
ಗದ್ದುಗೆ ಗುದ್ದಾಟ| ಡಿಕೆಶಿಗೆ ಚೆಕ್‌ಮೇಟ್; ವಿದೇಶಕ್ಕೆ ಹಾರಲು ʼಸಿದ್ಧʼರಾದ ʼಕೈʼ ಶಾಸಕರು
ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ 22 ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದು, ಫೆ. 18 ರಿಂದ ಮಾರ್ಚ್ 3 ರವರೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೆ ತೆರಳಲಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಬದಲಾಗಲೇಬೇಕು ಮತ್ತು ತಮಗೆ ಸಿಎಂ ಪಟ್ಟ ಕಟ್ಟಬೇಕೆಂದು ದೆಹಲಿ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತಿರುಗೇಟು ಕೊಡಲು ನಿರ್ಧರಿಸಿದ್ದಾರೆ. ಸುಮಾರು 22 ಮಂದಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ವಿದೇಶ ಪ್ರವಾಸಕ್ಕೆ ಅಣಿಯಾಗಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯ ಬಜೆಟ್ ಅಧಿವೇಶನ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಆರ್ಥಿಕ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಸಂದರ್ಭದಲ್ಲೇ ಅವರ ಬೆಂಬಲಿಗ ಶಾಸಕರ ಒಂದು ಗುಂಪು ವಿದೇಶ ಪ್ರವಾಸಕ್ಕೆ ಸಿದ್ಧವಾಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಗ್ಯಾರಂಟಿ ಯೋಜನೆಗಳು, ಜಿಎಸ್‌ಟಿ ಹೊಂದಾಣಿಕೆಗೆ ಬೇಕಾಗಿರುವ ಅನುದಾನ ಸೇರಿದಂತೆ ಆರ್ಥಿಕ ಸಮತೋಲನಕ್ಕೆ ಸರ್ಕಾರ ಪರದಾಡುತ್ತಿರುವಾಗಲೇ ಈ ಶಾಸಕರು ವಿದೇಶಗಳಿಗೆ ತೆರಳಿ ಮೋಜು-ಮಸ್ತಿ ನಡೆಸಲಿದ್ದಾರೆ ಎಂಬ ಆರೋಪಗಳು ಡಿ.ಕೆ. ಶಿವಕುಮಾರ್ ಬೆಂಬಲಿಗರಿಂದ ವ್ಯಕ್ತವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ 22 ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದು, ಫೆ. 18 ರಿಂದ ಮಾರ್ಚ್ 3 ರವರೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೆ ತೆರಳಲಿದ್ದಾರೆ. ಸರ್ಕಾರದ ವಿವಿಧ ಸಮಿತಿಗಳು ಅಧ್ಯಯನದ ಸಲುವಾಗಿ ವಿದೇಶ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ, ಈಗ ಆಯೋಜಿಸಿರುವ ಪ್ರವಾಸಕ್ಕೆ ಯಾವುದೇ ವಿಶೇಷವಿಲ್ಲ ಎನ್ನುವುದೇ ರಾಜಕೀಯ ಚರ್ಚೆಗಳಿಗೆ ಪುಷ್ಠಿ ನೀಡಿದೆ. ʼಇದು ಕೇವಲ ಮೋಜು ಮಸ್ತಿಗಾಗಿ ಕೈಗೊಂಡಿರುವ ಪ್ರವಾಸʼ ಎಂಬ ಆರೋಪವನ್ನು ಹೆಸರು ಹೇಳಲಿಚ್ಛಿಸದ ಡಿಕೆಶಿ ಬಣದ ನಾಯಕರೊಬ್ಬರು ಹೇಳಿದ್ದಾರೆ.
ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ಸಿಎಂ ಬೆಂಬಲಿಗ ಹಾಗೂ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗ ಶೆಟ್ಟಿ ಅವರು, "ಯಾವುದೇ ಸಮಿತಿಯಿಂದ ವಿದೇಶ ಪ್ರವಾಸ ಹೋಗುತ್ತಿಲ್ಲ. ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು ಶಾಸಕರಿಗೆ ವಿದೇಶ ಪ್ರವಾಸ ಆಯೋಜನೆ ನೇತೃತ್ವ ವಹಿಸಿದ್ದಾರೆ" ಎಂದು ಹೇಳಿದ್ದಾರೆ.
ಈ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್ ಅವರ ಸೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು,"ಈ ಪ್ರವಾಸವನ್ನು ಆ ಶಾಸಕರೇ ಯೋಜಿಸಿರಬಹುದು ಅಥವಾ ಯಾರಾದರೂ ಪ್ರಾಯೋಜಕತ್ವ ವಹಿಸಿರಬಹುದು. ಇದಕ್ಕೂ ಡಿ.ಕೆ. ಶಿವಕುಮಾರ್ ಅವರಿಗೂ ಯಾವುದೇ ಸಂಬಂಧ ಇಲ್ಲ," ಎಂದು ಹೇಳಿದ್ದಾರೆ.
"ಯಾರಾದರೂ ಪ್ರಾಯೋಜಕತ್ವ ವಹಿಸಿರಬಹುದು," ಎಂಬ ಅವರ ಹೇಳಿಕೆ ನೇರವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಗುರಿಯಿಟ್ಟು ನೀಡಿರಬಹುದು ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಈ ಎಲ್ಲಾ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, "ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ," ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ, ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಮಾಧ್ಯಮದವರು ಪದೇ ಪದೇ ಒಂದೇ ವಿಷಯ ಕೇಳಬಾರದು. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದರಂತೆ ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ನಡೆದುಕೊಳ್ಳುತ್ತೇವೆʼ ಎಂದು ಹೇಳಿದ್ದಾರೆ.
ಯಾವಾಗ ನಡೆಯಿತು ಪ್ಲಾನ್?
ಶಾಸಕರ ವಿದೇಶಿ ಪ್ರವಾಸದ ಯೋಜನೆ ತಕ್ಷಣ ನಡೆದಿದ್ದಲ್ಲ, ಎರಡು ತಿಂಗಳ ಹಿಂದೆಯೇ ಪ್ರವಾಸ ತಯಾರಿ ನಡೆದಿತ್ತು ಎಂದು ಪ್ರವಾಸ ಕೈಗೊಳ್ಳುತ್ತಿರುವ ತಂಡದ ಶಾಸಕರೊಬ್ಬರು ಖಾಸಗಿಯಾಗಿ ಹೇಳಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ತಿಂಗಳುಗಳ ಹಿಂದೆ ಭೇಟಿ ನಡೆಸಲು ಪ್ರಯತ್ನಿಸುತ್ತಿದ್ದಾಗ, ಅವರ ಬಣದ ಕೆಲ ಶಾಸಕರು ದೆಹಲಿ ಯಾತ್ರೆ ನಡೆಸಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದರು.
ಸುಮಾರು 12 ಶಾಸಕರು (ಎಂಎಲ್‌ಎ, ಎಂಎಲ್‌ಸಿಗಳೂ ಸೇರಿ೦ ದೆಹಲಿಗೆ ದಂಡಯಾತ್ರೆ ಮಾಡಿ, ಕೊನೆಗೆ ವಾಪಸಾಗಿದ್ದರು. ಅದರೆ, ಆ ಸಂದರ್ಭದಲ್ಲಿ ಸಿಎಂ ಹುದ್ದೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣದಿಂದ ಸಿದ್ದರಾಮಯ್ಯ ಬೆಂಬಲಿಗರೂ ಪರ್ಯಾಯವಾಗಿ ವಿದೇಶಿ ಪ್ರವಾಸ ಕೈಗೊಂಡು ಡಿಕೆಶಿ ತಂಡಕ್ಕೆ ತಮ್ಮ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರು ಎನ್ನಲಾಗಿದೆ. "ಬಜೆಟ್ ಮುನ್ನ ಸಿಎಂ ಬದಲಾವಣೆ ಆಗಲಿದೆ," ಎಂಬ ಸಂದೇಹ ಇದ್ದ ಕಾರಣ ಸಿಎಂ ಬೆಂಬಲಿಗರೂ ತಮ್ಮ ಬಲ ಪ್ರದರ್ಶಿಸಲು ಪೈಪೋಟಿಗೆ ಇಳಿದಿದ್ದರು ಎಂದು ಹೆಸರು ಹೇಳಲಿಚ್ಛಿಸಲದ ನಾಯಕರೊಬ್ಬರು ತಿಳಿಸಿದ್ದಾರೆ.
ಹಿಂದೆ ನಡೆಸಿದ್ದ ಪ್ರವಾಸ ಯೋಜನೆಯನ್ನು ಕೈಬಿಡಲು ಸಾಧ್ಯವಾಗದೆ ಆ ಶಾಸಕರು ಪ್ರವಾಸಕ್ಕೆ ಮುಂದಾಗಿದ್ದಾರೆ. ಆದರೂ, ಕೆಲ ಶಾಸಕರು (ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಸೇರಿದಂತೆ) ಕೊನೆ ಕ್ಷಣದಲ್ಲಿ ಪ್ರವಾಸ ಯೋಜನೆಯನ್ನು ಕೈಬಿಟ್ಟಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗ ಶಾಸಕರಾದ ಯಶವಂತರಾಯಗೌಡ ಪಾಟೀಲ್, ಜಿ.ಟಿ. ಪಾಟೀಲ್, ಕೆ. ವೆಂಕಟೇಶ್, ಪುಟ್ಟರಂಗಶೆಟ್ಟಿ ಮತ್ತಿತರರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲ ಸೃಷ್ಟಿಸಿದೆ.
ಬಲಾಬಲಕ್ಕೂ ಸಿದ್ಧತೆ ನಡೆಸಿದ್ದ ಡಿಕೆಶಿ
ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹಾಕಿದ ಪ್ರತಿ ತಂತ್ರವೂ ತಲೆಕೆಳಗಾಗುತ್ತಿರುವ ಹಿನ್ನೆಲೆಯಲ್ಲಿ ಬಲಾಬಲ ಪ್ರದರ್ಶನಕ್ಕೂ ಚಿಂತನೆ ನಡೆಸಿದ್ದರು. ಈ ಹಿಂದೆ ಹೈಕಮಾಂಡ್ ನಾಯಕರ ಬಳಿಕ ಆಪ್ತ ಶಾಸಕರನ್ನು ಕಳುಹಿಸಿಕೊಟ್ಟಿದ್ದರು. ಆದರೆ, ಡಿಕೆಶಿ ರೂಪಿಸುವ ಪ್ರತಿ ತಂತ್ರವೂ ಸಿದ್ದರಾಮಯ್ಯ ಎದುರು ಯಾವುದೇ ಫಲಿತ ಕಾಣುತ್ತಿರಲಿಲ್ಲ. ಅಂತಿಮವಾಗಿ ಶಾಸಕರಿಗೆ ವೈಯಕ್ತಿಕವಾಗಿ ಆಮಿಷ ಒಡ್ಡಿದ್ದರು. ತಮಗೆ 60ಶಾಸಕರ ಬಲವಿದೆ ಎಂದು ಡಿಸಿಎಂ ಬಣದವರು ಹೇಳಿಕೊಳ್ಳುತ್ತಿದ್ದರು.
ಡಿ.ಕೆ. ಶಿವಕುಮಾರ್ ಅವರು ಭವಿಷ್ಯದಲ್ಲಿ ಶಾಸಕರ ಬಲಾಬಲ ಪ್ರದರ್ಶನಕ್ಕೆ ಮುಂದಾದರೆ, ಅದಕ್ಕೂ ತಕ್ಕ ತಿರುಗೇಟು ನೀಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ವಿದೇಶ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಡಿಕೆಶಿ ಹಾಕುವ ಪ್ರತಿ ಹೆಜ್ಜೆ, ಹೂಡುವ ತಂತ್ರಗಳಿಗೂ ಸಿದ್ದರಾಮಯ್ಯ ಅವರು ಪ್ರತಿತಂತ್ರ ರೂಪಿಸಿ, ಹಿನ್ನಡೆಯಾಗುವಂತೆ ಮಾಡುತ್ತಿರುವುದರಿಂದ ನಾಯಕತ್ವದ ಬದಲಾವಣೆಯು ಇಬ್ಬರಿಗೂ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

