BJPs power is not permanent: DKSH warns of struggle against MNREGA name change
x

ಡಿಸಿಎಂ ಡಿ.ಕೆ. ಶಿವಕುಮಾರ್‌

ಬಿಜೆಪಿಗೆ ಅಧಿಕಾರ ಶಾಶ್ವತವಲ್ಲ: ಮನರೇಗಾ ಹೆಸರು ಬದಲಾವಣೆ ವಿರುದ್ಧ ಡಿಕೆಶಿ ಹೋರಾಟದ ಎಚ್ಚರಿಕೆ

ಮೂರು ತಿಂಗಳೊಳಗಾಗಿ ಜಿಲ್ಲಾ ಪಂಚಾಯಿತಿ‌ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ.‌‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.


Click the Play button to hear this message in audio format

"ಮಹಾತ್ಮ ಗಾಂಧೀಜಿ ಅವರ ಹೆಸರನ್ನು ದೇಶದ ಇತಿಹಾಸದಿಂದ ಅಳಿಸಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಿಜೆಪಿಯವರ ಅಧಿಕಾರ ಯಾವುದೂ ಶಾಶ್ವತವಲ್ಲ. ಆ ಪಕ್ಷ ಇನ್ನೆಷ್ಟು ದಿನ ಇರುತ್ತದೆ? ಎಲ್ಲದಕ್ಕೂ ಕೊನೇ ಎಂಬುದು ಇರಲೇ ಬೇಕಲ್ಲವೇ?" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಭಾನುವಾರ(ಡಿ.28) ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ"ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಅಲೆಗ್ಸಾಂಡರ್ ದಿ ಗ್ರೇಟ್ ಇಡೀ ಪ್ರಪಂಚದ ಮುಕ್ಕಾಲು ಪಾಲು ಗೆದ್ದವರೇ ಶಾಶ್ವತವಲ್ಲ. ಸದ್ದಾಂ ಹುಸೇನ್ ಕೊನೆಗಾಲದಲ್ಲಿ ಅವಿತುಕೊಳ್ಳಬೇಕಾಯಿತು. ಇನ್ನು ಬೇರೆಯವರದು ಯಾವ ಲೆಕ್ಕ? ಮನರೇಗಾ ಹೆಸರು ಬದಲಾವಣೆ ವಿರೋಧಿಸಿ 2026 ರ ಜ. 5 ರಂದು ಹೋರಾಟ ರೂಪಿಸಲಾಗುವುದು. ಪಂಚಾಯತಿ ಮಟ್ಟದಿಂದ ಈ ಹೋರಾಟ ಆರಂಭಿಸಲಾಗುವುದು" ಎಂದರು.

"ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೆ ಇಲಾಖೆಗಳಿಗೆ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದ್ದು ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ‌ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ" ಎಂದು ತಿಳಿಸಿದರು.

ಮೂರು ತಿಂಗಳೊಳಗೆ ಚುನಾವಣೆ

"ಮೂರು ತಿಂಗಳೊಳಗಾಗಿ ಜಿಲ್ಲಾ ಪಂಚಾಯಿತಿ‌ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ.‌‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ" ಎಂದು ಹೇಳಿದರು.

100 ಕಾಂಗ್ರೆಸ್‌ ಕಚೇರಿ ನಿರ್ಮಾಣ

"ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ 1924ರಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನ ರೂಪಿಸಿದ್ದೇನೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಲಭ್ಯವಿದೆ. ಇದರ ಬಿಡುಗಡೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು". ಇದರ ನೆನಪಿಗೆ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೊರಟಿದ್ದೇವೆ. ಈಗಾಗಲೇ 70 ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡಲಾಗುವುದು. ಒಂದಕ್ಕೆ ಸಚಿವ ರಾಮಲಿಂಗಾರೆಡ್ಡಿ, ಮತ್ತೊಂದು ಕಚೇರಿ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಒಂದು ಜಿಲ್ಲಾ ಕಚೇರಿ ಇನ್ನೊಂದು ರಾಜ್ಯ ಕಚೇರಿ. ಮೈಸೂರಿನಲ್ಲಿಯೂ ದೊಡ್ಡ ಕಚೇರಿ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಅಡಿಪಾಯ ಹಾಕಲು ಕಾಯಲು ಹೋಗಬೇಡಿ. ಏಕೆಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿಯವರು ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲಾ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ಎಲ್ಲಾ ತಯಾರಿಗಳನ್ನು ಈಗಲೇ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಯೋಜನೆ ಜಾರಿ ಅಸಾಧ್ಯ

"ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದಲ್ಲಿ ಬಡವರಿಗೆ ಉದ್ಯೋಗ ನೀಡುವ ಮನರೇಗಾ ಯೋಜನೆ ತಂದಿತ್ತು. ಕೇಂದ್ರ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡಲು ಮುಂದಾಗಿದೆ. ಈ ಯೋಜನೆಯಲ್ಲಿ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಳ್ಳುವ ಬದಲಾವಣೆ ತಂದಿದ್ದಾರೆ. ಬರಗಾಲ ಪ್ರದೇಶದಲ್ಲಿ ವರ್ಷಕ್ಕೆ 150 ಮಾನವ ದಿನಗಳ ಉದ್ಯೋಗ ನೀಡಲು ಕಾನೂನಿನಲ್ಲಿ ಸೂಚಿಸಲಾಗಿತ್ತು. ಆದರೆ ಅವರು ನಮ್ಮ ರಾಜ್ಯಕ್ಕೆ ಬರಗಾಲ ಇದ್ದಾಗಲೂ ನೀಡಲಿಲ್ಲ, ಕೋವಿಡ್ ಸಮಯದಲ್ಲೂ ನೀಡಲಿಲ್ಲ" ಎಂದು ತಿಳಿಸಿದರು.

"ಕೇಂದ್ರ ಸರ್ಕಾರದ 60:40 ಅನುಪಾತದ ನೂತನ ತಿದ್ದುಪಡಿ ಯೋಜನೆಯನ್ನು ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಈ ಹಿಂದೆ ಮನರೇಗಾ ಯೋಜನೆಯನ್ನು ನನ್ನ ತಾಲ್ಲೂಕಿನಲ್ಲಿ ಬಹಳ ಯಶಸ್ವಿಯಾಗಿ ಅಷ್ಠಾನಕ್ಕೆ ತರಲಾಗಿತ್ತು. ಇಡೀ ದೇಶದಲ್ಲಿ ಕನಕಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಾನು ಇದರಲ್ಲಿ ಹಣ ಲೂಟಿ ಮಾಡಿರಬಹುದು ಎಂದು ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ ಸುಮಾರು ಹತ್ತು ತಂಡಗಳನ್ನು ಕಳುಹಿಸಿ ತನಿಖೆ ಮಾಡಿಸಿತ್ತು. ನಂತರ ಕೇಂದ್ರ ಸರ್ಕಾರ ನಮ್ಮ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಿದೆ. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ಪಂಚಾಯ್ತಿ ಅಧ್ಯಕ್ಷರನ್ನು ಕರೆದು ಅವರಿಗೆ ಪ್ರಶಸ್ತಿ ಕೊಟ್ಟರು" ಎಂದು ಹೇಳಿದರು.

ಜಿಬಿಎ ಚುನಾವಣೆ ಟಿಕೆಟ್ ಆಕಾಂಕ್ಷಿ ಅರ್ಜಿ ಬಿಡುಗಡೆ

"ಮೀಸಲಾತಿ ನಿಗದಿಯಾದ ಮೇಲೆ ಜಿಬಿಎ ಚುನಾವಣೆಗೆ ತಯಾರಿ ನಡೆಸಿದರಾಯಿತು ಎಂದುಕೊಂಡರೆ ನೀವುಗಳು ಗೆಲ್ಲಲು ಸಾಧ್ಯವಿಲ್ಲ. ‌ಏಕೆಂದರೆ ನೀವು ಎಷ್ಟೇ ದೊಡ್ಡ ನಾಯಕರಾದರೂ ಎಲ್ಲಾ ನಿಗದಿಯಾದಾಗ ಮಾಡುತ್ತೇನೆ ಎಂದರೆ ಈ ಡಿ.ಕೆ.ಶಿವಕುಮಾರ್ ನಿಮ್ಮನ್ನು ಗುರುತಿಸುವುದಿಲ್ಲ. ಇಂದಿನಿಂದ ಆಕಾಂಕ್ಷಿ‌ ಅಭ್ಯರ್ಥಿಗಳ ಅರ್ಜಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 50 ಸಾವಿರ, ಪರಿಶಿಷ್ಟ ಅಭ್ಯರ್ಥಿಗಳಿಗೆ 25 ಸಾವಿರ. ಹಣ ಕಟ್ಟಡ ನಿಧಿಗೆ ಹೋಗಲಿದೆ. ಏಕೆಂದರೆ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 20 ಕೋಟಿ, ರಾಜ್ಯ ಕಚೇರಿ ನಿರ್ಮಾಣಕ್ಕೆ 60 ಕೋಟಿ ‌ಖರ್ಚಾಗಲಿದೆ.‌ ತಾಲ್ಲೂಕು ಕಚೇರಿಗಳ ನಿರ್ಮಾಣಕ್ಕೂ ಕೆಪಿಸಿಸಿಯಿಂದ ಹಣ ನೀಡಬೇಕಲ್ಲವೇ" ಎಂದರು.

ಎಂಎಲ್‌ಎ ಚುನಾವಣೆ ವೇಳೆ 2 ಲಕ್ಷ ಹಣ ನಿಗದಿ ಮಾಡಲಾಗಿತ್ತು. ಇದರಿಂದ 20 ಕೋಟಿ ರೂ. ಹಣ ಸಂಗ್ರಹವಾಗಿತ್ತು.‌ ಇದರಿಂದ ಪಕ್ಷದ ಪರವಾಗಿ ಜಾಹಿರಾತು ನೀಡಲು ಸಾಧ್ಯವಾಗಿತ್ತು. ಮಹಿಳೆಯರಿಗೆ ರಿಯಾಯಿತಿ ಇಲ್ಲ.‌ ಒಂದು ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ತಿಳಿದಿದೆ ಎಂದರು. ಮಹಿಳೆಯರಿಗೆ ಹಾಗೂ ಓಬಿಸಿಗಳಿಗೆ ರಿಯಾಯಿತಿ ನೀಡಿ ಎಂದು ಸಭಿಕರು ಕೂಗಿದ ವೇಳೆಯಲ್ಲಿ, "ಈಗಾಗಲೇ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ, ಉಚಿತ ‌ಬಸ್ ನೀಡಲಾಗುತ್ತಿದೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಹ ಓಬಿಸಿ, ಒಕ್ಕಲಿಗರು ಓಬಿಸಿ ಎಂದು ತಿಳಿದಿದೆಯೇ? ಲಿಂಗಾಯತರು ಓಬಿಸಿ, ಆದಾಯ ಇಲ್ಲದ ಬ್ರಾಹ್ಮಣರು ಓಬಿಸಿ" ಎಂದರು.

ಸಿಎಂ ಹೇಳಿದ್ದಕ್ಕೆ ಮಹಿಳೆಯರಿಗೆ 25 ಸಾವಿರ ರೂ.

ಇದೇ ವೇಳೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರು ಮಹಿಳೆಯರಿಗೆ 25 ಸಾವಿರ ರೂ. ಇರಲಿ ಎಂದರು. ಆಗ ಡಿಸಿಎಂ ಶಿವಕುಮಾರ್ "ಸಿಎಂ ಹಾಗೂ ಸಚಿವ ಜಾರ್ಜ್ ಹೇಳುತ್ತಿದ್ದಾರೆ ಎಂದು ಮಹಿಳೆಯರಿಗೆ 25 ಸಾವಿರ ರೂ. ನಿಗದಿ ಮಾಡಲಾಗುತ್ತಿದೆ. ನಿಮ್ಮ ದುಡ್ಡು ನನಗೆ ಬೇಡ ಮುಂದಿನ ಜನವರಿ 15 ನೇ ತಾರೀಕಿನ ಒಳಗೆ ಅರ್ಜಿ ಹಾಕಬೇಕು. 369 ವಾರ್ಡ್‌ಗಳಿಂದ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಒಂದೊಂದು ಕ್ಷೇತ್ರದಿಂದ 10 ಮಂದಿ‌‌ ಮಹಿಳೆಯರಾದರೂ ಅರ್ಜಿ ಸಲ್ಲಿಕೆ ಮಾಡಬೇಕು. ಯಾರೇ ಆದರೂ ಚೆನ್ನಾಗಿ ಕೆಲಸ ಮಾಡಿರಬೇಕು. ಅಂತಹವರಿಗೆ ಪ್ರಾಮುಖ್ಯತೆ ನೀಡಲಾಗುವುದು" ಎಂದು ತಿಳಿಸಿದರು.

ವಿದ್ಯಾರ್ಥಿ ಚುನಾವಣೆಗೆ ಸಮಿತಿ ರಚನೆ

ವಿದ್ಯಾರ್ಥಿ ಚುನಾವಣೆ ಹೇಗೆ ನಡೆಸಬೇಕು ಎಂದು ತೀರ್ಮಾನಿಸಲು ಹೊಸ ಸಮಿತಿ ರಚನೆ ಮಾಡಲಾಗಿದೆ. ಇದರಿಂದ ಹೊಸ ನಾಯಕರನ್ನು ಬೆಳಕಿಗೆ ತರಲಾಗುವುದು. ಶರಣ ಪ್ರಕಾಶ್ ಪಾಟೀಲ್, ಡಾ.ಸುಧಾಕರ್, ಸಲೀಂ ಅಹಮದ್, ಪುಟ್ಟಣ್ಣ ಸೇರಿದಂತೆ ಒಂಬತ್ತು ಜನರ ಸಮಿತಿ ರಚನೆ ಮಾಡಲಾಗಿದೆ. ಇವರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ. ನಾವುಗಳು ಸಹ ಈ ಹಿಂದೆ ವಿದ್ಯಾರ್ಥಿ ಚುನಾವಣೆಗಳ ಮೂಲಕವೇ ರಾಜಕೀಯಕ್ಕೆ ಬಂದವರು. ಆನಂತರ ಗಲಾಟೆಗಳು ಹೆಚ್ಚಾದ ಕಾರಣಕ್ಕೆ ರಂಗನಾಥ್ ಅವರು ಇದನ್ನು ನಿಲ್ಲಿಸಿಬಿಟ್ಟರು. ಈಗ ಇದರ ಅವಶ್ಯಕತೆ ಹೆಚ್ಚು ಕಾಣುತ್ತಿದೆ ಎಂದರು.

Read More
Next Story