
ಎ.ಆರ್. ರೆಹಮಾನ್
ʻಕೋಮುವಾದದಿಂದ ಅವಕಾಶಗಳಿಲ್ಲʼ- ವಿವಾದಕ್ಕೆ ಕಿಚ್ಚು ಹಚ್ಚಿದ ಎ.ಆರ್. ರೆಹಮಾನ್
ಬಾಲಿವುಡ್‌ನಲ್ಲಿ ಕೆಲಸ ಸಿಗದಿರಲು ಕೋಮು ಕಾರಣಗಳಿವೆ ಎಂಬ ಎ.ಆರ್. ರೆಹಮಾನ್ ಆರೋಪಕ್ಕೆ ಜಾವೇದ್ ಅಖ್ತರ್ ಮತ್ತು ಶಾನ್ ನೀಡಿದ ತಿರುಗೇಟಿನ ಸಂಪೂರ್ಣ ವಿವರ ಇಲ್ಲಿದೆ.
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಇತ್ತೀಚೆಗೆ ಹಿಂದಿ ಚಿತ್ರರಂಗದ (ಬಾಲಿವುಡ್) ಆಂತರಿಕ ರಾಜಕೀಯ ಮತ್ತು ಬದಲಾಗಿರುವ ಕಾರ್ಯವೈಖರಿಯ ಬಗ್ಗೆ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
"ಕಳೆದ ಎಂಟು ವರ್ಷಗಳಿಂದ ಬಾಲಿವುಡ್‌ನಲ್ಲಿ ಅಧಿಕಾರದ ಬದಲಾವಣೆಯಾಗಿದೆ. ಸೃಜನಶೀಲತೆ ಇಲ್ಲದವರ ಕೈಗೆ ಅಧಿಕಾರ ಸಿಕ್ಕಿದೆ. ನನಗೆ ಕೆಲಸ ಕಡಿಮೆಯಾಗುತ್ತಿರುವುದಕ್ಕೆ ಕೋಮುವಾದವೂ ಒಂದು ಕಾರಣವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನನಗೆ ನೇರವಾಗಿ ಅನುಭವಕ್ಕೆ ಬರದಿದ್ದರೂ, ಪರೋಕ್ಷವಾಗಿ ಅರಿವಿಗೆ ಬರುತ್ತಿದೆ" ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಳೆದ ಎಂಟು ವರ್ಷಗಳಲ್ಲಿ ಚಿತ್ರರಂಗದ ಅಧಿಕಾರ ಸೃಜನಶೀಲ ವ್ಯಕ್ತಿಗಳಿಂದ ಸೃಜನಶೀಲರಲ್ಲದವರ ಕೈಗೆ ವರ್ಗಾವಣೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಬದಲಾವಣೆಗಳ ಹಿಂದೆ ಕೋಮು ವಿಚಾರಗಳೂ ಇರಬಹುದು ಎಂಬ ಮಾತುಗಳು ತಮ್ಮ ಕಿವಿಗೆ ಪರೋಕ್ಷವಾಗಿ ಬಿದ್ದಿವೆ ಎಂದು ಅವರು ತಿಳಿಸಿದ್ದಾರೆ.
ತಮಗೆ ಬರಬೇಕಿದ್ದ ಅವಕಾಶಗಳನ್ನು ಬೇರೆ ಸಂಗೀತ ನಿರ್ದೇಶಕರಿಗೆ ನೀಡಲಾಗುತ್ತಿದೆ ಎಂಬ ವಿಷಯವು 'ಚೈನೀಸ್ ವಿಸ್ಪರ್ಸ್' ಮಾದರಿಯಲ್ಲಿ ತಮಗೆ ತಲುಪುತ್ತಿರುತ್ತದೆ ಎಂದು ರೆಹಮಾನ್ ಹೇಳಿದ್ದಾರೆ. ಚಿತ್ರದ ನಿರ್ಮಾಪಕರು ಅಥವಾ ನಿರ್ದೇಶಕರು ತಮ್ಮನ್ನು ಆಯ್ಕೆ ಮಾಡಿದರೂ, ಸಂಗೀತ ಕಂಪನಿಗಳು ಮಧ್ಯಪ್ರವೇಶಿಸಿ ಐದಾರು ಮಂದಿ ಬೇರೆ ಸಂಗೀತಗಾರರನ್ನು ನೇಮಿಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಆದರೂ ತಾವು ಕೆಲಸಕ್ಕಾಗಿ ಯಾರ ಹಿಂದೆ ಹೋಗುವುದಿಲ್ಲ. ಕೆಲಸದ ಮೇಲಿನ ಪ್ರಾಮಾಣಿಕತೆಯೇ ತಮಗೆ ಅವಕಾಶಗಳನ್ನು ತಂದುಕೊಡಲಿ ಎಂಬ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ರೆಹಮಾನ್, 'ರೋಜಾ', 'ಬಾಂಬೆ' ಮತ್ತು 'ದಿಲ್ ಸೇ' ಚಿತ್ರಗಳ ಮೂಲಕ ಉತ್ತರದ ಜನರಿಗೆ ಹತ್ತಿರವಾದರೂ, ಸುಭಾಷ್ ಘಾಯ್ ಅವರ 'ತಾಲ್' ಚಿತ್ರವು ತಮ್ಮನ್ನು ಪ್ರತಿ ಮನೆಮನೆಯೂ ಗುರುತಿಸುವಂತೆ ಮಾಡಿತು ಎಂದು ಸ್ಮರಿಸಿದ್ದಾರೆ.
ದಕ್ಷಿಣ ಭಾರತದ ಸಂಗೀತಗಾರನಾಗಿದ್ದರೂ ಹಿಂದಿ ಚಿತ್ರರಂಗ ತಮ್ಮನ್ನು ಅಪ್ಪಿಕೊಂಡಿದ್ದನ್ನು ಅವರು ಅತ್ಯಂತ ಗೌರವದಿಂದ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಸುಭಾಷ್ ಘಾಯ್ ಅವರ ಸಲಹೆಯಂತೆ ಹಿಂದಿ ಚಿತ್ರರಂಗದಲ್ಲಿ ದೀರ್ಘಕಾಲ ನೆಲೆಸಲು ಹಿಂದಿ ಮತ್ತು ಉರ್ದು ಭಾಷೆಗಳನ್ನು ಕಲಿತಿದ್ದಾಗಿಯೂ ಅವರು ಹೇಳಿದ್ದಾರೆ.
ಇತ್ತೀಚಿನ 'ಛಾವಾ' ಚಿತ್ರದ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಿತ್ರದಲ್ಲಿ ವಿಭಜಕ ಅಂಶಗಳಿವೆ ಎಂಬ ಚರ್ಚೆಗಳು ನಡೆಯುತ್ತಿರುವುದು ನಿಜ. ಆದರೆ ಜನರು ಬುದ್ಧಿವಂತರಾಗಿದ್ದು, ಸಿನೆಮಾಗಳು ಅವರನ್ನು ಸುಲಭವಾಗಿ ಪ್ರಭಾವಿಸಲು ಸಾಧ್ಯವಿಲ್ಲ. ಜನರ ಅಂತಃಸಾಕ್ಷಿಗೆ ಸತ್ಯ ಯಾವುದು ಮತ್ತು ತಿರುಚಿದ ವಿಷಯ ಯಾವುದು ಎಂಬುದು ಚೆನ್ನಾಗಿ ತಿಳಿದಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬಹುನಿರೀಕ್ಷಿತ 'ರಾಮಾಯಣ' ಚಿತ್ರಕ್ಕೆ ಹ್ಯಾನ್ಸ್ ಜಿಮ್ಮರ್ ಅವರೊಂದಿಗೆ ಸಂಗೀತ ನೀಡುತ್ತಿರುವ ಬಗ್ಗೆಯೂ ರೆಹಮಾನ್ ಮಾತನಾಡಿದ್ದಾರೆ. ತಾವು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದರಿಂದ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಬಗ್ಗೆ ತಮಗೆ ಮೊದಲೇ ಅರಿವಿದೆ. ರಾಮಾಯಣವು ಉನ್ನತ ಆದರ್ಶಗಳು ಮತ್ತು ಸದ್ಗುಣಗಳ ಬಗ್ಗೆ ತಿಳಿಸಿಕೊಡುತ್ತದೆ. ಜ್ಞಾನವು ಎಲ್ಲಿದ್ದರೂ ಅದನ್ನು ಸ್ವೀಕರಿಸಬೇಕು ಎಂಬುದು ಪ್ರವಾದಿಗಳ ಮಾತು. ಈ ಚಿತ್ರದಲ್ಲಿ ಯಹೂದಿ ಧರ್ಮದ ಹ್ಯಾನ್ಸ್ ಜಿಮ್ಮರ್ ಮತ್ತು ಮುಸ್ಲಿಂ ಧರ್ಮದ ತಾವು ಸೇರಿ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ರಾಮಾಯಣಕ್ಕೆ ಸಂಗೀತ ನೀಡುತ್ತಿರುವುದು ಭಾರತದಿಂದ ಜಗತ್ತಿಗೆ ನೀಡುತ್ತಿರುವ ಪ್ರೀತಿಯ ಸಂದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಲವರಿಂದ ವಿರೋಧ
ಇನ್ನು ರೆಹಮಾನ್ ಹೇಳಿಕೆಗೆ ಹಲವು ಖ್ಯಾತ ಗಾಯಕರಿಂದ ವಿರೋಧ ವ್ಯಕ್ತವಾಗಿದೆ. ರೆಹಮಾನ್ ವಿದೇಶಿ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ ಎಂದು ಜನ ಭಾವಿಸಿರಬಹುದು. ಸಣ್ಣ ನಿರ್ಮಾಪಕರು ಅವರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ ಅಷ್ಟೆ, ಕೋಮು ತಾರತಮ್ಯವಿಲ್ಲ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ಮತ್ತೊಂದೆಡೆ ಗಾಯಕ ಶಾನ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, "ಬಾಲಿವುಡ್‌ನಲ್ಲಿ ತಮಗೆ ಅವಕಾಶಗಳು ಕಡಿಮೆಯಾಗುತ್ತಿರುವುದಕ್ಕೆ 'ಕೋಮುವಾದ' ಕಾರಣವಿರಬಹುದು ಎಂಬ ಎ.ಆರ್. ರೆಹಮಾನ್ ಅವರ ಹೇಳಿಕೆಯನ್ನು ಗಾಯಕ ಶಾನ್ ತಳ್ಳಿಹಾಕಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಯಾವುದೇ ಧರ್ಮ ಅಥವಾ ಜಾತಿಗೆ ಅವಕಾಶವಿಲ್ಲ, ಇಲ್ಲಿ ಕೇವಲ ಪ್ರತಿಭೆಗೆ ಮಾತ್ರ ಬೆಲೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲಸ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿ ಯೋಚಿಸುವುದು ಸರಿಯಲ್ಲ. ಕಳೆದ ಹಲವು ವರ್ಷಗಳಿಂದ ನಾನು ಸಕ್ರಿಯವಾಗಿದ್ದರೂ, ನನಗೂ ಕೆಲವೊಮ್ಮೆ ಅವಕಾಶಗಳು ಸಿಗುವುದಿಲ್ಲ. ಅದನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಆದ್ಯತೆಗಳು ಇರುತ್ತವೆ. ಸಂಗೀತದಲ್ಲಿ ಯಾವುದೇ ಕೋಮು ಅಥವಾ ಅಲ್ಪಸಂಖ್ಯಾತ ಆಯಾಮಗಳಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸಂಗೀತ ಆ ರೀತಿ ಕೆಲಸ ಮಾಡುವುದಿಲ್ಲ. ಒಂದು ವೇಳೆ ಧರ್ಮದ ಆಧಾರದ ಮೇಲೆ ಕೆಲಸ ಸಿಗುತ್ತಿದ್ದರೆ, ಕಳೆದ 30 ವರ್ಷಗಳಿಂದ ನಮ್ಮನ್ನು ಆಳುತ್ತಿರುವ ಮೂವರು ಸುಪರ್ ಸ್ಟಾರ್‌ಗಳು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಹೆಚ್ಚು ಯೋಚಿಸದೆ ಒಳ್ಳೆಯ ಸಂಗೀತ ಮಾಡುವುದರ ಕಡೆ ಗಮನ ಹರಿಸಬೇಕು" ಅವರು ತಿರುಗೇಟು ನೀಡಿದ್ದಾರೆ.
ಹಾಡು ಸೃಷ್ಟಿಸುವವರು ಮತ್ತು ಅದನ್ನು ಬಿಡುಗಡೆ ಮಾಡುವವರ ನಡುವೆ ವ್ಯತ್ಯಾಸವಿದೆ. ನಿರ್ಧಾರ ತೆಗೆದುಕೊಳ್ಳುವವರು ಸಂಗೀತದ ಜ್ಞಾನವಿಲ್ಲದವರಾಗಿರುವುದು ನಿಜ ಎಂದು ಗಾಯಕ ಶಂಕರ್ ಮಹದೇವನ್ ತಿಳಿಸಿದ್ದಾರೆ. ರೆಹಮಾನ್ ಅವರ ಹೇಳಿಕೆ ಸುಳ್ಳು. ಅವರು 5 ವರ್ಷಗಳಲ್ಲಿ ಮಾಡಬೇಕಾದ ಕೆಲಸವನ್ನು 25 ವರ್ಷಗಳ ಮೊದಲೇ ಮಾಡಿದ್ದಾರೆ. ಅವರಿಗೆ ಅಪಾರ ಗೌರವವಿದೆ ಎಂದು ಅನೂಪ್ ಜಲೋಟಾ ಹೇಳಿದ್ದಾರೆ.
ರಾಜಕೀಯ ತಿರುವು ಪಡೆದ ರೆಹಮಾನ್ ಹೇಳಿಕೆ
ಇನ್ನು ರೆಹಮಾನ್ ಕೋಮ ತಾರತಮ್ಯದ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿವೆ. ಬಿಜೆಪಿ ನಾಯಕರು ರೆಹಮಾನ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ರೆಹಮಾನ್ ಆರೋಪದಲ್ಲಿ ಸತ್ಯವಿಲ್ಲ. ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರಂತಹ ಮುಸ್ಲಿಂ ಕಲಾವಿದರನ್ನು ಇಡೀ ದೇಶ ಪ್ರೀತಿಸುತ್ತಿದೆ. ಇಲ್ಲಿ ಧರ್ಮಕ್ಕಿಂತ ಕಲೆಗೆ ಪ್ರಾಮುಖ್ಯತೆ ಇದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.
ಈಗಿನ ಕಾಲದಲ್ಲಿ ಚಿತ್ರರಂಗ ಹೆಚ್ಚು ಪಾರದರ್ಶಕವಾಗಿದೆ. ಶಿಫಾರಸುಗಳ ಬದಲು ಪ್ರತಿಭೆಯ ಆಧಾರದ ಮೇಲೆ ಕೆಲಸ ಸಿಗುತ್ತಿದೆ. ಈ ಬದಲಾವಣೆಯಿಂದ ರೆಹಮಾನ್ ಅವರಿಗೆ ಅಸಮಾಧಾನ ಇರಬಹುದು ಎಂದು ಬಿಜೆಪಿ ಶಾಸಕ ಜಿತೇಂದ್ರ ಕುಮಾರ್ ಹೇಳಿದ್ದಾರೆ.
2025ರ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಬಿಜೆಪಿ ಅವಧಿಯಲ್ಲೇ ಸಿಕ್ಕಿವೆ. ಅವಕಾಶಗಳು ಪ್ರೇಕ್ಷಕರ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತವೆಯೇ ಹೊರತು ಆಡಳಿತ ಪಕ್ಷದ ಮೇಲಲ್ಲ ಎಂದು ಸೈಯದ್ ಭಾಷಾ (ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ) ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಪಕ್ಷಗಳ ಕಳವಳ: "ಧರ್ಮದ ಆಧಾರದಲ್ಲಿ ತಾರತಮ್ಯ ಸಲ್ಲದು"
• ಹುಸೇನ್ ದಳವಾಯಿ (ಕಾಂಗ್ರೆಸ್): ರೆಹಮಾನ್ ಅವರಂತಹ ಜಾಗತಿಕ ಮಟ್ಟದ ಕಲಾವಿದರು ಮುಸ್ಲಿಂ ಎಂಬ ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದರೆ ಅದು ದೇಶಕ್ಕೆ ದೊಡ್ಡ ನಷ್ಟ.
• ತಾರಿಕ್ ಅನ್ವರ್ ಮತ್ತು ಇಮ್ರಾನ್ ಮಸೂದ್ (ಕಾಂಗ್ರೆಸ್): ಆಸ್ಕರ್ ವಿಜೇತ ಕಲಾವಿದನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಧರ್ಮದ ಆಧಾರದಲ್ಲಿ ಕೆಲಸ ನಿರಾಕರಿಸುವುದು ದ್ವೇಷಕ್ಕೆ ಕಾರಣವಾಗುತ್ತದೆ.
• ನಜೀಬ್ ಜಂಗ್ (ಮಾಜಿ ಲೆಫ್ಟಿನೆಂಟ್ ಗವರ್ನರ್): ಕೆಲವು ಸಂದರ್ಭಗಳಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ತಾರತಮ್ಯ ನಡೆಯುತ್ತಿರುವುದು ನಿಜ, ಇದನ್ನು ಮುಚ್ಚಿಡುವ ಅಗತ್ಯವಿಲ್ಲ.

