
ಸಾರಿಗೆ ನೌಕರರ ಪ್ರತಿಭಟನೆ| ನಾಳೆ 'ಬೆಂಗಳೂರು ಚಲೋ', ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಸಾರಿಗೆ ನೌಕರರು ನಾಳೆ, ಜನವರಿ 29ರಂದು ಬೃಹತ್ 'ಬೆಂಗಳೂರು ಚಲೋ' ಪ್ರತಿಭಟನೆಗೆ ಕರೆ ನೀಡಿದ್ದಾರೆ.
ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಸಾರಿಗೆ ನೌಕರರು ಗುರುವಾರ 'ಬೆಂಗಳೂರು ಚಲೋ' ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿಯು ಈ ಹೋರಾಟವನ್ನು ಹಮ್ಮಿಕೊಂಡಿದ್ದು, ಗುರುವಾರ ಸಂಜೆಯೊಳಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಜನವರಿ 30ರಿಂದ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದೆ.
ವೇತನ ಪರಿಷ್ಕರಣೆಯ 38 ತಿಂಗಳ ಬಾಕಿ ಹಣ ಬಿಡುಗಡೆ ಹಾಗೂ ಹೊಸ ವೇತನ ಒಪ್ಪಂದ ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ನೌಕರರು ಜಮಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಈ ನಡುವೆ, ಸಾರಿಗೆ ಇಲಾಖೆಯು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ 'ನೋ ವರ್ಕ್ ನೋ ಪೇ' ನಿಯಮ ಜಾರಿಗೊಳಿಸುವುದಾಗಿ ಮತ್ತು ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿಗಮಗಳು ಮುಂದಾಗಿವೆ.
ಬೆಂಗಳೂರು ಚಲೋಗೆ ಕರೆ ಕೊಟ್ಟಿರುವ ಜಂಟಿ ಕ್ರಿಯಾ ಸಮಿತಿ
ಜಂಟಿ ಕ್ರಿಯಾ ಸಮಿತಿಯು 01-01-2020 ರಿಂದ 28-02-2023ರವರೆಗಿನ 38 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮತ್ತು 01-01-2024ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಈ ಪ್ರತಿಭಟನೆಗೆ ಕರೆ ನೀಡಿದೆ. ಆದರೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷ್ ಅವರು ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಮುಷ್ಕರ, ಪ್ರತಿಭಟನೆ ಅಥವಾ ಯಾವುದೇ ರೀತಿಯ ಸಾರಿಗೆ ವಿರೋಧಿ ಚಟುವಟಿಕೆಗೆ ಭಾಗಿಯಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು
ಸಾರಿಗೆ ನೌಕರರು ತಮ್ಮ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ
38 ತಿಂಗಳ ವೇತನದ ಬಾಕಿ ಹಣವನ್ನು (ಅರಿಯರ್ಸ್) ಕೂಡಲೇ ನೀಡಬೇಕು. ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನವಾದ ವೇತನವನ್ನು ಸಾರಿಗೆ ನೌಕರರಿಗೂ ನೀಡಬೇಕು. ನೌಕರರ ಮೇಲಿನ ಕಾರ್ಮಿಕ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕು. 1-1-2024 ರಿಂದ ಅನ್ವಯವಾಗುವಂತೆ ವೇತನವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

