13 ದಿನ, 80 ಗಂಟೆಗಳ ಕಲಾಪ: ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಅಧಿವೇಶನ
x

13 ದಿನ, 80 ಗಂಟೆಗಳ ಕಲಾಪ: ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಅಧಿವೇಶನ

ಅಧಿವೇಶನದ ಅತ್ಯಂತ ಸ್ಮರಣೀಯ ಕ್ಷಣವೆಂದರೆ ಮಾ.24ರಂದು ನಡೆದ ಕಲಾಪ. ಅಂದು ಬೆಳಿಗ್ಗೆ 11.35ಕ್ಕೆ ಪ್ರಾರಂಭವಾದ ಸದನವು, ಮಧ್ಯರಾತ್ರಿಯನ್ನು ದಾಟಿ ಮರುದಿನ ಮುಂಜಾನೆ 1.42ರವರೆಗೆ ಸತತವಾಗಿ ನಡೆಯಿತು.


Click the Play button to hear this message in audio format

ರಾಜ್ಯ ವಿಧಾನಸಭೆಯ 16ನೇ ವಿಧಾನಸಭೆಯ ಒಂಭತ್ತನೇ ಅಧಿವೇಶನವು ಒಟ್ಟು 13 ದಿನಗಳ ಕಾಲ ನಡೆದಿದ್ದು, ಕಲಾಪವು ಸುಮಾರು 80 ಗಂಟೆ 12 ನಿಮಿಷಗಳ ಸುದೀರ್ಘ ಚರ್ಚೆಗಳನ್ನು ಒಳಗೊಂಡಿದೆ. ರಾಜ್ಯ ಸಂಸದೀಯ ಇತಿಹಾಸದಲ್ಲಿ ಕೆಲವು ಹೊಸ ದಾಖಲೆಗಳನ್ನು ನಿರ್ಮಿಸಿದೆ.

ಬಜೆಟ್ ಮತ್ತು ಅನುದಾನಗಳ ಬೇಡಿಕೆ ಕುರಿತು ಒಟ್ಟು 50 ಸದಸ್ಯರು ಭಾಗವಹಿಸಿ, ಸತತ 24 ಗಂಟೆ 45 ನಿಮಿಷಗಳ ಕಾಲ ಮಾತನಾಡಿದ್ದು ಒಂದು ದಾಖಲೆಯಾಗಿದೆ. ಇದು ಸದನದಲ್ಲಿ ಆರ್ಥಿಕ ವಿಷಯಗಳ ಮೇಲೆ ಸದಸ್ಯರಿಗಿರುವ ಆಸಕ್ತಿ ಮತ್ತು ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.

ಬಜೆಟ್‌ ಅಧಿವೇಶನದ ಬಳಿಕ ಸದನ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿಕೆ ಬಳಿಕ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್‌, 2026-27ನೇ ಸಾಲಿನ ಆಯವ್ಯಯ ಅಂದಾಜುಗಳು ಮತ್ತು 2025-26ನೇ ಸಾಲಿನ ಪೂರಕ ಅಂದಾಜುಗಳ (ಮೂರನೇ ಮತ್ತು ಅಂತಿಮ ಕಂತು) ಬೇಡಿಕೆಗಳನ್ನು ಸದನವು ಅಧಿಕೃತವಾಗಿ ಅಂಗೀಕರಿಸಿದೆ. ಸದನವು ಈ ಅವಧಿಯಲ್ಲಿ ಒಟ್ಟು 12 ವಿಧೇಯಕಗಳನ್ನು ಮಂಡಿಸಿದೆ. ಇವುಗಳಲ್ಲಿ ಹಣವಿನಿಯೋಗ ವಿಧೇಯಕಗಳು ಸೇರಿದಂತೆ 11 ವಿಧೇಯಕಗಳನ್ನು ವಿಸ್ತೃತ ಚರ್ಚೆಯ ನಂತರ ಅಂಗೀಕರಿಸಲಾಯಿತು. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ವರದಿಯನ್ನು ಕೂಡ ಸದನದಲ್ಲಿ ಮಂಡಿಸಲಾಯಿತು. ಇದು ಸರ್ಕಾರದ ಶಾಸನಾತ್ಮಕ ಕಾರ್ಯಚಟುವಟಿಕೆಗಳ ವೇಗವನ್ನು ದೃಢೀಕರಿಸುತ್ತದೆ ಎಂದು ಹೇಳಿದರು.

ಸಿಎಜಿ ಹಾಗೂ ಸಮಿತಿಗಳ ವರದಿ ಸಲ್ಲಿಕೆ

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಸಿಎಜಿ) ಹಲವು ಪ್ರಮುಖ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಜಲ ಜೀವನ ಮಿಷನ್: 2025ರ ಕಾರ್ಯನಿರ್ವಹಣಾ ವರದಿ, ಉದ್ಯೋಗ ಖಾತರಿ ಯೋಜನೆ (ಮನರೇಗಾ) ಯೋಜನೆಯ ಮೇಲಿನ ವಿಶೇಷ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ಇದಲ್ಲದೆ, 5ನೇ ರಾಜ್ಯ ಹಣಕಾಸು ಆಯೋಗದ ವರದಿ (2026-2030) ಅನ್ನು ಮಂಡಿಸಲಾಯಿತು. ಇದು ಮುಂದಿನ ನಾಲ್ಕು ವರ್ಷಗಳ ಕಾಲ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹಂಚಿಕೆ ಮಾಡಲು ದಿಕ್ಸೂಚಿಯಾಗಲಿದೆ. ಬಿಬಿಎಂಪಿ ವ್ಯಾಪ್ತಿಯ ವಿವಿಧ ನಗರ ಪಾಲಿಕೆಗಳ ವರದಿಗಳು ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಗಳ ಕುರಿತು ಚರ್ಚೆ ನಡೆಸಲಾಯಿತು. ಒಟ್ಟು 2791 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 195 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 180ಕ್ಕೆ ಉತ್ತರ ನೀಡಲಾಗಿದೆ. 2503 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಪೈಕಿ 2254ಕ್ಕೆ ಉತ್ತರ ಒದಗಿಸಲಾಗಿದೆ. ಒಟ್ಟು 323 ಗಮನ ಸೆಳೆಯುವ ಸೂಚನೆಗಳಲ್ಲಿ 158ಕ್ಕೆ ಉತ್ತರ ನೀಡಲಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆಗೆ ಪೂರಕವಾಗಿತ್ತು ಎಂದು ತಿಳಿಸಿದರು.

ನಿಯಮ 351ರ ಅಡಿಯಲ್ಲಿ 217 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, 101ಕ್ಕೆ ಉತ್ತರ ಲಭಿಸಿದೆ. 12 ಪ್ರಮುಖ ವಿಷಯಗಳನ್ನು ಶೂನ್ಯ ವೇಳೆಯಲ್ಲಿ ಚರ್ಚಿಸಿ ಸರ್ಕಾರದ ತುರ್ತು ಗಮನ ಸೆಳೆಯಲಾಯಿತು. ಮಂಡಿಸಲಾದ ಎರಡು ಖಾಸಗಿ ಸದಸ್ಯರ ನಿರ್ಣಯಗಳು ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಕರಾವಳಿ ಅಭಿವೃದ್ಧಿ ಮಂಡಳಿಗೆ ವಿಶಿಷ್ಟ ಅಧಿಕಾರ ನೀಡುವ ಅಥವಾ 2023ರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಪ್ರಗತಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ, ಕನಿಷ್ಠ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಬಗ್ಗೆ ಮಂಡಿಸಿದ ನಿರ್ಣಯವು ಉತ್ತರ ಕರ್ನಾಟಕದ ಅಭಿವೃದ್ಧಿಯ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಐತಿಹಾಸಿಕ ರಾತ್ರಿ ಕಲಾಪ

ಈ ಅಧಿವೇಶನದ ಅತ್ಯಂತ ಸ್ಮರಣೀಯ ಕ್ಷಣವೆಂದರೆ ಮಾ.24ರಂದು ನಡೆದ ಕಲಾಪ. ಅಂದು ಬೆಳಿಗ್ಗೆ 11.35ಕ್ಕೆ ಪ್ರಾರಂಭವಾದ ಸದನವು, ಮಧ್ಯರಾತ್ರಿಯನ್ನು ದಾಟಿ ಮರುದಿನ ಮುಂಜಾನೆ 1.42ರವರೆಗೆ ಸತತವಾಗಿ ನಡೆಯಿತು. ಇದು ವಿಧಾನಸಭೆಯ ಇತಿಹಾಸದಲ್ಲೇ ದಾಖಲಾದ ಸುದೀರ್ಘ ಅವಧಿಯ ಕಲಾಪಗಳಲ್ಲಿ ಒಂದಾಗಿದೆ. ಸುದೀರ್ಘ ಸಮಯದವರೆಗೆ ಸದನವನ್ನು ನಡೆಸುವ ಮೂಲಕ ಜನಪರ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ತೋರಿದ ಬದ್ಧತೆ ಶ್ಲಾಘನೀಯ ಎಂದು ತಿಳಿಸಿದರು.

Read More
Next Story