
ಇಂಧನ ಕೊರತೆಗೆ ಕೇಂದ್ರದ ತಪ್ಪು ನೀತಿಗಳೇ ಕಾರಣ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಒಂದೆಡೆ ಇಂಧನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಅಗತ್ಯ ವಸ್ತುಗಳ ಕಾಯಿದೆಯನ್ನು ಜಾರಿಗೊಳಿಸಿದ್ದು ಯಾಕೆ? ಸರ್ಕಾರದ ಈ ನಡೆಯು ಆಂತರಿಕ ಗೊಂದಲವನ್ನು ಬಿಂಬಿಸುತ್ತದೆ.
ರಾಷ್ಟ್ರದಲ್ಲಿ ಎದುರಾಗಿರುವ ಅಡುಗೆ ಅನಿಲ (ಎಲ್‌ಪಿಜಿ), ಪೆಟ್ರೋಲ್ ಮತ್ತು ಡೀಸೆಲ್ ಕೊರತೆಗೆ ಕೇಂದ್ರ ಸರ್ಕಾರದ ಆರ್ಥಿಕ ಮತ್ತು ವಿದೇಶಾಂಗ ನೀತಿಗಳ ವೈಫಲ್ಯವೇ ನೇರ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಜನಸಾಮಾನ್ಯರ ಸಂಕಷ್ಟಗಳನ್ನು ನಿರ್ಲಕ್ಷಿಸಿ, ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು.
ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದಾಗ, ಭಾರತದ ಬಳಿ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆ ಎಂದು ಕೇಂದ್ರ ಸರ್ಕಾರವು ದೇಶದ ಜನತೆಗೆ ಭರವಸೆ ನೀಡಿತ್ತು. ಒಂದೆಡೆ ಇಂಧನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಅಗತ್ಯ ವಸ್ತುಗಳ ಕಾಯಿದೆಯನ್ನು ಜಾರಿಗೊಳಿಸಿದ್ದು ಯಾಕೆ? ಸರ್ಕಾರದ ಈ ನಡೆಯು ಅದರ ಆಂತರಿಕ ಗೊಂದಲ ಮತ್ತು ಸಿದ್ಧತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಕೊರೋನಾ ಕಾಲದಲ್ಲಿ ಜನರನ್ನು ಒಗ್ಗೂಡಿಸಿ ಸಂಕಷ್ಟ ಎದುರಿಸುವಂತೆ ಕರೆ ನೀಡಿದ್ದರು. ಈಗ ಯುದ್ಧದ ಸಂದರ್ಭದಲ್ಲೂ ಅದೇ ರೀತಿ ಜನರೇ ಕಷ್ಟ ಸಹಿಸಿಕೊಳ್ಳಬೇಕು ಎಂಬುದಾಗಿ ಕರೆ ನೀಡುತ್ತಿರುವುದು ಕೇಂದ್ರ ಸರ್ಕಾರದ ನೀತಿಗಳ ವಿಫಲತೆಯನ್ನು ಮುಚ್ಚಿ ಹಾಕುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದರು.
'ವಿಶ್ವಗುರು' ಪಟ್ಟಕ್ಕೆ ಟೀಕೆ
ತಮ್ಮನ್ನು ತಾವು 'ವಿಶ್ವಗುರು' ಎಂದು ಬಿಂಬಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಸಂಘರ್ಷಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಹಿಂದೆ ವಿಯಟ್ನಾಂ ಯುದ್ಧ ನಡೆದಾಗ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಧ್ಯಸ್ಥಿಕೆ ವಹಿಸಿ ಶಾಂತಿಗಾಗಿ ಶ್ರಮಿಸಿದ್ದರು. ಆದರೆ ಇಂದು ಇಸ್ರೇಲ್‌ಗೆ ಹೋಗಿ ಅಲ್ಲಿನ ಪ್ರಧಾನಿ ನೆತನ್ಯಾಹು ಅವರನ್ನು ತಬ್ಬಿಕೊಂಡು ಬಂದು, ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಹೆಜ್ಜೆ ಇಟ್ಟಿಲ್ಲ. ಅತ್ತ ಪಾಕಿಸ್ತಾನದಂತಹ ರಾಷ್ಟ್ರಗಳೇ ಇರಾನ್ ಮತ್ತು ಅಮೆರಿಕಾ ನಡುವೆ ಮಾತುಕತೆ ನಡೆಸುತ್ತಿವೆ. ಆದರೆ ಭಾರತದ ಪ್ರಭಾವ ಕುಸಿಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿಯವರಿಗೆ ಉತ್ತಮ ಸ್ನೇಹವಿದೆ ಎಂದು ಹೇಳಲಾಗುತ್ತದೆ. ಆದರೆ, ಟ್ರಂಪ್ ಅವರ ಸುಂಕದ ನೀತಿಗಳಿಂದಾಗಿ ಭಾರತಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಈಗಿನ ಕೆಲವು ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಿಗೆ ಭಾರತ ಒಪ್ಪಿಗೆ ಸೂಚಿಸಿದರೆ, ಅದು ನೇರವಾಗಿ ದೇಶದ ರೈತರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಮತ್ತು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಕ್ರಮ ಅಕ್ಕಿ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ
ಇದೇ ಸಂದರ್ಭದಲ್ಲಿ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಅಕ್ಕಿ ಸಾಗಾಣಿಕೆಯಾಗುತ್ತಿರುವ ಬಗ್ಗೆ ತಮಗೆ ಮಾಹಿತಿ ಇದೆ. ಈ ಅಕ್ರಮ ದಂಧೆಯಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಆರೋಪಗಳಿದ್ದು, ಈಗಾಗಲೇ ಸಂಬಂಧಪಟ್ಟ ಸಚಿವರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ. ಪ್ರಸ್ತುತ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದೆ. ಇದು ಮುಗಿದ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವಾಸನೆ ನೀಡಿದರು.

