BJPs ad war in the name of VB Ji Ram Ji: Saffron party scolds Nungappas!
x

ಕಾಂಗ್ರೆಸ್‌ ಹಾಗೂ ಬಿಜೆಪಿ ʼವಿಬಿ ಜಿ ರಾಮ್‌ ಜಿʼ ಬಗ್ಗೆ ನೀಡಿರುವ ಜಾಹೀರಾತು  

ಸಂಘಪ್ಪ vs ನುಂಗಪ್ಪ: ಕಾಂಗ್ರೆಸ್​- ಬಿಜೆಪಿ ಜಾಹೀರಾತು ಸಂಘರ್ಷ; ಜಟಾಪಟಿ ಜೋರು

ಕರ್ನಾಟಕ ಬಿಜೆಪಿ ವತಿಯಿಂದ ದಿನಪತ್ರಿಕೆಗೆ ʼವಿಬಿ ಜಿ ರಾಮ್‌ ಜಿʼ ಯೋಜನೆಯ ಮಾಹಿತಿಯ ಜೊತೆಗೆ ಕಾಂಗ್ರೆಸ್‌ ನಾಯಕರನ್ನು ಕುಟುಕುವ ರೀತಿಯಲ್ಲಿ ಜಾಹೀರಾತು ನೀಡಿರುವುದು ಮಹಾತ್ಮ ಗಾಂಧಿ ಹೆಸರಿನ ಜಾಹೀರಾತು ಸಮರಕ್ಕೆ ಕಾರಣವಾಗಿದೆ.


Click the Play button to hear this message in audio format

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ʼವಿಬಿ-ಜಿ ರಾಮ್‌ ಜಿʼ ಯೋಜನೆ ಕುರಿತಾದ ಪರ-ವಿರೋಧದ ಚರ್ಚೆಗಳು ಕೇವಲ ವಾಕ್ಸಮರದ ಹಂತ ಮೀರಿ ಇದೀಗ ಜಾಹೀರಾತು ಸಮರವಾಗಿಯೂ ಮುಂದುವರಿದಿದೆ.

ವಿಬಿ-ಜಿ ರಾಮ್‌ ಜಿ ಯೋಜನೆ ವಿರುದ್ಧ ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಜಾಹೀರಾತು ಒಂದನ್ನು ನೀಡಿತ್ತು. ಅದರಲ್ಲಿ ಬಿಜೆಪಿಯವನ್ನು ಪರೋಕ್ಷವಾಗಿ ʼಸಂಘಪ್ಪʼ ಎಂದು ಮೂದಲಿಸಿತ್ತು. (ಆರ್​ಎಸ್​​ಎಸ್​- ಸಂಘ ಪರಿವಾರ). ಇದಕ್ಕೆ ಪ್ರತಿಯಾಗಿ ಶುಕ್ರವಾರ(ಫೆ.6) ಬಿಜೆಪಿ ನೀಡಿದ ಜಾಹೀರಾತಿನಲ್ಲಿ ಕಾಂಗ್ರೆಸ್‌ ನಾಯಕರನ್ನು ಗಾಂಧೀಜಿಯವರು ಕೋಲಿನಿಂದ ಹೊಡೆಯುವಂತೆ ತೋರಿಸಲಾಗಿದೆ. ಇದು ಬಿಜೆಪಿ ನಡುವೆ ಕಾಂಗ್ರೆಸ್​ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.

ಆಂಗ್ಲ ಮತ್ತು ಕನ್ನಡದ ವಿವಿಧ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿರುವ ರಾಜ್ಯ ಬಿಜೆಪಿ, ʼಮಹಾತ್ಮರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳುʼ ಎಂದು ಕಾಂಗ್ರೆಸ್‌ ಪಕ್ಷವನ್ನು ಜರೆದಿದೆ. ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಉಲ್ಲೇಖಿಸದೇ ಚಿತ್ರಗಳನ್ನು ಪ್ರಕಟಿಸಿದೆ.

ಜಾಹೀರಾತಿನಲ್ಲಿ ಏನಿದೆ?

ರಾಜ್ಯ ಬಿಜೆಪಿಯು ವಿವಿಧ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ "ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರಾ, ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಿಸಲು ಮೋದಿ ಸರ್ಕಾರ ಜಾರಿಗೆ ತಂದಿರುವ ʼವಿಬಿ -ಜಿ ರಾಮ್‌ ಜಿʼ ಯೋಜನೆ ಕುರಿತು ಅಪಪ್ರಚಾರ ಮಾಡುತ್ತಿದ್ದೀರಾ" ಎಂದು ಗಾಂಧೀಜಿಯವರೇ ಪ್ರಶ್ನಿಸುವಂತೆ ತೋರಿಸಲಾಗಿದೆ.

ʼವಿಬಿ-ಜಿ ರಾಮ್ ಜಿʼ ಯೋಜನೆ ಶ್ರಮಿಕರ ಬದುಕಿಗೆ ಭರವಸೆಯಾಗಿದೆ. ಉದ್ಯೋಗ ಮತ್ತು ನ್ಯಾಯಯುತ ವೇತನ ಗ್ರಾಮೀಣ ಕಾರ್ಮಿಕರ ಹಕ್ಕು ಎಂದು ಪ್ರತಿಪಾದಿಸಿ ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ನೂತನ ಯೋಜನೆಯಡಿ 15ದಿನದೊಳಗೆ ಡಿಬಿಟಿ ಮೂಲಕ ವೇತನ ಪಾವತಿಯಾಗಲಿದೆ. ಮನರೇಗಾದಲ್ಲಿ ತಿಂಗಳಾನುಗಟ್ಟಲೆ ವೇತನ ಪಾವತಿ ಆಗುತ್ತಿರಲಿಲ್ಲ. ಗ್ರಾಮ ಸಭೆಗಳಲ್ಲಿ ನಿರ್ಧಾರವಾಗಿ ಗ್ರಾಮ ಪಂಚಾಯಿತಿಗಳ ಮೂಲಕವೇ ಕೆಲಸಗಳು ನಡೆಯುತ್ತವೆ ಎಂದು ತಿಳಿಸಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ

ನೂತನ ಯೋಜನೆಯ ಪ್ರಕಾರ ಬಯೋಮೆಟ್ರಿಕ್‌ ಹಾಜರಾತಿ, ಮೊಬೈಲ್ ಆಧಾರಿತ ಮೇಲ್ವಿಚಾರಣೆ, ಎಐ ಡಿಜಿಟಲ್, ಜಿಪಿಎಸ್‌ ವ್ಯವಸ್ಥೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ನಿಗದಿತ ಸಮಯದೊಳಗೆ ಉದ್ಯೋಗ ಸಿಗದಿದ್ದರೆ ನಿರುದ್ಯೋಗ ಭತ್ಯೆ ಪಾವತಿಯಾಗಲಿದೆ. ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸನ್ನು ʼವಿಬಿ-ಜಿ ರಾಮ್ ಜಿʼ ಕಾಯ್ದೆ ಮೂಲಕ ನನಸು ಮಾಡುವುದೇ ಮೋದಿ ಸರ್ಕಾರದ ಸಂಕಲ್ಪ ಎಂದು ಯೋಜನೆಯ ಬಗ್ಗೆ ವಿವರಿಸಲಾಗಿದೆ.

ಕಾಂಗ್ರೆಸ್‌ನಿಂದ ಗಾಂಧಿಗೆ ಅವಮಾನ

ಜಾಹೀರಾತಿನಲ್ಲಿ ಕೇವಲ ʼವಿಬಿ- ಜಿ ರಾಮ್‌ ಜಿʼ ಯೋಜನೆಯ ಬಗ್ಗೆ ತಿಳಿಸದೇ ನಕಲಿ ಗಾಂಧಿಗಳಿಂದ ಮಹಾತ್ಮ ಗಾಂಧೀಜಿ ಅವರಿಗಾದ ಅವಮಾನ ಎಂದು ಪ್ರಕಟಿಸಿರುವ ಬಿಜೆಪಿಯು, ಸ್ವಾತಂತ್ರ್ಯ ನಂತರ 'ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ' ಎಂದು ಹೇಳಿದ್ದರು. ಆದರೆ, ನುಂಗಪ್ಪಗಳು ಕಾಂಗ್ರೆಸ್ಸನ್ನೇ ಬಂಡವಾಳ ಮಾಡಿಕೊಂಡರು ! ಎಂದು ರಾಜ್ಯ ಬಿಜೆಪಿ ಹೇಳಿದ್ದು, ಕಾಂಗ್ರೆಸ್‌ ಪಕ್ಷದಿಂದ ಗಾಂಧೀಜಿಗೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಹಾತ್ಮ ಗಾಂಧಿ ಅವರ ಕನಸಾದ ಸ್ವಚ್ಛ ಭಾರತ್ ಜಾರಿಗೆ ತರಲಾಗಿದೆ. ʼವಿಬಿ-ಜಿ ರಾಮ್‌ ಜಿʼ ಕಾಯ್ದೆಯ ಮೂಲಕ ʼಗ್ರಾಮ ಸ್ವರಾಜ್ಯʼ ಕನಸನ್ನು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ ದೃಢ ಹೆಜ್ಜೆಯಿಟ್ಟಿದ್ದಾರೆ ಎಂದು ಪ್ರಕಟಿಸಿದ್ದಾರೆ.

ಬಿಜೆಪಿ ವಿರುದ್ಧ ಕೆಪಿಸಿಸಿ ದೂರು

ಬಿಜೆಪಿ ಇಂದು ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿ ಅಹಿಂಸೆಯ ಪ್ರತೀಕವಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೋಲಿನಿಂದ ಹೊಡೆಯುತ್ತಿರುವ ರೀತಿಯಲ್ಲಿ ಚಿತ್ರಿಸಿರುವುದು ಆಕ್ಷೇಪಾರ್ಹವಾಗಿದೆ. ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲದೆ ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಜಾಗತಿಕ ಪ್ರತೀಕ. ಇಂತಹ ಮಹಾನ್ ವ್ಯಕ್ತಿಯನ್ನು ಈ ರೀತಿಯಾಗಿ ಚಿತ್ರಿಸುವುದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದರ ಜೊತೆಗೆ ರಾಷ್ಟ್ರಪಿತರಿಗೆ ಅವಮಾನ ಉಂಟು ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್‌ ಅವರು ಪೊಲೀಸಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ. ಸಲೀಂಗೆ ದೂರು ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌. ಮನೋಹರ್‌

ಈ ಜಾಹೀರಾತು ಸಮಾಜದಲ್ಲಿ ಅಶಾಂತಿ, ದ್ವೇಷ ಹಾಗೂ ಅಸಹಿಷ್ಣುತೆಯನ್ನು ಹೆಚ್ಚಿಸುವ ಸ್ವರೂಪ ಹೊಂದಿದೆ. ಆದ್ದರಿಂದ ಸಂಬಂಧಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 153A, 295A ಹಾಗೂ 505 ಪ್ರಕಾರ ಸೂಕ್ತ ತನಿಖೆ ನಡೆಸಿ ಆಗತ್ಯ ಕಾನೂನು ಕ್ರಮ ಕೈಗೊಳ್ಳುಬೇಕೆಂದು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಗೋಡ್ಸೆವಾದಿಗಳಿಂದ ಗಾಂಧಿವಾದ ಹತ್ಯೆ

"ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಪ್ರಬಲವಾಗಿ ಸಾರಿದವರು ಮಹಾತ್ಮ ಗಾಂಧಿ. ಗಾಂಧಿ ಎಂದಿಗೂ ಅವರ ಕೈಲಿದ್ದ ಕೋಲನ್ನು ಎತ್ತಿ ಹಲ್ಲೆಗೆ ಬಳಸಿದವರಲ್ಲ, ಗಾಂಧಿ ಎಂದಿಗೂ ಸುಳ್ಳಿನ ಮಾರ್ಗ ತೋರಿದವರಲ್ಲ. ಆದರೆ, ಮಹಾತ್ಮನ ಮಹತ್ವ ಅರಿಯದ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ಗಾಂಧಿಯವರನ್ನು ಹಿಂಸೆಯ ಪ್ರತಿಪಾದಕ ಎಂಬಂತೆ ಚಿತ್ರಿಸಿ ಜಾಹೀರಾತು ನೀಡುವ ಮೂಲಕ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾತ್ಮ ಗಾಂಧಿ ಅವರನ್ನು ದೈಹಿಕವಾಗಿ ಮುಗಿಸಿಹಾಕಿದ್ದಲ್ಲದೆ ಈಗ ಅವರ ಸಿದ್ದಾಂತವನ್ನೂ ಮುಗಿಸಿಹಾಕುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಬಿಜೆಪಿಯಿಂದ ಗಾಂಧೀಜಿ ಮತ್ತು ಅವರ ತತ್ವಗಳನ್ನು ನಾವು ರಕ್ಷಿಸಬೇಕಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

Read More
Next Story