Missing Cases|2,981 ಮಹಿಳೆಯರು, 959 ಹೆಣ್ಣು ಮಕ್ಕಳು ಇನ್ನೂ ಪತ್ತೆಯಿಲ್ಲ!
x

Missing Cases|2,981 ಮಹಿಳೆಯರು, 959 ಹೆಣ್ಣು ಮಕ್ಕಳು ಇನ್ನೂ ಪತ್ತೆಯಿಲ್ಲ!

2020ರಲ್ಲಿ 8,948 ಇದ್ದ ಪ್ರಕರಣಗಳು 14,272ಕ್ಕೆ ತಲುಪಿವೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 71,699 ಮಹಿಳೆಯ, 17 ವರ್ಷದೊಳಗಿನ 11,872 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದರು.


Click the Play button to hear this message in audio format

ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಮಹಿಳೆಯರು ಹಾಗೂ ಮಕ್ಕಳ ನಾಪತ್ತೆ ಪ್ರಕರಣಗಳು ತೀವ್ರ ಕಳವಳಕಾರಿಯಾಗಿವೆ. ಕಳೆದ ಐದು ವರ್ಷಗಳಲ್ಲಿ (2020ರಿಂದ 2025ರವರೆಗೆ) ಒಟ್ಟು 71,699 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇನ್ನೂ 2,981 ಮಹಿಳೆಯರ ಸುಳಿವೇ ಸಿಕ್ಕಿಲ್ಲ! 17 ವರ್ಷದೊಳಗಿನ 11,872 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 959 ಮಂದಿ ಪತ್ತೆಯಾಗಿಲ್ಲ

ಮಹಿಳೆಯರ ಪೈಕಿ 68,718 ಮಂದಿಯನ್ನು ಪತ್ತೆಹಚ್ಚಲಾಗಿದ್ದರೂ, ಇನ್ನೂ 2,981 ಮಹಿಳೆಯರ ಸುಳಿವಿಗಾಗಿ ಇನ್ನೂ ಪರದಾಟ ನಡೆಸಲಾಗುತ್ತಿದೆ.

17 ವರ್ಷದೊಳಗಿನ 11,872 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 959 ಮಂದಿ ಪತ್ತೆಯಾಗಿಲ್ಲ. ವಿಶೇಷವಾಗಿ 13ರಿಂದ 17 ವರ್ಷದ ಹದಿಹರೆಯದ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗುತ್ತಿರುವುದು ಅತೀವ ಆತಂಕಕಾರಿಯಾಗಿದೆ.

4,864 ಗಂಡುಮಕ್ಕಳ ನಾಪತ್ತೆ ಪ್ರಕರಣದಲ್ಲಿ 1,086 ಮಂದಿ ಇನ್ನೂ ಪತ್ತೆಯಾಗಬೇಕಿದೆ. ಇದು ಮಕ್ಕಳ ಸಾಗಾಣಿಕೆ ಅಥವಾ ಬಾಲಕಾರ್ಮಿಕ ಪದ್ಧತಿಯ ಕರಾಳ ಮುಖವನ್ನು ತೋರಿಸುತ್ತಿರಬಹುದು. ಕಳೆದ ವರ್ಷ 1,064 ಗಂಡುಮಕ್ಕಳು ನಾಪತ್ತೆಯಾಗಿದ್ದರೆ, 2,481 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. 13ರಿಂದ 17 ವರ್ಷದ ಹರೆಯದ ಹೆಣ್ಣುಮಕ್ಕಳು ಹೆಚ್ಚಾಗಿ ನಾಪತ್ತೆಯಾಗುತ್ತಿರುವುದು ಅತೀವ ಕಳವಳಕಾರಿ ಸಂಗತಿಯಾಗಿದೆ. ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಂಡುಮಕ್ಕಳಿಗಿಂತ ಎರಡು ಪಟ್ಟು ಹೆಚ್ಚಿದೆ.

ಒಟ್ಟು 38,073 ಪುರುಷರು ನಾಪತ್ತೆಯಾಗಿದ್ದು, ಇದರಲ್ಲಿ 6,470 ಮಂದಿ ಇನ್ನೂ ಪತ್ತೆಯಾಗಿಲ್ಲ. ಪತ್ತೆಯಾಗದವರ ಶೇಕಡಾವಾರು ಪ್ರಮಾಣವನ್ನು ನೋಡಿದರೆ ಪುರುಷರ ಪ್ರಕರಣಗಳಲ್ಲಿ ಪೊಲೀಸರ ಯಶಸ್ಸಿನ ದರ ಮಹಿಳೆಯರಿಗಿಂತ ಕಡಿಮೆ ಇರುವುದು ಕಂಡುಬರುತ್ತದೆ. ಮಹಿಳೆಯರ ನಾಪತ್ತೆ ಪ್ರಕರಣಗಳು ಪುರುಷರಿಗಿಂತ ಎರಡುಪಟ್ಟುಗಿಂತ ಹೆಚ್ಚಾಗಿರುವುದು ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಸೃಷ್ಟಿಯಾಗುವಂತೆ ಮಾಡಿದೆ.

ಮಹಿಳೆಯರಿಗಿಂತ ಪುರುಷರ ನಾಪತ್ತೆ ಪ್ರಕರಣಗಳು ಕಡಿಮೆ

2020ರಲ್ಲಿ 4,273 ಪುರುಷರು ನಾಪತ್ತೆಯಾಗಿದ್ದರೆ, ಈ ಸಂಖ್ಯೆಯು 2025ರ ವೇಳೆಗೆ ವೇಳೆಗೆ 6,892 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 5,371 ಮಂದಿ ಪತ್ತೆಯಾಗಿದ್ದಾರೆ. ಪುರುಷರಿಗಿಂತ ಮಹಿಳೆಯರ ನಾಪತ್ತೆ ಪ್ರಕರಣಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿವೆ. 2020ರಲ್ಲಿ 8,948 ಇದ್ದ ಪ್ರಕರಣಗಳು 14,272ಕ್ಕೆ ತಲುಪಿವೆ. ಕಳೆದ ಐದು ವರ್ಷಗಳಲ್ಲಿ ಒಟ್ಟು 71,699 ಮಹಿಳೆಯರು ನಾಪತ್ತೆಯಾಗಿದ್ದು, ಅದರಲ್ಲಿ 68,718 ಮಂದಿಯನ್ನು ಪತ್ತೆಹಚ್ಚಲಾಗಿದೆ. ಸುಮಾರು 2,981 ಮಹಿಳೆಯರು ಇನ್ನೂ ಪತ್ತೆಯಾಗದೆ ಉಳಿದಿರುವುದು ತನಿಖಾ ಸಂಸ್ಥೆಗಳ ಮುಂದಿರುವ ದೊಡ್ಡ ಸವಾಲಾಗಿದೆ.

ಹೈಕೋರ್ಟ್‌ ಅಸಮಾಧಾನ

ಹೈಕೋರ್ಟ್‌ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರವು ರೂಪಿಸಿರುವ ರಕ್ಷಣಾ ವ್ಯವಸ್ಥೆಗಳು ಕೇವಲ ಕಾಗದದ ಮೇಲೆ ಉಳಿದಿವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ನಾಪತ್ತೆಯಾದವರನ್ನು ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಮತ್ತು ತನಿಖಾ ಸಂಸ್ಥೆಗಳ ವೈಫಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗೆ ನ್ಯಾ. ಸೂರಜ್ ಗೋವಿಂದರಾಜ್ ಪೀಠವು ವಿಚಾರಣೆ ನಡೆಸಿದಾಗ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದೆ. ಸರ್ಕಾರವು ಜಿಲ್ಲಾ ನಾಪತ್ತೆ ವ್ಯಕ್ತಿಗಳ ಘಟಕ ಹಾಗೂ ತಂಡಗಳನ್ನು ರಚಿಸಿರುವುದಾಗಿ ಹೇಳುತ್ತದೆ. ಆದರೆ, ಇವುಗಳ ಕಾರ್ಯಕ್ಷಮತೆ ಎಷ್ಟಿದೆ? ಇವುಗಳು ಕೇವಲ ಸರ್ಕಾರಿ ಆದೇಶಗಳಲ್ಲಿ ಮಾತ್ರ ಇವೆಯೇ? ಅಥವಾ ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿವೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ. ಎಷ್ಟರ ಮಟ್ಟಿಗೆ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಸರ್ಕಾರದ ಬಳಿ ಸ್ಪಷ್ಟ ಉತ್ತರ ಇಲ್ಲವಾಗಿದೆ.

ನಾಪತ್ತೆಯಾದವರ ಕುಟುಂಬಗಳಿಗೆ ತಮ್ಮವರ ಬಗ್ಗೆ ದೀರ್ಘಕಾಲದವರೆಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ತನಿಖೆಯ ಪ್ರಗತಿ ಬಗ್ಗೆ ಕುಟುಂಬಗಳಿಗೆ ಮಾಹಿತಿ ನೀಡುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಇದು ವ್ಯವಸ್ಥೆಯ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ. ನಾಪತ್ತೆ ಪ್ರಕರಣ ದಾಖಲಾದ ತಕ್ಷಣ ಅನುಸರಿಸಬೇಕಾದ ಕಾರ್ಯಾಚರಣಾ ವಿಧಾನ ಬಗ್ಗೆ ನ್ಯಾಯಾಲಯ ಮಾಹಿತಿ ಕೇಳಿದೆ.

ಇದಲ್ಲದೇ, ಎಲ್ಲಾ ಜಿಲ್ಲೆಗಳಲ್ಲಿಜಿಲ್ಲಾ ನಾಪತ್ತೆ ವ್ಯಕ್ತಿಗಳ ಘಟಕಗಳು ಸ್ಥಾಪಿಸಲ್ಪಟ್ಟಿವೆಯೇ? ಈ ಘಟಕಗಳ ಉಸ್ತುವಾರಿ ಸಮಿತಿಗಳ ಸಭೆಗಳು ಎಷ್ಟು ಬಾರಿ ನಡೆಯುತ್ತವೆ? ಅಂತಾರಾಜ್ಯ ತನಿಖೆಗಾಗಿ ಇರುವ ಸಮನ್ವಯ ವ್ಯವಸ್ಥೆ ಯಾವುದು? ಪೊಲೀಸರು ಮತ್ತು ಸಾರ್ವಜನಿಕರಿಗೆ ಲಭ್ಯವಿರುವ ಸಮಗ್ರ ಡಿಜಿಟಲ್ ಪೋರ್ಟಲ್‌ನ ಸ್ಥಿತಿಗತಿ ಏನು? ಎಂಬುದರ ಕುರಿತು ಸಹ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೇಳಿದೆ.

ಸರ್ಕಾರದ ಸಮರ್ಥನೆ

ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. "ಜ.21 ರಂದು ಹೊರಡಿಸಲಾದ ಸುತ್ತೋಲೆಯಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಘಟಕ ಮತ್ತು ನಾಪತ್ತೆ ವ್ಯಕ್ತಿಗಳ ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಮಾನವ ಸಾಗಾಣಿಕೆ ವಿರೋಧಿ ಘಟಕಗಳ ಮೂಲಕ ತನಿಖೆ ತೀವ್ರಗೊಳಿಸಲು ಸೂಚಿಸಲಾಗಿದೆ. ನಾಪತ್ತೆಯಾದವರ ಭಾವಚಿತ್ರಗಳು ಮತ್ತು ತನಿಖೆಯ ಹಂತಗಳನ್ನು ಪತ್ತೆಹಚ್ಚಲು ಡಿಜಿಟಲ್ ಪೋರ್ಟಲ್ ಮತ್ತು ದತ್ತಾಂಶ ಸಿದ್ಧಪಡಿಸಲಾಗುತ್ತಿದೆ," ಎಂದು ತಿಳಿಸಿದ್ದಾರೆ.

ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳು

ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಎಐ ಬಳಸಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳನ್ನು ದತ್ತಾಂಶಕ್ಕೆ ಜೋಡಿಸಬೇಕು. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಾನವ ಸಾಗಾಣಿಕೆ ಮತ್ತು ಸಾಮಾಜಿಕ ಜಾಲತಾಣಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ನಾಪತ್ತೆ ದೂರು ದಾಖಲಾದ ಮೊದಲ 24 ಗಂಟೆಗಳು ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ತನಿಖೆ ನಡೆಸಲು ವಿಶೇಷ ಕ್ಷಿಪ್ರ ಪಡೆಗಳನ್ನು ರಚಿಸಬೇಕು. ಪ್ರತಿಯೊಂದು ಠಾಣೆಯಲ್ಲೂ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಸಹಾಯವಾಣಿ ಅಥವಾ ಡಿಜಿಟಲ್ ಡ್ಯಾಶ್‌ಬೋರ್ಡ್ ಇರಬೇಕು. ಅಲ್ಲಿ ಕುಟುಂಬಸ್ಥರು ತನಿಖೆಯ ಹಂತವನ್ನು ಗಮನಿಸಬಹುದು ಎಂದು ಹೇಳಲಾಗಿದೆ.

ರಾಜ್ಯಾದ್ಯಂತ ನಾಪತ್ತೆಯಾದವರ ವಿವರಗಳು, ಭಾವಚಿತ್ರಗಳು ಮತ್ತು ತನಿಖೆಯ ಹಂತಗಳನ್ನು ತೋರಿಸುವ ಏಕೀಕೃತ ಡಿಜಿಟಲ್ ಪೋರ್ಟಲ್ ಅನ್ನು ಪೊಲೀಸರು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ನಾಪತ್ತೆ ಪ್ರಕರಣಗಳು ಹೆಚ್ಚಾಗಿ ರಾಜ್ಯದ ಗಡಿ ದಾಟುವುದರಿಂದ, ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಲು ಪ್ರತ್ಯೇಕ ವ್ಯವಸ್ಥೆ ಬೇಕು. ಶಾಲಾ-ಕಾಲೇಜುಗಳಲ್ಲಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾನವ ಸಾಗಾಣಿಕೆಯ ಬಗ್ಗೆ ಮತ್ತು ಅಪರಿಚಿತರ ಬಗ್ಗೆ ಎಚ್ಚರದಿಂದಿರುವಂತೆ ಜಾಗೃತಿ ಮೂಡಿಸಬೇಕು.

ಗ್ರಾಮ ಪಂಚಾಯಿತಿಯಲ್ಲಿ ಕಾವಲು ಸಮಿತಿ ರಚನೆ

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ.ಕೆ.ಟಿ., "ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚನೆ ಮಾಡಬೇಕು. ನಿಯಮಿತವಾಗಿ ಸಭೆ ನಡೆಸಿ, ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು," ಎಂದರು.

"ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ವೇಳೆ ಆಯಾ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಸ್ಥಿತಿಗತಿಗಳ ಅಂಶಗಳನ್ನು ಸಂಗ್ರಹಿಸಿ ಕ್ರಿಯಾ ಯೋಜನೆಯನ್ನು ರೂಪಿಸಬೇಕು. ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳಲ್ಲಿ ಮಕ್ಕಳ ಅಪಹರಣ ಮತ್ತು ಮಕ್ಕಳ ನಾಪತ್ತೆ ಕುರಿತು ಮಕ್ಕಳಿಗೆ ಆರಿವು ಮೂಡಿಸಬೇಕು," ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Read More
Next Story