
ಮೇಕೆದಾಟುವಿನಲ್ಲಿ ಹರಿಯುತ್ತಿರುವ ಕಾವೇರಿ ನೀರು
Karnatka Budget 2026| ಮೇಕೆದಾಟು, ಎತ್ತಿನಹೊಳೆ ಹಾಗೂ ಯುಕೆಪಿ-3 ಯೋಜನೆಗಳಿಗೆ ಭಾರಿ ವೇಗ, ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದ್ದು, ಎರಡನೇ ಹಂತದ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.
ರಾಜ್ಯದ ಬಹುನಿರೀಕ್ಷಿತ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮತ್ತು ಜಲಮೂಲಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಕಾವೇರಿ ನದಿಗೆ ಕಟ್ಟಲು ಮುಂದಾಗಿರುವ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಜಾಗೊಂಡಿರುವುದು ರಾಜ್ಯಕ್ಕೆ ಸಂದ ದೊಡ್ಡ ಕಾನೂನು ಜಯವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿ, ಅರಣ್ಯ ಪ್ರದೇಶದ ಬಳಕೆ ಹಾಗೂ ಅಂತಿಮ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದ್ದು, ಎರಡನೇ ಹಂತದ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಹೆಚ್ಚುವರಿ ನೀರು ಸಂಗ್ರಹಕ್ಕಾಗಿ ಕೊರಟಗೆರೆಯ ವಡೇರಹಳ್ಳಿ ಬಳಿ 1.2 ಟಿಎಂಸಿ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಭದ್ರಾ ಮೇಲ್ದಂಡೆ ಮತ್ತು ಯುಕೆಪಿ 3ನೇ ಹಂತಕ್ಕೆ ಬಲ
ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿಸಿದ್ದರೂ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವೇ 11,343 ಕೋಟಿ ರೂ. ವೆಚ್ಚ ಭರಿಸಿ ಕಾಮಗಾರಿಗಳನ್ನು ಮುಂದುವರಿಸಿದೆ. ಅಜ್ಜಂಪುರದ ಅಬ್ಬಿನಹೊಳಲು ಗ್ರಾಮದ ಭೂಸಮಸ್ಯೆಯನ್ನು ಬಗೆಹರಿಸಲಾಗಿದ್ದು, 2027ರ ವೇಳೆಗೆ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆಯನ್ನು ಪೂರ್ಣಗೊಳಿಸಿ 157 ಕೆರೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿದೆ. ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಯುಕೆಪಿ 3ನೇ ಹಂತದಡಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುಳುಗಡೆಯಾಗುವ ಜಮೀನುಗಳಿಗೆ ಪರಿಹಾರವಾಗಿ ಖುಷ್ಕಿ ಜಮೀನಿಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸುವ ಮೂಲಕ ರೈತರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಈ ವರ್ಷವೇ ಆರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ.
ತುಂಗಭದ್ರಾ, ಮಹದಾಯಿ ಮತ್ತು ಇತರೆ ನೀರಾವರಿ ಯೋಜನೆಗಳು
ತುಂಗಭದ್ರಾ ಜಲಾಶಯದ ಶಿಥಿಲಗೊಂಡಿರುವ 33 ಗೇಟುಗಳನ್ನು ಮುಂಗಾರು ಪೂರ್ವದಲ್ಲೇ ಬದಲಾಯಿಸಲಾಗುವುದು. ಜೊತೆಗೆ ಹೂಳಿನ ಸಮಸ್ಯೆ ನಿವಾರಣೆಗೆ ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಿಸುವ ಕುರಿತು ಆಂಧ್ರಪ್ರದೇಶ ಹಾಗೂ ತೆಲಂಗಾಣದೊಂದಿಗೆ ಮಾತುಕತೆ ನಡೆಸಲಾಗುವುದು. ಮಹದಾಯಿ ಕಣಿವೆಯ ಕಳಸಾ-ಬಂಡೂರಾ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯದಿಂದ ಅರಣ್ಯ ತೀರುವಳಿ ಲಭ್ಯವಾದ ಕೂಡಲೇ ಕಾಮಗಾರಿ ಆರಂಭಿಸಲು ಗುತ್ತಿಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಇದಲ್ಲದೆ, ಚಾಮರಾಜನಗರದ ಹನೂರಿನಲ್ಲಿ 12 ಸಾವಿರ ಎಕರೆಗೆ ನೀರಾವರಿ ಕಲ್ಪಿಸುವ ಉಡುತೊರೆಹಳ್ಳ ಯೋಜನೆಗೆ 490 ಕೋಟಿ ರೂ. ಹಾಗೂ ವಿಜಯಪುರದ ಬಾಬಾ ನಗರದಲ್ಲಿ 0.67 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೃಷ್ಣಾ, ಕಾವೇರಿ ಸೇರಿದಂತೆ ವಿವಿಧ ನದಿ ಕಣಿವೆಗಳಲ್ಲಿ ಒಟ್ಟು 8,045 ಕೋಟಿ ರೂ. ಮೊತ್ತದ 75 ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು
ಸಣ್ಣ ನೀರಾವರಿ: ಕೆರೆಗಳ ನವೀಕರಣಕ್ಕೆ ಕೋಟಿ ಕೋಟಿ ಅನುದಾನ
ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಭಾರಿ ಆದ್ಯತೆ ನೀಡಲಾಗಿದೆ. ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳ 164 ಕೆರೆಗಳಿಗೆ 237 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸಲಾಗುವುದು. ಹೊಸಕೋಟೆಯ 59 ಕೆರೆಗಳಿಗೆ ಸಂಸ್ಕರಿಸಿದ ನೀರು ಪೂರೈಸಲು 140 ಕೋಟಿ ರೂ. ಹಾಗೂ ವೃಷಭಾವತಿ ವ್ಯಾಲಿಯಿಂದ ದೊಡ್ಡಬಳ್ಳಾಪುರ, ನೆಲಮಂಗಲದ 119 ಕೆರೆಗಳಿಗೆ ನೀರು ತುಂಬಿಸಲು 650 ಕೋಟಿ ರೂ. ಮೀಸಲಿಡಲಾಗಿದೆ. ಅಲ್ಲದೆ, ರಾಜ್ಯಾದ್ಯಂತ 2025-26ನೇ ಸಾಲಿನಲ್ಲಿ 1,793 ಕೋಟಿ ರೂ. ವೆಚ್ಚದಲ್ಲಿ 112 ಏತ ನೀರಾವರಿ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಲಾಗಿದೆ.

