ಬಸವಣ್ಣನ ನಾಡಿಗೂ ಹಬ್ಬಿದ ಆರ್‌ಎಸ್‌ಎಸ್‌ ಪ್ರಭಾವ; ಗುಪ್ತ ಗಾಮಿನಿಯಾಗಿಯೇ ಬೆಳೆದ ಸಂಘ
x

ಬಸವಣ್ಣನ ನಾಡಿಗೂ ಹಬ್ಬಿದ ಆರ್‌ಎಸ್‌ಎಸ್‌ ಪ್ರಭಾವ; ಗುಪ್ತ ಗಾಮಿನಿಯಾಗಿಯೇ ಬೆಳೆದ ಸಂಘ

ಉಡುಪಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಈಗಾಗಲೇ ಆರ್‌ಎಸ್‌ಎಸ್‌ ಬೇರೂರಿದ್ದು, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ.


Click the Play button to hear this message in audio format

ಕರ್ನಾಟಕದ ಮಂಗಳೂರು, ಉಡುಪಿ ಜಿಲ್ಲೆಗಷ್ಟೇ ಸೀಮಿತವಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಚಟುವಟಿಕೆ ಈಗ ರಾಜ್ಯವ್ಯಾಪಿ ಪಸರಿಸಿದೆ. ಸಾಮಾಜಿಕ,ಸಾಂಸ್ಕೃತಿಕ ಹಾಗೂ ಭಾಷಾ ಕಾರಣಗಳಿಂದ ಅಧಿಪತ್ಯ ಸಾಧಿಸಲು ಅಸಾಧ್ಯ ಎನಿಸಿದ್ದ ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಆರ್‌ಎಸ್‌ಎಸ್‌ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.

ಇತ್ತೀಚೆಗೆ ಆರ್‌ಎಸ್‌ಎಸ್‌ ಶತಮಾನೋತ್ಸವ ಆಚರಣೆ ನಂತರ ಅದರ ಆಳ, ಅಗಲ ಎದ್ದು ಕಾಣಲು ಆರಂಭಿಸಿದೆ. ಕರ್ನಾಟಕದಲ್ಲಿ ರಾಜಕೀಯವಾಗಿ ಬಿಜೆಪಿ ಎಲ್ಲೆಲ್ಲಿ ಪ್ರಬಲವಾಗಿದೆಯೋ ಅಂತಹ ಕಡೆಗಳಲ್ಲಿ ಆರ್‌ಎಸ್‌ಎಸ್‌ ಗುಪ್ತಗಾಮಿನಿಯಂತೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.

ಕರಾವಳಿ ಜಿಲ್ಲೆಗಳಲ್ಲಿ ಬೀಸಿದ ಹಿಂದುತ್ವದ ಅಲೆ ಕ್ರಮೇಣ ರಾಜ್ಯದ ಒಂದೊಂದೇ ಜಿಲ್ಲೆಯತ್ತ ಪಸರಿಸಿ, ಆ ನೆಲೆಗಳಲ್ಲಿ ಭದ್ರ ಬುನಾದಿ ಹಾಕಿಕೊಳ್ಳುತ್ತಿದೆ. ವಿಶೇಷವಾಗಿ ಹಳೆಯ ಮೈಸೂರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ.

ಬೆಂಗಳೂರು, ಕಲಬುರಗಿಯಲ್ಲಿ ಆರ್‌ಎಸ್‌ಎಸ್‌ ಬಲ

ರಾಜ್ಯದಲ್ಲಿ ಅತಿ ಹೆಚ್ಚು ಆರ್‌ಎಸ್‌ಎಸ್‌ ಪಥ ಸಂಚಲನಗಳು ನಡೆದ ಜಿಲ್ಲೆಗಳಲ್ಲಿ ಬೆಂಗಳೂರು ಪ್ರಥಮ, ಕಲಬುರಗಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಹಿಂದುತ್ವದ ಅಲೆ ಹೆಚ್ಚಾಗಿರುವ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಈಗಾಗಲೇ ಆರ್‌ಎಸ್‌ಎಸ್‌ ಬೇರೂರಿದ್ದು, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ.

ಆರ್‌ಎಸ್‌ಎಸ್‌ ಶತಮಾನೋತ್ಸವ ಆಚರಣೆ ಅಂಗವಾಗಿ ವಿವಿಧೆಡೆ ನಡೆದ ಪಥ ಸಂಚಲನಗಳ ಮೂಲಕ ಅದು ಸಾಬೀತಾಗಿದೆ. ರಾಜ್ಯದಲ್ಲಿ 2025ನೇ ಸಾಲಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಒಟ್ಟು 518 ಪಥ ಸಂಚಲನಗಳನ್ನು ನಡೆಸಿದೆ.

ಆರ್‌ಎಸ್‌ಎಸ್‌ ಶತಮಾನೋತ್ಸವದ ಅಂಗವಾಗಿ ನಡೆದ ಈ ಪಥಸಂಚಲನಗಳಲ್ಲಿ ಸುಮಾರು 2.37 ಲಕ್ಷ ಸ್ವಯಂ ಸೇವಕರು ಭಾಗಿಯಾಗಿದ್ದರು. ಬೆಂಗಳೂರು ಒಂದರಲ್ಲೇ 97 ಪಥಸಂಚಲನಗಳು ನಡೆದಿವೆ. ಇದರಲ್ಲಿ 27,338 ರಿಂದ 30,233 ಸ್ವಯಂಸೇವಕರು ಪಾಲ್ಗೊಂಡಿದ್ದರು ಎಂದು ಗೃಹ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ 51 ಪಥಸಂಚಲನಗಳು ನಡೆದಿದ್ದು, ಅಂದಾಜು 6,340 ರಿಂದ 7,235 ಸ್ವಯಂಸೇವಕರು ಭಾಗವಹಿಸಿದ್ದರು. ಉತ್ತರ ಕನ್ನಡದಲ್ಲಿ 45, ಬೀದರ್ನಲ್ಲಿ 41 ಮತ್ತು ಬಾಗಲಕೋಟೆಯಲ್ಲಿ 33 ಪಥಸಂಚಲನಗಳು ನಡೆದಿವೆ.

ಹುಬ್ಬಳ್ಳಿಯಲ್ಲಿ ಕಡಿಮೆ ಪಥ ಸಂಚಲನ

ಹುಬ್ಬಳ್ಳಿ-ಧಾರವಾಡ, ಕೆಜಿಎಫ್ ಮತ್ತು ಕೊಡಗು ಜಿಲ್ಲೆಗಳಲ್ಲಿ ತಲಾ 2 ಪಥಸಂಚಲನಗಳು ನಡೆದಿವೆ. ಈದ್ಗಾ ಮೈದಾನದ ಗಲಾಟೆ ಬಳಿಕ ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ತನ್ನ ಕಾರ್ಯಚಟುವಟಿಕೆ ಹೆಚ್ಚಿತ್ತು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸಂಸದ ಜಗದೀಶ್ ಶೆಟ್ಟರ್ ಅವರು ಕಟ್ಟಾ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದು, ಇಲ್ಲಿ ಸಂಘಟನೆಯು ಭದ್ರವಾಗಿ ನೆಲೆಯೂರಿತ್ತು. ಆದರೆ, ಇದೇ ಸ್ಥಳದಲ್ಲಿ ಕಡಿಮೆ ಪಥ ಸಂಚಲನಗಳು ನಡೆದಿವೆ. ಆದರೂ, ಬರೋಬ್ಬರಿ 14,000ಕ್ಕೂ ಹೆಚ್ಚು ಸ್ವಯಂಸೇವಕರು ಪಥ ಸಂಚಲನಗಳಲ್ಲಿ ಭಾಗವಹಿಸಿದ್ದರು. ಆರ್ಎಸ್ಎಸ್ ಈಗಾಗಲೇ ಭದ್ರವಾಗಿ ತಳವೂರಿರುವ ಕಾರಣ ತನ್ನ ಚಿತ್ತವನ್ನು ಬೇರೆ ಜಿಲ್ಲೆಗಳಲ್ಲಿ ಹರಿಸಿದ್ದೇ ಕಡಿಮೆ ಪಥ ಸಂಚಲನಗಳು ಕಾರಣವಾಗಿದೆಯೇ ಹೊರತು ನೆಲೆ ಕಳೆದುಕೊಂಡಿದೆಯಂತಲ್ಲ ಎಂಬುದು ಕಾರ್ಯಕರ್ತರ ಉವಾಚವಾಗಿದೆ.

ರಜಾಕಾರರ ದಾಳಿ ನೆನಪಿಸಿ ಹಿಂದುತ್ವ ಪ್ರತಿಪಾದಿಸಿದ ಆರ್‌ಎಸ್‌ಎಸ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಮೇಲೆ 1948ರಲ್ಲಿ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ರಜಾಕಾರರು ದಾಳಿ ನಡೆಸಿದ್ದರು. ಎರಡು ವರ್ಷಗಳಿಂದ ಕಲಬುರಗಿಯಲ್ಲಿ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಾ ಸಂಘ ಪರಿವಾರದವರು ಮತೀಯ ವಿಭಜನೆಗೆ ಶ್ರೀಕಾರ ಹಾಕಿದರು.

ಇನ್ನು ಇದೇ ವಿಚಾರವಾಗಿ ಕಳೆದ ಕೆಲ ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಖರ್ಗೆ ಅವರು ರಜಾಕಾರರ ದಾಳಿಯಲ್ಲಿ ಕುಟುಂಬವನ್ನು ಕಳೆದುಕೊಂಡ ಬಗ್ಗೆ ಪ್ರಸ್ತಾಪಿಸಿ ಮೂದಲಿಸಿದ್ದರು. ಈ ವಿಷಯ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಇದು ರಜಾಕಾರರ ದಾಳಿಯೇ ಹೊರತು ಇಡೀ ಮುಸ್ಲಿಂ ಸಮುದಾಯದವರಲ್ಲ. ಯೋಗಿ ಆದಿತ್ಯನಾಥ್ ಅವರು ದ್ವೇಷದ ರಾಜಕೀಯ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದ್ದರು.

ಇದಾದ ಬಳಿಕ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ವಿಚಾರ ಮುನ್ನೆಲೆಗೆ ಬಂದಿತು. ಪ್ರಿಯಾಂಕ್‌ ಖರ್ಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಪರಿವಾರದ ಚಟುವಟಿಕೆಗೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಪತ್ರ ಬರೆದ ನಂತರ ವಿವಾದ ರಾಜಕೀಯ ಸ್ವರೂಪ ಪಡೆಯಿತು. ನ್ಯಾಯಾಲಯ ಮಧ್ಯಪ್ರವೇಶದಿಂದ ಕೊನೆಗೂ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಸಿತು. ಪ್ರಿಯಾಂಕ್ ಖರ್ಗೆ ಅವರ ಆರ್‌ಎಸ್‌ಎಸ್‌ ನಿರ್ಬಂಧದ ಹೇಳಿಕೆ ಒಂದು ರೀತಿಯಲ್ಲಿ ಸಂಘ ಪರಿವಾರದವರಿಗೆ ಅನುಕೂಲ ಸಿಂಧುವಾಗಿ ಪರಿಣಮಿಸಿತು.

ರಜಾಕಾರರು ಯಾರು?

ರಜಾಕಾರರು ಇಸ್ಲಾಮಿಕ್ ಪಕ್ಷ ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಂಐಎಂ) ಪಕ್ಷದ ಅರೆ ಸೈನಿಕ ವಿಭಾಗದವರು. 1938 ರಲ್ಲಿಎಂಐಎಂ ನಾಯಕ ಬಹದ್ದೂರ್ ಯಾರ್ ಜಂಗ್ ಭಾರತದ ವಿಭಜನೆ ಸಮಯದಲ್ಲಿ ಖಾಸಿಂ ರಜ್ವಿ ನಾಯಕತ್ವದಲ್ಲಿ ನಿಜಾಮರ ಆಳ್ವಿಕೆ ರಕ್ಷಣೆಯ ಜವಾಬ್ದಾರಿ ಹೊತ್ತರು.

ಹೈದರಾಬಾದ್ ವಶಪಡಿಸಿಕೊಳ್ಳಲು ಭಾರತೀಯ ಸೇನೆ ಆಪರೇಷನ್‌ ಪೋಲೋ ಕಾರ್ಯಾಚರಣೆ ನಡೆಸಿದಾಗ ರಜಾಕಾರರು ತೀವ್ರ ಪ್ರತಿರೋಧ ತೋರಿದರು. ಇದಕ್ಕೂ ಮುನ್ನ ಹೈದರಾಬಾದ್‌ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂಗಳ ಮೇಲೆ ಭೀಕರ ದಾಳಿ ನಡೆಸಿದ್ದರು. ಇದೇ ವೇಳೆ ಕಲಬುರಗಿ ಮೇಲೂ ದಾಳಿ ನಡೆಸಿದ್ದರು. ಆಗಿನ ದಾಳಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತಾಯಿ, ಸೋದರಿಯನ್ನು ಕಳೆದುಕೊಂಡಿದ್ದರು.

ರಜಾಕಾರರರ ಉಪಟಳ ತಡೆಯಲು ಭಾರತದ ಸೇನೆ ಕಾರ್ಯಾಚರಣೆ ತೀವ್ರಗೊಳಿಸಿತು. ಆಗ ನಿಜಾಮರು ಭಾರತದ ಸೇನೆಯ ಎದುರು ಮಂಡಿಯೂರಿದರು. ರಜಾಕಾರರ ಸೇನೆಯನ್ನು ವಿಸರ್ಜಿಸಲು ಒಪ್ಪಿಕೊಂಡರು. ರಜಾಕಾರರ ನಾಯಕ ಖಾಸಿಂ ರಜ್ವಿಯನ್ನು ಆರಂಭದಲ್ಲಿ ಜೈಲಿಗೆ ಹಾಕಲಾಯಿತು. ನಂತರ ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಯಿತು.

1957 ರಲ್ಲಿ ಎಂಐಎಂ ಪಕ್ಷವು ಹೊಸ ನಾಯಕತ್ವದಲ್ಲಿಎಐಎಂಐಎಂ ಆಗಿ ಉದಯವಾಯಿತು.

ದೇಶದಲ್ಲಿ 4600 ಕ್ಕೂ ಹೆಚ್ಚು ಶಾಖೆ

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸ್ತಿತ್ವವು 1930 ರ ದಶಕದ ಮಧ್ಯಭಾಗದಿಂದ ಪ್ರಚಲಿತಕ್ಕೆ ಬಂದಿತು. ತನ್ನ ಮೊದಲ ಶಾಖೆಯನ್ನು 1935 ರಲ್ಲಿ ಬೆಳಗಾವಿ ಚಿಕ್ಕೋಡಿ ಪಟ್ಟಣದಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ 2021 ರವರೆಗೆ ಆರ್ಎಸ್ಎಸ್ ಸುಮಾರು 4,600 ಶಾಖೆಗಳನ್ನು ಸ್ಥಾಪಿಸಿದೆ. ಕರಾವಳಿ ಭಾಗದ ಮಂಗಳೂರು, ಉಡುಪಿ ಜಿಲ್ಲೆಯನ್ನು ಕಾರ್ಯಸ್ಥಾನ ಮಾಡಿಕೊಂಡ ಆರ್‌ಎಸ್‌ಎಸ್‌ ನಿಧಾನವಾಗಿ ರಾಜ್ಯದ ಉದ್ದಗಲಕ್ಕೂ ತನ್ನ ಶಾಖೆಗಳನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದೆ.

ಕರಾವಳಿ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಸಂಘ ಪರಿವಾರದ ಬೆಳವಣಿಗೆ ಪರೋಕ್ಷವಾಗಿ ಬಿಜೆಪಿಗೆ ರಾಜಕೀಯ ಶಕ್ತಿಯಾಗಿ ಬಳಕೆಯಾಗಿದೆ. ಜೆಡಿಎಸ್ ಜೊತೆ ಮೈತ್ರಿಯ ನಂತರ ಹಳೆಯ ಮೈಸೂರು ಭಾಗದಲ್ಲೂಆರ್ಎಸ್ಎಸ್ ತನ್ನ ನೆಲೆಯನ್ನು ಭದ್ರ ಮಾಡಿಕೊಳ್ಳುತ್ತಿದೆ.

ಕ್ರೈಸ್ತ ಮಿಷನರಿ ಪ್ರವೇಶದಿಂದ ಹಿಂದೂ ಜಾಗೃತಿ

ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಹಾಗೂ ಮಧ್ಯ ಕರ್ನಾಟಕದ ಕೆಲ ಪ್ರದೇಶಗಳು ಮೈಸೂರು ಸಾಮ್ರಾಜ್ಯದ ಭಾಗವಾಗಿದ್ದವು. ದಕ್ಷಿಣ ಕನ್ನಡ ಮತ್ತು ಉಡುಪಿ ಒಳಗೊಂಡ ಕರಾವಳಿ ಭಾಗವು ಮದ್ರಾಸ್ ಪ್ರಾಂತ್ಯದ ಭಾಗವಾಗಿತ್ತು. ಉತ್ತರ ಕರ್ನಾಟಕದ ಭಾಗಗಳು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದವು. ಅದೇ ರೀತಿ ಪೂರ್ವ ಭಾಗದ ಪ್ರದೇಶಗಳು ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಕ್ರೈಸ್ತ ಮಿಷನರಿಗಳು ರಾಜ್ಯವನ್ನು ಪ್ರವೇಶಿಸಿದ್ದವು.

ಕರಾವಳಿಯಲ್ಲಿ ತಮ್ಮ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮೂಲಕ ಬಾಸೆಲ್ ಮಿಷನ್ ಮತ್ತು ಇತರ ಮಿಷನರಿಗಳು ಪಾಶ್ಚಿಮಾತ್ಯ ಇಂಗ್ಲಿಷ್ ಶಿಕ್ಷಣ ಬೆಳೆಸಿದರು. ಶಿಕ್ಷಣದ ಜತೆಗೆ ಕ್ರೈಸ್ತ ಮಿಷನರಿಗಳು ಹಿಂದೂಗಳ ಮತಾಂತರದಲ್ಲಿ ತೊಡಗಿಸಿಕೊಂಡಿದ್ದಾಗ ಹಿಂದೂ ಸಂಘಟನೆಗಳು ಜಾಗೃತವಾದವು. 1800 ರ ದಶಕದ ಅಂತ್ಯದಲ್ಲಿ ಆರ್ಯ ಸಮಾಜ ಮತ್ತು ಬ್ರಹ್ಮ ಸಮಾಜಗಳ ಸ್ಥಾಪನೆಗೂ ಕಾರಣವಾಯಿತು. ತದನಂತರ 1930 ರ ದಶಕದ ಅಂತ್ಯ ಮತ್ತು 1940 ರ ದಶಕದ ಆರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಉದಯವಾಯಿತು.

ಸ್ವಾತಂತ್ರ್ಯದ ನಂತರದಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದ್ದವು. ಅದೇ ಕಾಲಘಟ್ಟದಲ್ಲಿ ಆರಂಭಿಸಿದ ಜನಸಂಘವು ಸಂಘ ಪರಿವಾರದ ರಾಜಕೀಯ ವೇದಿಕೆಯಾಗಿ ಗೋಚರಿಸಿತು.

70 ರ ದಶಕದಲ್ಲಿ ಆರ್‌ಎಸ್‌ಎಸ್‌ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ಜಾಗೃತಿಗೆ ಮುಂದಾಗಿತ್ತು. 1975 ರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ ಕರ್ನಾಟಕದ ಕರಾವಳಿ ಭಾಗಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಂದಿರಾ ಗಾಂಧಿ ಅವರ ಆಡಳಿತ ಟೀಕಿಸುವವರಲ್ಲಿ ಆರ್ಎಸ್ಎಸ್ ಕೂಡ ಪ್ರಮುಖ ಸ್ಥಾನ ಪಡೆಯಿತು.

ಎರಡನೆಯದಾಗಿ ಮಾಜಿ ಸಿಎಂ ದೇವರಾಜ ಅರಸ್ ನೇತೃತ್ವದ ಸರ್ಕಾರ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿದಾಗ ಕರ್ನಾಟಕದಾದ್ಯಂತ ತೀವ್ರ ಪರಿಣಾಮ ಬೀರಿತು. ಭೂ ಮಾಲೀಕರ ವಿರುದ್ಧವಾದ ಕಾಯ್ದೆಗೆ ಹಲವು ಪ್ರಬಲ ಜಾತಿಗಳು ವಿರೋಧ ವ್ಯಕ್ತಪಡಿಸಿ, ಕಾಂಗ್ರೆಸ್ನಿಂದ ದೂರ ಸರಿದರು. ಪರ್ಯಾಯ ಆಯ್ಕೆಯಾಗಿದ್ದ ಆರ್ಎಸ್ಎಸ್ ಜತೆ ಸೇರಿದರು. ಇದು ಕರಾವಳಿಯಲ್ಲಿ ಆರ್ಎಸ್ಎಸ್ ನೆಲೆ ಗಟ್ಟಿಯಾಗಲು ಕಾರಣವಾಯಿತು.

ಕರಾವಳಿಯಿಂದ ಹೆಜ್ಜೆ ಗುರುತು ಆರಂಭ

ಸ್ಥಳೀಯವಾಗಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಅಂಶಗಳನ್ನು ಕೇಂದ್ರೀಕರಿಸಿ ಬಲವಾದ ನೆಲೆ ಕಲ್ಪಿಸಿಕೊಳ್ಳಲು ಆರ್ಎಸ್ಎಸ್ ಮತ್ತು ಬಿಜೆಪಿ ತಂತ್ರಗಾರಿಕೆ ರೂಪಿಸಿವೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಆರ್‌ಎಸ್‌ಎಸ್‌ ಭದ್ರಕೋಟೆಗಳಾಗಿ ಗುರುತಿಸಿಕೊಂಡಿವೆ. ಈ ಎರಡು ಜಿಲ್ಲೆಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳ ದೊಡ್ಡ ಜಾಲವೇ ಇದೆ. ಭೌಗೋಳಿಕವಾಗಿ ಹೆಚ್ಚುತ್ತಿರುವ ಬಿಜೆಪಿಯ ವ್ಯಾಪ್ತಿಯು ಪರೋಕ್ಷವಾಗಿ ಆರ್ಎಸ್ಎಸ್ ಜಾಲವನ್ನೇ ಪ್ರತಿನಿಧಿಸುತ್ತಿದೆ. ಆರ್ಎಸ್ಎಸ್ನ ಬಲವಾದ ಜಾಲವೇ ಬಿಜೆಪಿಯ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ.

Read More
Next Story