Muda scam: Court reserves order
x

ಸಿಎಂ ಸಿದ್ದರಾಮಯ್ಯ

ಕೆಲವೇ ಕ್ಷಣಗಳಲ್ಲಿ ಮುಡಾ ತೀರ್ಪು; ಸಿಎಂ ಪಾಳಯದಲ್ಲಿ ಹೆಚ್ಚಿದ ಆತಂಕ

ಲೋಕಾಯುಕ್ತರು ಸಲ್ಲಿಸಿರುವ ಬಿ-ರಿಪೋರ್ಟ್‌ ವರದಿಯನ್ನು ಹೈಕೋರ್ಟ್‌ ತಳ್ಳಿ ಹಾಕಿದರೆ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ.


ರಾಜ್ಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ಬಿ-ರಿಪೋರ್ಟ್‌ ನೀಡಿರುವ ಲೋಕಾಯುಕ್ತರ ವರದಿ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಕುರಿತಾದ ಈ ತೀರ್ಪು ತೀವ್ರ ಕುತೂಹಲ ಕೆರಳಿಸಿದೆ.

ಲೋಕಾಯುಕ್ತರು ಸಲ್ಲಿಸಿರುವ ಬಿ-ರಿಪೋರ್ಟ್‌ ವರದಿಯನ್ನು ವಿಶೇಷ ನ್ಯಾಯಾಲಯವು ತಳ್ಳಿ ಹಾಕಿದರೆ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. ಆಗ ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ಪ್ರವೇಶಕ್ಕೂ ತೀರ್ಪು ಅನುಕೂಲಕರವಾಗಲಿದೆ.

ಒಂದು ವೇಳೆ ನ್ಯಾಯಾಲಯವು ಲೋಕಾಯುಕ್ತರು ಸಲ್ಲಿಸಿರುವ ಬಿ-ರಿಪೋರ್ಟ್‌ ಅನ್ನು ಮಾನ್ಯ ಮಾಡಿದರೆ ಸಿದ್ದರಾಮಯ್ಯ ಅವರಿಗೆ ರಿಲೀಫ್‌ ಸಿಗಲಿದೆ. ಮುಡಾ ಪ್ರಕರಣದ ಆರೋಪಗಳಿಂದ ಮುಕ್ತಿ ಸಿಗಲಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮೂಲಕ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಹಂಚಿದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಸಾಕ್ಷಾಧಾರಗಳ ಕೊರತೆಯಿಂದಾಗಿ ಮುಖ್ಯಮಂತ್ರಿಗಳಿಗೆ 'ಕ್ಲೀನ್‌ ಚಿಟ್‌ʼ ನೀಡುವ 'ಬಿ-ರಿಪೋರ್ಟ್' ಸಲ್ಲಿಸಿದ್ದರು.

ಲೋಕಾಯುಕ್ತರ ವರದಿಗೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಆಕ್ಷೇಪಣೆ ಸಲ್ಲಿಸಿದ್ದು, ವರದಿಯು ದೋಷಪೂರಿತವಾಗಿದೆ ಎಂದು ವಾದಿಸಿದ್ದರು. ಕಳೆದ ವಾರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ತೀರ್ಪು ಕಾಯ್ದಿರಿಸಿತ್ತು. ವರದಿಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಹೆಚ್ಚಿನ ತನಿಖೆಗೆ ಆದೇಶಿಸಬೇಕೇ ಎಂಬುದು ಇಂದು ನಿರ್ಧರಿಸಲಿದೆ.

ಲೋಕಾಯುಕ್ತರು ಸಲ್ಲಿಸಿದ್ದ ಬಿ-ರಿಪೋರ್ಟ್‌ನಲ್ಲಿ ಒಟ್ಟು 70 ಸಾಕ್ಷಿಗಳನ್ನು ವಿಚಾರಿಸಿದ್ದು, ಯಾರೊಬ್ಬರೂ ಸಿಎಂ ಅಧಿಕಾರ ದುರುಪಯೋಗದ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಲೋಕಾಯುಕ್ತ ಪರ ಎಸ್‌ಪಿಪಿ ವೆಂಕಟೇಶ್ ಅರಬಟ್ಟೆ ವಾದಿಸಿದ್ದರು.

ಪ್ರತಿವಾದ ಮಂಡಿಸಿದ್ದ ದೂರುದಾರರು, ಲೋಕಾಯುಕ್ತ ಸಂಸ್ಥೆಯು ಪ್ರಮುಖ ದಾಖಲೆಗಳನ್ನು ನಿರ್ಲಕ್ಷಿಸಿದೆ. ತನಿಖೆ ಅಪೂರ್ಣವಾಗಿದೆ ಎಂದು ಆರೋಪಿಸಿದ್ದರು.

ಏನಿದು ಪ್ರಕರಣ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ (MUDA) ಮೂಲಕ ನೀಡಲಾದ 14 ಸೈಟ್‌ಗಳ ಹಂಚಿಕೆಯ ಕುರಿತು ಲೋಕಾಯುಕ್ತರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಲೋಕಾಯುಕ್ತರು ಯಾವುದೇ ಆಪಾದನೆಗೆ ಸಾಕ್ಷ್ಯ ಸಿಗಲಿಲ್ಲವೆಂದು ಸೂಚಿಸಿ 'ಬಿ ರಿಪೋರ್ಟ್' ಸಲ್ಲಿಸಿದ್ದರು.

ಈ ವರದಿಯನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸ್ವತಃ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಇದೇ ಪ್ರಕರಣದಲ್ಲಿ ಇಡಿ (ED) ಕೂಡ ಲೋಕಾಯುಕ್ತರ ವರದಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ.

'ಬಿ ರಿಪೋರ್ಟ್' ಎಂದರೆ ಏನು?

ತನಿಖಾ ಸಂಸ್ಥೆಗೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಲಭ್ಯವಾಗದಿದ್ದಾಗ ಅಥವಾ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲವೆಂದು ಕಂಡುಬಂದಾಗ ಸಲ್ಲಿಸುವ ವರದಿಯೇ 'ಬಿ ರಿಪೋರ್ಟ್'. ಇದನ್ನು ನ್ಯಾಯಾಲಯ ಅಂಗೀಕರಿಸಿದರೆ ಪ್ರಕರಣ ಮುಕ್ತಾಯವಾಗುತ್ತದೆ. ಇನ್ನೊಂದೆಡೆ, ವರದಿ ತಿರಸ್ಕೃತವಾದರೆ ತನಿಖೆ ಮುಂದುವರಿಯಬಹುದು ಅಥವಾ ಹೊಸ ಕ್ರಮ ಕೈಗೊಳ್ಳಬಹುದು. ಇದೀಗ ನ್ಯಾಯಾಲಯದ ತೀರ್ಪು ಸಿದ್ದರಾಮಯ್ಯ ಕುಟುಂಬಕ್ಕೆ ನಿರಾಳ ತರಲಿದೆಯೋ ಅಥವಾ ಹೊಸ ಸವಾಲಾಗಲಿದೆಯೋ ಕುತೂಹಲ ಮೂಡಿಸಿದೆ.

Read More
Next Story