
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್
'ನನ್ನ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ': 'ಕೋಮು' ಹೇಳಿಕೆಗೆ ಎ.ಆರ್. ರೆಹಮಾನ್ ಸ್ಪಷ್ಟನೆ
ಉದ್ದೇಶಗಳು ಕೆಲವೊಮ್ಮೆ ತಪ್ಪಾಗಿ ಅರ್ಥೈಸಲ್ಪಡುತ್ತವೆ, ಆದರೆ ಯಾರ ಭಾವನೆಗಳಿಗೂ ನೋವುಂಟು ಮಾಡುವ ಆಲೋಚನೆ ತಮಗಿಲ್ಲ ಎಂದು ಎ.ಆರ್. ರೆಹಮಾನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿನ ಬದಲಾದ ಪರಿಸ್ಥಿತಿ ಹಾಗೂ ತಮಗೆ ಸಿಗುತ್ತಿರುವ ಅವಕಾಶಗಳ ಕುರಿತು ಇತ್ತೀಚೆಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದ ಕುರಿತು ಮೌನ ಮುರಿದಿರುವ ರೆಹಮಾನ್, ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಉದ್ದೇಶಗಳು ಕೆಲವೊಮ್ಮೆ ತಪ್ಪಾಗಿ ಅರ್ಥೈಸಲ್ಪಡುತ್ತವೆ, ಆದರೆ ಯಾರ ಭಾವನೆಗಳಿಗೂ ನೋವುಂಟು ಮಾಡುವ ಆಲೋಚನೆ ತಮಗಿಲ್ಲ ಎಂದು ಅವರು ಹೇಳಿದ್ದಾರೆ.
ವಿವಾದಕ್ಕೆ ಕಾರಣವಾದ ಆ ಒಂದು ಹೇಳಿಕೆ
ಕೆಲವು ದಿನಗಳ ಹಿಂದೆ 'ಬಿಬಿಸಿ ಏಷ್ಯನ್ ನೆಟ್‌ವರ್ಕ್'ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಅವರು ಬಾಲಿವುಡ್‌ನಲ್ಲಿ ನಡೆಯುತ್ತಿರುವ 'ಪವರ್ ಶಿಫ್ಟ್' ಬಗ್ಗೆ ಮಾತನಾಡಿದ್ದರು. "ಹಿಂದಿ ಚಿತ್ರರಂಗದಲ್ಲಿ ಈಗ ಸೃಜನಶೀಲರಲ್ಲದವರ ಕೈಯಲ್ಲಿ ಅಧಿಕಾರವಿದೆ. ನನಗೆ ಬರಬೇಕಾದ ಕೆಲಸಗಳನ್ನು ತಡೆಯಲಾಗುತ್ತಿದೆ. ಇದು ಒಂದು ರೀತಿಯ 'ಕೋಮು' (Communal) ವಿಚಾರವೂ ಆಗಿರಬಹುದು. ಆದರೆ ಇದು ನನ್ನ ಮುಖದ ಮೇಲೆ ನೇರವಾಗಿ ನಡೆಯುತ್ತಿಲ್ಲ, ಬದಲಾಗಿ ಪಿಸುಮಾತುಗಳಂತೆ ನನಗೆ ಕೇಳಿಬರುತ್ತಿದೆ. ಒಂದು ಚಿತ್ರಕ್ಕೆ ನನ್ನನ್ನು ಅಂತಿಮಗೊಳಿಸಿದ ನಂತರವೂ, ಸಂಗೀತ ಸಂಸ್ಥೆಗಳು ಬೇರೆ ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡ ಉದಾಹರಣೆಗಳಿವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ 'ಕೋಮು' ಎಂಬ ಪದದ ಬಳಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು.
ಭಾರತವೇ ನನ್ನ ಸ್ಫೂರ್ತಿ ಎಂದ ಇಸೈ ಪುಯಲ್
ತಮ್ಮ ಸ್ಪಷ್ಟನೆಯ ವಿಡಿಯೋದಲ್ಲಿ ಅತ್ಯಂತ ವಿನಮ್ರವಾಗಿ ಮಾತನಾಡಿರುವ ರೆಹಮಾನ್, "ಭಾರತವೇ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಸಂಗೀತದ ಮೂಲಕ ಭಾರತದ ಸಂಸ್ಕೃತಿಯನ್ನು ಸಂಭ್ರಮಿಸುವುದು ಮತ್ತು ಗೌರವಿಸುವುದೇ ನನ್ನ ಮೊದಲ ಆದ್ಯತೆ. ನನ್ನ ಪ್ರಾಮಾಣಿಕತೆಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ದೇಶದ ಬಹುಸಂಸ್ಕೃತಿಯ ಧ್ವನಿಗಳನ್ನು ಪ್ರತಿನಿಧಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಲು ನನಗೆ ಹೆಮ್ಮೆಯಿದೆ," ಎಂದು ತಿಳಿಸಿದ್ದಾರೆ. ಈ ಮೂಲಕ ತಾವು ನೀಡಿದ ಹೇಳಿಕೆಯು ಕೇವಲ ಉದ್ಯಮದ ಒಳಗಿನ ಕೆಲವು ಅಡೆತಡೆಗಳ ಬಗ್ಗೆ ಇತ್ತೇ ಹೊರತು, ದೇಶದ ಮೇಲಿನ ಅಸಮಾಧಾನವಲ್ಲ ಎಂಬುದನ್ನು ಅವರು ಪರೋಕ್ಷವಾಗಿ ವಿವರಿಸಿದ್ದಾರೆ.
ಸಾಧನೆಗಳ ಪಟ್ಟಿ ಬಿಚ್ಚಿಟ್ಟ ಸಂಗೀತ ಮಾಂತ್ರಿಕ
ತಮ್ಮ ವೃತ್ತಿಜೀವನವು ಭಾರತದ ವಿವಿಧತೆಯನ್ನು ಸಾರುವಂತಿದೆ ಎಂದು ಪ್ರತಿಪಾದಿಸಿರುವ ಅವರು, ಇತ್ತೀಚಿನ ತಮ್ಮ ಪ್ರಮುಖ ಕಾರ್ಯಗಳನ್ನು ನೆನಪಿಸಿಕೊಂಡಿದ್ದಾರೆ. "ಗೌರವಾನ್ವಿತ ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ತಮಿಳು ಸಂಸ್ಕೃತಿಯನ್ನು ಬಿಂಬಿಸುವ 'ಝಾಲಾ' ಪ್ರಸ್ತುತಿ, ನಾಗಾಲ್ಯಾಂಡ್‌ನ ಯುವ ಸಂಗೀತಗಾರರೊಂದಿಗೆ ಸಹಯೋಗ, ಮತ್ತು ಸನ್‌ಶೈನ್ ಆರ್ಕೆಸ್ಟ್ರಾವನ್ನು ಬೆಳೆಸುವ ಕಾರ್ಯಗಳು ನನ್ನ ಉದ್ದೇಶವನ್ನು ಸಾರಿ ಹೇಳುತ್ತವೆ. ಇದೀಗ ಹ್ಯಾನ್ಸ್ ಜಿಮ್ಮರ್ ಅವರಂತಹ ದಿಗ್ಗಜರೊಂದಿಗೆ ಸೇರಿ 'ರಾಮಾಯಣ'ದಂತಹ ಮಹಾಕಾವ್ಯಕ್ಕೆ ಸಂಗೀತ ನೀಡುತ್ತಿರುವುದು ನನಗೆ ಸಿಕ್ಕ ಗೌರವ," ಎಂದು ಹೇಳುವ ಮೂಲಕ ತಾವು ಸದಾ ಭಾರತೀಯ ಮೌಲ್ಯಗಳ ಪರವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

