Super specialty hospital, separate tourism policy to be set up in Karwar soon: DCM promises
x

ಡಿಸಿಎಂ ಡಿ.ಕೆ. ಶಿವಕುಮಾರ್‌

ಕಾರವಾರದಲ್ಲಿ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ

ಉತ್ತರ ಕನ್ನಡ ಜಿಲ್ಲೆಯ ಜನತೆ ಐದು ಜನ‌ ಶಾಸಕರನ್ನು ನೀಡಿ ಸರ್ಕಾರಕ್ಕೆ ಶಕ್ತಿ ತುಂಬಿದ್ದೀರಿ. ನೀವು ಶಕ್ತಿ ಕೊಟ್ಟ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಿಮ್ಮಿಂದ ಈ ಕೈ ಗಟ್ಟಿಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜನರ ಬಹುವರ್ಷಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗುತ್ತಿದೆ. ಅಪಘಾತ ಹಾಗೂ ತುರ್ತು ಸಂದರ್ಭದಲ್ಲಿ ಮಣಿಪಾಲ, ಬೆಂಗಳೂರು ಅಥವಾ ಗೋವಾಕ್ಕೆ ಪ್ರಯಾಣಿಸಬೇಕಿತ್ತು. ಆದರೆ ಈ ವೇಳೆ ಬದುಕುಳಿಯುವ ಸಾಧ್ಯತೆಯೇ ಕಡಿಮೆಯಿತ್ತು. ಆದರೆ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆ ಕರಾವಳಿ ಜನರಲ್ಲಿ ಮತ್ತೊಮ್ಮೆ ಆಸೆ ಚಿಗುರಿಸಿದೆ.

ಭಾನುವಾರ(ಡಿ.29) ನಡೆದ ಕರಾವಳಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ," ಎಂದು ಪ್ರಕಟಿಸಿದ್ದಾರೆ.

ಕರಾವಳಿ ಭಾಗದಲ್ಲಿ, ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಒಂದು ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ದಶಕಗಳ ಕಾಲದ ದೊಡ್ಡ ಹೋರಾಟವಾಗಿದೆ. ಅಪಘಾತ ಅಥವಾ ಗಂಭೀರ ಕಾಯಿಲೆಗಳು ಬಂದಾಗ ಜಿಲ್ಲೆಯ ಜನರು ಉಡುಪಿ, ಮಂಗಳೂರು, ಬೆಂಗಳೂರು ಅಥವಾ ನೆರೆಯ ಗೋವಾ ರಾಜ್ಯಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ತುರ್ತು ಸಂದರ್ಭದಲ್ಲಿ ರೋಗಿಗಳು 100 ರಿಂದ 200 ಕಿ.ಮೀ ಪ್ರಯಾಣಿಸುವಷ್ಟರಲ್ಲಿ ದಾರಿ ಮಧ್ಯೆಯೇ ಪ್ರಾಣ ಕಳೆದುಕೊಂಡ ಅನೇಕ ಘಟನೆಗಳು ನಡೆದಿವೆ. ಖಾಸಗಿ ಆಸ್ಪತ್ರೆಗಳ ವೆಚ್ಚ ಭರಿಸಲಾಗದೆ ಬಡವರು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಇದ್ದರೂ, 'ಸೂಪರ್ ಸ್ಪೆಷಾಲಿಟಿ' ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.

ಹ್ಯಾಶ್‌ಟ್ಯಾಗ್ ಅಭಿಯಾನ

ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ #WeNeedSuperSpecialityHospitalInKarwar ಎಂಬ ಹ್ಯಾಶ್‌ಟ್ಯಾಗ್ ಮೂಲಕ ಬೃಹತ್ ಅಭಿಯಾನ ನಡೆದಿತ್ತು. ಸಾವಿರಾರು ಯುವಕರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರಸ್ತೆ ತಡೆ, ಬೃಹತ್ ಪ್ರತಿಭಟನೆಗಳು ಮತ್ತು ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ.

ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ

"ಉತ್ತರ ಕನ್ನಡ ಜಿಲ್ಲೆಯ ಜನತೆಗಾಗಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜನವರಿ 10 ರಂದು ಮಂಗಳೂರಿನಲ್ಲಿ ಈ ಸಂಬಂಧ ಸಭೆ ನಡೆಸಲಾಗುವುದು" ಎಂದರು.

ಪ್ರವಾಸಿಗರ ಸ್ವರ್ಗ ಸಮುದ್ರ

"ಕರಾವಳಿ- ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ವ್ಯಾಪಾರಿಗರ ನಿಧಿ, ಪ್ರವಾಸಿಗರ ಸ್ವರ್ಗ ಈ ಸಮುದ್ರ" ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು.

ಅವಕಾಶ ಸೃಷ್ಟಿ

"ಕಳೆದ ಏಳು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಈ ವರ್ಷ ನೀವು ಬರಲೇಬೇಕು ಎಂದು ಸತೀಶ್ ಸೈಲ್, ಜಿಲ್ಲಾ ಮಂತ್ರಿ ಮಂಕಾಳ್ ವೈದ್ಯ ಅವರು ಒತ್ತಾಯ ಪೂರ್ವಕವಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದೇವರು ವರ,‌ ಶಾಪ ಎರಡನ್ನೂ ನೀಡುವುದಿಲ್ಲ‌. ಆದರೆ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಇದನ್ನು ಸತೀಶ್ ಸೈಲ್ ಅವರು ಬಳಸಿಕೊಂಡು ಜಿಲ್ಲೆಯ ಕಲಾವಿದರು ಸೇರಿದಂತೆ ಅನೇಕರಿಗೆ ಅವಕಾಶ ಸೃಷ್ಟಿಸಿ ಕೊಟ್ಟಿದ್ದಾರೆ" ಎಂದು ಹೇಳಿದರು.

"ಕರಾವಳಿ ಉತ್ಸವದಿಂದ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ಅವಕಾಶ ನೀಡಿದಂತಾಗಿದೆ. ಈ ರೀತಿ ಪ್ರೋತ್ಸಾಹ ನೀಡುವುದರಿಂದ ಯುವ ಕಲಾವಿದರ ಬೆಳವಣಿಗೆ ಸಾಧ್ಯ. ನಾನು ಸಹ ಕಳೆದ 10-15 ವರ್ಷದಿಂದ ಕನಕಪುರದಲ್ಲಿ ಕನಕೋತ್ಸವ ನಡೆಸಿಕೊಂಡು ಬಂದಿದ್ದೇನೆ ಎಂದರು.

Read More
Next Story