
ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ
ವಿವಾದಕ್ಕೆ ಕಾರಣವಾಗಿದ್ದ 'ಕೈ' ಶಾಸಕರ ವಿದೇಶ ಪ್ರವಾಸ ರದ್ದು?: ಹೈಕಮಾಂಡ್ ಸೂಚನೆ ಬೆನ್ನಲ್ಲೇ ಗೊಂದಲ
ಶಾಸಕರು ಗುಂಪುಗೂಡಿ ವಿದೇಶಕ್ಕೆ ತೆರಳುವುದು ಪಕ್ಷದಲ್ಲಿನ ಆಂತರಿಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ, ಪ್ರವಾಸದ ಬಗ್ಗೆ ಪರಾಮರ್ಶೆ ನಡೆಸುವುದು ಸೂಕ್ತ ಎಂಬ ಸಲಹೆ ಹೈಕಮಾಂಡ್‌ನಿಂದ ಬಂದಿದೆ ಎಂದು ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಆಡಳಿತ ಪಕ್ಷದ ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ. ರಾಜಕೀಯ ಗೊಂದಲದ ಸಮಯದಲ್ಲಿ ಈ ಪ್ರವಾಸ ಅನಗತ್ಯ ಎಂಬ ಅಭಿಪ್ರಾಯ ಹೈಕಮಾಂಡ್ ಮಟ್ಟದಲ್ಲಿ ವ್ಯಕ್ತವಾಗಿದ್ದು, ಪ್ರವಾಸ ರದ್ದಾಗುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ವಲಯದ 22 ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದರು. ಇದೇ ಫೆಬ್ರವರಿ 18 ರಿಂದ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದ ಶಾಸಕರು, ಈಗಾಗಲೇ ವಿಮಾನದ ಟಿಕೆಟ್ ಕೂಡ ಬುಕ್ ಮಾಡಿಸಿದ್ದರು. ಸಿಎಂ ಆಪ್ತ ಶಾಸಕರೇ ಗುಂಪಾಗಿ ವಿದೇಶಕ್ಕೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು.
ಹೈಕಮಾಂಡ್ ಅಸಮಾಧಾನ ಮತ್ತು ಸಲಹೆ
ಶಾಸಕರು ತಮ್ಮ ಸ್ವಂತ ಖರ್ಚಿನಲ್ಲೇ ಈ ಪ್ರವಾಸವನ್ನು ಆಯೋಜಿಸಿಕೊಂಡಿದ್ದರೂ, ಪ್ರಸ್ತುತ ರಾಜ್ಯದ ರಾಜಕೀಯ ಸನ್ನಿವೇಶದಲ್ಲಿ ಇದು ತಪ್ಪು ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂದು ಹೈಕಮಾಂಡ್ ಭಾವಿಸಿದೆ. ನಾಯಕತ್ವದ ವಿಚಾರ ಚರ್ಚೆಯಲ್ಲಿರುವಾಗ, ಶಾಸಕರು ಗುಂಪುಗೂಡಿ ವಿದೇಶಕ್ಕೆ ತೆರಳುವುದು ಪಕ್ಷದಲ್ಲಿನ ಆಂತರಿಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ, ಪ್ರವಾಸದ ಬಗ್ಗೆ ಪರಾಮರ್ಶೆ ನಡೆಸುವುದು ಸೂಕ್ತ ಎಂಬ ಸಲಹೆ ಹೈಕಮಾಂಡ್‌ನಿಂದ ಬಂದಿದೆ ಎಂದು ತಿಳಿದುಬಂದಿದೆ.
ಶಾಸಕರ ಹಿಂದೇಟು ಮತ್ತು ಸಿಎಂ ನಡೆ
ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ, ಪ್ರವಾಸಕ್ಕೆ ಸಜ್ಜಾಗಿದ್ದ ಕೆಲವು ಶಾಸಕರು ಈಗ ಹಿಂದೇಟು ಹಾಕುತ್ತಿದ್ದಾರೆ. ಅನಗತ್ಯವಾಗಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುವುದು ಬೇಡ ಎಂಬ ಲೆಕ್ಕಾಚಾರ ಶಾಸಕರಲ್ಲಿದೆ. ಹೈಕಮಾಂಡ್ ಎಂಟ್ರಿಯಿಂದಾಗಿ ಶಾಸಕರ ಈ ವಿದೇಶ ಪ್ರವಾಸ ಬಹುತೇಕ ರದ್ದಾಗುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಶಾಸಕರಿಗೆ ಸೂಚನೆ ನೀಡಿ ಪ್ರವಾಸಕ್ಕೆ ಬ್ರೇಕ್ ಹಾಕುತ್ತಾರೆಯೇ ಎಂಬುದು ಈಗ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಪ್ರಮುಖ ಚರ್ಚೆಯಾಗಿದೆ.

