ತನ್ನ ಬಾಲ್ಯ ವಿವಾಹ ವಿರೋಧಿಸಿ ಹೋರಾಡಿದ ಬಾಲಕಿಗೆ ಶೌರ್ಯ ಪ್ರಶಸ್ತಿ ನೀಡಲು ಮನವಿ
x

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ 

ತನ್ನ ಬಾಲ್ಯ ವಿವಾಹ ವಿರೋಧಿಸಿ ಹೋರಾಡಿದ ಬಾಲಕಿಗೆ ಶೌರ್ಯ ಪ್ರಶಸ್ತಿ ನೀಡಲು ಮನವಿ

ಬಾಲ್ಯ ವಿವಾಹ ಕಪಿಮುಷ್ಟಿಯಿಂದ ಮುಕ್ತವಾಗಿರುವ ಘಟನೆಯು ಸಾಮಾಜಿಕ ಜಾಗೃತಿಗೆ ಮಾದರಿಯಾಗಿದೆ. ಈ ಬಾಲಕಿಯ ಶೌರ್ಯವು ಸಾವಿರಾರು ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳನ್ನು ಅರಿತು ಹೋರಾಡಲು ದಾರಿ ದೀಪವಾಗಿದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ. ರಾವ್‌ ತಿಳಿಸಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ತನ್ನ ಬಾಲ್ಯ ವಿವಾಹ ವಿರೋಧಿಸಿ ಧೈರ್ಯದಿಂದ ಹೋರಾಡಿದ ಅಪ್ರಾಪ್ತ ಬಾಲಕಿಗೆ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಹ ಜಿ. ರಾವ್ ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ ಗೃಹ ಸಚಿವರಿಗೆ ಪತ್ರ ಬರೆದಿರುವ ನಾಗಸಿಂಹ ಜಿ. ರಾವ್, ಬಾಲ್ಯ ವಿವಾಹದ ಕಪಿಮುಷ್ಟಿಯಿಂದ ಮುಕ್ತವಾಗಿರುವ ಈ ಘಟನೆಯು ಜಾಗೃತಿ ಮೂಡಿಸಲು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಾಲಕಿಯ ಶೌರ್ಯವು ಸಾವಿರಾರು ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳನ್ನು ಅರಿತು ಹೋರಾಡಲು ದಾರಿ ದೀಪವಾಗಿದ್ದು, ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬಾಲಕಿಗೆ ಸನ್ಮಾನ ಮತ್ತು ಆರ್ಥಿಕ ನೆರವಿಗೆ ಒತ್ತಾಯ

ಬಾಲಕಿಯ ಧೈರ್ಯ ಮತ್ತು ಸ್ವಾಭಿಮಾನವು ರಾಜ್ಯದ ಎಲ್ಲಾ ಬಾಲಕಿಯರಿಗೆ ಸ್ಪೂರ್ತಿಯಾಗಿದೆ. ರಾಜ್ಯ ಸರ್ಕಾರ ಆಕೆಯನ್ನು ಸನ್ಮಾನಿಸುವುದರಿಂದ ಇತರರಿಗೆ ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಲು ಪ್ರೇರಣೆ ನೀಡುತ್ತದೆ. ಅಲ್ಲದೆ, ಆಕೆಯ ಶೈಕ್ಷಣಿಕ ಮತ್ತು ಭವಿಷ್ಯದ ಗುರಿಗಳನ್ನು ಬೆಂಬಲಿಸಲು ಸರ್ಕಾರ ಆರ್ಥಿಕ ಸಹಾಯ ಒದಗಿಸಬೇಕು. ವಿದ್ಯಾರ್ಥಿವೇತನ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಅಗತ್ಯ

ಈ ಘಟನೆಯು ಬಾಲ್ಯ ವಿವಾಹದ ವಿರುದ್ಧ ಸಮಾಜದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹದ ಕಾನೂನುಗಳು ಮತ್ತು ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ನಾಗಸಿಂಹ ಜಿ. ರಾವ್ ಹೇಳಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಶಾಲೆಗಳು, ದೇವಸ್ಥಾನಗಳು ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಘಟನೆಯಲ್ಲಿ ಭಾಗಿಯಾದ ಪೋಷಕರು ಮತ್ತು ಸಂಬಂಧಿಕರ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದು ಇತರರಿಗೆ ಎಚ್ಚರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ಈ ಬಾಲಕಿಯ ಶಿಕ್ಷಣ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಏಳಿಗೆಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ಬೆಂಬಲ ಒದಗಿಸಬೇಕು ಎಂದು ಪತ್ರದಲ್ಲಿ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

Read More
Next Story