ಆರ್‌ಎಸ್‌ಎಸ್ ಲೆಕ್ಕದಲ್ಲಿ ಪಾರದರ್ಶಕತೆ ಇಲ್ಲ; ನೋಂದಣಿ ಮಾಡಿಸಿಯೇ ಸಿದ್ಧ: ಖರ್ಗೆ ಶಪಥ
x

ಸಚಿವ ಪ್ರಿಯಾಂಕ್‌ ಖರ್ಗೆ 

ಆರ್‌ಎಸ್‌ಎಸ್ ಲೆಕ್ಕದಲ್ಲಿ ಪಾರದರ್ಶಕತೆ ಇಲ್ಲ; ನೋಂದಣಿ ಮಾಡಿಸಿಯೇ ಸಿದ್ಧ: ಖರ್ಗೆ ಶಪಥ

ಆರ್‌ಎಸ್‌ಎಸ್‌ ಬಗ್ಗೆ ನಾವು ಕೇಳಿದ ಪ್ರಶ್ನೆಗಳಿಗೆ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಬೆಂಗಳೂರಿಗೆ ಬಂದು ಉತ್ತರ ನೀಡುವಂತಾಯಿತು ಎಂದು ಸಚಿವ ಖರ್ಗೆ ತಿಳಿಸಿದರು.


Click the Play button to hear this message in audio format

"ಆರ್‌ಎಸ್‌ಎಸ್ ಒಂದು ದೆವ್ವವಿದ್ದಂತೆ, ಬಿಜೆಪಿ ಅದರ ನೆರಳು" ಹೀಗೊಂದು ಗಂಭೀರ ಆರೋಪ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ, ಸಂಘ ಪರಿವಾರದ ವಿರುದ್ಧದ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿರುವ ಅವರು, ಸಂಘಟನೆಯನ್ನು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಯೇ ಸಿದ್ಧ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ (ಫೆ. 15) ಇರ್ಷಾದ್‌ ಉಪ್ಪಿನಂಗಡಿ ಅವರು ರಚಿಸಿರುವ ʼಕರಾವಳಿ ರಕ್ತ ಕಣ್ಣೀರುʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಆರ್‌ಎಸ್‌ಎಸ್ ತನ್ನ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇತರ ಸಂಸ್ಥೆಗಳಂತೆ ಅದು ಏಕೆ ನಿಯಂತ್ರಕ ಮೇಲ್ವಿಚಾರಣೆಗೆ ಒಳಪಡುವುದಿಲ್ಲ? ಈಗಾಗಲೇ ಹಲವು ವರ್ಷಗಳಿಂದ ನೋಂದಣಿಯಾಗದೆ ಬಿಟ್ಟಿದ್ದೇವೆ, ಇನ್ನೆಷ್ಟು ವರ್ಷ ಹೀಗೆ ಬಿಡಬೇಕು?" ಎಂದು ಪ್ರಶ್ನಿಸಿದರು.

ಭಾಷಣದಲ್ಲಿ ಹೇಳಿದ್ದೇನು ?

ಆರ್‌ಎಸ್‌ಎಸ್‌ ಸಂವಿಧಾನ ಮತ್ತು ನ್ಯಾಯಾಲಯಗಳ ಆದೇಶವನ್ನು ಮೀರಿ ಪಥಸಂಚಲನ ನಡೆಸುತ್ತದೆ. ಹಣಕಾಸಿನ ಮೂಲದ ಬಗ್ಗೆ ಕೇಳಿದರೆ ಅವರ ಬಳಿ ಉತ್ತರವಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಬೆಂಗಳೂರಿಗೆ ಬಂದು ಉತ್ತರ ನೀಡುವಂತಾಯಿತು. 'ಆರ್‌ಎಸ್‌ಎಸ್‌ ಜನರ ಸಂಘ, ಹಾಗಾಗಿ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ' ಎಂದು ಅವರು ಹೇಳಿದ್ದರು. ಆದರೆ, ಬೆಂಗಳೂರು ಕ್ಲಬ್‌ ಕೂಡ ಜನರ ಸಂಘವೇ ಆಗಿದೆ; ಅದು ತೆರಿಗೆ ಪಾವತಿಸುತ್ತಿದೆ ಮತ್ತು ನೋಂದಣಿಯನ್ನೂ ಮಾಡಿಸಿಕೊಂಡಿದೆ," ಎಂದು ತಿರುಗೇಟು ನೀಡಿದರು.

ಆರ್‌ಎಸ್‌ಎಸ್‌ ದೆವ್ವದಂತೆ

ಧ್ವಜದ ಹೆಸರಿನಲ್ಲಿಯೇ ಹಣ ಸಂಗ್ರಹಿಸಲಾಗುತ್ತಿದೆ. 2,500ಕ್ಕೂ ಹೆಚ್ಚು ಸಂಸ್ಥೆಗಳು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದು, ಅಮೆರಿಕ ಮತ್ತು ಇಂಗ್ಲೆಂಡ್‌ನಿಂದ ಹಣ ಪಡೆಯಲಾಗುತ್ತಿದೆ. ಅವರು ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ," ಎಂದು ಆರೋಪಿಸಿದ ಅವರು, "ಆರ್‌ಎಸ್‌ಎಸ್‌ ಒಂದು 'ದೆವ್ವ'ವಿದ್ದಂತೆ, ಬಿಜೆಪಿ ಅದರ ನೆರಳಿನಂತಿದೆ. ಕೇಸರಿ ಶಾಲು ಧರಿಸಿ ಮಾತನಾಡುವ ಬಿಜೆಪಿ ನಾಯಕರೇ, ಈ 'ಕರಾವಳಿ ರಕ್ತ ಕಣ್ಣೀರು' ಪುಸ್ತಕವನ್ನು ಗಮನಿಸಿದರೆ ಇದರಲ್ಲಿ ಯಾವ ಯಾವ ಸಮಾಜದ ಜನರಿದ್ದಾರೆ ಎಂಬುದು ತಿಳಿಯುತ್ತದೆ. ಆದರೆ, ಇದರಲ್ಲಿ ಯಾವೊಬ್ಬ ನಾಯಕರ ಮಕ್ಕಳೂ ಇಲ್ಲ," ಎಂದು ವಾಗ್ದಾಳಿ ನಡೆಸಿದರು.

"ನಮ್ಮ ಮಕ್ಕಳಿಗೆ ನಾವು ಏನನ್ನು ಬಯಸುತ್ತೇವೆಯೋ, ಇತರರಿಗೂ ಅದನ್ನೇ ಬಯಸಬೇಕು. ಆದರೆ ಬಿಜೆಪಿ ನಾಯಕರ ನಡೆ-ನುಡಿಯಲ್ಲಿ ಬಹಳ ವ್ಯತ್ಯಾಸವಿದೆ. ಆರ್‌ಎಸ್‌ಎಸ್ ಮೊದಲಿನಿಂದಲೂ ಪಥಸಂಚಲನ ಮಾಡುತ್ತಿದೆ, ಆದರೆ ಯಾರೂ ಅದನ್ನು ಅಷ್ಟು ಗಮನಿಸುತ್ತಿರಲಿಲ್ಲ. ಇತ್ತೀಚೆಗೆ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಸಲ್ಲಿಸಿದ್ದ ಅರ್ಜಿಯಲ್ಲಿ 'ನಿಮ್ಮ ಮಾಹಿತಿಗಾಗಿ' ಎಂದು ತಿಳಿಸಿದ್ದರು. ಇದಕ್ಕೆ ಅನುಮತಿ ನೀಡಲು ಹೇಗೆ ಸಾಧ್ಯ? ಯಾರೇ ಆದರೂ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕೇ ಹೊರತು ಕೇವಲ ಮಾಹಿತಿಗಾಗಿ ಅಲ್ಲ," ಎಂದು ಅವರು ಪ್ರತಿಪಾದಿಸಿದರು.

"ಯಾವುದೇ ಸಂಘಟನೆಯಾಗಲಿ ಸಂವಿಧಾನ ಹಾಗೂ ಕಾನೂನಿನ ಅನ್ವಯ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಆರ್‌ಎಸ್‌ಎಸ್ ಕೋರಿದ್ದ ದಿನಾಂಕದಂದು ಸಾಧ್ಯವಾದರೆ ಅನುಮತಿ ನೀಡಿ ಎಂದು ತಿಳಿಸಲಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ಜಾತ್ರೆಗಳಿದ್ದ ಕಾರಣ, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅನುಮತಿ ನಿರಾಕರಿಸಲು ಸೂಚಿಸಲಾಗಿತ್ತು. ಈ ವೇಳೆ 'ನಾವೇಕೆ ಅನುಮತಿ ಕೇಳಬೇಕು?' ಎಂದು ಪ್ರಶ್ನಿಸಿ ಆರ್‌ಎಸ್‌ಎಸ್‌ನವರು ನ್ಯಾಯಾಲಯದ ಮೊರೆ ಹೋಗಿದ್ದರು," ಎಂದರು.

ಕೋರ್ಟ್‌ ಅನುಮತಿ ನಂತರ ಪಥಸಂಚಲನ

ಹೈಕೋರ್ಟ್ ಆದೇಶದ ಅನ್ವಯ, ಬೆಂಗಳೂರಿನಲ್ಲಿ ನಿಗದಿಪಡಿಸಿದ ನಿರ್ದಿಷ್ಟ ಸ್ಥಳವನ್ನು ಹೊರತುಪಡಿಸಿ ಬೇರೆಲ್ಲಿಯೂ ಪ್ರತಿಭಟನೆ ಅಥವಾ ಪಥಸಂಚಲನ ನಡೆಸುವಂತಿಲ್ಲ. ಆರ್‌ಎಸ್‌ಎಸ್ ಸಂವಿಧಾನ ಮತ್ತು ನ್ಯಾಯಾಲಯದ ಆದೇಶಗಳನ್ನು ಮೀರಿ ವರ್ತಿಸುವುದಾದರೆ ಅವರಿಗೆ ಏಕೆ ಅನುಮತಿ ನೀಡಬೇಕು ಎಂಬುದು ಸರ್ಕಾರದ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕಡೆಯವರು ನ್ಯಾಯಾಲಯದ ಮೊರೆ ಹೋಗಿದ್ದರು. ಅಂತಿಮವಾಗಿ, ಕೋರ್ಟ್ ಆದೇಶದಂತೆ ಸರ್ಕಾರ ಸೂಚಿಸಿದ ಸ್ಥಳದಲ್ಲಿ ಮತ್ತು ನಿಗದಿಪಡಿಸಿದ ದಿನಾಂಕದಂದೇ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲಾಯಿತು," ಎಂದು ಅವರು ವಿವರಿಸಿದರು.

ಧ್ವಜದ ಹೆಸರಲ್ಲಿ ಹಣ ಸಂಗ್ರಹಣೆ

"ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಆರ್‌ಎಸ್‌ಎಸ್‌ ಅಥವಾ ಎಸ್‌ಡಿಪಿಐ ಸೇರಿದಂತೆ ಯಾವುದೇ ಸಂಘಟನೆಯನ್ನು ದಾರಿಗೆ ತರಲು ಸಾಧ್ಯವಿದೆ. 'ನಾವು ಯಾರ ಬಳಿಯೂ ದೇಣಿಗೆ ಪಡೆಯುವುದಿಲ್ಲ, ಕೇವಲ ಗುರುದಕ್ಷಿಣೆ ಸ್ವೀಕರಿಸುತ್ತೇವೆ' ಎಂದು ಅವರು ಹೇಳುತ್ತಾರೆ. ನಾನು ಗೋಲ್ವಾಲ್ಕರ್ ಮತ್ತು ಸಾವರ್ಕರ್ ಅವರ ಪುಸ್ತಕಗಳನ್ನು ಓದುತ್ತಿದ್ದೇನೆ; ಅದರಲ್ಲಿ 'ಗುರು' ಎಂದರೆ ಅವರ ಧ್ವಜ ಎಂದಿದೆ. ಅಂದರೆ ಧ್ವಜದ ಹೆಸರಿನಲ್ಲಿ ಅವರು ಹಣ ಸಂಗ್ರಹಿಸುತ್ತಿದ್ದಾರೆ. ಇದೇ ರೀತಿ ನಾಳೆ ನಾವು ನೀಲಿಧ್ವಜವನ್ನೇ ಗುರು ಎಂದು ನಂಬಿ ಹಣ ಸಂಗ್ರಹಿಸಿದರೆ ಸರ್ಕಾರ ನಮ್ಮನ್ನು ಸುಮ್ಮನೆ ಬಿಡುತ್ತದೆಯೇ?" ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಅವರು, "ನಾವೆಲ್ಲರೂ ಉತ್ತಮ ನಾಗರಿಕರಾಗಲು ಆದಾಯ ತೆರಿಗೆ ಪಾವತಿಸಬೇಕು ಎಂದು ಹೇಳಲಾಗುತ್ತದೆ. ಆದರೆ, ಅವರು ಮಾತ್ರ ತೆರಿಗೆ ಪಾವತಿಸದೆ ವಿನಾಯಿತಿ ಪಡೆಯುತ್ತಿದ್ದಾರೆ. ಆರ್‌ಎಸ್‌ಎಸ್ ಬೆಂಬಲವಿಲ್ಲದಿದ್ದರೆ ಬಿಜೆಪಿ ಸ್ಥಿತಿ ಜೆಡಿಎಸ್‌ಗಿಂತಲೂ ಹೀನಾಯವಾಗುತ್ತಿತ್ತು. ನಾವಿಂದು ದೆವ್ವದ ನೆರಳಾಗಿರುವ ಬಿಜೆಪಿಯೊಂದಿಗೆ ವಾದ ಮಾಡುತ್ತಿದ್ದೇವೆ. ಅದರ ಬದಲು, ನೇರವಾಗಿ ದೆವ್ವದಂತಿರುವ ಆರ್‌ಎಸ್‌ಎಸ್ ಜೊತೆಗೇ ವಾದಕ್ಕಿಳಿದರೆ ನಮ್ಮ ದೇಶ ಸುಧಾರಣೆಯಾಗುತ್ತದೆ," ಎಂದು ಅಭಿಪ್ರಾಯಪಟ್ಟರು.

ಧರ್ಮರಕ್ಷಣೆಗೆ ಬಡವರ ಮಕ್ಕಳು

"ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಯುವಕರನ್ನುದ್ದೇಶಿಸಿ ಮಾತನಾಡುತ್ತಾ, 'ನೀವು ದೇಶದ ಆಸ್ತಿ; ಈ ಹಿಂದೆ ನಡೆದಿರುವ ಐತಿಹಾಸಿಕ ಅನ್ಯಾಯಕ್ಕೆ ನೀವು ನ್ಯಾಯ ಪಡೆಯಬೇಕು ಮತ್ತು ದ್ವೇಷ ಸಾಧಿಸಬೇಕು' ಎಂದು ಪ್ರಚೋದಿಸುತ್ತಾರೆ. ಆದರೆ ಅವರ ಒಬ್ಬ ಮಗ ಅಮೆರಿಕದ ಪ್ರಜೆ, ಮತ್ತೊಬ್ಬ ಮಗ ಇಂಗ್ಲೆಂಡ್‌ನಲ್ಲಿ ಉದ್ಯಮಿಯಾಗಿದ್ದಾರೆ. ಕೇಸರಿ ಶಾಲು ಧರಿಸಿ ಹೋರಾಡುವ ಎಷ್ಟು ಮಂದಿ ಬಿಜೆಪಿ ನಾಯಕರ ಮಕ್ಕಳು ಬೆಳಿಗ್ಗೆ ಎದ್ದು ಗೋಮೂತ್ರ ಕುಡಿಯುತ್ತಾರೆ ಅಥವಾ ಗೋಶಾಲೆಗೆ ಹೋಗುತ್ತಾರೆ? ಎಷ್ಟು ಜನ ಧರ್ಮ ರಕ್ಷಣೆಗಾಗಿ ತ್ರಿಶೂಲ ಹಿಡಿದು ಬೀದಿಗಿಳಿಯುತ್ತಾರೆ?" ಎಂದು ಅವರು ಪ್ರಶ್ನಿಸಿದರು.

"ಬಿಜೆಪಿ ನಾಯಕರ ಮಕ್ಕಳು ವಿದೇಶಗಳಲ್ಲಿ ಉದ್ಯಮಿಗಳಾಗಿ ವೈಭವದ ಜೀವನ ನಡೆಸುತ್ತಿದ್ದರೆ, ಧರ್ಮ ರಕ್ಷಣೆಯ ಜವಾಬ್ದಾರಿಯನ್ನು ಕೇವಲ ಬಡವರ ಮಕ್ಕಳಿಗೆ ಬಿಡಲಾಗಿದೆ. ಮೊದಲು ನಾಯಕರ ನುಡಿ ಮತ್ತು ನಡೆಯನ್ನು ಹೋಲಿಕೆ ಮಾಡಿ ನೋಡಬೇಕು. ನಾವು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದ ಹೊರತು ಸಮಾಜ ಬದಲಾಗುವುದಿಲ್ಲ," ಎಂದು ಅವರು ಎಚ್ಚರಿಸಿದರು.

"ನಾವು ನೇರವಾಗಿ ಮಾತನಾಡುತ್ತಿರುವುದು ಯಾರಿಗೂ ಇಷ್ಟವಾಗುತ್ತಿಲ್ಲ. ಸಮಾಜದ ಏಳಿಗೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ನಮ್ಮ ಆಶಯ. ಮಕ್ಕಳ ಭವಿಷ್ಯಕ್ಕಾಗಿ ನಾವು ತತ್ವ ಸಿದ್ಧಾಂತಗಳ ವಿರುದ್ಧ ಹೋರಾಟ ಮಾಡದಿದ್ದರೆ ಪ್ರಬುದ್ಧ ಸಮಾಜ ಹಾಗೂ ಸಮೃದ್ಧ ಭಾರತ ನಿರ್ಮಿಸಲು ಸಾಧ್ಯವಿಲ್ಲ. ಸಂವಿಧಾನದ ರಕ್ಷಣೆಗಾಗಿ ನಾವೆಲ್ಲರೂ ಒಗ್ಗೂಡಬೇಕಿದೆ. ಆಪ್, ಕಮ್ಯುನಿಸ್ಟ್ ಸೇರಿದಂತೆ ಹಲವು ಪಕ್ಷಗಳು ಜಾತ್ಯತೀತವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಜೆಡಿಎಸ್ ಇತ್ತೀಚೆಗೆ ತನ್ನ ಜಾತ್ಯತೀತ ತತ್ವವನ್ನು ಮರೆತು ಕೇವಲ 'ಜನತಾದಳ'ವಾಗಿ ಉಳಿದಿದೆ," ಎಂದು ಟೀಕಿಸಿದರು.

ಬಿಜೆಪಿ ತಿರುಗೇಟು

ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಮೊದಲು ನಿಮ್ಮ ತಂದೆಯವರ ಅಧ್ಯಕ್ಷತೆಯಲ್ಲಿರುವ ಮತ್ತು ರಾಜಕೀಯ ನಕ್ಷೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷದ ನೋಂದಣಿ ರದ್ದಾಗದಂತೆ ನೋಡಿಕೊಳ್ಳಿ. ನಂತರ ಇತರರ ನೋಂದಣಿಯ ಬಗ್ಗೆ ಚಿಂತಿಸಿ. ಕಲ್ಯಾಣ ಕರ್ನಾಟಕವನ್ನು ದೇಶದ ಭೂಪಟದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವನ್ನಾಗಿ ಮಾಡಿರುವುದನ್ನು ಹೊರತುಪಡಿಸಿ, ನೀವು ಅಲ್ಲಿನ ಅಭಿವೃದ್ಧಿಗೆ ಬೇರೇನನ್ನೂ ನೀಡಿಲ್ಲ," ಎಂದು ವಾಗ್ದಾಳಿ ನಡೆಸಿದರು.

ಇನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿ, "ನಾಲ್ಕು ದಶಕಗಳಿಂದ ಕಲ್ಯಾಣ ಕರ್ನಾಟಕದ ಜನರ ಆಶೀರ್ವಾದದಿಂದ ಅಧಿಕಾರ ಅನುಭವಿಸುತ್ತಾ, ಅಭಿವೃದ್ಧಿಯ ವಿಚಾರದಲ್ಲಿ ಶಾಶ್ವತವಾಗಿ 'ನಾಳೆ ಬನ್ನಿ' ಎಂಬ ಮಂಡಳಿ ಹಾಕಿ ಜನರಿಗೆ ದ್ರೋಹ ಮಾಡಿದವರು ಹೆಚ್ಚು ಕಾಲ ಉಳಿಯುವುದಿಲ್ಲ; ಅಂತಹವರ ವಿರುದ್ಧ ಜನರ ಪ್ರತೀಕಾರದ ದಿನ ದೂರವಿಲ್ಲ. ಆರ್‌ಎಸ್‌ಎಸ್‌ನಂತಹ ಸಂಘಟನೆಯನ್ನು ದೂರುವುದು ಆಕಾಶಕ್ಕೆ ಉಗುಳಿದಂತೆ," ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಖರ್ಗೆ ಸಮರ್ಥನೆ

ತಮ್ಮ ಹೇಳಿಕೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, "ಕಲ್ಯಾಣ ಕರ್ನಾಟಕವು ಒಂದು ಹಿಂದುಳಿದ ಪ್ರದೇಶ. ಈ ಪ್ರಾದೇಶಿಕ ಅಸಮತೋಲನಕ್ಕೆ ಇರುವ ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳನ್ನು ನೀವು ಅರ್ಥಮಾಡಿಕೊಂಡಿದ್ದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 371(ಜೆ) ವಿಧಿಯ ಅಡಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸುತ್ತಿರಲಿಲ್ಲ. ಈ ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಬಿಜೆಪಿಗೆ ಏಕೆ ಇರಲಿಲ್ಲ? ನಿಮ್ಮ ಸರ್ಕಾರದ ಅವಧಿಯಲ್ಲಿ ಕೆಕೆಆರ್‌ಡಿಬಿ (KKRDB) ಅನುದಾನ ಹಂಚಿಕೆ ಏಕೆ ಕುಸಿಯಿತು?" ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರಲಿಲ್ಲವೇ? ಹಾಗಿದ್ದಲ್ಲಿ, ಅವರು ಶಿವಮೊಗ್ಗವನ್ನು ಸಿಂಗಾಪುರದಂತೆ ಏಕೆ ಅಭಿವೃದ್ಧಿಪಡಿಸಲಿಲ್ಲ? ನಾವು ರಚಿಸಿರುವ ಕೋಮು ವಿರೋಧಿ ಕಾರ್ಯಪಡೆಯು ಕೇವಲ ರಂಗೋಲಿ ವಿನ್ಯಾಸ ಬಿಡಿಸಲು ಇರುವುದಲ್ಲ; ಬದಲಾಗಿ ಕೋಮು ಸಂಘರ್ಷಗಳನ್ನು ನಿಗ್ರಹಿಸಲು ಮತ್ತು ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡಲು ಇದನ್ನು ರಚಿಸಲಾಗಿದೆ," ಎಂದು ತಿರುಗೇಟು ನೀಡಿದರು.

Read More
Next Story