Based on Experience, Ballot Papers Should Replace EVMs: CM Siddaramaiah
x

ಸಿಎಂ ಸಿದ್ದರಾಮಯ್ಯ

ಇವಿಎಂಗೆ ಗುಡ್‌ಬೈ; ಕರ್ನಾಟಕದಲ್ಲಿ ಇನ್ನು ಬ್ಯಾಲೆಟ್‌ ಪೇಪರ್!‌ ರಾಜ್ಯಪಾಲರ ನಿರ್ಧಾರ ಅಂತಿಮ

ಇವಿಎಂ ಯಂತ್ರಗಳ ಬದಲಿಗೆ ಪುನಃ ಮತಪತ್ರ ಪದ್ಧತಿಯನ್ನು ಜಾರಿಗೆ ತರುವ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026' ಅನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ.


Click the Play button to hear this message in audio format

ಗ್ರಾಮೀಣ ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಇಂದು ಒಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಇವಿಎಂ ಯಂತ್ರಗಳ ಬದಲಿಗೆ ಪುನಃ ಮತಪತ್ರ ಪದ್ಧತಿಯನ್ನು ಜಾರಿಗೆ ತರುವ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026' ಅನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಗೀಕಾರವಾದ ವಿಧೇಯಕವನ್ನು ಮೇಲ್ಮನೆ (ವಿಧಾನ ಪರಿಷತ್‌)ನಲ್ಲೂ ಮಂಡಿಸಲಾಗಿತ್ತು. ಈಗ ಅಲ್ಲೂ ವಿರೋಧ ಪಕ್ಷ ಸದಸ್ಯರ ಪ್ರತಿಭಟನೆ ನಡುವೆ ಅಂಗೀಕಾರ ಮಾಡಲಾಗಿದೆ. ಅಂಗೀಕೃತವಾದ ವಿಧೇಯಕವನ್ನು ರಾಜ್ಯಪಾಲರ ಅನುಮತಿಗೆ ಸದ್ಯದಲ್ಲೇ ಕಳುಹಿಸಲಾಗುವುದು. ರಾಜ್ಯಪಾಲರು ಯಾವ ನಿರ್ಧಾರ ಕೈಗೊಳ್ಳುವರು ಎಂಬುದರ ಮೇಲೆ ಈ ವಿಧೇಯಕದ ಭವಿಷ್ಯ ನಿಂತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಡಿಸಿದ ಈ ವಿಧೇಯಕವು, ತಂತ್ರಜ್ಞಾನ ಮತ್ತು ಸಂಪ್ರದಾಯದ ನಡುವಿನ ಚರ್ಚೆಗೆ ವೇದಿಕೆಯಾಯಿತು. ಅಂತಿಮವಾಗಿ ವಿರೋಧ ಪಕ್ಷದ ಸದಸ್ಯರು ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ನಡೆಸಿದ್ದು, ಇದರ ನಡುವೆಯೇ ವಿಧೇಯಕವನ್ನು ಅಂಗೀಕರಿಸಲಾಯಿತು.

ವಿಧಾನ ಪರಿಷತ್ತಿನಲ್ಲಿ ವಿಧೇಯಕವನ್ನು ಮಂಡಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ತಿದ್ದುಪಡಿಯ ಹಿಂದಿರುವ ಗಂಭೀರ ಆಶಯಗಳನ್ನು ತಿಳಿಸಿದರು. ಭಾರತ ಸಂವಿಧಾನದ 326ನೇ ಅನುಚ್ಛೇಧದಡಿ ಪ್ರತಿಯೊಬ್ಬ ನಾಗರಿಕನಿಗೂ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಮತದಾನ ಮಾಡುವ ಹಕ್ಕಿದೆ. ಈ ಪ್ರಕ್ರಿಯೆಯು ಕೇವಲ ತಾಂತ್ರಿಕವಾಗಿರುವುದಷ್ಟೇ ಅಲ್ಲದೆ, ಮತದಾರನಿಗೆ ತನ್ನ ಮತವು ಸರಿಯಾದ ವ್ಯಕ್ತಿಗೆ ತಲುಪಿದೆ ಎಂಬ ಮಾನಸಿಕ ತೃಪ್ತಿಯನ್ನೂ ನೀಡಬೇಕು ಎಂದು ಪ್ರತಿಪಾದಿಸಿದರು.

ಮತಪತ್ರ ಜಾರಿಯ ಪ್ರಮುಖ ಉದ್ದೇಶಗಳು

ಮತದಾರನು ಯಾವುದೇ ದಬ್ಬಾಳಿಕೆ ಅಥವಾ ಬೆದರಿಕೆಯಿಲ್ಲದೆ ತನ್ನ ಇಚ್ಛೆಯಂತೆ ಮತ ಚಲಾಯಿಸಲು ಬ್ಯಾಲೆಟ್ ಪೇಪರ್ ಪದ್ಧತಿ ಹೆಚ್ಚು ಸುರಕ್ಷಿತ ಎಂಬ ಭಾವನೆ ಈ ವಿಧೇಯಕದಲ್ಲಿದೆ. 2006ರ ಕುಲದೀಪ್ ನಾಯರ್ ವಿರುದ್ಧ ಒಕ್ಕೂಟ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಶಯಗಳನ್ನು ಅನುಷ್ಠಾನಗೊಳಿಸುವುದು ಈ ತಿದ್ದುಪಡಿಯ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇವಿಎಂ ಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ದೇಶಾದ್ಯಂತ ಮೂಡಿರುವ ಸಂಶಯಗಳನ್ನು ಹೋಗಲಾಡಿಸಿ, ಚುನಾವಣಾ ಪಾವಿತ್ರ್ಯವನ್ನು ಕಾಪಾಡುವುದು ಇದರ ಉದ್ದೇಶವಾಗಿದೆ. ಇನ್ನು ಮುಂದೆ ಕರ್ನಾಟಕದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮತಪತ್ರಗಳ ಮೂಲಕವೇ ನಡೆಯಲಿವೆ.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಾನು ವಿಜ್ಞಾನದ ವಿದ್ಯಾರ್ಥಿ, ತಂತ್ರಜ್ಞಾನದ ವಿರೋಧಿಯಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಮುಖ್ಯ. ಯಂತ್ರಗಳ ಮೇಲೆ ನಂಬಿಕೆ ಕಳೆದುಕೊಂಡಾಗ, ನಾವೂ ಪ್ರಶ್ನಿಸಲೇಬೇಕು. ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಸ್ಥಳೀಯ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್‌ಗಳನ್ನೇ ಬಳಸಲಾಗುತ್ತಿದೆ. ನಾವು ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಜನರ ನಂಬಿಕೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಠಿಣ ಕ್ರಮಗಳು

ಕೇವಲ ಮತದಾನದ ಪದ್ಧತಿ ಬದಲಾಯಿಸುವುದಷ್ಟೇ ಅಲ್ಲದೆ, ಚುನಾವಣಾ ಅಕ್ರಮಗಳನ್ನು ತಡೆಯಲು ವಿಧೇಯಕದಲ್ಲಿ ಕಟ್ಟುನಿಟ್ಟಿನ ನಿಬಂಧನೆಗಳನ್ನು ಸೇರಿಸಲಾಗಿದೆ. ಬೂತ್ ಕ್ಯಾಪ್ಚರಿಂಗ್, ಮತದಾನದ ವೇಳೆ ಅಕ್ರಮ ಎಸಗುವವರಿಗೆ ಕನಿಷ್ಠ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಜೈಲು ಶಿಕ್ಷೆಯ ಜತೆಗೆ ಭಾರಿ ಪ್ರಮಾಣದ ದಂಡವನ್ನೂ ವಿಧಿಸುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಗಾಂಭೀರ್ಯತೆಯನ್ನು ಕಾಪಾಡಲು ಸರ್ಕಾರ ಮುಂದಾಗಿದೆ. ಈ ವಿಧೇಯಕವು ಕೇವಲ ಚುನಾವಣೆಗೆ ಸೀಮಿತವಾಗಿಲ್ಲ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಒಂದು ಪ್ರಮುಖ ಅಂಶವನ್ನು ಸೇರಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿರುವ ಅನಧಿಕೃತ ಅಥವಾ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ಗುರುತಿಸಿ, ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು. ಇದರಿಂದ ಪಂಚಾಯತ್‌ಗಳ ಆದಾಯ ಹೆಚ್ಚಳವಾಗಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ವಿರೋಧ ಪಕ್ಷಗಳ ಕಟು ಟೀಕೆ

ವಿಧೇಯಕದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ, ಸಿ.ಟಿ. ರವಿ, ಪ್ರತಾಪ್ ಸಿಂಹ ನಾಯಕ ಸೇರಿದಂತೆ ಅನೇಕರು ಸರ್ಕಾರದ ಕ್ರಮವು ಹಿಮ್ಮುಖ ಚಲನೆ ಎಂದು ಟೀಕಿಸಿದರು. ಜಗತ್ತು ತಂತ್ರಜ್ಞಾನದತ್ತ ಮುನ್ನುಗ್ಗುತ್ತಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ಅಜ್ಜ ಹಾಕಿದ ಆಲದ ಮರಕ್ಕೆ ಜೋತುಬೀಳುತ್ತಿದೆ. ಇವಿಎಂನಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸಬೇಕು ಹೊರತು, ಮತ್ತೆ ಹಳೆಯ ಬ್ಯಾಲೆಟ್ ಪೇಪರ್‌ಗೆ ಮಾರುಹೋಗುವುದು ಸರಿಯಲ್ಲ ಎಂದು ಸಿ.ಟಿ. ರವಿ ಆಕ್ಷೇಪ ವ್ಯಕ್ತಪಡಿಸಿದರು.

ಮತಪತ್ರಗಳ ಎಣಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಚುನಾವಣಾ ವೆಚ್ಚವೂ ಹೆಚ್ಚಾಗುತ್ತದೆ. ಇವಿಎಂ ಮೇಲೆ ಜನರಿಗೆ ನಂಬಿಕೆ ಇದೆ, ಸರ್ಕಾರಕ್ಕೆ ಸೋಲಿನ ಭಯದಿಂದ ಈ ರೀತಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರು ಟೀಕಿಸಿದರು. ವಿಧೇಯಕದ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕವೂ ಸರ್ಕಾರ ತನ್ನ ನಿರ್ಧಾರಕ್ಕೆ ಬದ್ಧವಾಗಿರುವುದನ್ನು ಕಂಡು, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಮ್ಮತದಿಂದ ವಿರೋಧ ವ್ಯಕ್ತಪಡಿಸಿ ಸದನದಿಂದ ಸಭಾತ್ಯಾಗ ಮಾಡಿದರು.

ಯಾಕೆ ಬ್ಯಾಲೆಟ್‌ ಪೇಪರ್?‌

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷಗಳು ಇವಿಎಂ ಬಗ್ಗೆ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿವೆ. ಇವಿಎಂಗಳನ್ನು ಸುಲಭವಾಗಿ ಟ್ಯಾಂಪರ್ ಮಾಡಬಹುದು ಮತ್ತು ಮತಗಳನ್ನು ತಿರುಚಬಹುದು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಲೇ ಇವೆ. ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಆಪ್‌ ನಾಯಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದ್ದಾರೆ.

ಇವಿಎಂಗಳ ಕೊರತೆ ಮತ್ತು ಒಟ್ಟಿಗೆ ಚುನಾವಣೆ ನಡೆಸುವ ಸವಾಲುಗಳ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗವೇ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವ ಬಗ್ಗೆ ಒಲವು ವ್ಯಕ್ತಪಡಿಸಿತ್ತು. ಕಳೆದ ನಾಲ್ಕು ವರ್ಷಗಳಿಂದ ಚುನಾವಣೆ ನಡೆಯದ ಕಾರಣ, ಎರಡೂ ಚುನಾವಣೆಗಳನ್ನು ಒಟ್ಟಿಗೆ ನಡೆಸಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಬೇಕಾದಷ್ಟು ಇವಿಎಂಗಳನ್ನು ಕ್ರೋಢೀಕರಿಸುವುದು ಕಷ್ಟಸಾಧ್ಯವಾದ್ದರಿಂದ, ಬ್ಯಾಲೆಟ್ ಪೇಪರ್ ಬಳಕೆಯೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿತ್ತು.

ಇವಿಎಂ ಕುರಿತ ಆರೋಪ-ಪ್ರತ್ಯಾರೋಪಗಳಿಗೆ ತೆರೆ ಎಳೆಯಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೆಚ್ಚು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ, ರಾಜ್ಯ ಚುನಾವಣಾ ಆಯೋಗವು ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಿತ್ತು.

ವೋಟ್‌ ಚೋರಿ ಅಭಿಯಾನ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ರಾಷ್ಟ್ರ ಮಟ್ಟದಲ್ಲಿ ʼವೋಟ್‌ ಚೋರಿʼ ಅಭಿಯಾನ ನಡೆಸಿ ಇವಿಎಂ ಮೂಲಕ ಮತಗಳನ್ನು ಹೇಗೆ ಕದಿಯಲಾಗುತ್ತದೆ ಎಂಬ ಬಗ್ಗೆ ಸಭೆಗಳನ್ನು ನಡೆಸಿದ್ದರು. ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಪ್ರಯತ್ನ ನಡೆದಿತ್ತು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ದಾಖಲೆ ಬಿಡುಗಡೆ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಹೈದರಾಬಾದ್‌ನಲ್ಲಿ ಕುಳಿತು ಕೆಲ ದುಷ್ಕರ್ಮಿಗಳು ಕಾಂಗ್ರೆಸ್ ಪಕ್ಷದ ಮತಗಳು ಹೆಚ್ಚಿರುವ ಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ಮತ ಅಳಿಸುವ ಪ್ರಯತ್ನ ಮಾಡಿದ್ದರು. ಪ್ರತಿ ಹಳ್ಳಿಯಲ್ಲಿಯೂ 20 ರಿಂದ 40 ಮತಗಳನ್ನು ಅಳಿಸಿ ಹಾಕಲಾಗಿದೆ. 60ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು.

ಕೇಂದ್ರ ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಒಂದೇ ಹೆಸರಿನಲ್ಲಿ ಹಲವು ಮತದಾರರ ಹೆಸರನ್ನು ಕೈಬಿಡಲಾಗಿದೆ. ಬೆಂಗಳೂರಿನ ಮಹದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಚ್ಚುವರಿ ಹೆಸರು ಸೇರ್ಪಡೆ ಮಾಡಿದರೆ, ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ಬಂದರೂ ಸರಿಯಾದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಆರೋಪ ನಿರಾಕರಿಸಿದ್ದ ಆಯೋಗ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಚುನಾವಣಾ ಆಯೋಗದ ಅಂದಿನ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ, ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ ಎಂಬುದು ಸುಳ್ಳು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬೇಕೆಂದು ಒಟ್ಟು 6,015 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ಕೇವಲ 24 ಮಂದಿಯ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಆ ಬಳಿಕ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌, ರಾಜ್ಯದ ಚುನಾವಣಾ ಆಯೋಗದ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಮೂಲಕ ಹಳೆಯ ವಿಧಾನಕ್ಕೆ ಬರಲು ಯೋಚನೆ ಮಾಡಿತ್ತು. ಈಗ ಆ ಬಗ್ಗೆ ಬಿಲ್‌ ಮಂಡಿಸಲಾಗಿದ್ದು, ವಿಧಾನಸಭೆಯಲ್ಲಿ ಅಂಗೀಕಾರವಾಗಲಿದೆ.

Read More
Next Story