
No To Child Pregnancy Part -5| ಹೆಣ್ಣು ಮಕ್ಕಳಿಗಷ್ಟೇ ಅಲ್ಲ, ಗಂಡು ಮಕ್ಕಳಿಗೂ ಬೇಕಿದೆ ಲೈಂಗಿಕ ಶಿಕ್ಷಣ
ರಾಜ್ಯದಲ್ಲಿ ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಆಟವಾಡಿ, ಕಲಿಯಬೇಕಾದ ವಯಸ್ಸಿನಲ್ಲಿ ಹೆಣ್ಣುಮಕ್ಕಳು ತಾಯ್ತನದ ಭಾರ ಹೊರುತ್ತಿರುವುದು ಸಮಾಜದ ದೊಡ್ಡ ದುರಂತವಾಗಿದೆ. ಈ ಬಗ್ಗೆ ದ ಫೆಡರಲ್ ಕರ್ನಾಟಕ ಸರಣಿ ವರದಿಯನ್ನು ಪ್ರಕಟಿಸುತ್ತಿದ್ದು ಅದರ 5ನೇ ಕಂತು ಇಲ್ಲಿದೆ.
ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲೈಂಗಿಕ ಶಿಕ್ಷಣದ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಈ ಚರ್ಚೆಯು ಕೇವಲ ಹೆಣ್ಣುಮಕ್ಕಳನ್ನು ಕೇಂದ್ರವಾಗಿಟ್ಟುಕೊಳ್ಳದೆ, ಗಂಡು ಮಕ್ಕಳಿಗೂ ಲೈಂಗಿಕ ಶಿಕ್ಷಣ ನೀಡುವ ಅನಿವಾರ್ಯತೆಯ ಬಗ್ಗೆ ಚರ್ಚೆ ನಡೆಯುವಂತೆ ಆಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಸುಲಭವಾಗಿ ಲಭ್ಯವಾಗುತ್ತಿರುವ ಅರೆಬರೆ ಮತ್ತು ತಪ್ಪಾದ ಮಾಹಿತಿಯಿಂದ ಅವರನ್ನು ರಕ್ಷಿಸಲು, ಗಂಡು ಮಕ್ಕಳಿಗೆ ಬಾಲ್ಯದಿಂದಲೇ ಮಹಿಳೆಯರ ಬಗ್ಗೆ ಗೌರವ, ಜವಾಬ್ದಾರಿ ಮತ್ತು ಶಿಸ್ತನ್ನು ಕಲಿಸುವುದು ಅತ್ಯಗತ್ಯವಾಗಿದೆ. ತಜ್ಞರ ಪ್ರಕಾರ, ಗಂಡು ಮಕ್ಕಳಿಗೆ ನೀಡುವ ಸರಿಯಾದ ಲೈಂಗಿಕ ಶಿಕ್ಷಣವು, ಅವರಲ್ಲಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅಸಭ್ಯ ವರ್ತನೆ, ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದಂತಹ ಅಪರಾಧಗಳನ್ನು ತಡೆಯಲು ಸಹಕಾರಿಯಾಗುತ್ತದೆ.
ಭಾರತದಲ್ಲಿ ಮೂಲಭೂತವಾಗಿ ಭಕ್ತಿ, ನಂಬಿಕೆ, ಮೌಡ್ಯ, ಭಯ, ಮಡಿವಂತಿಕೆಯ ಆಧಾರದ ಮೇಲೆಯೇ ಇಲ್ಲಿನ ಸಮಾಜ ರೂಪಗೊಂಡಿದೆ. ಜನರ ಮಾನಸಿಕ ಸ್ಥಿತಿಯೂ ಬಹುತೇಕ ಅದಕ್ಕೆ ಅನುಗುಣವಾಗಿಯೇ ಕೆಲಸ ಮಾಡುತ್ತದೆ. ಆದರೆ ಇತ್ತೀಚಿನ ತಂತ್ರಜ್ಞಾನದ ಯುಗದಲ್ಲಿ ಯಾವುದೇ ಇತಿಮಿತಿ ಇಲ್ಲದೆ ಎಲ್ಲಾ ಮಾಹಿತಿಯು ಎಲ್ಲರಿಗೂ ಲಿಂಗ ಭೇದವಿಲ್ಲದೆ, ವಯೋಮಾನದ ಭೇದವಿಲ್ಲದೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಚರ್ಚೆ ಆರಂಭವಾಗಿದೆ.
ಗಂಡು ಮಕ್ಕಳಿಗೂ ಲೈಂಗಿಕ ಶಿಕ್ಷಣ ಅಗತ್ಯ
ಪಾಶ್ಚಾತ್ಯ ದೇಶಗಳು ಲೈಂಗಿಕ ಶಿಕ್ಷಣವನ್ನು ನೋಡುವ ರೀತಿಗೂ ಭಾರತಕ್ಕೂ ವ್ಯತ್ಯಾಸವಿದೆ. ನಮ್ಮ ಸಮಾಜದಲ್ಲಿ ಲೈಂಗಿಕತೆಯ ಬಗ್ಗೆ ಈಗಲೂ ಸಾಕಷ್ಟು ಮಡಿವಂತಿಕೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಲೈಂಗಿಕ ದೃಶ್ಯಗಳು ಸಾಮಾನ್ಯವಾಗಿವೆ. ಇವು ಹದಿಹರೆಯದ ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀರುತ್ತಿರುವುದರಿಂದ, ಅವರಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ.
ಹದಿಹರೆಯದಲ್ಲಿ ಮಕ್ಕಳ ದೇಹ ಮತ್ತು ಮನಸ್ಸಿನಲ್ಲಿ ತೀವ್ರವಾದ ಬದಲಾವಣೆಗಳು ಉಂಟಾಗುತ್ತವೆ. ಈ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದರೆ, ತಜ್ಞರ ಪ್ರಕಾರ, ಹದಿಹರೆಯದ ಗಂಡು ಮಕ್ಕಳಿಗೂ ಸಮಾನವಾಗಿ ಲೈಂಗಿಕ ಶಿಕ್ಷಣ ನೀಡುವುದು ಅಷ್ಟೇ ಮುಖ್ಯವಾಗಿದೆ.
ಗಂಡು ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ನೀಡುವುದರಿಂದ, ಅವರಲ್ಲಿ ಮಹಿಳೆಯರ ಬಗ್ಗೆ ಗೌರವ, ಜವಾಬ್ದಾರಿ ಮತ್ತು ಶಿಸ್ತಿನ ಮನೋಭಾವ ಬೆಳೆಯುತ್ತದೆ. ಇದು ಅವರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅಸಭ್ಯ ವರ್ತನೆ, ಕಿರುಕುಳ ಮತ್ತು ಹಿಂಸೆಯಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಲೈಂಗಿಕ ಶಿಕ್ಷಣ ಉದ್ದೇಶ
ಈ ಬಗ್ಗೆ ʻದ ಫೆರಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ ಕೋಸಂಬೆ, ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ನೆಟ್ ಮೂಲಕ ತಪ್ಪಾದ ಅಥವಾ ಅಶ್ಲೀಲ ಮಾಹಿತಿಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಇದರಿಂದ ತಪ್ಪಿಸಲು ಸರಿಯಾದ ಮಾಹಿತಿ ನೀಡುವುದು ಲೈಂಗಿಕ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಲೈಂಗಿಕ ಆರೋಗ್ಯ, ಸ್ವಚ್ಛತೆ ಮತ್ತು ಲೈಂಗಿಕ ರೋಗಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ರಕ್ಷಣೆ ನೀತಿ
2016ರಲ್ಲಿ ದೇಶದಲ್ಲಿ ಪರಿಚಯಿಸಲಾದ ಮಕ್ಕಳ ರಕ್ಷಣೆ ನೀತಿ ಪ್ರಕಾರ ಪ್ರತಿಯೊಂದು ಶಾಲೆಯಲ್ಲೂ ಸಮಿತಿಗಳು, ಮಕ್ಕಳ ಹಕ್ಕುಗಳ ಕ್ಲಬ್‌ಗಳು ಹಾಗೂ ಸಲಹಾ ಪಟ್ಟಿಗಳು ಇರಬೇಕು. ಆದರೆ ಇಂದು ಅನೇಕ ಶಾಲೆಗಳಲ್ಲಿ ಈ ನಿಯಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗುತ್ತಿಲ್ಲ. ಕಾಲಕಾಲಕ್ಕೆ ಸಭೆಗಳು ನಡೆಸಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಶಾಲೆಗಳ ಮೇಲಿದ್ದು, ಅದನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಅವರು ʼದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದರು.
ಮನೆಯಿಂದಲೇ ಪಾಠ
ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಕೇವಲ ಶಾಲೆಯ ಜವಾಬ್ದಾರಿಯಲ್ಲ, ಅದರ ಮೊದಲ ಪಾಠ ಮನೆಯಿಂದಲೇ ಆರಂಭವಾಗಬೇಕು. ಪೋಷಕರು ತಮ್ಮ ಮಕ್ಕಳೊಂದಿಗೆ ಆಪ್ತವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಮನೆಯ ಸ್ನೇಹಮಯಿ ವಾತಾವರಣದಲ್ಲೇ ಅವರಿಗೆ ತಿಳಿಸಿಕೊಡಬೇಕು. ಸಮಾಜದಲ್ಲಿ ಯಾವ ಮೌಲ್ಯಗಳಿಗೆ ಆದ್ಯತೆ ನೀಡಬೇಕು ಮತ್ತು ಯಾವ ವಿಷಯಗಳಿಂದ ದೂರವಿರಬೇಕು ಎಂಬುದನ್ನು ಪೋಷಕರು ಸ್ಪಷ್ಟವಾಗಿ ಹೇಳಿಕೊಡಬೇಕು. ಈ ಬೋಧನೆಯು ಕೇವಲ ಹೆಣ್ಣುಮಕ್ಕಳಿಗೆ ಸೀಮಿತವಾಗಬಾರದು. ಬದಲಿಗೆ, ಗಂಡುಮಕ್ಕಳಿಗೂ ಸಮಾನವಾಗಿ ಈ ತಿಳುವಳಿಕೆಯನ್ನು ನೀಡಬೇಕು. ಆಗ ಮಾತ್ರ ಅವರು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
ಸಮಾಜದ ಜವಾಬ್ದಾರಿಯೇನು?
ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಬಾಲ ಗರ್ಭಿಣಿಯರ ಪ್ರಕರಣಗಳಲ್ಲಿ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಗಳಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರ ಪಾತ್ರಕ್ಕಿಂತ ಹೆಚ್ಚಾಗಿ, ವಯಸ್ಕರು, ನೆರೆಹೊರೆಯವರು, ಸಂಬಂಧಿಕರು, ಮತ್ತು ಕೆಲವೊಮ್ಮೆ ಶಾಲಾ ಶಿಕ್ಷಕರೇ ಭಾಗಿಯಾಗಿರುವುದು ಕಂಡುಬಂದಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಬೇಕಾದರೆ, ಸಮಾಜದ ಪ್ರತಿಯೊಬ್ಬರೂ ತಮ್ಮ ಮುಜುಗರವನ್ನು ಬದಿಗಿಟ್ಟು, ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಮತ್ತು ಮಕ್ಕಳಿಗೆ ಸರಿಯಾದ ಅರಿವು ಮೂಡಿಸಬೇಕು ಎಂದು ಶಶಿಧರ ಕೋಸಂಬೆ ಅವರು ಅಭಿಪ್ರಾಯಪಡುತ್ತಾರೆ.
ಇಂತಹ ಘಟನೆಗಳು ನಡೆದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ, ಅವು ಮರುಕಳಿಸದಂತೆ ತಡೆಯುವುದು ಮುಖ್ಯ. ಇದಕ್ಕಾಗಿ, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜವು ಜಂಟಿಯಾಗಿ ಕಾರ್ಯನಿರ್ವಹಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಲೈಂಗಿಕ ಶಿಕ್ಷಣವನ್ನು ಕೇವಲ ಒಂದು ವಿಷಯವಾಗಿ ನೋಡದೆ, ಅದನ್ನು ಜೀವನದ ಒಂದು ಪ್ರಮುಖ ಪಾಠವಾಗಿ ಮಕ್ಕಳಿಗೆ ತಿಳಿಸಿಕೊಡಬೇಕು. ಇಲ್ಲವಾದಲ್ಲಿ, ಇಂತಹ ಅಹಿತಕರ ಘಟನೆಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.