
ಜಬ್ಬಾರ್ ರಾಜೀನಾಮೆ ಅಂಗೀಕರಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವನ್ನೇ ಕಿತ್ತೆಸೆದ ಡಿಕೆಶಿ
ಅಲ್ಪಸಂಖ್ಯಾತರ ಘಟಕಕ್ಕೆ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್, ಕಾರ್ಯದರ್ಶಿಗಳಾದ ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್ ಮತ್ತು ಹುಸೇನ್ ಉಕ್ಕಡಗಾತ್ರಿ ರಾಜೀನಾಮೆ ನೀಡಿದ್ದರು.
ದಾವಣಗೆರೆ ದಕ್ಷಿಣ ಉಪಚುನಾವಣೆ ಬೆನ್ನಲ್ಲೇ ಅಲ್ಪಸಂಖ್ಯಾತರಲ್ಲಿ ಭಿನ್ನಮತ ಹಾಗೂ ಬಣ ರಾಜಕೀಯ ತಾರಕಕೇರಿದೆ. ಅಲ್ಪಸಂಖ್ಯಾತ ನಾಯಕರ ನಡುವಿನ ಶೀತಲ ಸಮರ ಬಯಲಾಗುತ್ತಿದ್ದಂತೆ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ಅಂಗೀಕರಿಸಿದ್ದಾರೆ. ಅಲ್ಲದೇ, ರಾಜ್ಯ ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜಿಸಿ ಆದೇಶ ಹೊರಡಿಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಅಲ್ಪಸಂಖ್ಯಾತರ ಘಟಕಕ್ಕೆ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಪದಾಧಿಕಾರಿಗಳ ರಾಜೀನಾಮೆ ಪರ್ವವೂ ಆರಂಭವಾಗಿತ್ತು. ಘಟಕದ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್, ಕಾರ್ಯದರ್ಶಿಗಳಾದ ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್ ಮತ್ತು ಹುಸೇನ್ ಉಕ್ಕಡಗಾತ್ರಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಪಕ್ಷದೊಳಗಿನ ಅಶಿಸ್ತನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಸೂಚನೆ ಮೇರೆ ಇಡೀ ಘಟಕವನ್ನೇ ವಿಸರ್ಜಿಸುವ ಮೂಲಕ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ.
ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ ಜಮೀರ್
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದ ನಾಯಕರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಶಿಸ್ತುಕ್ರಮಕ್ಕೆ ಮುಂದಾಗಿದೆ. ಸಚಿವ ಜಮೀರ್ ಅಹಮ್ಮದ್ ಅವರು ಪ್ರಚಾರ ಕಣದಿಂದ ದೂರ ಉಳಿದಿದ್ದಲ್ಲದೇ ಇತರೆ ಅಭ್ಯರ್ಥಿಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ಶಿಸ್ತುಕ್ರಮ ಜರುಗಿಸಲು ನಿರ್ಧರಿಸಿದೆ. ಇದು ಅವರ ಸಚಿವ ಸ್ಥಾನಕ್ಕೂ ಕುತ್ತು ತಂದೊಡ್ಡುವ ಸಾಧ್ಯತೆ ಇದೆ.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಜಮೀರ್ ಹಾಗೂ ಅಬ್ದುಲ್ ಜಬ್ಬಾರ್ ಅವರು ಸಮರ್ಥ್ ಅವರಿಗೆ ಟಿಕೆಟ್ ಘೋಷಣೆಯಾದ ನಂತರ ಪ್ರಚಾರದಿಂದ ದೂರ ಉಳಿದಿದ್ದರು. ಪಕ್ಷದ ಹಿರಿಯ ನಾಯಕರೇ ಉಪಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದರು.
ವರದಿ ನೀಡಿದ್ದ ಅಭಿಷೇಕ್ ದತ್
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವೇಳೆ ನಡೆದ ಆಂತರಿಕ ಬೆಳವಣಿಗೆಗಳ ಕುರಿತು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಬಿಷೇಕ್ ದತ್ ಅವರು ಹೈಕಮಾಂಡ್ಗೆ ಸಮಗ್ರ ವರದಿ ನೀಡಿದ್ದರು. ವರದಿಯಲ್ಲಿ ಜಮೀರ್, ಅವರ ಆಪ್ತರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರದಿ ಆಧರಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರಿಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ vs ಡಿಸಿಎಂ ಬಣ ರಾಜಕೀಯ
ಅಲ್ಪಸಂಖ್ಯಾತ ನಾಯಕರಲ್ಲಿನ ಆಂತರಿಕ ಕಚ್ಚಾಟವು ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ರಾಜಕೀಯ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. ಜಮೀರ್ ಅಹಮದ್ ಅವರು ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೆ, ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ಉಪಚುನಾವಣೆ ಪ್ರಚಾರ ಕಣದಿಂದ ದೂರ ಉಳಿದಿದ್ದನ್ನೇ ನೆಪ ಮಾಡಿಕೊಂಡು ಡಿಸಿಎಂ ಬಣದ ಸಲೀಂ ಅಹಮದ್ ಹಾಗೂ ರಿಜ್ವಾನ್ ಅರ್ಷದ್ ಅವರು ಜಮೀರ್ ಹಾಗೂ ಅಬ್ದುಲ್ ಜಬ್ಬಾರ್ ವಿರುದ್ಧ ಪರೋಕ್ಷವಾಗಿ ಷಡ್ಯಂತ್ರ್ಯದ ಆರೋಪ ಮಾಡಿದ್ದರು. ಅಲ್ಲದೇ ಜಮೀರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದರು.

