
Mysore MUDA Case: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ನಿರಾಳ
ನ್ಯಾಯಾಲಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಆದೇಶದ ಪ್ರತಿ ಪರಿಶೀಲಿಸಿದ ಬಳಿಕ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮತ್ತು ಪ್ರತಿಪಕ್ಷಗಳ ಟೀಕಾಪ್ರಹಾರಕ್ಕೆ ಗುರಿಯಾಗಿದ್ದ 'ಮುಡಾ' (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ ರಿಪೋರ್ಟ್' ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ದೊಡ್ಡ 'ರಿಲೀಫ್' ನೀಡಿದೆ.
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಈ ಮೂಲಕ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಪ್ರಮುಖ ಆರೋಪಿಗಳು ನಿರಾಳವಾಗಿದ್ದಾರೆ.
ಪ್ರಕರಣದ ಮೊದಲ ನಾಲ್ಕು ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ. ದೇವರಾಜು ಅವರ ವಿರುದ್ಧ ಲೋಕಾಯುಕ್ತ ತನಿಖಾಧಿಕಾರಿಗಳು ಸಲ್ಲಿಸಿದ್ದ 'ಬಿ' ವರದಿಯನ್ನು ನ್ಯಾಯಾಲಯವು ಅಂಗೀಕರಿಸಿದೆ. ದೂರದಾರ ಸ್ನೇಹಮಯಿ ಕೃಷ್ಣ ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಮಾಡಲಾದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯಗಳ ಕೊರತೆ ಇರುವುದನ್ನು ಗಮನಿಸಿ ಲೋಕಾಯುಕ್ತ ಈ ವರದಿ ನೀಡಿತ್ತು. ಈಗ ನ್ಯಾಯಾಲಯ ಅದನ್ನು ಒಪ್ಪಿಕೊಂಡಿರುವುದರಿಂದ ಸಿದ್ದರಾಮಯ್ಯ ಅವರಿಗೆ ನೈತಿಕ ಮತ್ತು ಕಾನೂನಾತ್ಮಕ ಜಯ ಸಿಕ್ಕಂತಾಗಿದೆ.
ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದ್ದರೂ, ಪ್ರಕರಣವು ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ. ಪ್ರಕರಣದ ಉಳಿದ ಆರೋಪಿಗಳ ವಿರುದ್ಧ ತನಿಖೆಯನ್ನು ಮುಂದುವರಿಸುವಂತೆ ತನಿಖಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ. ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ. 9ಕ್ಕೆ ನಿಗದಿಪಡಿಸಿದೆ.
ಜಾರಿ ನಿರ್ದೇಶನಾಲಯವು ಪ್ರಕರಣದಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಿದೆ. ಆದರೆ, ಮಿತಿಯ ವ್ಯಾಪ್ತಿಯಲ್ಲಿ ತನಿಖೆ ನಡೆಸುವಂತೆ ಹೇಳಿದೆ. ಇದು ಮುಂಬರುವ ದಿನಗಳಲ್ಲಿ ಪ್ರಕರಣದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.
ತನಿಖಾಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿರುವುದು ದೂರುದಾರಿಗೆ ಹಿನ್ನೆಡೆಯಾಗಿದೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ ಸ್ನೇಹಿಮಯಿ ಕೃಷ್ಣ, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ನ್ಯಾಯಾಲಯದ ಆದೇಶ ಪ್ರತಿ ಪಡೆದುಕೊಂಡ ಬಳಿಕ ಆದೇಶದಲ್ಲಿನ ಅಂಶಗಳನ್ನು ಗಮನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

