Ranveer Singh remains in England: Actors lawyer tells High Court
x
ಹೈಕೋರ್ಟ್‌ ಹಾಗೂ ಬಾಲಿವುಡ್‌ ನಟ ರಣವೀರ್‌ ಸಿಂಗ್‌

ರಣವೀರ್ ಸಿಂಗ್ ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ: ಹೈಕೋರ್ಟ್‌ಗೆ ನಟನ ಪರ ವಕೀಲರ ಮಾಹಿತಿ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ವಿಮಾನಗಳ ಹಾರಾಟ ರದ್ದಾಗಿರುವ ಕಾರಣ ರಣವೀರ್ ಸಿಂಗ್ ಇಂಗ್ಲೆಂಡ್‌ನಲ್ಲೇ ಸಿಲುಕಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.


Click the Play button to hear this message in audio format

ಕಾಂತಾರ ಚಾಪ್ಟರ್-1 ಚಲನಚಿತ್ರದಲ್ಲಿನ ಚಾಮುಂಡಿ ದೈವವನ್ನು 'ಹೆಣ್ಣು ದೆವ್ವ' ಎಂದು ಕರೆದು, ದೈವದ ಸಂಪ್ರದಾಯವನ್ನು ಅಪಹಾಸ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಸದ್ಯ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಅವರ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ವಿಮಾನಗಳ ಹಾರಾಟ ರದ್ದಾಗಿರುವ ಕಾರಣ ರಣವೀರ್ ಸಿಂಗ್ ಇಂಗ್ಲೆಂಡ್‌ನಲ್ಲೇ ಸಿಲುಕಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಎಫ್‌ಐಆರ್ ರದ್ದತಿಗೆ ಕೋರಿ ಅರ್ಜಿ

ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ, ಕಾಂತಾರ ಚಿತ್ರದ ದೈವವನ್ನು ವಿಡಂಬನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತಮ್ಮ ವಿರುದ್ಧದ ಖಾಸಗಿ ದೂರು ಹಾಗೂ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ವಾದ-ಪ್ರತಿವಾದ

ಸೋಮವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ಸರ್ಕಾರದ ಪರವಾಗಿ ಆಕ್ಷೇಪಣೆ ತಯಾರಿದ್ದು, ಮುಂದಿನ ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಈಗಾಗಲೇ ರಣವೀರ್ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ, ಆದರೆ ಅವರು ಸಮಯಾವಕಾಶ ಕೋರುತ್ತಿದ್ದಾರೆ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಣವೀರ್ ಸಿಂಗ್ ಪರ ಹಿರಿಯ ವಕೀಲ ಸಜನ್ ಪೂವಯ್ಯ, "ನೋಟಿಸ್ ಸ್ವೀಕರಿಸಲಾಗಿದೆ. ರಣವೀರ್ ಸಿಂಗ್ ಸದ್ಯ ವಿದೇಶದಲ್ಲಿದ್ದಾರೆ. ಯುದ್ಧದ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯದ ಯಾವುದೇ ಭಾಗದಿಂದಲೂ, ವಿಶೇಷವಾಗಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರಬೇಕಿರುವ ಬಹುತೇಕ ವಿಮಾನಗಳ ಹಾರಾಟ ರದ್ದಾಗಿದೆ. ಭಾರತಕ್ಕೆ ಮರಳಿದ ಕೂಡಲೇ ಅವರು ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ" ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮಧ್ಯಂತರ ಆದೇಶ ವಿಸ್ತರಣೆ

ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು. ಅಲ್ಲಿಯವರೆಗೂ ರಣವೀರ್ ಸಿಂಗ್ ವಿರುದ್ಧ ಪೊಲೀಸರು ಯಾವುದೇ ಕಠಿಣ (coercive) ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿ ಈ ಮೊದಲು ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

Read More
Next Story