
ತುಂಗಭದ್ರಾ ಅಣೆಕಟ್ಟು ಗೇಟ್ ಬದಲಾವಣೆ ಕಾಮಗಾರಿ: ಮಂಡಳಿ ಕಾರ್ಯದರ್ಶಿ ಪತ್ರದಿಂದ ಬಯಲಾಯ್ತು ಸರ್ಕಾರದ ನಡೆ
ತುಂಗಭದ್ರಾ ಅಣೆಕಟ್ಟಿನ 33 ಕ್ರೆಸ್ಟ್ ಗೇಟ್‌ಗಳ ಬದಲಾವಣೆ ಸಂಬಂಧ ಆಂಧ್ರಪ್ರದೇಶ ನೀಡಿದ್ದ ಅನುದಾನದಲ್ಲಿ 10 ಕೋಟಿ ರೂ. ರಾಜ್ಯ ಸರ್ಕಾರವು ವಾಪಸ್ ಪಡೆದಿದೆ. ಇದರಿಂದ ಕಾಮಗಾರಿ ವಿಳಂಬವಾಗುವ ಭೀತಿ ಎದುರಾಗಿದೆ.
ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳ ಬದಲಾವಣೆ ವಿಚಾರ ಸಂಬಂಧ ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಸಾಧ್ಯತೆ ಇದೆ. ಅಣೆಕಟ್ಟಿನ ಗೇಟ್ ಕೆಲಸಗಳಿಗಾಗಿ ನಿಯೋಜಿಸಲಾದ ಸಿಬ್ಬಂದಿಯ ವೇತನ ಮತ್ತು ಸಾರಿಗೆ ವೆಚ್ಚಕ್ಕಾಗಿ ಆಂಧ್ರಪ್ರದೇಶ ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ 10 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ತಡೆಹಿಡಿದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ರಾಜ್ಯದ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಇದು ರಾಜ್ಯ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ. ತುಂಗಭದ್ರಾ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗಿರುವ 33 ಕ್ರೆಸ್ಟ್ ಗೇಟ್‌ಗಳ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಒದಗಿಸಲಾದ ಹಣಕಾಸಿನಲ್ಲಿ 10 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರವು ವಾಪಸ್ ಪಡೆದಿದೆ. ಸರ್ಕಾರದ ಈ ನಡೆಯಿಂದಾಗಿ ಕಾಮಗಾರಿ ವಿಳಂಬವಾಗುವ ಅಥವಾ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಕಳೆದ ಆಗಸ್ಟ್‌ನಲ್ಲಿ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಕೊಚ್ಚಿಹೋದ ನಂತರ, ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಗಿತ್ತು. ಈ ಬೃಹತ್ ಕಾಮಗಾರಿಗಾಗಿ ನೂರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತಾರಾಜ್ಯ ಒಪ್ಪಂದದ ಪ್ರಕಾರ, ಅಣೆಕಟ್ಟಿನ ನಿರ್ವಹಣಾ ವೆಚ್ಚವನ್ನು ಮೊದಲು ಆಂಧ್ರಪ್ರದೇಶ ಸರ್ಕಾರ ಭರಿಸಬೇಕು, ನಂತರ ಕೇಂದ್ರ ಜಲ ಆಯೋಗವು ರಾಜ್ಯಗಳ ನಡುವೆ ಈ ವೆಚ್ಚವನ್ನು ಹಂಚಿಕೆ ಮಾಡುತ್ತದೆ. ಅದರಂತೆ ಆಂಧ್ರಪ್ರದೇಶ ಸರ್ಕಾರವು 2025ರ ನ.26 ರಂದು ಸಾಮಗ್ರಿಗಳ ಖರೀದಿಗಾಗಿ 20 ಕೋಟಿ ರೂ. ಬಿಡುಗಡೆ ಮಾಡಿತ್ತು. ಬಳಿಕ 2025ರ ಡಿ.17ರಂದು ಸಿಬ್ಬಂದಿ ವೇತನ, ಸಾರಿಗೆ ಮತ್ತು ಇತರ ವೆಚ್ಚಗಳಿಗಾಗಿ ಹೆಚ್ಚುವರಿಯಾಗಿ 35.62 ಕೋಟಿ ರೂ. ನೀಡಿದೆ. ಒಟ್ಟಾರೆಯಾಗಿ ಆಂಧ್ರಪ್ರದೇಶ ಸರ್ಕಾರ 55.62 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿರುವ ತುಂಗಭದ್ರಾ ಮಂಡಳಿಯ ಖಾತೆಗೆ ವರ್ಗಾಯಿಸಲು ಸೂಚಿಸಿತ್ತು. ಆದರೆ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯು ಮಂಡಳಿಯ ಖಾತೆಗೆ ಕೇವಲ 25.62 ಕೋಟಿ ರೂ.ಗಳನ್ನು ಮಾತ್ರ ವರ್ಗಾಯಿಸಿ, ಉಳಿದ 10 ಕೋಟಿ ರೂ.ಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆರೋಪಕ್ಕೆ ಪತ್ರದ ಸಾಕ್ಷಿ
ಗೇಟ್ ತಜ್ಞ ಕಣ್ಣಯ್ಯ ನಾಯ್ಡು ಈ ಹಿಂದೆ ರಾಜ್ಯ ಸರ್ಕಾರ 10 ಕೋಟಿ ರೂ. ವಾಪಸ್ ಪಡೆದಿದೆ ಎಂದು ಆರೋಪಿಸಿದಾಗ, ಸರ್ಕಾರವು ಆರೋಪವನ್ನು ಸುಳ್ಳು ಎಂದು ತಳ್ಳಿಹಾಕಿತ್ತು. ಆದರೆ, ಈಗ ಮಂಡಳಿಯ ಕಾರ್ಯದರ್ಶಿ ಬರೆದಿರುವ ಪತ್ರವೇ ಕಣ್ಣಯ್ಯ ನಾಯ್ಡು ಅವರ ಆರೋಪಕ್ಕೆ ಬಲವಾದ ಸಾಕ್ಷಿಯಾಗಿದೆ. ಅಣೆಕಟ್ಟಿನ ಕೆಲಸಗಳು ಚುರುಕಿನಿಂದ ಸಾಗಬೇಕಾದರೆ ಹಣದ ಹರಿವು ಅತ್ಯಗತ್ಯ. ಸಮರ್ಪಕವಾಗಿ ಕೆಲಸ ಮುಂದುವರಿಯಲು ಈ ಹಣವನ್ನು ತಕ್ಷಣ ನೀಡಬೇಕು ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ವೇತನ ಮತ್ತು ವೆಚ್ಚಗಳಿಗೆ ಹಣ ಸಿಗದಿದ್ದರೆ, ಕೆಲಸಗಾರರು ಕೆಲಸ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಇದು ಮುಂದೆ ಲು ಗೇಟ್ ಬದಲಿಸುವ ಯೋಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬಂದಿವೆ.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಬರೆದ ಪತ್ರ ಇಲ್ಲಿದೆ.
Note on Funds allocated by GoAP and GoK
The Government of Andhra Pradesh had allotted Budget Estimates to the Tungabhadra Board for the financial year 2025-26 under various wings to an extent of ₹390,66,81,000/-. The same was uploaded under the Tungabhadra Board account in the Khajane-II portal.
Subsequently, the Secretary to Government, Finance (FMU-Water Resources-I) Department, Government of Andhra Pradesh, sanctioned additional funds of ₹20,00,00,000/- under Capital Expenditure (Plan) head exclusively for Tungabhadra Dam Safety Works, towards clearance of outstanding bills relating to ongoing fabrication works and replacement of Dam Spillway Gates.
Further, the Government of Karnataka conveyed its consent to increase the Control Balance by ₹10,00,00,000/- in the Treasury towards fabrication works and replacement of Dam Spillway Gates (Capital Expenditure – Plan). (Copy of Enclosed)
Government of Andhra Pradesh sanctioned additional funds amounting to ₹35,62,27,000/- specifically towards salary expenditure and allied charges such as hire charges of private vehicles, etc., for FY 2025-26.
However, while uploading these additional salary-related funds to the Tungabhadra Board account (8793-00-101-0-00-001), the Finance Department, Government of Karnataka, directed the Treasury to increase the Control Balance only by ₹25,62,27,000/- after deducting ₹10.00 Crores earlier released towards gate works. (Copy of Enclosed)
In this connection, it was informed to Additional Chief Secretary to Government, FD, GOK that the additional funds of ₹35,62,27,000/- sanctioned by the Government of Andhra Pradesh are exclusively meant for salary expenditure. The adjustment made by deducting ₹10.00 Crores released earlier for capital works against these salary-specific funds is not appropriate, as the two sanctions relate to entirely different purposes and heads of account. (Copy enclosed).
This is submitted for your kind information.
(Signature)(O.R.K. Reddy)SecretaryTungabhadra Board
Copy to the Chairman, Tungabhadra Board, Bengaluru for you to have a look at . |
ಅಣೆಕಟ್ಟಿನಲ್ಲಿ ಗೇಟ್ ಬದಲಾವಣೆ ಕೆಲಸಕ್ಕೆ ಕೇವಲ ಎರಡು ತಂಡಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಂದು ತಿಂಗಳಿಗೆ ಕೇವಲ ನಾಲ್ಕು ಗೇಟ್‌ಗಳಂತೆ ಕೆಲಸ ಮಾಡಿದರೆ, ಜೂನ್ ತಿಂಗಳೊಳಗೆ ಎಲ್ಲಾ 33 ಗೇಟ್‌ಗಳನ್ನು ಬದಲಿಸಲು ಸಾಧ್ಯವಿಲ್ಲ. ಕೆಲಸದ ವೇಗ ಹೆಚ್ಚಿಸಲು ತಂಡಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿಬಂದಿವೆ. ಆದರೆ, ಹಣದ ಕೊರತೆಯಿಂದಾಗಿ ಹೆಚ್ಚಿನ ಕಾರ್ಮಿಕರನ್ನು ಮತ್ತು ತಂಡಗಳನ್ನು ನಿಯೋಜಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗುತ್ತಿಗೆದಾರರ ಅಸಹಾಯಕತೆಯಾಗಿದೆ.
ತುಂಗಭದ್ರಾ ಮಂಡಳಿಯ ಆಕ್ಷೇಪ
ರಾಜ್ಯ ಸರ್ಕಾರದ ಕ್ರಮಕ್ಕೆ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ. ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿಗಳು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ, ಆಂಧ್ರಪ್ರದೇಶ ಸರ್ಕಾರ ನೀಡಿದ 35.62 ಕೋಟಿ ರೂ. ಕೇವಲ ಸಿಬ್ಬಂದಿ ವೇತನ ಮತ್ತು ಭತ್ಯೆಗಳಿಗಾಗಿ ಮೀಸಲಿಟ್ಟ ಹಣವಾಗಿದೆ. ಗೇಟ್ ಕಾಮಗಾರಿ ಎಂಬುದು ಬಂಡವಾಳ ವೆಚ್ಚ ಅಡಿಯಲ್ಲಿ ಬರುತ್ತದೆ. ಆದರೆ ವೇತನ ಎಂಬುದು ನಿರ್ವಹಣಾ ವೆಚ್ಚದ ಅಡಿಯಲ್ಲಿ ಬರುತ್ತದೆ. ಈ ಎರಡೂ ವಿಭಿನ್ನ ಲೆಕ್ಕ ಶೀರ್ಷಿಕೆಗಳನ್ನು ಒಂದಕ್ಕೊಂದು ಬೆರೆಸುವುದು ಸರಿಯಲ್ಲ. ಕಾಮಗಾರಿಗೆ ನೀಡಿದ ಹಣವನ್ನು ಸಂಬಳದ ಹಣದಿಂದ ಕಡಿತಗೊಳಿಸಿರುವುದು ಆಡಳಿತಾತ್ಮಕವಾಗಿ ಅಸಮರ್ಪಕವಾಗಿದೆ ಎಂದು ಉಲ್ಲೇಖಿಸಲಾಗಿದೆ. ಸರ್ಕಾರದ ಈ ನಡೆಯಿಂದಾಗಿ ತುಂಗಭದ್ರಾ ಮಂಡಳಿಯ ಸಿಬ್ಬಂದಿಯ ವೇತನ ಪಾವತಿಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಅಲ್ಲದೆ, ಅಂತಾರಾಜ್ಯ ಯೋಜನೆಯೊಂದರಲ್ಲಿ ಒಂದು ರಾಜ್ಯವು ನಿರ್ದಿಷ್ಟ ಉದ್ದೇಶಕ್ಕೆ ನೀಡಿದ ಹಣವನ್ನು ಇನ್ನೊಂದು ರಾಜ್ಯವು ಬೇರೆ ಉದ್ದೇಶದೊಂದಿಗೆ ಸರಿದೂಗಿಸುವುದು ತಾಂತ್ರಿಕವಾಗಿ ಕಾನೂನು ಬಾಹಿರ ಮತ್ತು ನೈತಿಕವಾಗಿ ಸರಿಯಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಬಸನಗೌಡ ಬಾದರ್ಲಿ, ರಾಜ್ಯ ಸರ್ಕಾರವು ವಾಪಸ್ ಪಡೆದಿದೆ ಎನ್ನಲಾದ 10 ಕೋಟಿ ರೂ. ಅನ್ನು ಹಿಂತಿರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸರ್ಕಾರ ಜತೆ ಮಾತನಾಡಲಾಗುವುದು ಎಂದಷ್ಟೇ ಹೇಳಿದರು. ತುಂಗಭದ್ರಾ ಅಣೆಕಟ್ಟು ಈ ಭಾಗದ ರೈತರ ಜೀವನಾಡಿನಾಗಿದ್ದು, ಮುಂಗಾರು ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇರುವಾಗ, ಸರ್ಕಾರವು ಹಣಕಾಸಿನ ತಾಂತ್ರಿಕತೆಗಳನ್ನು ಬದಿಗೊತ್ತಿ ಯುದ್ಧೋಪಾದಿಯಲ್ಲಿ ಕಾಮಗಾರಿ ಮುಗಿಸಲು ಅನುದಾನ ಬಿಡುಗಡೆ ಮಾಡಬೇಕಿದೆ. ಇಲ್ಲದಿದ್ದರೆ, ಕಳೆದ ವರ್ಷದಂತೆ ಮತ್ತೆ ಗೇಟ್ ಸಮಸ್ಯೆ ಎದುರಾದರೆ ರಾಜ್ಯದ ಕೃಷಿ ಹಾಗೂ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಲಿದೆ ಎಂದು ಹೇಳಲಾಗಿದೆ.

