
ಗಾಂಧೀಜಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ನಮನ ಸಲ್ಲಿಸಿದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.
ಗ್ರಾಮ ಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ ಮಹಾನ್ ಚೇತನ ಗಾಂಧೀಜಿ: ಸಿದ್ಧರಾಮಯ್ಯ
ಗ್ರಾಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿರುವ ಸುಮಾರು 6 ಸಾವಿರ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರಪತಿ ಮಹಾತ್ಮಾ ಗಾಂಧಿಯವರ ಹೆಸರು ಇಡುವ ಬಗ್ಗೆ ಸಿಎಂ ಸಿದ್ಧರಾಮಯ್ಯ ಪುನರುಚ್ಛರಿಸಿದ್ದಾರೆ. ಗಾಂಧೀಜಿ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದರು. ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿಯಿಂದ ಅಲ್ಲ ಎಂಬುದನ್ನು ಪ್ರತಿಪಾದಿಸಿದವರು. ಹೀಗಾಗಿ ಗ್ರಾಮ ಪಂಚಾಯಿತಿಗಳಿಗೆ ಅವರ ಹೆಸರು ಇಡುವುದು ಸೂಕ್ತ ಎಂದಿದ್ದಾರೆ.
ಮಹಾತ್ಮಾ ಗಾಂಧೀಜಿಯವರು ಗ್ರಾಮಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ ಮಹಾನ್ ಚೇತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶುಕ್ರವಾರ(ಜ.30) ಹುತಾತ್ಮ ದಿನಾಚರಣೆ ಅಂಗವಾಗಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರು ದೇಶಕ್ಕೆ ನೀಡಿದ ಕೊಡುಗೆಯನ್ನು ಇಂದಿನ ದಿನ ಸ್ಮರಿಸಲಾಗುತ್ತಿದೆ. ಭಾರತ ಹಳ್ಳಿಗಳ ದೇಶವಾಗಿದ್ದು, ಅಂದು ಶೇ.80 ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಗ್ರಾಮಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸ್ವಾವಲಂಬಿಯಾಗಬೇಕು. ಗ್ರಾಮಗಳ ಪ್ರಗತಿಯಲ್ಲಿಯೇ ದೇಶದ ಪ್ರಗತಿ ಅಡಗಿದೆ ಎಂದು ಅವರು ಹೇಳಿದರು.
ಗಾಂಧೀಜಿಯವರ ಕೊಡುಗೆಯನ್ನು ಇಡೀ ದೇಶ ಸ್ಮರಿಸುತ್ತಿದೆ
ಇಂತಹ ಮಹಾನ್ ಚೇತನ ಗುಂಡೇಟಿಗೆ ಬಲಿಯಾಗಿ ನಮ್ಮನ್ನ ಅಗಲಿದ್ದಾರೆ. ಅವರ ಅಭಿಮಾನಿಯೊಬ್ಬರು ಗಾಂಧೀಜಿಯವರು 100 ವರ್ಷ ಬದುಕಬೇಕೆಂದು ಹಾರೈಸಿದ್ದಕ್ಕೆ, ಗಾಂಧೀಜಿಯವರು ‘’ನಾನು 125 ವರ್ಷಗಳು ದೇಶಕ್ಕಾಗಿ ಬದುಕಲಿಚ್ಛಿಸುತ್ತೇನೆ’ ಎಂದು ಉತ್ತರಿಸಿದ್ದರು. ಇಡೀ ದೇಶ ಅವರ ಕೊಡುಗೆಯನ್ನು ಸ್ಮರಿಸುತ್ತದೆ ಎಂದರು.
ಗಾಂಧಿವಾದ ಉಳಿಸುವುದು ನಮ್ಮ ಕರ್ತವ್ಯ
ದ್ವೇಷ, ಹಿಂಸೆ, ಮತೀಯವಾದದೆಡೆಗೆ ವಾಲುತ್ತಿದ್ದ ಭಾರತೀಯ ಸಮಾಜವನ್ನು ಸತ್ಯ, ಶಾಂತಿ, ಪ್ರೀತಿ, ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಸಿದ ಮಹಾನ್ ಸಂತ ಮಹಾತ್ಮ ಗಾಂಧಿಯವರು ಕೊನೆಗೆ ಆ ಕಾರಣಕ್ಕಾಗಿಯೇ ಹುತಾತ್ಮರಾಗಬೇಕಾದುದ್ದು ದುರಂತ. ಅಂದು ಗಾಂಧಿಯನ್ನು ಕೊಂದ ವಿಚ್ಛಿದ್ರಕಾರಿ ಮನಸ್ಥಿತಿಗಳು ಇಂದು ಗಾಂಧಿಯ ಸಿದ್ಧಾಂತವನ್ನು ನಿತ್ಯವೂ ಕೊಲ್ಲುತ್ತಿವೆ. ಇಡೀ ವಿಶ್ವವೇ ಒಪ್ಪಿ, ಅಪ್ಪಿಕೊಂಡಿರುವ ಗಾಂಧಿಯನ್ನು, ಗಾಂಧಿವಾದವನ್ನು ಭಾರತದಲ್ಲಿ ಉಳಿಸಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಜಾತಿ, ಧರ್ಮ, ಗಡಿಗಳನ್ನು ಮೀರಿ ಲೋಕದ ಕಷ್ಟಕ್ಕೆ ಮಿಡಿಯುತ್ತಿದ್ದ ಮಹಾತ್ಮ ಗಾಂಧಿ ಎಂಬ ದಾರ್ಶನಿಕ, ಸಂತ, ಮಾನವತಾವಾದಿಗೆ ಕೋಟಿ ನಮನಗಳು ಎಂದು ತಮ್ಮ ʼಎಕ್ಸ್ʼ ಖಾತೆಯಲ್ಲಿ ತಿಳಿಸಿದ್ದಾರೆ.
ಬಾಕಿ ಬಿಲ್‌ಗಳು ಹಿಂದಿನ ಬಿಜೆಪಿ ಸರ್ಕಾರದ್ದು
ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರದವರು ಬಾಕಿ ಬಿಲ್ಲುಗಳನ್ನು ಪಾವತಿಸದೇ ಬಿಟ್ಟುಹೋಗಿದ್ದು, ಅವುಗಳ ಬಾಕಿಯನ್ನು ನಮ್ಮ ಸರ್ಕಾರ ಪಾವತಿಸಿದೆ ಎಂದು ತಿಳಿಸಿದರು.

