ಪ್ರತಿಪಕ್ಷಗಳ ಗದ್ದಲದ ಮಧ್ಯೆ ವಿಬಿ ಜಿ ರಾಮ್‌ ಜಿ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ
x
ವಿಧಾನಸಭೆ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಬಿಜಿ ರಾಮ್‌ ಜಿ ನಿರ್ಣಯದ ಮೇಲೆ ಮಾತನಾಡಿದರು

ಪ್ರತಿಪಕ್ಷಗಳ ಗದ್ದಲದ ಮಧ್ಯೆ ವಿಬಿ ಜಿ ರಾಮ್‌ ಜಿ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ

ವಿಬಿಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.


Click the Play button to hear this message in audio format

ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಣಯವನ್ನು ಬುಧವಾರ ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಅಂಗೀಕರಿಸಲಾಯಿತು.

ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದು ಎರಡು ದಿನಗಳಿಂದ ಪ್ರತಿಪಕ್ಷಗಳು ಧರಣಿ ನಡೆಸಿದರೂ ವಿಬಿಜಿ ರಾಮ್ಜಿ ನಿರ್ಣಯದ ಮೇಲೆ ಆಡಳಿತ ಪಕ್ಷದ ಸದಸ್ಯರು ಚರ್ಚೆ ಆರಂಭಿಸಿದರು. ಆದರೆ, ಸದಸ್ಯರು ಚರ್ಚೆಯ ಮಧ್ಯೆಯೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಘೋಷಣೆ ಕೂಗಿದರು. ಸಭಾಧ್ಯಕ್ಷರು ಕೆಲ ಕಾಲ ಕಲಾಪವನ್ನು ಮುಂದೂಡಿದರೂ ಚರ್ಚೆ ಪೂರ್ಣಗೊಳಿಸಿ, ನಿರ್ಣಯ ಅಂಗೀಕರಿಸಲಾಯಿತು.

ಆಡಳಿತ ಪಕ್ಷದ ಸದಸ್ಯರ ಚರ್ಚೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ವಿಬಿಜಿ ರಾಮ್ ಯೋಜನೆ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಹೇಳಿದಾಗ ವಿಪಕ್ಷಗಳ ಸದಸ್ಯರು ಮತ್ತೆ ಗಲಾಟೆ ಆರಂಭಿಸಿದರು. ಆಗ ಸ್ಪೀಕರ್ ಯು.ಟಿ.ಖಾದರ್ ಅವರು ನಿರ್ಣಯ ಅಂಗೀಕಾರವಾಗಿದೆ ಎಂದು ಘೋಷಿಸಿ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹಿಂದೆ ಜಾರಿಯಲ್ಲಿದ್ದ ಮನರೇಗಾದಡಿ ಎಲ್ಲಾ ವರ್ಗದ ಜನರಿಗೆ ಕೆಲಸ ಸಿಗುತ್ತಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತೆ, ಶಿಕ್ಷಣ, ಮಾಹಿತಿ ಹಕ್ಕು, ಅರಣ್ಯ ವಾಸಿಗಳ ಹಕ್ಕು ನೀಡಿದರು. ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದರು. ಆದರೆ, ವಿಬಿಜಿ ರಾಮ್ ಜಿ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ ಎಲ್ಲಿ ಕೆಲಸ ನೀಡಬೇಕೆಂಬುದನ್ನು ತೀರ್ಮಾನಿಸುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ಸಮಸ್ಯೆಯಾಗಲಿದೆ ಎಂದರು.

ಸಂವಿಧಾನದ 73/74 ತಿದ್ದುಪಡಿಯ ಪ್ರಕಾರ ವಿಕೇಂದ್ರೀಕರಣದಡಿ ಗ್ರಾಮ ಸಭೆಯಲ್ಲಿ ಎಲ್ಲಿ ಕೆಲಸವಾಗಬೇಕೆಂದು ತೀರ್ಮಾನವಾಗುತ್ತಿತ್ತು.ಈಗ ಅದಕ್ಕೆ ತಿಲಾಂಜಲಿ ಇಡಲಾಗಿದೆ. ಜವಾಹರ್ ಲಾಲ್ ನೆಹರೂ ಅವರು ಒಂದು ಪಂಚಾಯತಿಯಲ್ಲಿ ಒಂದು ಶಾಲೆ, ಪಂಚಾಯತಿ, ಸಹಕಾರ ಸಂಘ ಇರಬೇಕು ಎಂದಿದ್ದರು. ಮಹಾತ್ಮಾ ಗಾಂಧಿಯವರು ಗ್ರಾಮಗಳ ಪ್ರಗತಿಯಾಗದೆ ದೇಶ ಪ್ರಗತಿಯಾಗುವುದಿಲ್ಲ ಎಂದಿದ್ದರು. ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತವಾಗಬೇಕು. ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ ಶೇ 51 ಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ಕೋವಿಡ್ 19 ರ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಯೋಜನೆ ಹೆಚ್ಚು ನೆರವಾಯಿತು. ಈಗ ಗ್ರಾಮ ಸಭೆಯೂ ಇಲ್ಲ, ಪಂಚಾಯತಿ ಪ್ರಕಾರ ತೀರ್ಮಾನವಾಗುವುದಿಲ್ಲ. ಉದ್ಯೋಗಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ ಎಂದು ಆರೋಪಿಸಿದರು.

ಹೊಸ ಕಾಯ್ದೆಯಡಿ ವರ್ಷದಲ್ಲಿ 60 ದಿನ ಕೆಲಸವಿಲ್ಲ. ಮನರೇಗಾ ಅಡಿಯಲ್ಲಿ ಕೃಷಿ ಚಟುವಟಿಕೆಗಳಿದ್ದಾಗಲೂ ಕೆಲಸ ಮಾಡಬಹುದಾಗಿತ್ತು.ಗುತ್ತಿಗೆದಾರರಿಗೆ ನಿಷೇಧವಿತ್ತು. ಮನರೇಗಾ ಕಾಯ್ದೆಯಲ್ಲಿ ಗುತ್ತಿಗೆ ಎಂಬ ಪದವೇ ಇಲ್ಲ. ಈಗ ಎಲ್ಲಾ ಗುತ್ತಿಗೆದಾರರು ಪ್ರವೇಶ ಮಾಡಬಹುದಾಗಿದೆ. ಸೇತುವೆ, ಹೆದ್ದಾರಿ, ಮುಂತಾದ ದೊಡ್ಡ ಕೆಲಸಗಳಿಗೆ ಜನ ಹೋಗಬೇಕಾಗುತ್ತದೆ. ಪಂಚಾಯತಿಗಳಿಗೆ ಕೊಟ್ಟಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.

ವಿಬಿಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು, ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ಸಿಎಂ ಹೇಳಿದರು.

Read More
Next Story