
ಮತ್ತೆ ಉತ್ತರ ನೀಡಲು ಅಧಿಕಾರಿಗಳ ನಿರ್ಲಕ್ಷ್ಯ: ಸ್ಪೀಕರ್ ಯು.ಟಿ.ಖಾದರ್ ಗರಂ, ಮರು ಎಚ್ಚರಿಕೆ
ಯುವ ಸಬಲೀಕರಣ ಇಲಾಖೆಯು 10 ಗಮನ ಸೆಳೆಯುವ ಸೂಚನೆಗಳಲ್ಲಿ ಒಂದಕ್ಕೂ ಉತ್ತರ ನೀಡಿಲ್ಲ. ಸಹಕಾರ ಇಲಾಖೆಯು 12 ಸೂಚನೆಗಳಿಗೆ ಒಂದೂ ಪ್ರತಿಕ್ರಿಯೆ ನೀಡದೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ.
ಚುಕ್ಕೆ ಗುರುತು ಇಲ್ಲದ ಪ್ರಶ್ನೆಗಳಿಗೆ ಸರ್ಕಾರ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಸಭಾಧ್ಯಕ್ಷ ಯು.ಟಿ.ಖಾದರ್, ಇದೀಗ ಮತ್ತೆ ಗಮನಸೆಳೆಯುವ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರು ಸರ್ಕಾರದ ಗಮನ ಸೆಳೆಯಲು ಮಂಡಿಸುವ ಗಮನ ಸೆಳೆಯುವ ಸೂಚನೆಗಳಿಗೆ ಇಲಾಖೆಗಳು ನಿಗದಿತ ಸಮಯದಲ್ಲಿ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಯು.ಟಿ.ಖಾದರ್, ಯಾವ ಇಲಾಖೆ ಎಷ್ಟು ಉತ್ತರಗಳನ್ನು ಬಾಕಿ ಇರಿಸಿಕೊಂಡಿದೆ ಎಂಬ ಪಟ್ಟಿಯನ್ನು ಸದನದ ಮುಂದಿಟ್ಟರು. ಅಲ್ಲದೇ, ಮುಂದಿನ ದಿನಗಳಲ್ಲಿ ಇಲಾಖಾ ಅಧಿಕಾರಿಗಳು ವಿಳಂಬ ಮಾಡದೆ ಸಮಯಕ್ಕೆ ಸರಿಯಾಗಿ ಉತ್ತರಗಳನ್ನು ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯ
ಯುವ ಸಬಲೀಕರಣ ಇಲಾಖೆಯು 10 ಗಮನ ಸೆಳೆಯುವ ಸೂಚನೆಗಳಲ್ಲಿ ಒಂದಕ್ಕೂ ಉತ್ತರ ನೀಡಿಲ್ಲ. ಸಹಕಾರ ಇಲಾಖೆಯು 12 ಸೂಚನೆಗಳಿಗೆ ಒಂದೂ ಪ್ರತಿಕ್ರಿಯೆ ನೀಡದೆ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಪ್ರವಾಸೋದ್ಯಮ ಇಲಾಖೆಯು 25 ಪ್ರಶ್ನೆಗಳಲ್ಲಿ ಕೇವಲ ಒಂದಕ್ಕೆ ಮಾತ್ರ ಉತ್ತರ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆಯು 9 ಸೂಚನೆಗಳಲ್ಲಿ ಒಂದನ್ನು ಬಾಕಿ ಉಳಿಸಿಕೊಂಡಿದೆ. ರಾಜ್ಯದ ಆಡಳಿತ ಯಂತ್ರದ ಬೆನ್ನೆಲುಬಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22 ಸೂಚನೆಗಳಲ್ಲಿ ಕೇವಲ 6ಕ್ಕೆ ಉತ್ತರ ನೀಡಿದೆ. ಅತ್ಯಂತ ಪ್ರಮುಖವಾದ ಆರ್ಥಿಕ ಇಲಾಖೆಯು 33 ಪ್ರಶ್ನೆಗಳಲ್ಲಿ ಕೇವಲ 6ಕ್ಕೆ ಮಾತ್ರ ಉತ್ತರಿಸಿದೆ. ಜಲಸಂಪನ್ಮೂಲ ಇಲಾಖೆಯು 33ಕ್ಕೆ 4, ನಗರಾಭಿವೃದ್ಧಿ ಇಲಾಖೆಯು 23ಕ್ಕೆ 8, ಕಾನೂನು ಇಲಾಖೆಯು 5ಕ್ಕೆ 3 ಮತ್ತು ಸಣ್ಣ ನೀರಾವರಿ ಇಲಾಖೆಯು 19 ಪ್ರಶ್ನೆಗಳಿಗೆ 13 ಉತ್ತರಗಳನ್ನು ನೀಡಿವೆ. ಗೃಹ ಇಲಾಖೆಯು 35 ಪ್ರಶ್ನೆಗಳಲ್ಲಿ 26ಕ್ಕೆ ಉತ್ತರಿಸಿದೆ ಎಂದು ಹೇಳಿದರು.
ಒಂದು ಕಡೆ ಶಾಸಕರು ತಮ್ಮ ಕ್ಷೇತ್ರದ ಜನರ ಅಳಲನ್ನು ತೋಡಿಕೊಳ್ಳಲು ಸದನಕ್ಕೆ ಬಂದರೆ, ಇನ್ನೊಂದೆಡೆ ಎಸಿ ಕೊಠಡಿಗಳಲ್ಲಿ ಕುಳಿತ ಅಧಿಕಾರಿಗಳು ಕಡತಗಳನ್ನು ವಿಲೇವಾರಿ ಮಾಡದೆ ಕಾಲಹರಣ ಮಾಡುತ್ತಿರುವುದು ಸಭಾಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ. ಯಾವ ಇಲಾಖೆಗಳಲ್ಲಿ ಉತ್ತರಗಳು ಸಲ್ಲಿಸಲ್ಪಟ್ಟಿಲ್ಲವೋ, ಆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿತನ ತೋರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರಶ್ನೋತ್ತರ ಬಳಿಕ ಮಂಡಿಸುವ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡದ ಬಗ್ಗೆ ಸಭಾಧ್ಯಕ್ಷ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿ ಸದನವನ್ನು ಮುಂದೂಡಿ ಹೊರನಡೆದಿದ್ದರು. ಇದು ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತು. ಬಳಿಕ ಸರ್ಕಾರವು ಉತ್ತರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೂ ಅಧಿಕಾರಿಗಳು ಗಮನಸೆಳೆಯುವ ಸೂಚನೆಯಲ್ಲಿಯೂ ನಿರ್ಲಕ್ಷ್ಯ ತೋರಿದ್ದಾರೆ. ಇದು ಮತ್ತೊಮ್ಮೆ ಸಭಾಧ್ಯಕ್ಷರ ಬೇಸರಕ್ಕೆ ಕಾರಣವಾಗಿದೆ.

