ರಾಜ್ಯದ ಜೀವನದಿಗಳು ವಿಷದ ಕೂಪ! ತುಂಗಭದ್ರಾ, ಕಾವೇರಿ, ಕೃಷ್ಣಾ ನೀರು ಸೇವನೆಗೆ ಯೋಗ್ಯವಲ್ಲ; ನೇತ್ರಾವತಿ ಬಳಕೆಗೆ  ತುಸು ಅರ್ಹ!
x

ರಾಜ್ಯದ ಜೀವನದಿಗಳು ವಿಷದ ಕೂಪ! ತುಂಗಭದ್ರಾ, ಕಾವೇರಿ, ಕೃಷ್ಣಾ ನೀರು ಸೇವನೆಗೆ ಯೋಗ್ಯವಲ್ಲ; ನೇತ್ರಾವತಿ ಬಳಕೆಗೆ ತುಸು ಅರ್ಹ!

ಕಾವೇರಿ, ಕೃಷ್ಣಾ ಸೇರಿ ರಾಜ್ಯದ 12 ನದಿಗಳ ನೀರು ನೇರವಾಗಿ ಕುಡಿಯಲು ಅಸುರಕ್ಷಿತವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿದೆ.


ರಾಜ್ಯದ ಜೀವನದಿಗಳೆಂದು ಕರೆಯುವ ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ 12 ಪ್ರಮುಖ ನದಿಗಳ ನೀರು ನೇರವಾಗಿ ಕುಡಿಯಲು ಸಂಪೂರ್ಣವಾಗಿ ಅಸುರಕ್ಷಿತವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಆಘಾತಕಾರಿ ವರದಿಯೊಂದನ್ನು ಬಹಿರಂಗಪಡಿಸಿದೆ. ಇದು ರಾಜ್ಯದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಎಚ್ಚರಿಕೆಯ ಗಂಟೆಯಾಗಿದೆ.

ಮಂಡಳಿಯು ರಾಜ್ಯದ 32 ವಿವಿಧ ಸ್ಥಳಗಳಲ್ಲಿ ನದಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ, ಯಾವುದೇ ನದಿಯ ನೀರು 'ಎ' ದರ್ಜೆಯ (ನೇರವಾಗಿ ಕುಡಿಯಲು ಯೋಗ್ಯ) ಗುಣಮಟ್ಟವನ್ನು ಹೊಂದಿಲ್ಲ ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ. ಪರಿಸರ ಹಿತಾಸಕ್ತ ವಲಯಕ್ಕೆ ಇದು ಗಂಭೀರ ಎಚ್ಚರಿಕೆಯ ಸೂಚನೆಯಾಗಿದೆ. ಪರೀಕ್ಷೆಗೊಳಪಟ್ಟ ನದಿಗಳ ನೀರಿನ ಪೈಕಿ ಯಾವುದೇ ನದಿಗೂ ಸಹ ಎ ದರ್ಜೆಯ ನೀರು ಎಂದು ಮಾನ್ಯತೆ ಸಿಕ್ಕಿಲ್ಲ. ಎ ದರ್ಜೆ ಎಂದರೆ ಪರಿಶುದ್ಧ ನೀರಾಗಿದ್ದು, ಕುಡಿಯಲು ಯೋಗ್ಯವಾಗಿದೆ ಎಂದರ್ಥ. ನೀರಿನಲ್ಲಿ ಆಮ್ಲಜನಕ ಕೊರತೆ ಇರುವುದು ಗೊತ್ತಾಗಿದೆ. ನಾಡಿನ ಜೀವನದಿ ಎಂದು ಹೆಸರಾದ ಕಾವೇರಿ ನದಿಯ ನೀರು ಸಹ ಕಲುಷಿತವಾಗಿದೆ. ನೇತ್ರಾವತಿ ನದಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಇನ್ನುಳಿದ ನದಿಗಳು ಸಿ ಮತ್ತು ಡಿ ದರ್ಜೆಯಲ್ಲಿವೆ. ಈ ನದಿಗಳ ನೀರು ಕುಡಿಯಲು ಮಾತ್ರವಲ್ಲ ಸ್ನಾನ, ಗೃಹ ಬಳಕೆಗೂ ಯೋಗ್ಯವಲ್ಲ ಎಂದು ಹೇಳಲಾಗಿದೆ.

ಯಾವ ನದಿಗಳಿಗೆ ಯಾವ ದರ್ಜೆ

12 ನದಿಗಳ ಪೈಕಿ ನೇತ್ರಾವತಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಸ್ನಾನ ಹಾಗೂ ಗೃಹಬಳಕೆಗೆ ನೇತ್ರಾವತಿ ನದಿ ನೀರು ಬಳಕೆಗೆ ಯೋಗ್ಯವಾಗಿದೆ. ಇನ್ನೂಳಿದ 8 ನದಿಗಳಿಗೆ ಸಿ ಹಾಗೂ 3 ನದಿಗಳಿಗೆ ಡಿ ದರ್ಜೆ ಸಿಕ್ಕಿದೆ. ನೇತ್ರಾವತಿ ನದಿಗೆ ಬಿ ದರ್ಜೆ ಲಭ್ಯವಾಗಿದ್ದರೆ, ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಕೃಷ್ಣಾ, ಶಿಂಷಾ ನದಿಗೆ ಸಿ ದರ್ಜೆ ಸಿಕ್ಕಿದೆ. ಭೀಮಾನದಿ, ಕಾಗಿಣಾ, ಅರ್ಕಾವತಿ ನದಿಗೆ ಡಿ ದರ್ಜೆ ಲಭ್ಯವಾಗಿದೆ.

ರಾಸಾಯನಿಕಯುಳ್ಳ ಆಮ್ಲಜನಕ ಪತ್ತೆ

ನದಿಗಳ ನೀರಿನಲ್ಲಿ ರಾಸಾಯನಿಕಯುಳ್ಳ ಆಮ್ಲಜನಕ ಪತ್ತೆಯಾಗಿದೆ. ಇತರೆ ಬ್ಯಾಕ್ಟೀರಿಯ ಅಂಶಗಳು ಸಹ ಪತ್ತೆಯಾಗಿವೆ. ಹೀಗಾಗಿ ಸಿ ಮತ್ತು ಡಿ ದರ್ಜೆಯ ನದಿಗಳ ನೀರು ಕುಡಿಯಲು ಯೋಗ್ಯವಲ್ಲ. ಜೊತೆಗೆ ಸ್ನಾನ ಮತ್ತು ಗೃಹ ಬಳಕೆಗೂ ಯೋಗ್ಯವಲ್ಲ. ರಾಜ್ಯದಲ್ಲಿ ಅನೇಕ ಕಡೆ ಕಾವೇರಿ ನದಿ ನೀರು ಅನ್ನು ಕಲುಷಿತಗೊಳಿಸಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ನೀರು ಅನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಬೇಕಾಗಿದೆ.

ಎ ದರ್ಜೆಗೆ ಯಾವುದೇ ನದಿ ತಲುಪಿಲ್ಲ

ಪರಿಶುದ್ಧ, ನೇರವಾಗಿ ಕುಡಿಯಲು ಯೋಗ್ಯವಾದ ನೀರಿಗೆ ‘ಎ’ ದರ್ಜೆ ನೀಡಲಾಗುತ್ತದೆ. ಈ ದರ್ಜೆಯ ನೀರು ಮಾನವನ ಆರೋಗ್ಯಕ್ಕೆ ಯಾವುದೇ ಹಾನಿ ಮಾಡಬಾರದು ಮತ್ತು ಶುದ್ಧೀಕರಣವಿಲ್ಲದೆ ಉಪಯೋಗಕ್ಕೆ ಬರುವ ಗುಣಮಟ್ಟ ಹೊಂದಿರಬೇಕು. ಆದರೆ ಮಂಡಳಿಯ ವರದಿ ಪ್ರಕಾರ, ಈ ಬಾರಿ ಪರೀಕ್ಷೆಗೊಳಪಟ್ಟ ನದಿಗಳಲ್ಲಿ ಒಂದಕ್ಕೂ ಈ ಮಾನ್ಯತೆ ಸಿಕ್ಕಿಲ್ಲ. ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿರುವುದು, ಸಾಸ್ತನೀಯ ದ್ರವ್ಯಗಳ ಪ್ರಮಾಣ ಹೆಚ್ಚಿರುವುದು, ಕೈಗಾರಿಕಾ ಕಸ ಇಳಿಕೆ ಹಾಗೂ ಜೈವಿಕ ಮಾಲಿನ್ಯ ಹೆಚ್ಚಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಕೆಎಸ್‌ಪಿಸಿಬಿ ತಿಳಿಸಿದೆ.

ಕಾವೇರಿ ನದಿಯನ್ನು ರಾಜ್ಯದ ನಾಡಿನ ಜೀವನದಿ ಎಂದು ಕರೆಸಿಕೊಳ್ಳಲಾಗುತ್ತದೆ. ಆದರೆ ಈ ನದಿಯೂ ಮಾನವ ಮತ್ತು ಕೈಗಾರಿಕಾ ಚಟುವಟಿಕೆಗಳಿಂದ ಮಲಿನಕ್ಕೊಳಗಾಗಿದೆ. ಕಾವೇರಿಯ ವಿವಿಧ ತಾಣಗಳಲ್ಲಿ ಸಂಗ್ರಹಿಸಿದ ನೀರಿನ ಮಾದರಿಗಳು ‘ಸಿ’ ಹಾಗೂ ‘ಡಿ’ ದರ್ಜೆಗೆ ಒಳಪಟ್ಟಿವೆ. ಇದು ಕಾವೇರಿ ನೀರನ್ನು ಕುಡಿಯಲು ಮಾತ್ರವಲ್ಲ, ಸ್ವಲ್ಪ ಮಟ್ಟಿನ ಶುದ್ಧೀಕರಣವಿಲ್ಲದೆ ಸ್ನಾನಕ್ಕೂ ಯೋಗ್ಯವಲ್ಲ ಎಂಬುದನ್ನು ಸೂಚಿಸುತ್ತದೆ. ನೀರಿನಲ್ಲಿ ಜೀವಾಣುಗಳ ಒತ್ತಡ ಹೆಚ್ಚಿರುವುದನ್ನು ತೋರಿಸುತ್ತದೆ. ಜೊತೆಗೆ ಕೃಷಿ ರಾಸಾಯನಿಕಗಳು, ಗೃಹಮಲಿನ ನೀರು ಮತ್ತು ನಗರಕಸದ ಒಳಹರಿವು ಹೆಚ್ಚಿರುವುದೂ ಕಾವೇರಿಗೆ ದೊಡ್ಡ ಸಮಸ್ಯೆಯಾಗಿದೆ.

ಮಾಲಿನ್ಯಕ್ಕೆ ಕಾರಣಗಳೇನು?

ರಾಜ್ಯದ ನದಿಗಳು ಈ ಮಟ್ಟಿಗೆ ಕಲುಷಿತಗೊಳ್ಳಲು ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ನಗರ ಮತ್ತು ಪಟ್ಟಣಗಳಿಂದ ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ನದಿಗಳಿಗೆ ಹರಿಯಬಿಡುವುದು. ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕಯುಕ್ತ ನೀರು, ಕೃಷಿ ಭೂಮಿಗಳಿಂದ ಹರಿದುಬರುವ ಕೀಟನಾಶಕ ಮತ್ತು ರಸಗೊಬ್ಬರಗಳ ಶೇಷ, ಹಾಗೂ ನದಿ ಪಾತ್ರಗಳಲ್ಲಿ ನಡೆಯುವ ಅವೈಜ್ಞಾನಿಕ ಮರಳುಗಾರಿಕೆ ನದಿಗಳ ಆರೋಗ್ಯವನ್ನು ದಿನೇದಿನೇ ಕ್ಷೀಣಿಸುತ್ತಿದೆ. ಬಹುತೇಕ ನದಿಗಳಲ್ಲಿ ಕರಗಿದ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದಿದೆ. ಆರೋಗ್ಯಕರ ನದಿಯಲ್ಲಿ ಆಮ್ಲಜನಕದ ಮಟ್ಟ ಪ್ರತಿ ಲೀಟರ್‌ಗೆ 6-8 ಮಿಲಿಗ್ರಾಂ ಇರಬೇಕು. ಆದರೆ ಹಲವು ಕಡೆ ಇದು 3 ಮಿಲಿಗ್ರಾಂಗಿಂತಲೂ ಕಡಿಮೆಯಾಗಿದೆ. ಜತೆಗೆ ನೀರಿನಲ್ಲಿ ಜೀವರಾಸಾಯನಿಕ ಆಮ್ಲಜನಕದ ಬೇಡಿಕೆ ಮತ್ತು ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಇದು ನದಿಯ ನೀರಿಗೆ ಕೊಳಚೆ ನೀರು ಮತ್ತು ಮಾನವನ ತ್ಯಾಜ್ಯ ಸೇರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅರ್ಕಾವತಿ ನದಿಯಲ್ಲಂತೂ ಮಲದಲ್ಲಿ ಕಂಡುಬರುವ ಬ್ಯಾಕ್ಟೀರಿಯಾದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ ಎಂಬುದಾಗಿ ವರದಿ ತಿಳಿಸಿವೆ ಎಂದು ಮಂಡಳಿಯ ಮೂಲಗಳು ಹೇಳಿವೆ.

ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳು

ಕಲುಷಿತ ನದಿ ನೀರನ್ನು ನೇರವಾಗಿ ಕುಡಿಯುವುದರಿಂದ ಅಥವಾ ಗೃಹ ಬಳಕೆಗೆ ಉಪಯೋಗಿಸುವುದರಿಂದ ಕಾಲರಾ, ಟೈಫಾಯ್ಡ್, ಕಾಮಾಲೆ ಮತ್ತು ಇತರ ಜಲಜನ್ಯ ರೋಗಗಳು ಹರಡುವ ಸಾಧ್ವಿಯತೆ ಇದೆ. ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊರೆಯಾಗಲಿದೆ. ಪರಿಸರದ ದೃಷ್ಟಿಯಿಂದ, ನದಿಯಲ್ಲಿನ ಮಾಲಿನ್ಯವು ಜಲಚರ ಜೀವಿಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಮೀನುಗಳು, ಕಪ್ಪೆಗಳು ಮತ್ತು ಇತರ ಜೀವಿಗಳ ಸಂತತಿ ನಾಶವಾಗುತ್ತದೆ. ಇದು ನದಿಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ. ಕೃಷಿಗೆ ಈ ನೀರನ್ನು ಬಳಸುವುದರಿಂದ, ವಿಷಕಾರಿ ಅಂಶಗಳು ಮಣ್ಣಿನಲ್ಲಿ ಸೇರಿ, ಬೆಳೆಗಳ ಮೂಲಕ ಮನುಷ್ಯನ ದೇಹವನ್ನು ಸೇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಮುಂದಿರುವ ಪರಿಹಾರಗಳು

ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯು ಕೇವಲ ಅಂಕಿಅಂಶಗಳ ಸಂಗ್ರಹವಲ್ಲ, ಬದಲಾಗಿ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ಸರ್ಕಾರ, ಕೈಗಾರಿಕೆಗಳು ಮತ್ತು ಸಾರ್ವಜನಿಕರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೈಗಾರಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ, ಸಂಸ್ಕರಿಸಿದ ನೀರನ್ನು ಮಾತ್ರ ನದಿಗೆ ಬಿಡುವಂತೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಬೇಕು. ಸಂಸ್ಕರಿಸದ ಕೊಳಚೆ ನೀರು ನದಿಗಳನ್ನು ಸೇರುವುದನ್ನು ಸಂಪೂರ್ಣವಾಗಿ ತಡೆಯಬೇಕು. ನದಿಗಳ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ನದಿಗಳಿಗೆ ಕಸ ಮತ್ತು ಪೂಜಾ ಸಾಮಗ್ರಿಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ರೈತರು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು.

ನದಿಗಳ ನೀರು ಕಲುಷಿತಗೊಳ್ಳುತ್ತಿರುವ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ನೀರಾವರಿ ತಜ್ಞ ಆಂಜನೇಯ ರೆಡ್ಡಿ, "ನದಿ ದಡಗಳಲ್ಲಿ ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಅವಕಾಶ ನೀಡಿರುವುದೇ ನದಿಗಳ ಮಾಲಿನ್ಯಕ್ಕೆ ಕಾರಣವಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯು ನದಿತಟದಲ್ಲಿ ಅನುಮತಿ ನೀಡಿದ ಮೇಲೆ ಸರಿಯಾಗಿ ಉಸ್ತುವಾರಿ ಮಾಡುವುದಿಲ್ಲ. ಅಲ್ಲಿಯೂ ರಾಜಕೀಯ ಇದೆ. ಪರಿಸರ ಹಾನಿ ಮಾಡಿದರೆ ಶಿಕ್ಷೆಗೊಳಪಡಿಸುವ ಕಾನೂನುಗಳಿವೆ," ಎಂದು ಹೇಳಿದ್ದಾರೆ. " ಆದರೆ ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಸಂಬಂಧಪಟ್ಟ ಆಡಳಿತ ಸಂಸ್ಥೆಗಳು ಅವುಗಳ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದರೆ ಮಲಿನವನ್ನು ತಡೆಗಟ್ಟಬಹುದು. ಜಲ ಮೂಲಗಳು ಕಲುಷಿತಗೊಳ್ಳುತ್ತಿರುವುದರ ಜತೆಗೆ ಆರೋಗ್ಯ, ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಜನ-ಜಾನುವಾರಿಗಳಿಗೂ ಅಪಾಯವಾಗಿದೆ," ಎಂದೂ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಉತ್ತಮ ಅಧ್ಯಕ್ಷ ಬೇಕು!

ಮಾಲಿನ್ಯ ನಿಯಂತ್ರಣ ಮಂಡಳಿಗೆ ಅತ್ಯುತ್ತಮ ಅಧ್ಯಕ್ಷರ ನೇಮಕವಾಗಬೇಕು. ರಾಜಕೀಯ ವ್ಯಕ್ತಿಗಳು ಇರಬಾರದು. ಸುಪ್ರೀಂಕೋರ್ಟ್‌ನ ಆದೇಶವನ್ನು ಸರ್ಕಾರವು ಗಾಳಿಗೆ ತೂರಿ ರಾಜಕೀಯ ಹಿತಾಸಕ್ತಿವುಳ್ಳ ವ್ಯಕ್ತಿಯನ್ನು ನೇಮಕ ಮಾಡುತ್ತಿದೆ. ಇದರಿಂದ ಮಂಡಳಿಯ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವಾಗತ್ತಿಲ್ಲ. ವೈಜ್ಞಾನಿಕ ತಜ್ಞರನ್ನು ಮಂಡಳಿಗೆ ನೇಮಕ ಮಾಡಿದರೆ ಪರಿಸರದ ಬಗ್ಗೆ ಕಾಳಜಿ ಇರುತ್ತದೆ. ಪರಿಸರ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಸಹ ಅಗತ್ಯವಾಗಿದೆ. ನದಿಗಳ ಮಲಿನ ತಡೆಗಟ್ಟಬೇಕಾದರೆ ನದಿದಡಗಳ ಬಳಿ ಇರುವ ಕೈಗಾರಿಕೆಗಳನ್ನು ಮುಚ್ಚಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಂಜನೇಯ ರೆಡ್ಡಿ ಹೇಳಿದ್ದಾರೆ.

ವಿಷಾದನೀಯ ಎಂದು ಹೇಳಿದ ಅಧ್ಯಕ್ಷ!

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿ, ನದಿಗಳು ಮಲಿನವಾಗುತ್ತಿರುವುದು ವಿಷಾದನೀಯ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಂಡಳಿಯಿಂದಲೇ ಪರೀಕ್ಷೆ ನಡೆಸಲಾಗಿದ್ದು, ಅಸುರಕ್ಷಿತ ಎಂಬುದು ಗೊತ್ತಾಗಿದೆ. ನದಿಗಳ ಸ್ವಚ್ಛತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ರಾಜ್ಯದ ನದಿಗಳು ಕೇವಲ ನೀರಿನ ಮೂಲಗಳಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕಾರ್ಯೋನ್ಮುಖವಾಗದಿದ್ದರೆ, ಮುಂದೊಂದು ದಿನ ಜೀವನದಿಗಳು ಕೇವಲ ವಿಷದ ಹಳ್ಳಗಳಾಗಿ ಉಳಿದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Read More
Next Story