CM Siddaramaiah says he will provide full support to investors
x

ಸಿಎಂ ಸಿದ್ದರಾಮಯ್ಯ

ಹೂಡಿಕೆದಾರರಿಗೆ ಸಂಪೂರ್ಣ ಬೆಂಬಲ ನೀಡುವೆ ಎಂದ ಸಿಎಂ ಸಿದ್ದರಾಮಯ್ಯ

ಸಮಾವೇಶದಲ್ಲಿ ಅನೇಕ ಉದ್ಯಮಿಗಳು ಲೆಟರ್ ಆಫ್ ಇಂಟೆಂಟ್ (LOI) ಗೆ ಸಹಿ ಹಾಕಿದ್ದು, ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ಪ್ರಮುಖ ಮೈಲಿಗಲ್ಲು ಎಂದು ಸಿಎಂ ಹೇಳಿದರು.


Click the Play button to hear this message in audio format

ಕರಾವಳಿ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಬೆಳೆಸುವ ದಿಶೆಯಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಮಂಗಳೂರಿನಲ್ಲಿ ನಡೆದ 'ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ-2026'ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಸಮಾವೇಶದಲ್ಲಿ ಅನೇಕ ಉದ್ಯಮಿಗಳು ಲೆಟರ್ ಆಫ್ ಇಂಟೆಂಟ್ (LOI) ಗೆ ಸಹಿ ಹಾಕಿದ್ದು, ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ಪ್ರಮುಖ ಮೈಲಿಗಲ್ಲು ಎಂದು ಸಿಎಂ ಹೇಳಿದರು. 2024ರಿಂದ 2029ರವರೆಗಿನ ಐದು ವರ್ಷಗಳ ಪ್ರವಾಸೋದ್ಯಮ ನೀತಿಯನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿರುವುದಾಗಿ ತಿಳಿಸಿದರು. "ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಪ್ರದೇಶಗಳು," ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸ್ಪೀಕರ್‌ ಯು.ಟಿ. ಖಾದರ್‌ ಪಾಲ್ಗೊಂಡಿದ್ದರು.

320 ಕಿಮೀ ಕರಾವಳಿ: ಬಳಸದೆ ಬಿಟ್ಟ ನಿಧಿ

ಕರ್ನಾಟಕದಲ್ಲಿ ಸುಮಾರು 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವಿದ್ದರೂ, ಇಲ್ಲಿಯವರೆಗೆ ಅದನ್ನು ಪ್ರವಾಸೋದ್ಯಮಕ್ಕೆ ಸೂಕ್ತವಾಗಿ ಬಳಸಿಕೊಳ್ಳಲಾಗಿಲ್ಲ ಎಂದು ಮುಖ್ಯಮಂತ್ರಿ ವಿಷಾದಿಸಿದರು. "ಜಾಗತಿಕವಾಗಿ ಗುರುತಿಸಲ್ಪಟ್ಟ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಮಂಗಳೂರಿನಲ್ಲಿ ಪಂಚತಾರ ಹೋಟೆಲ್ ಸ್ಥಾಪಿಸಲು ಪ್ರಕಾಶ್ ಶೆಟ್ಟರು ಮುಂದಾಗಿರುವುದು ಶ್ಲಾಘನೀಯ," ಎಂದರು.

ಕರಾವಳಿಯ ಆರ್ಥಿಕ ಸಾಮರ್ಥ್ಯ

ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕರಾವಳಿ ಜಿಲ್ಲೆಗಳು ಪ್ರಗತಿಯ ಮಾದರಿಯಾಗಿವೆ ಎಂದು ಸಿಎಂ ಹೇಳಿದರು. 2011ರಲ್ಲಿ ಕರಾವಳಿಯ ಸಾಕ್ಷರತಾ ಪ್ರಮಾಣ 88.56% ಆಗಿತ್ತು ಎಂದು ಅವರು ಉಲ್ಲೇಖಿಸಿದರು. "ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದ್ದು, ಇದರಲ್ಲಿ ಕರಾವಳಿ ಜಿಲ್ಲೆಗಳ ಪಾತ್ರ ಹಿರಿದಾಗಿದೆ. ಬೆಂಗಳೂರು ಬಿಟ್ಟರೆ ಮಂಗಳೂರು ಹೆಚ್ಚಿನ ಕೊಡುಗೆ ನೀಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಮಹಾರಾಷ್ಟ್ರವನ್ನು ಹಿಂದಿಕ್ಕುವ ಅವಕಾಶವಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಮಾಣಪತ್ರ ವಿತರಿಸಿದರು.

ವಿದೇಶ ಕೆಲಸಕ್ಕೆ ಬದಲು ಸ್ಥಳೀಯ ಉದ್ಯಮಗಳಿಗೆ ಸೂಚನೆ

"ಮಂಗಳೂರಿಗೆ ಓದಲೆಂದು ದೇಶವಿದೇಶಗಳಿಂದ ಜನರು ಬರುತ್ತಾರೆ. ಆದರೆ ಇಲ್ಲಿನ ಜನ ಅರಬ್ ದೇಶಗಳಿಗೆ ಕೆಲಸಕ್ಕಾಗಿ ಹೋಗುವುದು ವಿಷಾದನೀಯ. ಇಲ್ಲೇ ಉಳಿದುಕೊಂಡು ದುಡಿಮೆ ಮಾಡುವ ಅವಕಾಶ ಸೃಷ್ಟಿಸಬೇಕು. ದಕ್ಷಿಣ ಕನ್ನಡದ ಜನ ಸಾಹಸ ಪ್ರವೃತ್ತಿಯಿರುವವರು. ನಮ್ಮಲ್ಲಿ ಯಾವುದೇ ಕೊರತೆಗಳಿಲ್ಲ, ಬಂಡವಾಳ ಹೂಡಿಕೆಗೆ ಆಸಕ್ತಿಯ ಅಗತ್ಯವಿದೆ ಅಷ್ಟೆ," ಎಂದು ಸ್ಥಳೀಯ ಉದ್ಯಮಗಳನ್ನು ಬೆಳೆಸಲು ಕರೆ ನೀಡಿದರು.

ಕಾನೂನು ಸುವ್ಯವಸ್ಥೆ ಮತ್ತು ಸಾಮರಸ್ಯ ಅಗತ್ಯ

ಪ್ರವಾಸೋದ್ಯಮ ಬೆಳೆಯಲು ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು. "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿರುವುದು ಸ್ವಾಗತಾರ್ಹ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಒಂದು ಧರ್ಮದ ಮೇಲೆ ಮತ್ತೊಂದು ಧರ್ಮವನ್ನು ಎತ್ತಿ ಕಟ್ಟುವುದರಿಂದ ದೇಶಭಕ್ತಿ ಬರುವುದಿಲ್ಲ. ಕುವೆಂಪು ಅವರು ಹೇಳಿದಂತೆ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು," ಎಂದು ಸಾಮರಸ್ಯದ ಸಂದೇಶ ನೀಡಿದರು.

Read More
Next Story