ಕೇಳ್ರಪ್ಪೋ..ಕೇಳ್ರಿ... ಈ ಜಿಲ್ಲೆಗಳಲ್ಲಿ ಮಕ್ಕಳಿಗೆ ಟಿವಿ ಬಂದ್‌, ಮೊಬೈಲ್‌ ಬ್ಯಾನ್‌ !
x

ಕೇಳ್ರಪ್ಪೋ..ಕೇಳ್ರಿ... ಈ ಜಿಲ್ಲೆಗಳಲ್ಲಿ ಮಕ್ಕಳಿಗೆ ಟಿವಿ ಬಂದ್‌, ಮೊಬೈಲ್‌ ಬ್ಯಾನ್‌ !

ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಲು ಮತ್ತು ಬರವಣಿಗೆಯ ಅಭ್ಯಾಸ ಮಾಡಲು ಸಮಯ ಮೀಸಲಿಡಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಅಲ್ಲಲ್ಲಿ ಡಂಗುರ ಸಾರಲು ನಿರ್ಧರಿಸಲಾಗಿದೆ.


ಶಾಲಾ ಮಕ್ಕಳಲ್ಲಿ ಏಕಾಗ್ರತೆ ಮೂಡಿಸಿ, ಶೈಕ್ಷಣಿಕ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ವಿನೂತನ ಹೆಜ್ಜೆ ಇಟ್ಟಿದೆ. ಬೆಳಗಾವಿಯ ಹಲಗಾ ಗ್ರಾಮದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಜಾರಿಗೆ ತಂದಿದ್ದ 'ಡಿಜಿಟಲ್ ಬಂದ್' ಎಂಬ ಯೋಜನೆಯೇ ಇದೀಗ ಶಿಕ್ಷಣ ಇಲಾಖೆಗೂ ಪ್ರೇರಣೆಯಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಓದಿನತ್ತ ಕರೆತರಲು ಹಲವು ಜಿಲ್ಲೆಗಳ ಶಾಲಾ ಶಿಕ್ಷಣ ಇಲಾಖೆಗಳು ಮೊಬೈಲ್‌, ಟಿವಿ ಮುಕ್ತ ಅಭಿಯಾನ ಆರಂಭಿಸಿವೆ.

ಬೆಳಗಾವಿಯ ಹಲಗಾ ಗ್ರಾಮದಲ್ಲಿ ಅಳವಡಿಸಿರುವ ಸೈರನ್‌

ವಿಜಯನಗರ ಹಾಗೂ ಹಾವೇರಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಗಳು ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ಎರಡು ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಮೊಬೈಲ್, ಟಿವಿಯಿಂದ ದೂರವಿರಿಸಲು ಯೋಜನೆ ಹಾಕಿಕೊಂಡು, ಅಭಿಯಾನ ಆರಂಭಿಸಿವೆ. ಎರಡೂ ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಟಿವಿ, ಮೊಬೈಲ್‌ ಮುಕ್ತ ಅಭಿಯಾನ ಆರಂಭಿಸಿ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಹಾಗೂ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಜಾಗೃತಿ ಮೂಡಿಸಬೇಕು. ಗ್ರಾಮ ಹಂತದಲ್ಲಿ ಪಿಡಿಒಗಳು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ಎರಡೂ ಪ್ರತ್ಯೇಕ ಸುತ್ತೋಲೆಗಳಲ್ಲಿ ಸೂಚಿಸಲಾಗಿದೆ.

ಗ್ರಾಮಗಳಲ್ಲಿ ಡಂಗೂರ ಬಾರಿಸಿ ಪೋಷಕರಿಗೆ ತಿಳಿ ಹೇಳಬೇಕು. ಅಗತ್ಯ ಬಿದ್ದರೆ ಸಂಜೆ 7 ರಿಂದ 9 ರ ಒಳಗೆ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ವೈರಲ್‌ ಆಗಿದೆ.

ಈಗ ಪರೀಕ್ಷೆಗಳ ಸಮಯ. ಎಲ್ಲ ತರಗತಿಗಳು ಅದರಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಜೀವನದ ಅಮೂಲ್ಯ ಕಾಲಘಟ್ಟ. ಆದ್ದರಿಂದ ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ಮೊಬೈಲ್ ಮತ್ತು ಟಿವಿ ಸ್ವಿಚ್ ಆಫ್ ಮಾಡಬೇಕು. ಮಕ್ಕಳ ಓದಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು. ಪೋಷಕರು ಕೂಡ ಧಾರಾವಹಿ, ಸಿನಿಮಾ ನೋಡುವುದನ್ನು ಮನೆಗಳಲ್ಲಿ ನಿಲ್ಲಿಸಿ, ಮಕ್ಕಳಿಗೆ ಓದಿಗೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದೆ.

"ಕೂಡ್ಲಗಿಯಲ್ಲಿ ಹೆಚ್ಚು ಕೂಲಿಕಾರ್ಮಿಕರೇ ಇದ್ದಾರೆ. ಟ್ಯಾಕ್ಟರ್‌ಗಳಲ್ಲಿ ಜೋರಾಗಿ ಹಾಡು ಹಾಕಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಪೋಷಕರ ಅಭಿಪ್ರಾಯವನ್ನು ಮುಖ್ಯಶಿಕ್ಷಕರ ಸಭೆಯಲ್ಲಿ ಚರ್ಚಿಸಿ, ಈ ನಿರ್ಣಯ ಕೈಗೊಳ್ಳಲಾಗಿದೆ ಬಿಇಒ ಮೈಲೇಶ್‌ ದೇವೂರ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಸರ್ಕಾರಿ ‌ಶಾಲೆಗಳಲ್ಲಿ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಈಗಾಗಲೇ ಮೊಬೈಲ್‌ ಅಜ್ಞಾತವಾಸ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಶಾಲೆಗೆ ಬರುವ ಶಿಕ್ಷಕರು ಪೆಟ್ಟಿಗೆಯಲ್ಲಿ ಮೊಬೈಲ್‌ಗಳನ್ನು ಇಡಬೇಕು. ತರಗತಿ ವೇಳೆ ಯಾರೂ ಕೂಡ ಮೊಬೈಲ್‌ ಬಳಸಬಾರದು ಎಂದು ಹೇಳಿದೆ. ಈಗ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹೊಸ ಹೆಜ್ಜೆ ಇರಿಸಿದ್ದೇವೆ ಎಂದು ಹೇಳಿದರು.

ಪೋಷಕರಿಂದ ಮೆಚ್ಚುಗೆ

ಇಂದಿನ ದಿನಗಳಲ್ಲಿ ಮೊಬೈಲ್, ಟಿವಿ ಸೀರಿಯಲ್ ಹಾವಳಿಯಿಂದ ಮಕ್ಕಳು ಓದಿನಿಂದ ದೂರ ಸರಿಯುತ್ತಿದ್ದಾರೆ ಎಂಬ ಆತಂಕ ಪೋಷಕರಲ್ಲಿದೆ. ಸರ್ಕಾರದ ಈ ಕಟ್ಟುನಿಟ್ಟಿನ ಸಲಹೆಯು ಮಕ್ಕಳು ಮತ್ತೆ ಪುಸ್ತಕಗಳತ್ತ ಮುಖ ಮಾಡಲು ಸಹಕಾರಿಯಾಗಿದೆ ಎನ್ನಲಾಗುತ್ತಿದೆ.

ವಿದ್ಯಾರ್ಥಿಗಳು ಎರಡು ಗಂಟೆಗಳಲ್ಲಿ ಪರೀಕ್ಷೆ ತಯಾರಿ ನಡೆಸುವುದರಿಂದ ಭವಿಷ್ಯ ಉಜ್ವಲವಾಗಲಿದೆ. ಮೊಬೈಲ್ ಮತ್ತು ಟಿವಿ ಮುಕ್ತ 2 ಗಂಟೆಗಳ ಈ ಅಭಿಯಾನವು ವಿದ್ಯಾರ್ಥಿಗಳ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಲು ನೆರವಾಗಲಿದೆ.

2 ಗಂಟೆ 'ಡಿಜಿಟಲ್ ಉಪವಾಸ'

ಪರೀಕ್ಷೆಯ ಸಿದ್ಧತೆಗೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ. ಪ್ರತಿದಿನ ಎರಡು ಗಂಟೆ ಮೊಬೈಲ್ ಫೋನ್ ಮತ್ತು ಟಿವಿಗಳನ್ನು ಸ್ವಿಚ್ ಆಫ್ ಮಾಡುವಂತೆ ಪೋಷಕರಿಗೆ ತಿಳಿಸಲಾಗಿದೆ. ಈ ಎರಡು ಗಂಟೆಗಳ ಅವಧಿಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಲು ಮತ್ತು ಬರವಣಿಗೆಯ ಅಭ್ಯಾಸ ಮಾಡಲು ಮೀಸಲಿಡಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ನಿಗಾ ವಹಿಸಲು ಸೂಚನೆ

ಶಿಕ್ಷಕರು ಈ ಅವಧಿಯಲ್ಲಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಕ್ಕಳು ಓದುತ್ತಿದ್ದಾರೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪೋಷಕರಿಗೂ ತಿಳಿಹೇಳಬೇಕು ಎಂದು ಸೂಚಿಸಲಾಗಿದೆ.

ಶಾಲಾ ಮಟ್ಟದಲ್ಲಿ ಪೋಷಕರ ಸಭೆ ಕರೆದು, ಪರೀಕ್ಷೆಯ ಸಮಯದಲ್ಲಿ ಟಿವಿ ಮತ್ತು ಮೊಬೈಲ್ನಿಂದ ಮಕ್ಕಳನ್ನು ದೂರವಿಡುವ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಕೆಲವು ಜಿಲ್ಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಅಧ್ಯಯನದ ಬಗ್ಗೆ ವಿಚಾರಿಸುವ 'ವೇಕ್ ಅಪ್ ಕಾಲ್' ಸಿಸ್ಟಮ್ ಜಾರಿಯಲ್ಲಿದೆ. ಇದನ್ನೂ ಸಾಧ್ಯವಿರುವ ಕಡೆ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಶಿಕ್ಷಕರು ಹಾಗೂ ಪೋಷಕರಿಗೆ ತಿಳಿಸಿದ್ದಾರೆ.

ಬೆಳಗಾವಿಯ ಹಲಗಾ ಗ್ರಾಮದಲ್ಲಿ ಗ್ರಾಮಸ್ಥರೇ ರೂಪಿಸಿದ ಸೈರನ್‌ ಕುರಿತ ವಿಡಿಯೊ ಇಲ್ಲಿದೆ.

ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ

ಮೊಬೈಲ್‌ ಗೇಮಿಂಗ್‌ಗಳಿಂದಾಗಿ ಶಾಲಾ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಫೆ.4 ರಂದು ಗಾಜಿಯಾಬಾದ್‌ನಲ್ಲಿ ಬಾಲಕಿಯರು ಕೊಠಡಿಯಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅಳುತ್ತಿರುವ ಎಮೋಜಿಯೊಂದಿಗೆ 'ಸಾರಿ ಅಪ್ಪ' ಎಂದು ಬರೆಯಲಾಗಿದೆ. ಇದು ನಿಜ ಜೀವನದ ಕಥೆ. ಈ ಡೈರಿಯಲ್ಲಿ ಬರೆದಿರುವ ಪ್ರತಿಯೊಂದನ್ನೂ ಓದಿ, ಯಾಕೆಂದರೆ ಇದೆಲ್ಲವೂ ಸತ್ಯ ಎಂದು ಬಾಲಕಿಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬ ಸದಸ್ಯರ ಫೋಟೋಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಅವರು ಕೊರಿಯನ್ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು ಎಂಬುದು ತಿಳಿದುಬಂದಿದೆ. ಬಾಲಕಿಯರು ಬಾಲ್ಕನಿಯಿಂದ ಜಿಗಿಯಲು ಏಣಿಯನ್ನು ಬಳಸಿರುವ ಶಂಕೆ ಇದ್ದು, 14 ವರ್ಷದ ಬಾಲಕಿಯೇ ಈ ಆಟದ 'ಲೀಡರ್' ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಮೊದಲು ಈಕೆ ಹಾರಿದ್ದಾಳೆ. ನಂತರ ಇನ್ನಿಬ್ಬರು ಮೇಲಿನಿಂದ ಜಿಗಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪೋಲಿಸರು ಬಾಲಕಿಯರ ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್‌: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

Read More
Next Story