Janaki Nair

ಕರ್ನಾಟಕದ ದ್ವೇಷ ಭಾಷಣ ಕಾನೂನು: ಕಾಂಗ್ರೆಸ್ ರಾಜಕೀಯ ಹೋರಾಟ ವಿಷದ ಹಲ್ಲು ಕಿತ್ತ ಹಾವು


ಕರ್ನಾಟಕದ ದ್ವೇಷ ಭಾಷಣ ಕಾನೂನು: ಕಾಂಗ್ರೆಸ್ ರಾಜಕೀಯ ಹೋರಾಟ ವಿಷದ ಹಲ್ಲು ಕಿತ್ತ ಹಾವು
x
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ನಂಬಿಕೆಗಳು ಸತತವಾಗಿ ಮಾಧ್ಯಮ ಚರ್ಚೆಗೆ ಗ್ರಾಸವಾಗುತ್ತಿವೆ. ಅಷ್ಟೇ ಅಲ್ಲದೆ, ತಾವೇ ಒಬ್ಬ ಧಾರ್ಮಿಕ ಉದ್ಯಮಿಯಂತೆ ಕಾಣಿಸಿಕೊಳ್ಳುವ ಮೂಲಕ ಅದನ್ನು ಒಂದು ಆಡಂಬರದ ಪ್ರದರ್ಶನವಾಗಿ ರೂಪಿಸುವ ಯಾವುದೇ ಅವಕಾಶವನ್ನು ಅವರು ಕೈ ಚೆಲ್ಲುವುದಿಲ್ಲ.
Click the Play button to hear this message in audio format

ಧಾರ್ಮಿಕ ವಿಷಯಗಳು ಮತ್ತು ಸಾರ್ವಜನಿಕ ಜೀವನದ ಕುರಿತು ಕಾಂಗ್ರೆಸ್ ಮೌನಕ್ಕೆ ಜಾರಿರುವುದು ಕರ್ನಾಟಕವನ್ನು ಚರ್ಚೆಗಳಲ್ಲಿ ಸಿಲುಕುವಂತೆ ಮಾಡಿದೆ. ಮತಾಂತರ ಮತ್ತು ಗೋಹತ್ಯೆಯಂತಹ ಕಾಯ್ದೆಗಳನ್ನು ಹಿಂದೆ ಪಡೆಯದೇ ಇರುವುದು ಇದಕ್ಕೆ ಕಾರಣ...

ಕರ್ನಾಟಕದ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿರುವ 'ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ಪ್ರತಿಬಂಧಕ) ಮಸೂದೆಗೆ ಸಂಬಂಧಿಸಿದ ಚರ್ಚೆಯು ನಿರೀಕ್ಷಿತ ಹಾದಿಯಲ್ಲೇ ಸಾಗಿತು.

ಈಗ ಅಸ್ತಿತ್ವದಲ್ಲಿರುವ ದ್ವೇಷ ಭಾಷಣ ವಿರೋಧಿ ಕಾನೂನುಗಳನ್ನು ಯಾವುದೇ ಭಯವಿಲ್ಲದೆ ಪದೇ ಪದೇ ಉಲ್ಲಂಘಿಸುವ ಕೆಲಸ ಮಾಡಲಾಗುತ್ತಿದೆ, ಅದರಲ್ಲೂ ವಿಶೇಷವಾಗಿ ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿ ಕರ್ನಾಟಕದಲ್ಲಿ ಸತತವಾಗಿ ದ್ವೇಷ ಬಿತ್ತುವವರಿಗೆ ಮತ್ತೆ ಮತ್ತೆ ಪೊಲೀಸ್ ಠಾಣೆಯಲ್ಲೇ ಜಾಮೀನು (ಸ್ಟೇಷನ್ ಬೇಲ್) ನೀಡಲಾಗುತ್ತಿದೆ ಎಂದು ವಾದಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಈ ಹೊಸ ಕಾಯ್ದೆಯನ್ನು ಮಂಡಿಸಿತು. ಈ ಮೂಲಕ ಸರ್ಕಾರವು ಈಗ ಹೊಸ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಡುವ ನಿರೀಕ್ಷೆಯಲ್ಲಿದೆ.

ವಿರೋಧ ಪಕ್ಷವಾದ ಬಿಜೆಪಿ, ವಾಕ್ ಸ್ವಾತಂತ್ರ್ಯದ ಪರವಾಗಿ ತನ್ನ (ಅತ್ಯಂತ ವಿಪರ್ಯಾಸದ) ರಕ್ಷಣಾತ್ಮಕ ವಾದವನ್ನು ಮಂಡಿಸಿತು. ಸಂಸದೀಯ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಈ ಮಸೂದೆಯು ಕಾನೂನಾಗದಂತೆ ತಡೆಯಲು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿದರು. ಇನ್ನು ಕೆಲವರು ಇದನ್ನು 'ಸಂಕಷ್ಟದಲ್ಲಿರುವ ಕನ್ನಡ ಭಾಷೆಯನ್ನು ರಕ್ಷಿಸುವ ಕನ್ನಡಿಗರ ಹಕ್ಕುಗಳ ಮೇಲಿನ ದಾಳಿ' ಎಂದು ಬಣ್ಣಿಸಿದರು. ಮಾಧ್ಯಮಗಳು ಕೂಡ ಸರ್ಕಾರದ ಈ ಕ್ರಮದ ಬಗ್ಗೆ ಹೆಚ್ಚು ಕಡಿಮೆ ಅಸಮಾಧಾನ ವ್ಯಕ್ತಪಡಿಸಿದಂತೆ ತೋರುತ್ತಿದ್ದು, ಟೀಕೆ ಮಾಡುವವರ ವಿರುದ್ಧ ಈ ಕಾನೂನು ದುರುಪಯೋಗ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದು ಭವಿಷ್ಯ ನುಡಿದಿವೆ.

ಕಾನೂನುಬದ್ಧ ವ್ಯಾಖ್ಯಾನದ ಕೊರತೆ

ಕರ್ನಾಟಕದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಕ್ಕೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಅತ್ಯಂತ ವ್ಯವಸ್ಥಿತವಾದ ದಾಖಲೀಕರಣ ಮತ್ತು ಸಂಗ್ರಹಣೆ ಮಾಡುತ್ತಿರುವ 'ದ್ವೇಷ ಭಾಷಣದ ವಿರುದ್ಧದ ಅಭಿಯಾನ' ಈ ಹೊಸ ಕಾನೂನನ್ನು ಎಚ್ಚರಿಕೆಯಿಂದ ಸ್ವಾಗತಿಸಲಾಗಿದೆ. ಈ ಶಾಸನವು ಜಾರಿಯಾಗುವುದು ಬಹು ಕಾಲದಿಂದ ಬಾಕಿ ಇತ್ತು ಎಂಬುದನ್ನು ಒಪ್ಪಿಕೊಂಡರೂ ಸಹ, ತಕ್ಷಣವೇ ಪರಿಹರಿಸಬೇಕಾದ ಹಲವಾರು ಆತಂಕಕಾರಿ ವಿಷಯಗಳನ್ನು ಅದು ಎತ್ತಿ ತೋರಿಸಿದೆ.

ದ್ವೇಷ ಭಾಷಣದಿಂದ ರಚನಾತ್ಮಕವಾಗಿ ಅಪಾಯಕ್ಕೆ ಒಳಗಾಗುವವರು - ಅಂದರೆ ವಿಶೇಷವಾಗಿ ದಲಿತರು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ವಿಭಿನ್ನ ಲೈಂಗಿಕ ದೃಷ್ಟಿಕೋನ ಹೊಂದಿರುವ ಮಂದಿ. ಇವರಿಗೆ ದ್ವೇಷ ಭಾಷಣದಿಂದ ಆಗುವ ಹಾನಿಯ ಪ್ರಮಾಣವನ್ನು ಕಾನೂನುಬದ್ಧವಾಗಿ ವ್ಯಾಖ್ಯಾನಿಸಲು ಈ ಕಾಯ್ದೆಯು ಯಾವುದೇ ಪ್ರಯತ್ನ ಮಾಡಿಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ದ್ವೇಷ ಸಂಬಂಧಿ ಅಪರಾಧಗಳಾದ ದಂಡನಾತ್ಮಕ ವಿದ್ವಂಸದ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಗಳನ್ನು ಈ ಕಾನೂನು ಗುರುತಿಸುವುದಿಲ್ಲ. ದುರುಪಯೋಗದ ಸಾಧ್ಯತೆ ಮತ್ತು ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ ನಡುವಿನ ಅಸ್ಪಷ್ಟ ವ್ಯತ್ಯಾಸಗಳ ಕಡೆಗೆ ಬೊಟ್ಟು ಮಾಡುವುದರ ಜೊತೆಗೆ, CAHS ಈ ಹೊಸ ವಿಧೇಯಕದ ಒಂದು ಪ್ರಮುಖ ಸಮಸ್ಯೆಯನ್ನು ಎತ್ತಿ ತೋರಿಸಿದೆ: ದ್ವೇಷ ಭಾಷಣದ ವ್ಯಾಖ್ಯಾನವು ಅಸ್ಪಷ್ಟವಾಗಿದೆ ಮತ್ತು ಭಾವನಾತ್ಮಕ ಅಂಶಗಳ ಮೇಲೆ ಆಧಾರಿತವಾಗಿದೆ. ಇದೇ ಕಾರಣದಿಂದಾಗಿ ಈ ಹಿಂದೆ IPC ಮತ್ತು BNS ಅಡಿಯಲ್ಲಿ ವಿಶ್ವಾಸಾರ್ಹತೆಯ ಕೊರತೆ ಉಂಟಾಗಿತ್ತು.

ವಿಷಪೂರಿತ ಚರ್ಚೆಗೆ ಕಡಿವಾಣ ಹೇಗೆ

ಈ ಎಲ್ಲ ಹಿನ್ನೆಲೆಯಲ್ಲಿ ಈಗ ಒಂದು ಪ್ರಮುಖ ರಾಜಕೀಯ ಪ್ರಶ್ನೆಯನ್ನು ಕೇಳುವ ಸಮಯ ಬಂದಿದೆ: ವಿಧಾನ ಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ (ಮತ್ತು ಆಶಾದಾಯಕವಾಗಿ ಜನಸಾಮಾನ್ಯರ ಬೆಂಬಲವಿದ್ದರೂ), ಕಳೆದ ಒಂದೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರವು ಪ್ರಸ್ತುತ ಸಮಾಜದಲ್ಲಿ ಹರಡಿರುವ ಮತ್ತು ದುರ್ಬಲ ವರ್ಗಗಳ ವಿರುದ್ಧದ ಅಪರಾಧಗಳಿಗೆ ಕಾರಣವಾಗುತ್ತಿರುವ ಈ 'ಭಾವನಾತ್ಮಕ ಆಧಾರಿತ ವಿಷಪೂರಿತ ಚರ್ಚೆ'ಗಳನ್ನು ಹತ್ತಿಕ್ಕಲು ಕೈಗೊಂಡಿರುವ ಕ್ರಮಗಳಾದರೂ ಏನು?

ಆಡಳಿತಕ್ಕೆ ಅತಿದೊಡ್ಡ ತಲೆನೋವಾಗಿ ಪರಿಣಮಿಸಿರುವ ಈ 'ನೊಂದ ಭಾವನೆಗಳ' ಬೆಳವಣಿಗೆಗೆ ಪೂರಕ ಎನ್ನಬಹುದಾದ ವಾತಾವರಣವನ್ನು ಬದಲಿಸಲು ಸರ್ಕಾರವಾದರೂ ಏನು ಮಾಡಿದೆ? ಈ ಭಾವನೆಗಳು ಕಾನೂನು ಜಾರಿ ಮಾಡುವವರಲ್ಲಿ—ಅಂದರೆ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲೇ—ಸಿದ್ಧ ಬೆಂಬಲ ಮತ್ತು ಸಹಾನುಭೂತಿಯನ್ನು ಕಂಡುಕೊಳ್ಳುತ್ತಿವೆ. ಹಾಗಿದ್ದಲ್ಲಿ, ಕೇವಲ ಒಂದು ಹೊಸ ಕಾನೂನಿನ ಮೊರೆ ಹೋಗುವುದು, ಸರ್ಕಾರವು ತನ್ನ ಸಾರ್ವಜನಿಕ ಮತ್ತು ರಾಜಕೀಯ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದೆ ಎಂಬುದರ ಸಂಕೇತವೇ?

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕರ್ನಾಟಕ ಸರ್ಕಾರವು ಶಾಲೆ ಮತ್ತು ಕಾಲೇಜುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿಜಕ್ಕೂ ಚಾಲನೆ ನೀಡಿದೆ. ಅಷ್ಟು ಮಾತ್ರವಲ್ಲದೆ, ಕನಿಷ್ಠಪಕ್ಷ ಬಹಿರಂಗವಾಗಿ ಬಹುಸಂಖ್ಯಾತವಾದವನ್ನು ಪ್ರತಿಪಾದಿಸುವ ಪೊಲೀಸ್ ಅಧಿಕಾರಿಗಳ ಮೇಲೆ ನಿಯಂತ್ರಣಗಳನ್ನು ಹೇರಿದೆ. ಆದರೆ ಧಾರ್ಮಿಕ ವಿಷಯ ಮತ್ತು ಧಾರ್ಮಿಕ ಆಚರಣೆಗಳು ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರುವ ವಿಚಾರಗಳಲ್ಲಿ, ಸರ್ಕಾರವಾಗಲಿ ಅಥವಾ ಪಕ್ಷವಾಗಲಿ ಯಾವುದೇ ರೀತಿಯಲ್ಲಿ ಸೃಜನಾತ್ಮಕವಾಗಿ ಸ್ಪಂದಿಸಿಲ್ಲ.

ಇನ್ನೂ ಈಡೇರದ ಕಾಂಗ್ರೆಸ್ ಭರವಸೆಗಳು

ಇಂದು ಹಿಂದೂ ಬಲಪಂಥೀಯ ಸಂಘಟನೆಗಳು ಹೊಂದಿರುವ ಬಹುಮುಖಿ ಮತ್ತು ಬೃಹತ್ ಸ್ವರೂಪದ ಎದುರು ಈ ಪ್ರಯತ್ನಗಳು ಅತೀ ಅಲ್ಪ ಎನಿಸುತ್ತವೆ. ವಾಸ್ತವವಾಗಿ, ಹಿಂದಿನ ಬಿಜೆಪಿ ಸರ್ಕಾರವು ಅತ್ಯಂತ ತರಾತುರಿಯಲ್ಲಿ ಜಾರಿಗೆ ತಂದಿದ್ದ ‘ಮತಾಂತರ’, 'ಗೋಹತ್ಯೆ' ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 'ಹಿಜಾಬ್' ಬಳಕೆಯ ವಿರುದ್ಧದ ವಿವಾದಾತ್ಮಕ ಕಾಯ್ದೆಗಳು ಮತ್ತು ಸರ್ಕಾರಿ ಆದೇಶಗಳು ಇಂದಿಗೂ ಹಾಗೆಯೇ ಮುಂದುವರಿಯುತ್ತಿವೆ. ಇವೆಲ್ಲಕ್ಕೆ ಶಾಸನಬದ್ಧ ಬದಲಾವಣೆಗಳನ್ನು ಮಾಡಲಾಗುವುದು ಎಂದು ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆ ನೀಡಿತ್ತು. ಅವು ಇನ್ನೂ ಈಡೇರಿಲ್ಲ.

ಮೌನವಾಗಿರುವುದೇ ಕಾಂಗ್ರೆಸ್ನ ನೆಚ್ಚಿನ ತಂತ್ರವಾಗಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಕ್ರಿಮಿನಲ್ ಆರೋಪಗಳಿಂದ ತತ್ತರಿಸಿದ ಮುರುಘಾ ಮಠ ಮತ್ತು ಧರ್ಮಸ್ಥಳದಂತಹ ಪ್ರಮುಖ ಮಠಗಳಿಗೆ ಹಾಗೂ ಇತರ ಸಂಸ್ಥೆಗಳಿಗೆ, ಸರ್ಕಾರವು ತನ್ನದೇ ಆದ ರೀತಿಯಲ್ಲಿ ಸಕ್ರಿಯ ಹಸ್ತಕ್ಷೇಪ ಮತ್ತು ಬೆಂಬಲದ ಮೂಲಕ ರಕ್ಷಣೆಗೆ ನಿಂತಿದೆ.

ಹಿಂದೂ ಧರ್ಮದ ಪ್ರತಿಪಾದನೆಯ ಸಾರ್ವಜನಿಕ ಮುಖವಾಗಿ, ವಿಶೇಷವಾಗಿ ಸಾರ್ವಜನಿಕ ಆಚರಣೆಗಳ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಅವರೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವರು ನಡೆಸುವ ಪ್ರಯತ್ನಗಳಷ್ಟೇ ಆಗಾಗ್ಗೆ ಅವರು ನಡೆಸುವ ವೈಯಕ್ತಿಕ ದೇವಸ್ಥಾನದ ಭೇಟಿಗಳು ಸುದ್ದಿಯಾಗುತ್ತಲೇ ಇರುತ್ತವೆ ಮತ್ತು ಪತ್ರಿಕೆಗಳ ಮುಖಪುಟಗಳಲ್ಲಿ ಸ್ಥಾನ ಪಡೆಯುತ್ತವೆ. ಅಷ್ಟೇ ಅಲ್ಲದೆ, ಪರಿಸರ ಜವಾಬ್ದಾರಿ ಮತ್ತು ಸಾರ್ವಜನಿಕ ಶಾಂತಿಯನ್ನು ನಿರ್ಲಕ್ಷಿಸುವಂತಹ ಸಾರ್ವಜನಿಕ ಆರಾಧನಾ ಪದ್ಧತಿಗಳ ಅಪಾಯಕಾರಿ ಹೆಚ್ಚಳಕ್ಕೂ ಅವರು ಸಾಕ್ಷಿಯಾಗಿದ್ದಾರೆ.

ಅವಕಾಶ ಕೈಚೆಲ್ಲದವರು

ಅವರು ನಾಗಾ ಸಾಧುಗಳನ್ನು, ಮಠಾಧೀಶರನ್ನು ಅಥವಾ ಧಾರ್ಮಿಕ ಉದ್ಯಮಿಗಳನ್ನು ಸತ್ಕರಿಸಲಿ ಅಥವಾ ತಮ್ಮ ನಾಗರಿಕ ಕರ್ತವ್ಯಗಳನ್ನು ದೇವರಿಗೆ ಬಿಟ್ಟು ಕೈತೊಳೆದುಕೊಳ್ಳಲಿ—ಅವರ ವೈಯಕ್ತಿಕ ನಂಬಿಕೆಗಳು ಸತತವಾಗಿ ಮಾಧ್ಯಮ ಚರ್ಚೆಗೆ ಗ್ರಾಸವಾಗುತ್ತಿವೆ. ಅಷ್ಟೇ ಅಲ್ಲದೆ, ತಾವೇ ಒಬ್ಬ ಧಾರ್ಮಿಕ ಉದ್ಯಮಿಯಂತೆ ಕಾಣಿಸಿಕೊಳ್ಳುವ ಮೂಲಕ ಅದನ್ನು ಒಂದು ಆಡಂಬರದ ಪ್ರದರ್ಶನವಾಗಿ ರೂಪಿಸುವ ಯಾವುದೇ ಅವಕಾಶವನ್ನು ಅವರು ಕೈ ಚೆಲ್ಲುವುದಿಲ್ಲ.

ಉದಾಹರಣೆಗೆ, ಈ ವರ್ಷ ಸೆಪ್ಟೆಂಬರ್ನಲ್ಲಿ ಆಯೋಜಿಸಲಾಗಿದ್ದ ದಸರಾ ಸಂಭ್ರಮದ ಸಂದರ್ಭದಲ್ಲಿ, ಎಲ್ಲಾ ತಾಂತ್ರಿಕ ಮತ್ತು ಪರಿಸರ ಸಂಬಂಧಿ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ, ಅವರು ಬೃಂದಾವನ ಗಾರ್ಡನ್ಸ್ ನಲ್ಲಿ ಗಂಗಾ ಆರತಿಯಿಂದ ಪ್ರೇರಿತವಾದ ಐದು ದಿನಗಳ 'ಕಾವೇರಿ ಆರತಿ'ಯನ್ನು ಅದ್ಧೂರಿಯಾಗಿ ಉದ್ಘಾಟಿಸಿದರು. ಅವರ ಅಭಿಮಾನಿ ಬಳಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 'ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗ'ವು ಅವರು ಮುಖ್ಯಮಂತ್ರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ದೈವಿಕ ಹಸ್ತಕ್ಷೇಪ ಕೋರಿ ಮೈಸೂರಿನಲ್ಲಿ 18 ದಿನಗಳ ಕಾಲ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಿತ್ತು. ಸೃಜನಾತ್ಮಕ ಚಿಂತನೆಯ ದಿವಾಳಿತನವು ಎಲ್ಲೆಡೆ ಎದ್ದು ಕಾಣುತ್ತಿದೆ ಎಂಬುದಕ್ಕೆ ಇವೆಲ್ಲವೂ ಉದಾಹರಣೆಯಾಗಿ ನಿಲ್ಲುತ್ತವೆ.

ಇನ್ನೊಂದೆಡೆ, ದಲಿತ ಸಂಘಟನೆಗಳು ಸಂವಿಧಾನವನ್ನು ಒಂದು 'ಪವಿತ್ರ ಗ್ರಂಥ' ಎಂದು ಘೋಷಿಸಬೇಕೆಂದು ಜಿದ್ದಿಗೆ ಬಿದ್ದಿವೆ. ಕರ್ನಾಟಕದ ಶ್ರೀಮಂತ ಮತ್ತು ಬಹುತ್ವದ ಇತಿಹಾಸದಲ್ಲಿ ಬೇರೂರಿರುವ ಇತರ ವಿಚಾರಗಳನ್ನು ಸಾಹಿತಿಗಳ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಪ್ರತಿಯೊಂದು ಕೂಟದಲ್ಲೂ ನೆನಪು ಮಾಡಿಕೊಳ್ಳಲಾಗುತ್ತಿದೆ. ಆದರೆ, ನಮ್ಮ ಕಾಲದ ತುರ್ತು ಅಗತ್ಯವಾಗಿರುವ ಸಾಮಾಜಿಕ ಮತ್ತು ಧಾರ್ಮಿಕ ಭವಿಷ್ಯದ ಸಕ್ರಿಯ ಮರುಚಿಂತನೆಯಾದ 'ಸಂವಿಧಾನಬದ್ಧತೆ' ಎಂಬ ವಿಚಾರವು ವಿಭಿನ್ನವಾಗಿ ಬೇರೂರಬೇಕಿದೆ; ಅದು ಕೇವಲ ಆರಾಧನೆಗೆ ಮೀಸಲಾದ ಮತ್ತೊಂದು ಪರ್ಯಾಯ ಪವಿತ್ರ ಗ್ರಂಥವಾಗಿ ಮಾತ್ರ ಉಳಿಯಬಾರದು.

ಪುನರ್ವಿಮರ್ಶೆಯ ಜರೂರತ್ತು

ಬಹುಶಃ, ಧರ್ಮಕ್ಕೆ ಯಾವ ಸ್ಥಾನವನ್ನು ನೀಡಬೇಕಾಗಿದೆಯೋ ಅದನ್ನು ಕಲ್ಪಿಸುವ ಸಮಯ ಈಗ ಸನ್ನಿಹಿತವಾಗಿದೆ. ಧರ್ಮವು ಹೆಚ್ಚಿನ ಸಂಖ್ಯೆಯ ಜನರಿಗೆ ನೆಮ್ಮದಿ ಮತ್ತು ಸಾಂತ್ವನ ನೀಡುವ ಒಂದು ಬಲಿಷ್ಠ ಶಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿಗೆ ಧಕ್ಕೆ ತರುವುದು, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ, ಹಾಗೂ ಈಗಾಗಲೇ ಅತ್ಯಂತ ಕೊರತೆಯಿರುವ ಸಾರ್ವಜನಿಕ ಸ್ಥಳಗಳಲ್ಲಿ (ಪಾದಚಾರಿ ಮಾರ್ಗಗಳು, ರಸ್ತೆಗಳು ಮತ್ತು ಖಾಲಿ ಜಾಗಗಳು) ಕಾಯಂ ಆಗಿ ಅತಿಕ್ರಮಣ ಮಾಡಿಕೊಳ್ಳುವುದರ ಬಗ್ಗೆ ನಾವು ಪುನರ್ವಿಮರ್ಶೆ ನಡೆಸಬೇಕಾದ ಜರೂರತ್ತು ಎದುರಾಗಿದೆ.

ಹಿಂದೂ ಬಲಪಂಥೀಯ ಸಂಘಟನೆಗಳ ಸರ್ವವ್ಯಾಪಿ ಉಪಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾದರೆ, ನಮ್ಮ ಸಾರ್ವಜನಿಕ ಜೀವನದಲ್ಲಿ ಧರ್ಮವನ್ನು ಸ್ವಾರ್ಥ ಅಥವಾ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿಯ ಬಗ್ಗೆ ಗಹನ ಪುನರ್ವಿಮರ್ಶೆಯ ಅಗತ್ಯವಿದೆ. ಈ ಪ್ರವೃತ್ತಿಯು ಹೊಸ ಅಥವಾ ದೂರದೃಷ್ಟಿಯ ಸಾಮೂಹಿಕ ಆದರ್ಶಗಳು ಹೊರಹೊಮ್ಮುವ ಸಾಧ್ಯತೆಯನ್ನು ನಶಿಸಿಹೋಗುವಂತೆ ಮಾಡುವುದಲ್ಲದೆ, ಜನರ ವೈಯಕ್ತಿಕ ನಂಬಿಕೆ ಮತ್ತು ವಿಶ್ವಾಸವೂ ಗಂಭೀರವಾಗಿ ಕುಸಿಯುವಂತೆ ಮಾಡಿದೆ.

ಸಮಾನ ನಿರ್ಬಂಧ ಸಾಧ್ಯವೇ?

ಎಲ್ಲರಿಗೂ ಅನ್ವಯವಾಗುವ ಸಾರ್ವಜನಿಕ ಸಂಘಟನೆಗಳ ನಿಯಮಗಳನ್ನು ಸಾಮೂಹಿಕ ಆರಾಧನಾ ಪದ್ಧತಿಗಳೂ ಪಾಲಿಸುವಂತೆ ಮಾಡಲು ಸಾಧ್ಯವೇ? ಸಂಚಾರ ನಿರ್ವಹಣೆ ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿನ ಪ್ರತಿಭಟನಾ ಮೆರವಣಿಗೆಗಳು ಮತ್ತು ಚಳವಳಿಗಳನ್ನು ಗಣನೀಯ ಪ್ರಮಾಣದಲ್ಲಿ ಸೀಮಿತಗೊಳಿಸಿದ ಕಾಲದಲ್ಲಿ, ನಗರ ಮತ್ತು ಪಟ್ಟಣಗಳ ಬೀದಿ ಬೀದಿಗಳಲ್ಲಿ ನುಗ್ಗುವ ಧಾರ್ಮಿಕ ಮೆರವಣಿಗೆಗಳು ಹಾಗೂ ಹಬ್ಬದ ಆಚರಣೆಗಳ ಸಂದರ್ಭದಲ್ಲಿ ಉಂಟಾಗುವ ಗದ್ದಲಗಳ ಮೇಲೆ ಸಮಾನವಾದ ನಿರ್ಬಂಧಗಳನ್ನು ಹೇರಲು ಸಾಧ್ಯವೇ?

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗಣೇಶ ಮೂರ್ತಿಗಳ ಗಾತ್ರದ ಮೇಲೆ ಮಿತಿ ಹೇರುವ ಧೈರ್ಯ ತೋರುವರೇ? ದಿನೇ ದಿನೇ ಹೆಚ್ಚುತ್ತಿರುವ ಈ ಮೂರ್ತಿಗಳ ಬೃಹತ್ ಗಾತ್ರ ಮತ್ತು ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳ (ಪಿಒಪಿ) ಬಳಕೆ, ನಮ್ಮ ಜಲಮೂಲಗಳಿಗೆ, ಪೌರಸೌಲಭ್ಯಗಳಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಅತೀವವಾದ ಸವಾಲುಗಳನ್ನು ಒಡ್ಡುತ್ತಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಜನರ ಜೀವನೋಪಾಯ ಮತ್ತು ಪುನರ್ ಕಲ್ಪಿತ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಹೊಸ ಸನ್ನದನ್ನು ರೂಪಿಸಬಲ್ಲದೇ? ಈ ಮೂಲಕ ತನ್ನೆಲ್ಲಾ ನಾಗರಿಕರು ಶಾಂತಿಯಿಂದ ಬದುಕಲು, ಪ್ರೀತಿಸಲು, ಕೆಲಸ ಮಾಡಲು ಮತ್ತು ಆರಾಧಿಸಲು ಭರವಸೆ ನೀಡುವ ಭವಿಷ್ಯವನ್ನು ನಿರ್ಮಿಸಬಲ್ಲದೇ? ಸದ್ಯಕ್ಕಂತೂ, ಇಂತಹದೊಂದು ದೃಢವಾದ ಪರ್ಯಾಯ ಮಾರ್ಗದ ಲಕ್ಷಣಗಳು ಅತಿ ವಿರಳ.

ಪರಿಸ್ಥಿತಿ ಹೀಗಿರುವಾಗ, ಕೇವಲ ಶಾಸನಬದ್ಧ ಬದಲಾವಣೆಗಳನ್ನು ತರುವುದು ಅಥವಾ ಹೊಸ ಕಾನೂನುಗಳನ್ನು ರೂಪಿಸುವುದು, ಕಾಂಗ್ರೆಸ್ ಪಕ್ಷವು ತನ್ನ ನಾಗರಿಕರು ಎದುರಿಸುತ್ತಿರುವ ಈ ವಿಷಪೂರಿತ ಮತ್ತು ಸವಕಲಾಗುತ್ತಿರುವ ಸಾರ್ವಜನಿಕ ಜೀವನವನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವುದರ ಸೂಚನೆಯಾಗಿದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story