No To Child Pregnancy Part-4 | ಅಪ್ರಾಪ್ತೆಯರ ಗರ್ಭಧಾರಣೆ; ಹದಿಹರೆಯದ ಪ್ರೀತಿ–ಪ್ರೇಮ, ಆಕರ್ಷಣೆ ಕಾರಣವೇ?
x

No To Child Pregnancy Part-4 | ಅಪ್ರಾಪ್ತೆಯರ ಗರ್ಭಧಾರಣೆ; ಹದಿಹರೆಯದ ಪ್ರೀತಿ–ಪ್ರೇಮ, ಆಕರ್ಷಣೆ ಕಾರಣವೇ?

ಹದಿಹರೆಯದಲ್ಲಿ ಉಂಟಾಗುವ ಕೌತುಕ, ಕಾಮವಾಂಛೆಯಿಂದ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅಪ್ರಾಪ್ತ ವಯಸ್ಕ ಮಕ್ಕಳನ್ನು ಗರ್ಭಧಾರಣೆಗೆ ದಾರಿ ನೂಕುತ್ತಿವೆ.


Click the Play button to hear this message in audio format

ರಾಜ್ಯದಲ್ಲಿ ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಆಟವಾಡಿ, ಕಲಿಯಬೇಕಾದ ವಯಸ್ಸಿನಲ್ಲಿ ಹೆಣ್ಣುಮಕ್ಕಳು ತಾಯ್ತನದ ಭಾರ ಹೊರುತ್ತಿರುವುದು ಸಮಾಜದ ದೊಡ್ಡ ದುರಂತವಾಗಿದೆ.

ಹೆಚ್ಚಿನ ಪ್ರಕರಣಗಳಲ್ಲಿ, ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಹದಿಹರೆಯದ ಆಕರ್ಷಣೆ ಮತ್ತು ಪ್ರೀತಿಯ ಹೆಸರಿನಲ್ಲಿ ನಡೆಯುವ ಶೋಷಣೆಗಳೇ ಈ ದುರಂತಕ್ಕೆ ಕಾರಣವಾಗುತ್ತಿವೆ. ಅರಿವಿದ್ದೋ, ಅರಿವಿಲ್ಲದೆಯೋ ಲೈಂಗಿಕ ಜಾಲಕ್ಕೆ ಸಿಲುಕುವ ಈ ಮಕ್ಕಳು, ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾರೆ.

ಈ ಸಮಸ್ಯೆ ಕೇವಲ ವೈಯಕ್ತಿಕ ಅಥವಾ ಕೌಟುಂಬಿಕ ಮಟ್ಟದಲ್ಲಿ ಉಳಿದಿಲ್ಲ. ಇದು ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಗಂಭೀರ ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಈ ಪಿಡುಗನ್ನು ತಡೆಗಟ್ಟಲು ಕಠಿಣ ಕಾನೂನು ಕ್ರಮಗಳ ಜೊತೆಗೆ, ಪೋಷಕರು ಮತ್ತು ಸಮಾಜದಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಅಪ್ರಾಪ್ತರ ಗರ್ಭಧಾರಣೆಗೆ ಕಾರಣಗಳೇನು?

ಲೈಂಗಿಕ ಶಿಕ್ಷಣದ ಕೊರತೆ ಮತ್ತು ಹದಿಹರೆಯದವರಿಗೆ ಲೈಂಗಿಕ ಆರೋಗ್ಯದ ಬಗ್ಗೆ ಸರಿಯಾದ ಶಿಕ್ಷಣ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.

ಅಪ್ರಾಪ್ತ ಮಕ್ಕಳಲ್ಲಿ ಲೈಂಗಿಕ ಹಾಗೂ ಅವುಗಳಿಂದ ಉಂಟಾಗುವ ಸಮಸ್ಯೆಗಳ ಕುರಿತು ಮಕ್ಕಳಿಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಹದಿಹರೆಯದಲ್ಲಿ ಉಂಟಾಗುವ ಕೌತುಕ, ಕಾಮವಾಂಛೆ ಅಪ್ರಾಪ್ತೆಯರನ್ನು ಗರ್ಭಧಾರಣೆಗೆ ದೂಡುತ್ತಿದೆ ಎಂದು ರೈನ್‌ ಬೋ ಫೌಂಡೇಷನ್ ಇಂಡಿಯಾ ಕಾರ್ಯಕ್ರಮ ಸಂಯೋಜಕಿ ಡಾ. ಮಂಜುಳಾ ಉಳ್ಳಾಲ ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕುಟುಂಬದ ಒಳಗೂ, ಹೊರಗೂ ನಡೆಯುವ ಲೈಂಗಿಕ ದೌರ್ಜನ್ಯಗಳು ಮಕ್ಕಳನ್ನು ಬಲಿಪಶುವನ್ನಾಗಿ ಮಾಡುತ್ತಿವೆ. ವಸತಿ ಶಾಲೆಗಳಲ್ಲಿ ವಾಸಿಸುವ ವಿದ್ಯಾರ್ಥಿನಿಯರಿಗೂ ಸೂಕ್ತ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಇಲ್ಲದಿರುವುದು ಕೂಡ ಸಮಸ್ಯೆಯಾಗಿದೆ. ಕೊಳೆಗೇರಿ ಪ್ರದೇಶಗಳಿಂದ ಬಂದಿರುವವರು, ಕಡುಬಡತನ ಹಾಗೂ ಏಕ ಪೋಷಕರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸುತ್ತಾರೆ. ಅಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಹೆಣ್ಣು ಮಕ್ಕಳಿಗೆ ಸರಿಯಾಗಿ ಋತುಸ್ರಾವ ಆಗುತ್ತಿದೆಯೇ ಇಲ್ಲವೇ ಎಂದು ಪರಿಶೀಲಿಸಬೇಕಾಗುತ್ತದೆ.

ನಿಯಮಿತವಾಗಿ ಋತುಸ್ರಾವ ಆಗುತ್ತಿಲ್ಲ ಎಂದಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆ ಇರಬೇಕು. ಏನು ಸಮಸ್ಯೆ ಎಂದು ಕಂಡುಹಿಡಿಯಬೇಕು. ಆದರೆ, ಕೆಲವೊಂದು ವಸತಿ ಶಾಲೆಗಳಲ್ಲಿ ಪಿರಿಯಡ್ಸ್ ಟ್ರ್ಯಾಕಿಂಗ್ ಅಥವಾ ನಿಯಮಿತ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ. ಹೆಚ್ಚಿನ ಹಾಸ್ಟೆಲ್‌ಗಳಲ್ಲಿ ಇಂಥ ನಿಯಮ ಪಾಲನೆ ಆಗುತ್ತಿಲ್ಲ. ವಾರ್ಡನ್‌ಗಳ ನಿರ್ಲಕ್ಷದಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತಿವೆ ಎನ್ನುತ್ತಾರೆ ಡಾ.ಮಂಜುಳಾ.

ಸರ್ಕಾರ ಜಾಗೃತಿ ಮೂಡಿಸುತ್ತಿದ್ದರೂ, ಮಾಹಿತಿ ಕೊರತೆ

ಅಪ್ರಾಪ್ತ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಇವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಜಾಗೃತಿ ತರಬೇತಿಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್‌ಗಳ ಸರಿಯಾದ ಬಳಕೆ, ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೂ ಮಕ್ಕಳು ಸ್ವಾಭಾವಿಕವಾಗಿ ಎಕ್ಸ್‌ಪ್ಲೋರ್ ಮಾಡುವ ಹಂತದಲ್ಲಿ ಇರುವುದರಿಂದ ಪೋಷಕರು, ಶಿಕ್ಷಕರು ಮತ್ತು ವಾರ್ಡನ್‌ಗಳು ಹೆಚ್ಚಿನ ಗಮನ ಹರಿಸಬೇಕು.

ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ಮಾಹಿತಿ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಅವರು ಧೈರ್ಯವಾಗಿ ಪೋಷಕರಿಗೆ ವಿಷಯ ತಿಳಿಸಲು ಪ್ರೋತ್ಸಾಹ ನೀಡಬೇಕು. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಇಲ್ಲವಾದರೆ ಬಾಲ ಗರ್ಭಿಣಿಯರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಡಾ. ಮಂಜುಳಾ ಉಳ್ಳಾಲ ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯ ಸರ್ಕಾರ ಮಕ್ಕಳಲ್ಲಿ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವ ನಿಟ್ಟಿನಲ್ಲಿ 'ಅಕ್ಕ ಫೋರ್ಸ್' ಎಂಬ ಮಹಿಳಾ ಪೊಲೀಸ್ ದಳ ಸೇರಿದಂತೆ ಶಾಲೆಗಳಲ್ಲಿ ಕೌನ್ಸೆಲಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೂ ಈ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ಅಪ್ರಾಪ್ತ ಬಾಲಕಿಯ ಗರ್ಭಧಾರಣೆ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ.

ಲೈಂಗಿಕ ಶಿಕ್ಷಣದ ಅರಿವು ಮೂಡಿಸುವುದು ಅತ್ಯಗತ್ಯ

ಮಕ್ಕಳು ಹದಿಹರೆಯಕ್ಕೆ ಕಾಲಿಡುವಾಗ ದೇಹದಲ್ಲಿ ಸಾಕಷ್ಟು ದೈಹಿಕ ಬದಲಾವಣೆಗಳಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಮಾನಸಿಕ ಪರಿವರ್ತನೆಗಳು, ಲೈಂಗಿಕ ಆಕರ್ಷಣೆ, ಲೈಂಗಿಕ ಶೋಷಣೆ, ಹಾರ್ಮೋನುಗಳ ಪ್ರಭಾವ, ಸುರಕ್ಷತೆ, ಗರ್ಭಧಾರಣೆ, ಫಲಿತಾಂಶಗಳು, ತಡೆಗಟ್ಟುವ ವಿಧಾನ, ಮುಂದಾಲೋಚನೆ, ಗುಡ್ ಮತ್ತು ಬ್ಯಾಡ್ ಟಚ್ ಬಗ್ಗೆ ಶಾಲೆಗಳಲ್ಲಿ ಹಾಗೂ ಮನೆಯಲ್ಲೇ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು.

ಇದಲ್ಲದೆ ಕೆಲವು ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವಿರುವುದಿಲ್ಲ. ಬಾಲಕಿಯರಿಗೂ ಮಾಸಿಕ ಋತುಸ್ರಾವದ ದಿನಗಳನ್ನು ನಿರ್ವಹಿಸುವುದು ತಿಳಿದಿರುವುದಿಲ್ಲ. ಲೈಂಗಿಕತೆ ಬಗ್ಗೆ ಅಜ್ಞಾನವೇ ಹೆಚ್ಚಿದೆ. ಅನುಮಾನಗಳೂ ಸಾಕಷ್ಟಿವೆ. ಖಾಸಗಿ ಅಂಗಗಳ ಕುರಿತು ಕುತೂಹಲವೂ, ಆಕರ್ಷಣೆಯೂ ಬಾಲ್ಯ ಹಾಗೂ ಹದಿಹರೆಯದವರಲ್ಲಿ ಹೆಚ್ಚು. ಇಂತಹ ಸಮಯದಲ್ಲೇ ಶಿಕ್ಷಣವಾಗಿ ಲೈಂಗಿಕತೆಯ ಕುರಿತು ತಿಳಿಸುವುದು ಅತ್ಯಗತ್ಯ‌ ಎಂಬುದು ಮಕ್ಕಳ ಮನಶಾಸ್ತ್ರಜ್ಞೆ ಡಾ. ಪಾವನಾ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

(ಓದುಗರೇ, ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಪೋಕ್ಸೋ ಕಾಯ್ದೆ ತಂದರೂ ಪರಿಣಾಮಕಾರಿ ಅನುಷ್ಠಾನದ ಕೊರತೆಯಿಂದ ದೌರ್ಜನ್ಯ ಪ್ರಕರಣಗಳಿಗೆ ಪೂರ್ಣ ಕಡಿವಾಣ ಬೀಳುತ್ತಿಲ್ಲ. ಈ ನಿಟ್ಟಿನಲ್ಲಿ ʼದ ಫೆಡರಲ್‌ ಕರ್ನಾಟಕʼ ಬುಧವಾರದಿಂದ ಮಕ್ಕಳಲ್ಲಿ ಅರಿವು ಮೂಡಿಸುವ, ಸಮಾಜವನ್ನು ಜಾಗೃತಗೊಳಿಸುವ, ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಸರಣಿ ವರದಿಗಳ ಮೂಲಕ ವಿಶೇಷ ಅಭಿಯಾನ ಆರಂಭಿಸಿದೆ.

ಈ ವಿಶೇಷ ವರದಿಗಳ ಮಾಲಿಕೆಯ ಮೊದಲ ಭಾಗ ಬುಧವಾರ "No To Child Pregnancy Part-1| ನಲಿಯುವ ವಯಸ್ಸಿನಲ್ಲಿ ತಾಯ್ತನದ ಹೊರೆ; ಸರ್ಕಾರಕ್ಕೆ ಅಪ್ರಾಪ್ತರ ಹೆರಿಗೆಯ ಬರೆ" ಪ್ರಕಟವಾಗಿದೆ.

ಗುರುವಾರ (ಇಂದು) "No To Child Pregnancy Part-2| ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಶೇಕಡಾ ಇಪ್ಪತ್ತು; ಅಪ್ರಾಪ್ತರಿಗೆ ಬಂತು ಆಪತ್ತು" ಪ್ರಕಟವಾಗಿದೆ.

ಶುಕ್ರವಾರ: "No To Child Pregnancy Part-3 | ವಸತಿ ಶಾಲೆಗಳಲ್ಲಿ ಅಪ್ರಾಪ್ತೆಯರಿಗೆ ಅಭದ್ರತೆ ; ಆಮಿಷ, ಆಕರ್ಷಣೆಯಿಂದಲೂ ಹೆಚ್ಚುತ್ತಿದೆ ದೌರ್ಜನ್ಯ" ಪ್ರಕಟವಾಗಿದೆ.)

ಶನಿವಾರ: ʻʻNo To Child Pregnancy Part-4 | ಅಪ್ರಾಪ್ತೆಯರ ಗರ್ಭಧಾರಣೆ; ಹದಿಹರೆಯದ ಪ್ರೀತಿ–ಪ್ರೇಮ, ಆಕರ್ಷಣೆ ಕಾರಣವೇ?ಪ್ರಕಟವಾಗಿದೆ.

Read More
Next Story