
ತುಳುನಾಡಿನ 'ದೈವ'ಗಳಿಗೆ ಅಪಮಾನ: ರಣವೀರ್ ಸಿಂಗ್ ವಿರುದ್ಧದ FIR ರದ್ದಾಗುತ್ತಾ? ಇಂದು ಭವಿಷ್ಯ ನಿರ್ಧಾರ
ಕಾಂತಾರ ಚಾಪ್ಟರ್-1 ದೈವದ ಪಾತ್ರಕ್ಕೆ ಅಪಮಾನ ಮಾಡಿದ ಆರೋಪದಡಿ ದಾಖಲಾಗಿರುವ FIR ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.
ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ ಚಾಪ್ಟರ್-1' ಚಿತ್ರದ ದೈವದ ಪಾತ್ರವನ್ನು ಅಣಕಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ಕುರಿತಾದ ಮಹತ್ವದ ತೀರ್ಪು ಇಂದು ಹೊರಬೀಳಲಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋಗಿರುವ ನಟ ರಣವೀರ್ ಸಿಂಗ್ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಏನಿದು ವಿವಾದ?
2025ರ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ವೇಳೆ ರಣವೀರ್ ಸಿಂಗ್ ಅವರು 'ಕಾಂತಾರ' ಚಿತ್ರದ ಬಗ್ಗೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ಕರಾವಳಿಯ ಆರಾಧ್ಯ ದೈವಗಳಾದ ಪಂಜುರ್ಲಿ ಮತ್ತು ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ವೇದಿಕೆಯ ಮೇಲೆ ಅನುಕರಿಸಿದ್ದರು. ಅಲ್ಲದೇ ದೈವವನ್ನು ಉದ್ದೇಶಿಸಿ ಮಾತನಾಡುವಾಗ "ಹೆಣ್ಣು ಭೂತ" ಎಂಬ ಪದ ಬಳಸಿದ್ದರು ಎಂದು ಆರೋಪಿಸಲಾಗಿದೆ.
ತುಳುನಾಡಿನ ಪವಿತ್ರ ಸಂಸ್ಕೃತಿ ಮತ್ತು ದೈವಾರಾಧನೆಯನ್ನು ಹಾಸ್ಯಸ್ಪದವಾಗಿ ಚಿತ್ರಿಸಿ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ವಕೀಲ ಪ್ರಶಾಂತ್ ಮೆಥಲ್ ಅವರು ಬೆಂಗಳೂರಿನ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಹೈಕೋರ್ಟ್‌ನಲ್ಲಿ ರಣವೀರ್ ಸಿಂಗ್ ವಾದವೇನು?
ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ರಣವೀರ್ ಪರ ವಕೀಲರು ಹಾಜರಾಗಿ ಈ ಕೆಳಗಿನ ಅಂಶಗಳನ್ನು ಮಂಡಿಸಿದರು. ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿಯವರ ನಟನೆಯನ್ನು ಪ್ರಾಮಾಣಿಕವಾಗಿ ಹೊಗಳಲು ಹೋಗಿದ್ದಾರೆಯೇ ಹೊರತು, ಯಾರಿಗೂ ಅಪಮಾನ ಮಾಡುವ ಉದ್ದೇಶ ಅವರಿಗಿರಲಿಲ್ಲ. ನಟನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಅದಕ್ಕೆ ಅನಗತ್ಯವಾಗಿ 'ಕ್ರಿಮಿನಲ್' ಬಣ್ಣ ಬಳಿಯಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಪೊಲೀಸರು ಈಗಾಗಲೇ ರಣವೀರ್ ಸಿಂಗ್ ಅವರಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದ ಬಂಧನದ ಭೀತಿ ಅಥವಾ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಇರುವುದರಿಂದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು.
ನ್ಯಾಯಾಲಯದ ಪ್ರತಿಕ್ರಿಯೆ
ಆರಂಭದಲ್ಲಿ ಪೀಠವು "ಕೇವಲ ಬಾಲಿವುಡ್ ನಟ ಎಂಬ ಕಾರಣಕ್ಕೆ ತುರ್ತು ವಿಚಾರಣೆ ನಡೆಸಬೇಕೆ?" ಎಂದು ಪ್ರಶ್ನಿಸಿತಾದರೂ, ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 24) ನಿಗದಿಪಡಿಸಿದೆ.

