
Karnataka Assembly Session| ಬೆಳಗಿನ ಜಾವದವರೆಗೆ ನಡೆದ ಅಧಿವೇಶನ; ಸ್ಪೀಕರ್ ಖಾದರ್ ಹೊಸ ದಾಖಲೆ!
ಕರ್ನಾಟಕ ವಿಧಾನಸಭೆಯಲ್ಲಿ ಹೊಸ ಇತಿಹಾಸ ದಾಖಲಾಗಿದೆ. ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಮಂಗಳವಾರ ಮಧ್ಯರಾತ್ರಿ 1:40ರವರೆಗೆ ಕಲಾಪ ನಡೆದಿದೆ.
ರಾಜ್ಯ ವಿಧಾನಸಭೆಯ ಇತಿಹಾಸದಲ್ಲಿ ಮಂಗಳವಾರದ ರಾತ್ರಿ ಒಂದು ಅಪರೂಪದ ಮೈಲಿಗಲ್ಲಿಗೆ ಸಾಕ್ಷಿಯಾಯಿತು. ಜನಪ್ರತಿನಿಧಿಗಳ ಚರ್ಚೆ ಮತ್ತು ಶಾಸನ ರಚನೆಯ ಬದ್ಧತೆಗೆ ಸಾಕ್ಷಿಯಾಗಿ, ಸ್ಪೀಕರ್ ಯು.ಟಿ. ಖಾದರ್ ಅವರು ಅಕ್ಷರಶಃ ಮಧ್ಯರಾತ್ರಿಯನ್ನೂ ಮೀರಿ, ಅಂದರೆ ಬೆಳಗಿನ ಜಾವ 1:40ರವರೆಗೆ ಕಲಾಪವನ್ನು ನಡೆಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಸದಸ್ಯರ ಉಪಸ್ಥಿತಿಯ ನಡುವೆಯೂ, ಸುದೀರ್ಘ ಚರ್ಚೆಗಳಿಗೆ ವೇದಿಕೆ ಕಲ್ಪಿಸಿದ ಈ ಕಲಾಪವು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ದಾಖಲೆ ಬರೆದ 'ರಾತ್ರಿ ಕಲಾಪ'
ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿ 8-9 ಗಂಟೆಗೆ ಮುಕ್ತಾಯವಾಗುತ್ತಿದ್ದ ಕಲಾಪ, ಈ ಬಾರಿ ಸುದೀರ್ಘ ಚರ್ಚೆಯ ಕಾರಣದಿಂದಾಗಿ ಮಧ್ಯರಾತ್ರಿಯನ್ನೂ ದಾಟಿ ಮುಂದುವರಿಯಿತು. ಈ ಹಿಂದೆ 2024ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಕಲಾಪ ನಡೆಸಿ ಯು.ಟಿ. ಖಾದರ್ ದಾಖಲೆ ನಿರ್ಮಿಸಿದ್ದರು. ಈಗ ಬೆಂಗಳೂರಿನ ವಿಧಾನಸೌಧದಲ್ಲಿ 1:40ರವರೆಗೆ ಕಲಾಪ ನಡೆಸುವ ಮೂಲಕ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಸದನದಲ್ಲಿದ್ದವರು ಕೇವಲ 15 ಮಂದಿ!
ಮಧ್ಯರಾತ್ರಿವರೆಗೂ ನಡೆದ ಈ ಸುದೀರ್ಘ ಕಲಾಪದಲ್ಲಿ ಸದಸ್ಯರ ಹಾಜರಾತಿ ಬಹಳ ವಿರಳವಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷ ಎರಡೂ ಕಡೆಯಿಂದ ಸೇರಿ ಕೇವಲ 15 ಮಂದಿ ಸದಸ್ಯರು ಮಾತ್ರ ಅಂತಿಮ ಹಂತದವರೆಗೂ ಸದನದಲ್ಲಿ ಉಪಸ್ಥಿತರಿದ್ದರು. ಸಚಿವರ ಪೈಕಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತ್ರ ಕೊನೆಯವರೆಗೂ ಕಲಾಪದಲ್ಲಿ ಭಾಗವಹಿಸಿ ಗಮನ ಸೆಳೆದರು.
ಜನಪರ ಚರ್ಚೆಗಳು ಮತ್ತು ಶಾಸನ ರಚನೆಯ ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ನೀಡಬೇಕು ಎಂಬ ಸ್ಪೀಕರ್ ಯು.ಟಿ. ಖಾದರ್ ಅವರ ಬದ್ಧತೆ ಈ ದಾಖಲೆಗೆ ಕಾರಣವಾಗಿದೆ. ವಿರೋಧ ಪಕ್ಷದ ಸದಸ್ಯರು ಎತ್ತಿದ ವಿಷಯಗಳು ಮತ್ತು ಪ್ರಮುಖ ವಿಧೇಯಕಗಳ ಮೇಲಿನ ಚರ್ಚೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಕಲಾಪವನ್ನು ಇಷ್ಟು ತಡವಾಗಿ ನಡೆಸಲಾಯಿತು ಎಂದು ತಿಳಿದುಬಂದಿದೆ.

