Davangere by-election effect CM Political Secretary Nazir Ahmed resigns
x

ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್ ಹಾಗೂ ಸಿಎಂ ಸಿದ್ದರಾಮಯ್ಯ

ದಾವಣಗೆರೆ ಉಪಚುನಾವಣೆ ದಂಗಲ್‌| ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್ ತಲೆದಂಡ

ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಸ್ಲಿಂ ನಾಯಕರಲ್ಲಿ ಮೂಡಿದ್ದ ಅಸಮಾಧಾನ, ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯತಿರಿಕ್ತ ನಡೆಯಾಗಿ ಬದಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.


Click the Play button to hear this message in audio format

ದಾವಣಗೆರೆ ಉಪ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಸೇರಿ ಹಲವರು ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಅವರ ತಲೆದಂಡವಾಗಿದೆ.

2023 ಜೂ.1 ರಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಮುಂದುವರಿಯುತ್ತಿದ್ದ ನಸೀರ್‌ ಅಹಮದ್‌ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅಭಿಜಿನ್‌ ಬಿ. ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ದಿವಂಗತ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್‌ ಮಲ್ಲಿಕಾರ್ಜುನ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹೈಕಮಾಂಡ್‌ ಘೋಷಣೆ ಮಾಡಿದ್ದರಿಂದ ಕಾಂಗ್ರೆಸ್‌ ಅಲ್ಪಸಂಖ್ಯಾತ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಿತ್ತು. ನಸೀರ್‌ ಅಹಮದ್‌, ಅಬ್ದುಲ್‌ ಜಬ್ಬಾರ್‌ ಹಾಗೂ ಸಚಿವ ಜಮೀರ್‌ ಅಹಮದ್‌ ಅವರು ಉಪಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಸಮುದಾಯದ ಇತರೆ ನಾಯಕರು ಈ ಮೂವರ ವಿರುದ್ಧ ಪಕ್ಷದ ಅಭ್ಯರ್ಥಿ ವಿರುದ್ಧ ಷಡ್ಯಂತ್ರ್ಯದ ಆರೋಪ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ನೀಡಿದ್ದರು. ಈ ನಡುವೆಯೇ, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್‌ ಅಹಮದ್‌ ಅವರನ್ನು ಬಿಡುಗಡೆಗೊಳಿಸಿರುವುದು ಸಂಚಲನ ಮೂಡಿಸಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್‌ ಅಹಮದ್‌ ಅವರನ್ನು ವಜಾಗೊಳಿಸಿ ಆದೇಶಿಸಿರುವ ಪ್ರತಿ

ಬಿಕ್ಕಟ್ಟು ಆರಂಭವಾಗಿದ್ದು ಎಲ್ಲಿ ?

ದಾವಣಗೆರೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಅಸಮಾಧಾನವೇ ಮುಳ್ಳಾಗಿತ್ತು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಸ್ಲಿಂ ನಾಯಕರಲ್ಲಿ ಮೂಡಿದ್ದ ಅಸಮಾಧಾನ, ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯತಿರಿಕ್ತವಾದ ನಡೆಯ ಗಂಭೀರ ಆರೋಪಗಳು ಕೇಳಿಬಂದಿದ್ದವು. ಸಚಿವ ಜಮೀರ್ ಅಹಮದ್ ಖಾನ್, ನಸೀರ್‌ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರು ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿತ್ತು.

ಸಚಿವ ಜಮೀರ್ ಸ್ಪಷ್ಟನೆ

ಹೈಕಮಾಂಡ್‌ ಸೂಚನೆ ಮೇರೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಜೀರ್‌ ಅಹಮದ್‌ ವಜಾಗೊಳಿಸಿರುವ ಕುರಿತು ಸಚಿವ ಜಮೀರ್ ಅಹಮದ್ ಮೌನ ಮುರಿದಿದ್ದಾರೆ. "ನಸೀರ್‌ ಅಹಮದ್ ಅವರು ಬಾಗಲಕೋಟೆಯ ಚುನಾವಣಾ ಉಸ್ತುವಾರಿ ಹೊತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅವರನ್ನು ಅಲ್ಲಿ ಉಳಿಯಲು ಸೂಚಿಸಿದ್ದರು. ದಾವಣಗೆರೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದರೂ, ಪಕ್ಷದ ಹಿತದೃಷ್ಟಿಯಿಂದ ಬಾಗಲಕೋಟೆಯಲ್ಲೇ 10 ದಿನ ಕೆಲಸ ಮಾಡುವಂತೆ ಸಿಎಂ ಸೂಚಿಸಿದ್ದರು" ಎಂದು ಜಮೀರ್ ಸಮರ್ಥಿಸಿಕೊಂಡಿದ್ದಾರೆ.

ಮತ್ತಷ್ಟು ನಾಯಕರಿಂದ ರಾಜೀನಾಮೆ ?

ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದಲ್ಲಿ ಕೆಲವು ನಾಯಕರು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ನಿರ್ವಹಿಸದ ಹಿನ್ನೆಲೆ ಹೈಕಮಾಂಡ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತ ಸಮುದಾಯದ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಮೊದಲು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಡೀ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿ, ಆಮೂಲಾಗ್ರ ಬದಲಾವಣೆಯ ಮುನ್ಸೂಚನೆ ನೀಡಿದ್ದರು. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್‌ ಅಹಮದ್ ಅವರನ್ನು ವಜಾಗೊಳಿಸಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಸುವಂತೆ ಮಾಡಿದೆ. ಮತ್ತಷ್ಟು ನಾಯಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಗುರಿ ಜಮೀರ್ ಅಹಮದ್?

ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಇದಕ್ಕೆ ಕಾರಣರಾದವರನ್ನು ಪಟ್ಟಿ ಮಾಡುತ್ತಿದೆ. ಈಗಾಗಲೇ ಹಲವು ನಾಯಕರು ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಈ ಬಿಕ್ಕಟ್ಟಿನ ಬಿಸಿ ವಸತಿ ಸಚಿವ ಜಮೀರ್ ಅಹಮದ್ ಅವರಿಗೂ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.

"ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಅಸಮಾಧಾನ ಇದ್ದಿದ್ದು ನಿಜ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ವಲ್ಪ ಗೊಂದಲವಿತ್ತು. ಆದರೆ ಈಗ ಎಲ್ಲವೂ ಸರಿಹೋಗಿದೆ. ನಮ್ಮ ಪಕ್ಷದ ಅಭ್ಯರ್ಥಿಗೆ ಸಮುದಾಯದ ಬೆಂಬಲವಿದ್ದು, ಭಾರಿ ಬಹುಮತದಿಂದ ಗೆಲ್ಲುತ್ತೇವೆ," ಎಂದು ಸಚಿವ ಜಮೀರ್‌ ಅಹಮದ್‌ ಮಂಗಳವಾರ ತಿಳಿಸಿದ್ದಾರೆ.

ನಾನು ಲೀಡರ್ ಅಲ್ಲ, ಜನ ಸೇವಕ

ಅಲ್ಪಸಂಖ್ಯಾತ ಸಮುದಾಯದ ಸುಪ್ರೀಂ ಲೀಡರ್ ನೀವಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹಮದ್‌ , "ನಾನು ಯಾವತ್ತೂ ಲೀಡರ್ ಎಂದು ಕರೆದುಕೊಂಡಿಲ್ಲ. ನಾನು ಕೇವಲ ಜನರ ಸೇವಕ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಬೇರೆಯವರು ನಾನೇ ಲೀಡರ್ ಎಂದು ಹೇಳಿಕೊಂಡರೆ ನಾನೇನು ಮಾಡಲಾಗದು," ಎಂದು ರಿಜ್ವಾನ್‌ ಅರ್ಷದ್‌ ಟೀಕೆಗೆ ತಿರುಗೇಟು ನೀಡಿದರು.

ದಾವಣಗೆರೆ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂಬ ಆರೋಪ ತಳ್ಳಿಹಾಕಿದ ಅವರು, "ಕಳೆದ ತಿಂಗಳು 20 ರಂದು ಕೆಪಿಸಿಸಿ ಕಚೇರಿಯಲ್ಲಿ ಸುರ್ಜೆವಾಲಾ ಮತ್ತು ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಬಹಿರಂಗ ಸಭೆ ನಡೆದಿತ್ತು. 200ಕ್ಕೂ ಹೆಚ್ಚು ಮುಖಂಡರು, ಬ್ಲಾಕ್ ಅಧ್ಯಕ್ಷರು ಭಾಗವಹಿಸಿದ್ದರು. ಅಲ್ಲಿ ಎಲ್ಲವೂ ಮುಕ್ತವಾಗಿ ಚರ್ಚೆಯಾಗಿದೆ. ಮುಚ್ಚಿದ ಬಾಗಿಲಿನ ಒಳಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ," ಎಂದು ಸ್ಪಷ್ಟಪಡಿಸಿದರು.

Read More
Next Story