ‘ಹೊಸ ವ್ಯಾಖ್ಯಾನ’ದ ವಿರುದ್ಧ ಕಾಂಗ್ರೆಸ್ ಹಾಗೂ ವಿವಿಧ ಪರಿಸರ ಸಂಘಟನೆಗಳು ಸೋಮವಾರ (ಡಿ.22) ರಾಜಸ್ಥಾನದಾದ್ಯಂತ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಿವೆ.

ರಾಜ್ಯದ ‘ಪರಿಸರ ಶ್ವಾಸಕೋಶ’ ಎಂದೇ ಕರೆಯಲ್ಪಡುವ ಅರಾವಳಿ ವ್ಯಾಪ್ತಿಯನ್ನು ಕುಗ್ಗಿಸುವ ಈ ನಡೆ, ಗಣಿಗಾರಿಕೆಗೆ ಹಾದಿ ಸುಗಮ ಮಾಡಿಕೊಡಲಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪ.

ಏನಿದು ವಿವಾದ? ಹೋರಾಟವೇಕೆ?

ಕೇಂದ್ರ ಪರಿಸರ ಸಚಿವಾಲಯದ ಸಮಿತಿಯ ಶಿಫಾರಸಿನ ಮೇರೆಗೆ ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಅರಾವಳಿ ಬೆಟ್ಟಗಳಿಗೆ ಹೊಸ ವ್ಯಾಖ್ಯಾನ ಅಂಗೀಕರಿಸಿದೆ. ಇದರ ಪ್ರಕಾರ, ಸ್ಥಳೀಯ ಭೂಮಟ್ಟದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಮಾತ್ರ ‘ಅರಾವಳಿ ಬೆಟ್ಟ’ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಎರಡು ಬೆಟ್ಟಗಳ ನಡುವೆ ಕನಿಷ್ಠ 500 ಮೀಟರ್ ಅಂತರವಿದ್ದರೆ ಮಾತ್ರ ಅದನ್ನು ‘ಅರಾವಳಿ ಶ್ರೇಣಿ’ ಎಂದು ಕರೆಯಲಾಗುತ್ತದೆ.

ಈ ಹೊಸ ಮಾನದಂಡ ಜಾರಿಯಾದರೆ, ಪ್ರಸ್ತುತ ಅರಾವಳಿ ಎಂದು ಗುರುತಿಸಿಕೊಂಡಿರುವ ಶೇ.90ರಷ್ಟು ಭೂಭಾಗ ಕಾನೂನು ರಕ್ಷಣೆಯಿಂದ ಹೊರಗುಳಿಯಲಿದೆ. ಇದರಿಂದಾಗಿ ಸಂರಕ್ಷಿತ ವಲಯಗಳಲ್ಲಿ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ದಂಧೆಗಳಿಗೆ ಮುಕ್ತ ಅವಕಾಶ ಸಿಗಲಿದೆ ಎಂಬುದು ಕಾಂಗ್ರೆಸ್ ಹಾಗೂ ಪರಿಸರವಾದಿಗಳ ವಾದ.

ರಾಜ್ಯವ್ಯಾಪಿ ಪ್ರತಿಭಟನೆಯ ಕಿಚ್ಚು

ಸೋಮವಾರ ನಡೆದ ಪ್ರತಿಭಟನೆಯಲ್ಲಿ ಉದಯಪುರ, ಸಿಕಾರ್, ಜೋಧಪುರ ಮತ್ತು ಅಲ್ವಾರ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಉದಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕರ್ಣಿ ಸೇನೆ ಸದಸ್ಯರು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಲು ಯತ್ನಿಸಿದಾಗ ಪೊಲೀಸರೊಂದಿಗೆ ಘರ್ಷಣೆ ಏರ್ಪಟ್ಟಿತ್ತು. ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಕಾರ್​​ನಲ್ಲಿ ಹರ್ಷ್ ಪರ್ವತದ ತಪ್ಪಲಿನಲ್ಲಿ ಜಮಾಯಿಸಿದ ಪರಿಸರ ಹೋರಾಟಗಾರರು, "ಅಭಿವೃದ್ಧಿಯ ಹೆಸರಲ್ಲಿ ವನ್ಯಜೀವಿಗಳ ಆವಾಸಸ್ಥಾನ ನಾಶವಾದರೆ ಪ್ರಾಣಿಗಳು ಎಲ್ಲಿಗೆ ಹೋಗಬೇಕು?" ಎಂದು ಪ್ರಶ್ನಿಸಿದರು.

ಜೋಧಪುರದಲ್ಲಿ ಎನ್‌ಎಸ್‌ಯುಐ (NSUI) ಕಾರ್ಯಕರ್ತರು ಬ್ಯಾರಿಕೇಡ್‌ಗಳ ಮೇಲೆ ಏರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜಕೀಯ ವಾಕ್ಸಮರ

ವಿರೋಧ ಪಕ್ಷದ ನಾಯಕ ಟಿಕಾರಾಮ್ ಜೂಲಿ ಅವರು ಅಲ್ವಾರ್‌ನಲ್ಲಿ ಮಾತನಾಡುತ್ತಾ, "ಅರಾವಳಿ ರಾಜಸ್ಥಾನದ ಶ್ವಾಸಕೋಶವಿದ್ದಂತೆ. ಬಿಜೆಪಿ ಸರ್ಕಾರ ಇದನ್ನು ರಿಯಲ್ ಎಸ್ಟೇಟ್ ಲಾಬಿಗೆ ಬಲಿಗೊಡುತ್ತಿದೆ. ಈ ಹೊಸ ವ್ಯಾಖ್ಯಾನವನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ," ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಈ ಹಿಂದೆ, ಮೋದಿ ಸರ್ಕಾರ ಅರಾವಳಿ ಬೆಟ್ಟಗಳಿಗೆ "ಮರಣ ಶಾಸನ" ಬರೆದಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್, "ಅರಾವಳಿಯ ಶೇ. 90ರಷ್ಟು ಭಾಗ ಸುರಕ್ಷಿತವಾಗಿಯೇ ಉಳಿಯಲಿದೆ. ಗಣಿಗಾರಿಕೆಗೆ ಯಾವುದೇ ಸಡಿಲಿಕೆ ನೀಡಿಲ್ಲ," ಎಂದು ಸ್ಪಷ್ಟಪಡಿಸಿದ್ದರು.

ಅರಾವಳಿ ಉಳಿಯದಿದ್ದರೆ ಏನಾಗುತ್ತೆ?

ಪರಿಸರ ತಜ್ಞರ ಪ್ರಕಾರ, ಅರಾವಳಿ ಬೆಟ್ಟಗಳು ಕೇವಲ ಕಲ್ಲುಬಂಡೆಗಳಲ್ಲ. ಅವು ರಾಜಸ್ಥಾನದ ಮರುಭೂಮಿ ವಿಸ್ತರಣೆಯನ್ನು ತಡೆಯುವ ನೈಸರ್ಗಿಕ ತಡೆಗೋಡೆಗಳು. ಇವು ಅಂತರ್ಜಲ ಮರುಪೂರಣಕ್ಕೆ ಮತ್ತು ಉತ್ತರ ಭಾರತದ ವಾಯು ಮಾಲಿನ್ಯ ತಡೆಗೆ ನಿರ್ಣಾಯಕವಾಗಿವೆ. ಹೊಸ ನಿಯಮ ಜಾರಿಯಾದರೆ, ನೀರಿನ ಬವಣೆ ಹೆಚ್ಚಾಗುವುದರ ಜತೆಗೆ, ಅಪರೂಪದ ವನ್ಯಜೀವಿ ಸಂಕುಲ ನಾಶವಾಗುವ ಭೀತಿ ಎದುರಾಗಿದೆ.

Read More
Next Story