ರಣವೀರ್‌ ಸಿಂಗ್‌ ಎಷ್ಟೇ ದೊಡ್ಡ ಸೂಪರ್‌ ಸ್ಟಾರ್‌ ಆದರೂ ಕಾನೂನಿಗಿಂತ ಮೇಲಲ್ಲ: ಹೈಕೋರ್ಟ್‌ ಎಚ್ಚರಿಕೆ
x

ರಣವೀರ್‌ ಸಿಂಗ್‌ ಎಷ್ಟೇ ದೊಡ್ಡ ಸೂಪರ್‌ ಸ್ಟಾರ್‌ ಆದರೂ ಕಾನೂನಿಗಿಂತ ಮೇಲಲ್ಲ: ಹೈಕೋರ್ಟ್‌ ಎಚ್ಚರಿಕೆ

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಣವೀರ್ ಸಿಂಗ್ ಅವರು 'ಕಾಂತಾರ' ಚಿತ್ರದ ದೈವದ ಪಾತ್ರವನ್ನು 'ಮಹಿಳಾ ದೆವ್ವ' ಎಂದು ಕರೆದಿದ್ದರು ಎಂಬುದಾಗಿ ದೂರು ದಾಖಲಾಗಿದೆ.


Click the Play button to hear this message in audio format

ಬಾಲಿವುಡ್‌ ನಟ ರಣವೀರ್ ಸಿಂಗ್ ಅವರು ಎಷ್ಟೇ ದೊಡ್ಡ ಸೂಪರ್‌ ಸ್ಟಾರ್‌ ಆಗಿರಬಹುದು, ಆದರೆ ಅವರು ಯಾವ ಕಾನೂನಿಗಿಂತ ಮೇಲಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರದ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಕಾಂತಾರ ಚಾಪ್ಟರ್‌-1' ಚಿತ್ರದ ದೈವದ ಪಾತ್ರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂದಿನ ವಿಚಾರಣೆಯವರೆಗೆ ನಟನ ವಿರುದ್ಧ ಯಾವುದೇ ಬಲವಂತದ ಕ್ರಮ (ಬಂಧನ ದಂತಹ ಕ್ರಮ) ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಣವೀರ್ ಸಿಂಗ್ ಅವರು 'ಕಾಂತಾರ' ಚಿತ್ರದ ದೈವದ ಪಾತ್ರವನ್ನು 'ಮಹಿಳಾ ದೆವ್ವ' ಎಂದು ಕರೆದು, ರಿಷಬ್ ಶೆಟ್ಟಿ ಅವರ ನಟನೆಯನ್ನು ಅಣಕಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ರದ್ದು ಕೋರಿ ರಣವೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ನಟನ ವರ್ತನೆ ಬಗ್ಗೆ ಆಕ್ಷೇಪ

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ನಟರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. "ಜನರ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿರುವ ನಟರು ಮಾತನಾಡುವಾಗ ಎಚ್ಚರಿಕೆ ಮತ್ತು ಜವಾಬ್ದಾರಿ ಹೊಂದಿರಬೇಕು. ಅವರಿಗೆ ತಿಳುವಳಿಕೆ ಇಲ್ಲದ ವಿಷಯಗಳ ಬಗ್ಗೆ, ಅದರಲ್ಲೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ದೈವವನ್ನು ದೆವ್ವ ಎಂದು ಕರೆಯುವುದು ಅಥವಾ ಅಣಕಿಸುವುದು ಸರಿಯಲ್ಲ. ನೀವು ಕ್ಷಮೆ ಕೇಳಿರಬಹುದು, ಜನರು ಮರೆಯಬಹುದು, ಆದರೆ ಇಂಟರ್ನೆಟ್ ಮರೆಯುವುದಿಲ್ಲ," ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ರಣವೀರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ನಟ ತಮ್ಮ ಹೇಳಿಕೆಗೆ ತಕ್ಷಣವೇ ವೇದಿಕೆಯಲ್ಲೇ ಕ್ಷಮೆ ಕೋರಿದ್ದಾರೆ ಮತ್ತು ಇದು ಉದ್ದೇಶಪೂರ್ವಕವಾಗಿ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಲ್ಲ ಎಂದು ಸಮರ್ಥಿಸಿಕೊಂಡರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ರಣವೀರ್ ಸಿಂಗ್ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂಬ ಷರತ್ತಿನೊಂದಿಗೆ, ಮಾರ್ಚ್ 2ರ ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

Read More
Next Story