
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಛಲವಾದಿ ನಾರಾಯಣಸ್ವಾಮಿ
ಜಾತಿ ರಾಜಕೀಯದ ವಾಕ್ಸಮರ: ಆಡಳಿತ-ವಿರೋಧ ಪಕ್ಷದ ನಾಯಕರ ನಡುವೆ 'ದಲಿತತ್ವ'ದ ಬಗ್ಗೆ ವಾಗ್ದಾಳಿ
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಛಲವಾದಿ ನಾರಾಯಣಸ್ವಾಮಿಗೆ ಅನಿವಾರ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವಿನ ವಾಕ್ಸಮರ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ರಾಜಕಾರಣಕ್ಕಿಂತ ಜಾತಿ ರಾಜಕಾರಣವೇ ಮೇಲಾಟವಾಡುತ್ತಿದೆ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರ ಇತ್ತೀಚಿನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, "ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯವಾಗಿದೆ. ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯ ಜೀವನದ ಕೊನೆಯ ದಿನವಾಗುತ್ತದೆ! ಆರ್‌ಎಸ್‌ಎಸ್‌ನವರ 'ಚಡ್ಡಿ'ಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು, ನನ್ನ ತಂದೆಯವರ ಸೈದ್ಧಾಂತಿಕ ನೆರಳಿನಲ್ಲಿ ಮುಂದುವರಿಯುವುದು ಅತ್ಯಂತ ಗೌರವಯುತ ರಾಜಕಾರಣ ಎಂದು ನಾನು ಭಾವಿಸಿದ್ದೇನೆ," ಎಂದು ಹೇಳಿದ್ದಾರೆ.
ಸಚಿವ ಖರ್ಗೆ ಮುಂದುವರಿದು, "ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಎಂದಿದ್ದರೆ, ತಮ್ಮದೇ ಪಕ್ಷದ ಅಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಅವರಿಂದ ಮಾತು ಆರಂಭಿಸಲಿ. ಆ ಧೈರ್ಯ ನಾರಾಯಣಸ್ವಾಮಿ ಅವರಿಗಿದೆಯೇ? ಸಂವಿಧಾನವನ್ನು ವಿರೋಧಿಸಿ ಅದರ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ. ದಲಿತತ್ವ ಎಂದರೆ ಸ್ವಾಭಿಮಾನ, ಅನ್ಯಾಯದ ವಿರುದ್ಧದ ಪ್ರತಿರೋಧ ಮತ್ತು ಆತ್ಮಬಲ. ದಲಿತತ್ವದ ಸ್ವಾಭಿಮಾನವನ್ನು ಆರ್‌ಎಸ್‌ಎಸ್‌ನವರ ಪಾದದಡಿ ಅಡವಿಟ್ಟವರು ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು?" ಎಂದು ಪ್ರಶ್ನಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರ ಆರೋಪವೇನಿತ್ತು?
ಇದಕ್ಕೂ ಮೊದಲು ಛಲವಾದಿ ನಾರಾಯಣಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್ ಖರ್ಗೆಯವರನ್ನು ಉದ್ದೇಶಿಸಿ ತೀಕ್ಷ್ಣವಾಗಿ ಟೀಕಿಸಿದ್ದರು. "ರಾಜಕೀಯದ ಹಸುಗೂಸು ಪ್ರಿಯಾಂಕ್ ಅವರೇ, ದಲಿತತ್ವ ಎಂದರೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ 39 ಸಾವಿರ ಕೋಟಿ ರೂ. ಹಣವನ್ನು ಕಾಂಗ್ರೆಸ್ ಹಗಲು ದರೋಡೆ ಮಾಡಿದರೂ, ದಲಿತ ಮಂತ್ರಿಯಾಗಿ ತುಟಿ ಬಿಚ್ಚದೆ ಆ ಹಣ ಬಳಕೆ ಸರಿಯಿದೆ ಎಂದು ಬೊಗಳೆ ಬಿಡುವುದಲ್ಲ. ಒಳಮೀಸಲಾತಿಯಲ್ಲಿ ಅನ್ಯಾಯವಾದಾಗ ಸಮುದಾಯದ ಯುವಜನರು ಬೀದಿಗಿಳಿದು ನಿಮ್ಮನ್ನು ಶಪಿಸುತ್ತಿದ್ದರೂ, ನೀವು ಕಾಂಗ್ರೆಸ್ ಗುಲಾಮಗಿರಿ ಮಾಡುವುದು ನಿಮ್ಮ ಸ್ವಾಭಿಮಾನವೇ?" ಎಂದು ಪ್ರಶ್ನಿಸಿದ್ದರು.
"ದಲಿತತ್ವದ ಗಂಧವೇ ಅರಿಯದೆ, ದಲಿತರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಚಿಂತಿಸದೆ, 'ಗೂಗಲ್ ಬೇಬಿ'ಯಂತೆ ಪ್ರತಿದಿನ ಆರ್‌ಎಸ್‌ಎಸ್ ಅಥವಾ ವಿರೋಧ ಪಕ್ಷದ ಮುಖಂಡರ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದೇ ನಿಮ್ಮ ಸಾಧನೆಯೇ? ಎಲ್ಲದರಲ್ಲೂ ಮತಿಹೀನರಂತೆ ಮೂಗು ತೂರಿಸುವುದು ನಾಯಕನ ಲಕ್ಷಣವಲ್ಲ," ಎಂದು ಛಲವಾದಿ ವಾಗ್ದಾಳಿ ನಡೆಸಿದ್ದರು.

