
ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ತಂಬಾಕು ಜಾಹೀರಾತು ಹಾಕಬಾರದು ಎಂದು ಸಚಿವ ರಾಮಲಿಂಗಾರೆಡ್ಡಿ ಹೊರಡಿಸಿರುವ ಆದೇಶ
ಸಾರ್ವಜನಿಕ ಸಾರಿಗೆಯಲ್ಲಿ ತಂಬಾಕು ಜಾಹೀರಾತು ಬ್ಯಾನ್: ಸರ್ಕಾರ ಆದೇಶ
ಕೇವಲ ಹೊಸ ಜಾಹೀರಾತುಗಳಿಗೆ ನಿರ್ಬಂಧ ವಿಧಿಸುವುದು ಮಾತ್ರವಲ್ಲದೆ, ಈಗಾಗಲೇ ಬಸ್‌ಗಳ ಮೇಲೆ ಅಂಟಿಸಲಾಗಿರುವ ಅಂತಹ ಜಾಹೀರಾತುಗಳನ್ನು ತೆರವುಗೊಳಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ರಾರಾಜಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ (ಜ.30) ಈ ಸಂಬಂಧ ಕೆಎಸ್‌ಆರ್‌ಟಿಸಿ, ಬಿಎಂಟಿಸಿ , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ಹೊರಡಿಸಿರುವ ಸಚಿವರು, ಈ ನಿರ್ದೇಶನವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸೂಚಿಸಿದ್ದಾರೆ.
ಸಚಿವರ ಆದೇಶದಲ್ಲೇನಿದೆ?
"ಸಾರ್ವಜನಿಕರ ಹಿತದೃಷ್ಟಿಯಿಂದ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಈ ಕೂಡಲೇ ನಿಷೇಧಿಸಲಾಗಿದೆ," ಎಂದು ಸಚಿವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತೆರವಿಗೆ ಗಡುವು
ಕೇವಲ ಹೊಸ ಜಾಹೀರಾತುಗಳಿಗೆ ನಿರ್ಬಂಧ ವಿಧಿಸುವುದು ಮಾತ್ರವಲ್ಲದೆ, ಈಗಾಗಲೇ ಬಸ್‌ಗಳ ಮೇಲೆ ಅಂಟಿಸಲಾಗಿರುವ ಅಂತಹ ಜಾಹೀರಾತುಗಳನ್ನು ತೆರವುಗೊಳಿಸಲು ನಿರ್ದಿಷ್ಟ ಕಾಲಮಿತಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿಗದಿತ ಅವಧಿಯೊಳಗೆ ಆ ಎಲ್ಲಾ ಜಾಹೀರಾತುಗಳು ತೆರವಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಕಾರಣ ಏನು?
ಇತ್ತೀಚೆಗೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ 'ಏಲಕ್ಕಿ' ಹೆಸರಿನಲ್ಲಿ ತಂಬಾಕು ಕಂಪನಿಗಳ ಜಾಹೀರಾತುಗಳನ್ನು (ಪರೋಕ್ಷ ಜಾಹೀರಾತು) ಅಳವಡಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳೇ ಹೀಗೆ ತಂಬಾಕು ಉತ್ಪನ್ನಗಳಿಗೆ ಪ್ರಚಾರ ನೀಡುವುದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಶಾಲಾ ಮಕ್ಕಳು ಮತ್ತು ಯುವಜನತೆಯ ಮೇಲೆ ಇದು ದುಷ್ಪರಿಣಾಮ ಬೀರಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.
'ಏಲಕ್ಕಿ' ಹೆಸರಿನಲ್ಲಿ ವಂಚನೆ
ವಾಸ್ತವವಾಗಿ ಗುಟ್ಕಾ ಮತ್ತು ತಂಬಾಕು ಜಾಹೀರಾತುಗಳಿಗೆ ನಿಷೇಧವಿದ್ದರೂ, ಕಂಪನಿಗಳು 'ಮೌತ್ ಫ್ರೆಶ್ನರ್' ಅಥವಾ 'ಏಲಕ್ಕಿ' ಹೆಸರಿನಲ್ಲಿ ಅದೇ ಬ್ರಾಂಡ್ ಲೋಗೋ ಬಳಸಿ ಜಾಹೀರಾತು ನೀಡುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಇಂತಹ ಪರೋಕ್ಷ ಜಾಹೀರಾತುಗಳಿಗೂ ತಡೆ ಒಡ್ಡಿದ್ದಾರೆ.
ʼತಂಬಾಕು ಜಾಹೀರಾತು ನಿಲ್ಲಿಸಿ ಯುವ ಜನರ ಭವಿಷ್ಯ ಉಳಿಸಿʼ ಎಂಬ ಧ್ಯೇಯವಾಕ್ಯದೊಂದಿಗೆ ಯುವ ಕರ್ನಾಟಕ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ವೆಂಕಟೇಶ್ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾರಿಗೆ ಸಂಸ್ಥೆಗಳ ಮೇಲಿನ ಜಾಹೀರಾತು ತೆರವುಗೊಳಿಸಿ ಎಂಬ ಸಂದೇಶ ಹಂಚಿಕೊಂಡಿದ್ದ ವಿಡಿಯೋ ಇಲ್ಲಿದೆ.

