ಕೈ ನಾಯಕರ ಹೈವೋಲ್ಟೇಜ್ ಮೀಟಿಂಗ್: ಸಿದ್ದು-ಡಿಕೆಶಿ ಜೊತೆಯಾಗಿಯೇ ರಾಹುಲ್ ಗಾಂಧಿ ಭೇಟಿ
x
ಮೈಸೂರಿನಲ್ಲಿ ರಾಹುಲ್‌ ಗಾಂಧಿ ಜೊತೆ ಸಿಎಂ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಮಹತ್ವದ ಚರ್ಚೆ

'ಕೈ' ನಾಯಕರ ಹೈವೋಲ್ಟೇಜ್ ಮೀಟಿಂಗ್: ಸಿದ್ದು-ಡಿಕೆಶಿ ಜೊತೆಯಾಗಿಯೇ ರಾಹುಲ್ ಗಾಂಧಿ ಭೇಟಿ

ಕರ್ನಾಟಕ ರಾಜಕೀಯದಲ್ಲಿ ಸಂಚಲನ! ನಾಯಕತ್ವ ಬದಲಾವಣೆ ಗೊಂದಲದ ನಡುವೆ ಮೈಸೂರಿನಲ್ಲಿ ರಾಹುಲ್ ಗಾಂಧಿಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗುತ್ತಿದ್ದಾರೆ.


ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಮತ್ತು ಸರ್ಕಾರದ ಎರಡೂವರೆ ವರ್ಷಗಳ ಅವಧಿ ಪೂರ್ಣಗೊಂಡ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಒಟ್ಟಾಗಿ ರಾಹುಲ್ ಗಾಂಧಿಯವರನ್ನು ಭೇಟಿಯಾಗುತ್ತಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಈ ಐತಿಹಾಸಿಕ ಭೇಟಿಗೆ ಸಾಕ್ಷಿಯಾಗುತ್ತಿದೆ.

ದೆಹಲಿಯಲ್ಲಿ ಸಿಗದ ಅವಕಾಶ, ಮೈಸೂರಲ್ಲಿ ಫಿಕ್ಸ್!

ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗೊಂದಲಗಳು ತೀವ್ರವಾಗಿದ್ದವು. ಈ ನಡುವೆ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಎರಡು ಬಾರಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಆದರೆ, ಹೈಕಮಾಂಡ್‌ನಿಂದ ಅವರಿಗೆ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಇದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದೀಗ ರಾಹುಲ್ ಗಾಂಧಿ ಅವರು ದೆಹಲಿಯಿಂದ ವಯನಾಡಿಗೆ ತೆರಳುವ ಹಾದಿಯಲ್ಲಿ ಮೈಸೂರಿಗೆ ಆಗಮಿಸುತ್ತಿದ್ದು, ಅಲ್ಲಿಯೇ ಉಭಯ ನಾಯಕರನ್ನು ಭೇಟಿಯಾಗಲು ಒಪ್ಪಿರುವುದು ವಿಶೇಷ ಪ್ರಾಮುಖ್ಯತೆ ಪಡೆದಿದೆ.

'VB G RAM G' ಹೋರಾಟ ಬಗ್ಗೆಯೂ ಚರ್ಚೆ

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಹಮ್ಮಿಕೊಂಡಿರುವ 'VB G RAM G' ಯೋಜನೆಯ ಹೋರಾಟದ ಕುರಿತು ರಾಹುಲ್ ಗಾಂಧಿಯವರಿಗೆ ಸವಿಸ್ತಾರವಾದ ಮಾಹಿತಿ ನೀಡಲಿದ್ದಾರೆ. ಸರ್ಕಾರದ ಸಾಧನೆಗಳು ಮತ್ತು ವಿರೋಧ ಪಕ್ಷಗಳ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಸೂಚಿಗಳನ್ನು ರಾಹುಲ್ ಅವರ ಗಮನಕ್ಕೆ ತರಲು ಸಜ್ಜಾಗಿದ್ದಾರೆ.

ಸಂಪುಟ ಪುನರ್‌ರಚನೆ ಮತ್ತು ನಾಯಕತ್ವದ ಕಸರತ್ತು?

ಕೇವಲ ಯೋಜನೆಗಳ ಮಾಹಿತಿ ಮಾತ್ರವಲ್ಲದೆ, ಈ ಭೇಟಿಯ ಹಿಂದೆ ಭಾರಿ ರಾಜಕೀಯ ಲೆಕ್ಕಾಚಾರಗಳಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.ಎರಡೂವರೆ ವರ್ಷಗಳ ಒಪ್ಪಂದದ ಪ್ರಕಾರ ಅಧಿಕಾರ ಹಂಚಿಕೆ ಆಗಲಿದೆಯೇ ಎಂಬ ಪ್ರಶ್ನೆಗೆ ಈ ಭೇಟಿಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಸಂಪುಟ ಪುನರ್‌ರಚನೆ ಬಗ್ಗೆಯೂ ಚರ್ಚೆಗಳು ನಡೆಯಬಹುದು. ಕೆಲಸ ಮಾಡದ ಸಚಿವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಜೊತೆ ಚರ್ಚಿಸಬಹುದು.

ಒಗ್ಗಟ್ಟಿನ ಸಂದೇಶ ರವಾನೆ?

ದೆಹಲಿಯಲ್ಲಿ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದ ನಾಯಕರು, ಮೈಸೂರಿನಲ್ಲಿ ಒಟ್ಟಾಗಿ ರಾಹುಲ್ ಅವರನ್ನು ಸ್ವಾಗತಿಸುವ ಮೂಲಕ 'ನಾವೆಲ್ಲಾ ಒಂದೇ' ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ.

ರಾಹುಲ್‌ ವಯನಾಡು ಪ್ರವಾಸದ ಹಿನ್ನೆಲೆ

ರಾಹುಲ್ ಗಾಂಧಿ ಅವರು ಮೈಸೂರು ವಿಮಾನ ನಿಲ್ದಾಣದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ತಮ್ಮ ಕ್ಷೇತ್ರವಾದ ವಯನಾಡಿಗೆ ತೆರಳಲಿದ್ದಾರೆ. ಅಲ್ಲಿ ಅವರು ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆದರೆ, ವಯನಾಡಿಗೆ ಹೋಗುವ ಮುನ್ನ ಮೈಸೂರಿನಲ್ಲಿ ನಡೆಯುವ ಈ ಕೆಲವೇ ನಿಮಿಷಗಳ ಚರ್ಚೆ ಕರ್ನಾಟಕದ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

Read More
Next Story