
ತುಂಗಭದ್ರಾ ಜಲಾಶಯ
ನೀರಾವರಿ ಯೋಜನೆಗಳಿಗಾಗಿ ರಾಜ್ಯದ ಸಂಸದರ ಒಗ್ಗಟ್ಟು: ಪ್ರಧಾನಿ ಭೇಟಿಗೆ ಸರ್ವಪಕ್ಷ ಸಭೆಯಲ್ಲಿ ಗ್ರೀನ್ ಸಿಗ್ನಲ್!
All party delegation| ತಮಿಳುನಾಡು, ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ನಾವು ಮಾಡುವ ತೀರ್ಮಾನಗಳಿಂದ ಅವುಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಮೇಕೆದಾಟು, ಕೃಷ್ಣಾ, ತುಂಗಭದ್ರಾ, ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ತಾರ್ಕಿಕ ಅಂತ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದ ಎಲ್ಲಾ ಸಂಸದರ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಲು ತೀರ್ಮಾನಿಸಿದೆ.
ಮಂಗಳವಾರ (ಮಾ.9) ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸರ್ವ ಪಕ್ಷಗಳ ಸಂಸದರ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಮತ್ತೊಮ್ಮೆ ಸಭೆ ಸೇರಿ ಸರ್ವಪಕ್ಷ ನಿಯೋಗವು ಪ್ರಧಾನಿ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುವ ತೀರ್ಮಾನ ಮಾಡಲಾಗಿದೆ" ಎಂದರು.
"ಪ್ರಧಾನಿ ಮೋದಿ ಹಾಗೂ ಸಚಿವರ ಭೇಟಿಗೆ ಸಮಯ ತೆಗೆದುಕೊಳ್ಳಬೇಕಿದೆ. ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ದಿನಾಂಕ ನಿಗದಿ ಮಾಡಿ ಎಂದು ಸಂಸದರು ತಿಳಿಸಿದ್ದಾರೆ. ಅವರ ಮನವಿಗೆ ನಾವು ಗೌರವ ನೀಡಿ, ಒಗ್ಗೂಡಿ ಕೆಲಸ ಮಾಡಬೇಕಿದೆ" ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣೆ ನಂತರ ತೀರ್ಮಾನ
ತಮಿಳುನಾಡು, ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ನಾವು ಮಾಡುವ ತೀರ್ಮಾನಗಳಿಂದ ಅವುಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಆದ ಕಾರಣ ಬೇರೆಯದ್ದೇ ದಿನಾಂಕವನ್ನು ನಿಗದಿ ಮಾಡಲಾಗುವುದು. ರಾಜ್ಯದ ಹಿತಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಹಿಂದೆಯೂ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎನ್ನುವ ಅಭಿಪ್ರಾಯವನ್ನು ಸಂಸದರು ವ್ಯಕ್ತಪಡಿಸಿದ್ದಾರೆ. ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗೋಣ ಎನ್ನುವ ದೃಷ್ಟಿ ನಮ್ಮದೂ ಆಗಿದೆ. ಎಲ್ಲರೂ ಸೇರಿ ರಾಜ್ಯದ ಹಿತಕ್ಕೆ ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ನಮ್ಮ ಆಶಯ " ಎಂದು ಡಿಕೆಶಿ ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿದರು.
ಸಮಗ್ರ ಯೋಜನೆಗಳ ಚರ್ಚೆ
"ಬಹಳಷ್ಟು ವರ್ಷಗಳಿಂದ ಬಾಕಿ ಉಳಿದಿದ್ದ ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆಗಳು ಪರಿಹಾರವಾಗುವ ನಿರೀಕ್ಷೆ ಇದೆ. ಮಹದಾಯಿ, ಕೃಷ್ಣಾ, ತುಂಗಭದ್ರಾ, ಭದ್ರಾ ಹೀಗೆ ನೀರಾವರಿ ಯೋಜನೆಗಳ ಸಣ್ಣ ತೊಡಕುಗಳನ್ನ ನಿವಾರಿಸುವ ಕುರಿತು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳು ಯಾವ ಸ್ಥಿತಿಯಲ್ಲಿವೆ, ಹೇಗೆ ಮುಂದುವರಿಸಬೇಕು ಎನ್ನುವ ವಿಚಾರಗಳನ್ನು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದರು.
ಭೂ ಸ್ವಾಧೀನ ಪ್ರಕ್ರಿಯೆ ಆರಂಭ
"ಯುಕೆಪಿ 3 ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದೇವೆ. ಒಪ್ಪಿತ ಪರಿಹಾರ ನಿಗದಿ ಮಾಡಿ 1.33 ಲಕ್ಷ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದೇವೆ. ಇದಕ್ಕಾಗಿ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಿಡಲಾಗಿದೆ. ದೇಶದ ಇತಿಹಾಸದಲ್ಲಿ ಇಂತಹ ದೊಡ್ಡ ತೀರ್ಮಾನ ಇದುವರೆಗೂ ಮಾಡಿರಲಿಲ್ಲ. ಕಾವೇರಿ ವಿಚಾರದಲ್ಲಿ ಸುಪ್ರೀಂ ಆದೇಶದಂತೆ ಮುನ್ನಡೆಯುತ್ತೇವೆ" ಎಂದು ತಿಳಿಸಿದರು.
ಸಭೆಗೆ 24 ಸಂಸದರು ಹಾಜರು
ಕೇಂದ್ರ ಜಲ ಶಕ್ತಿ ಸಚಿವರು ಹಾಗೂ ಪ್ರಲ್ಹಾದ್ ಜೋಶಿ ಅವರ ಬಳಿ ಚರ್ಚಿಸಿಯೇ ಈ ಸಭೆ ನಿಗದಿ ಮಾಡಲಾಗಿದೆ. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೇರಿದಂತೆ ಅನೇಕರು ವಿಷಯಗಳನ್ನು ಚರ್ಚಿಸಿ ನಡೆಸಿ ನಮ್ಮ ಗಮನ ಸೆಳೆದಿದ್ದಾರೆ. ರಾಜ್ಯ ಸರ್ಕಾರ ಹೇಗೆ ನೀರಾವರಿ ವಿಚಾರಗಳಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ ಎಂದರು.
ಎತ್ತಿನಹೊಳೆ ಯೋಜನೆಗೆ ಪರಿಸರ ಇಲಾಖೆಯ ಅನುಮತಿಗಾಗಿ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದೆವು. ಈಗ ನಾವು ಕೂಡಲೇ ಕೆಲಸ ಮುಂದುವರಿಸುತ್ತೇವೆ. ಈಗಾಗಲೇ ಅರ್ಧ ಕೆಲಸ ಮುಗಿಸಿದ್ದೇವೆ. ಒಂದಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದರ ಅನ್ವಯ ನಾವು ಕೆಲಸ ಮಾಡುತ್ತೇವೆ. ಒಂದೊಂದು ಸಲ ಅವರು ಹೇಳಿದಂತೆ ಹೇಳಬೇಕಾಗುತ್ತದೆ. ನಮಗೆ ಯೋಜನೆ ಜಾರಿಗೊಳಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

