
ಅನಧಿಕೃತ ಬೋರ್ಡ್ ತೆರವುಗೊಳಿಸುತ್ತಿರುವ ಸಿಬ್ಬಂದಿಗಳು
ಪೂರ್ವ ಪಾಲಿಕೆಯಿಂದ ಜಾಹೀರಾತು ಹಾವಳಿಗೆ ಬ್ರೇಕ್; 17ಕ್ಕೂ ಹೆಚ್ಚು ಅನಧಿಕೃತ ಫಲಕಗಳ ತೆರವು
ಸಾರ್ವಜನಿಕ ಸುರಕ್ಷತೆ ಗಮನದಲ್ಲಿಟ್ಟುಕೊಂಡು ರಾತ್ರಿ 10 ರಿಂದ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ಅನಧಿಕೃತ ಜಾಹಿರಾತುಗಳನ್ನು ಪಾಲಿಕೆ ವತಿಯಿಂದ ತೆರವು ಮಾಡಲಾಯಿತು.
ಉದ್ಯಾನನಗರಿ ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತುಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಂತಿವೆ. ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಸಮರ ಸಾರಿದೆ. ಗುರುವಾರ ರಾತ್ರಿ ಪೂರ್ವ ನಗರ ಪಾಲಿಕೆ ಅಧಿಕಾರಿಗಳು ಹಳೆ ಮದ್ರಾಸ್ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ವಾಣಿಜ್ಯ ಮಳಿಗೆಗಳ ಮುಂಭಾಗ ಅಳವಡಿಸಿದ್ದ ಅನಧಿಕೃತ ಜಾಹೀರಾತು ಹೋರ್ಡಿಂಗ್‌ಗಳು ಹಾಗೂ ಎಲ್‌ಇಡಿ ಜಾಹೀರಾತು ಫಲಕಗಳನ್ನು ತೆರವು ಮಾಡಿದ್ದಾರೆ.
ನಗರ ಪಾಲಿಕೆಯ ಎಂಜಿನಿಯರಿಂಗ್, ಕಂದಾಯ, ವಿದ್ಯುತ್ ಮತ್ತು ಆರೋಗ್ಯ ಇಲಾಖೆಯ ತಂಡವು ವಿಶೇಷ ಜಂಟಿ ಕಾರ್ಯಾಚರಣೆ ಮೂಲಕ ಅನಧಿಕೃತ ಫಲಕಗಳನ್ನು ತೆರವುಗೊಳಿಸಿದೆ ಎಂದು ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ಮುಖ್ಯರಸ್ತೆಯ ಎಡ ಮತ್ತು ಬಲ ಭಾಗಗಳಲ್ಲಿ ವಾಣಿಜ್ಯ ಮಳಿಗೆಗಳ ಮುಂಭಾಗ ಅಳವಡಿಸಿದ್ದ 17ಕ್ಕೂ ಹೆಚ್ಚಿನ ಸಂಖ್ಯೆ ಅನಧಿಕೃತ ಜಾಹೀರಾತು ಹೋರ್ಡೀಂಗ್ಸ್ ಮತ್ತು ಎಲ್‌ಇಡಿ ಬೋರ್ಡ್‌ಗಳನ್ನು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಸಾರ್ವಜನಿಕ ಸುರಕ್ಷತೆ ಗಮನದಲ್ಲಿ ಇಟ್ಟುಕೊಂಡು ರಾತ್ರಿ 10 ರಿಂದ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ವಿಶೇಷ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು ಎಂದು ಮಾಹಿತಿ ನೀಡಿದರು.
ಅನಧಿಕೃತ ಬೋರ್ಡ್ ತೆರವುಗೊಳಿಸುತ್ತಿರುವ ಸಿಬ್ಬಂದಿಗಳು
ಯಂತ್ರೋಪಕರಣ, ಸಿಬ್ಬಂದಿಗಳ ನಿಯೋಜನೆ
ವಿಶೇಷ ಕಾರ್ಯಾಚರಣೆಯಲ್ಲಿ ಒಂದು ಕ್ರೇನ್, ಎರಡು ಗ್ಯಾಸ್ ಕಟ್ಟರ್ ಮಷಿನ್, ಐದು ಟ್ರ್ಯಾಕ್ಟರ್, 120 ಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹಾಗೂ ಇನ್ನಿತರೆ ಯಂತ್ರೋಪಕರಣಗಳನ್ನು ಬಳಸಿಕೊಂಡು ಜಂಟಿ ಕಾರ್ಯಾಚರಣೆ ಮಾಡಲಾಗಿದೆ.
ಎಚ್ಚರಿಕೆ ಸಂದೇಶ
ನಗರದ ಸೌಂದರ್ಯ, ಸಾರ್ವಜನಿಕ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಅನಧಿಕೃತ ಜಾಹೀರಾತುಗಳ ವಿರುದ್ಧ ಪ್ರತಿ ವಾರ ನಿಯಮಿತವಾಗಿ ಇದೇ ರೀತಿಯ ವಿಶೇಷ ಕಾರ್ಯಾಚರಣೆ ಮುಂದುವರಿಸಲಾಗುವುದು. ಅನುಮತಿ ಪಡೆಯದೇ ಜಾಹೀರಾತು ಫಲಕ ಅಳವಡಿಸುವುದು ಕಾನೂನುಬಾಹಿರ. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ತೆರವು ಕಾರ್ಯಾಚರಣೆ ಜೊತೆಗೆ ದಂಡನಾತ್ಮಕ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ
ಸ್ವಯಂ ತೆರವಿಗೆ ಮನವಿ
ಪೂರ್ವ ನಗರ ಪಾಲಿಕೆ ವ್ಯಾಪಿಯಲ್ಲಿ ಎಲ್ಲಾ ವಾಣಿಜ್ಯ ಮಳಿಗೆದಾರರು ತಮ್ಮ ಮಳಿಗೆಗಳ ಮುಂಭಾಗದಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಜಾಹೀರಾತು ಫಲಕ ಅಳವಡಿಸುವಂತಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸದಾಗಿ ಜಾರಿ ತಂದಿರುವ ಜಾಹೀರಾತು ನಿಯಮಾವಳಿಯಂತೆ ಅನುಮತಿ ಪಡೆಯದೇ ಅಳವಡಿಸುವ ಎಲ್ಲಾ ಜಾಹೀರಾತುಗಳು ಅನಧಿಕೃತವಾಗಿದ್ದು, ಈ ಕೂಡಲೇ ವಾಣಿಜ್ಯ ಮಳಿಗೆ ಮಾಲೀಕರು ಸ್ವಯಂ ಆಗಿ ಎಲ್ಲಾ ರೀತಿಯ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಮಾಡಬೇಕೆಂದು ಮನವಿ ಮಾಡಿದ್ದಾರೆ.

