
ಮೊಬೈಲ್, ಟಿವಿ ʼಗೀಳುʼ ನೀಗಿಸಿದ ಬೆಳಗಾವಿ ಗ್ರಾಮ: ಸೈರನ್ ಮೊಳಗಿದ ನಂತರ ʼಡಿಜಿಟಲ್ ಬಂದ್ʼ!
ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಿದ್ದು, ಯುವಕರು-ಹಿರಿಯರು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಬೆರೆತು ಕಾಲಕಳೆಯುವ ಮೂಲಕ ಸ್ನೇಹ ಹಾಗೂ ಕೌಟುಂಬಿಕ ಸಂಬಂಧ ವೃದ್ಧಿಸಿದೆ.
ಮೊಬೈಲ್ ಹಾಗೂ ಟಿವಿ ವ್ಯಾಮಹೋಹಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ಮತ್ತು ಕುಟುಂಬದ ಜೊತೆ ಸಮಯ ಕಳೆಯುವ ಉದ್ದೇಶದಿಂದ ಬೆಳಗಾವಿಯ ಸುವರ್ಣಸೌಧದ ಬಳಿಯಿರುವ ಗ್ರಾಮವೊಂದು ವಿನೂತನ ಯೋಜನೆ ಕೈಗೊಂಡು ಯಶಸ್ವಿಯಾಗಿದೆ.
ಬೆಳಗಾವಿ ಜಿಲ್ಲೆಯ ಸುವರ್ಣಸೌಧದ ಬಳಿಯಿರುವ ಹಲಗಾ ಗ್ರಾಮ ಕಳೆದ ಕೆಲವು ದಿನಗಳಿಂದ ʼಡಿಜಿಟಲ್ ಬಂದ್ʼ ಎಂಬ ವಿನೂತನ ಯೋಜನೆ ಕೈಗೊಂಡ ಪರಿಣಾಮ ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಿದ್ದು, ಗ್ರಾಮದ ಯುವಜನತೆ ಹಾಗೂ ಹಿರಿಯರು ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಬೆರೆತು ಮಾತನಾಡುತ್ತಾ ಕಾಲಕಳೆಯುವ ಮೂಲಕ ಸ್ನೇಹ ಹಾಗೂ ಕೌಟುಂಬಿಕ ಸಂಬಂಧಗಳ ಅಭಿವೃದ್ಧಿಗೂ ಈ ಯೋಜನೆ ಪೂರಕವಾಗಿದೆ.
ಏನಿದು ಯೋಜನೆ ?
ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಬೇರೆಡೆ ಇರುವಂತೆಯೇ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್‌ನ ವ್ಯಾಮೋಹಕ್ಕೆ ಒಳಗಾಗಿದ್ದರು. ಯಾರೊಂದಿಗೂ ಮಾತನಾಡ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳಲ್ಲೂ ಓದಿನ ಆಸಕ್ತಿ ಕಡಿಮೆ ಆಗಿತ್ತು. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಗ್ರಾಮದಲ್ಲಿ ರಾತ್ರಿ 7ರಿಂದ 9ಗಂಟೆವರೆಗೂ ಯಾರೂ ಸಹ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಹಾಗೂ ರೇಡಿಯೋ ಬಳಸದಂತೆ ʼಡಿಜಿಟಲ್ ಬಂದ್ʼ ಆಚರಿಸಬೇಕು ಎಂದು ಸ್ವಯಂ ಪ್ರೇರಿತ ನಿರ್ಧಾರ ಕೈಗೊಂಡಿದ್ದಾರೆ.
ಈ ವಿನೂತನ ಯೋಜನೆಯ ಕುರಿತು ʼದ ಫೆಡರಲ್ ಕರ್ನಾಟಕʼ ವಿಡಿಯೋ ಚರ್ಚೆ ನಡೆಸಿತ್ತು.
ಪಂಚಾಯಿತಿ ಸದಸ್ಯರಿಂದ ಜಾಗೃತಿ
ಹಲಗಾ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿರುವುದುರಿಂದ ಸುಮಾರು 8ಸಾವಿರ ಜನಸಂಖ್ಯೆ ಹೊಂದಿರುವ ಬೃಹತ್ ಗ್ರಾಮವಾಗಿದೆ. ಈ ಗ್ರಾಮದಿಂದ 18 ಗ್ರಾಮ ಪಂಚಾಯತ್ ಸದಸ್ಯರು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಪ್ರತೀ ಮನೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಯೋಜನೆಯ ಕುರಿತು ಜಾಗೃತಿ ಮೂಡಿಸಿದ್ದರು.
ಕಹಳೆಯಂತೆ ಮೊಳಗುವ ಸೈರನ್
ಎಂಟು ಸಾವಿರ ಜನರಿರುವ ಗ್ರಾಮದಲ್ಲಿ ಎಲ್ಲರೂ ಒಂದೇ ಸಮಯಕ್ಕೆ ಮೊಬೈಲ್ ಹಾಗೂ ಟಿವಿ ಬಂದ್ ಮಾಡಬೇಕು ಎಂಬ ಕಾರಣದಿಂದ ಗ್ರಾಮಪಂಚಾಯತಿಯಿಂದ ಸಂಜೆ 6.55ಕ್ಕೆ ಸೈರನ್ ಮೊಳಗಿಸಲಾಗುತ್ತದೆ. ಈ ಶಬ್ದ ಕೇಳಿದ ತಕ್ಷಣ ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಮಕ್ಕಳು ಓದುವಲ್ಲಿ ತಲ್ಲೀನರಾದರೆ, ಯುವಕರು ಹಾಗೂ ವಯಸ್ಸಾದವರು ಹೊರಗಡೆ ತಮ್ಮ ಸ್ನೇಹಿತರ ಜತೆ ಮಾತನಾಡುತ್ತಾ ಕಾಲಕಳೆಯುತ್ತಾರೆ.
ಮೊಬೈಲ್ ಬಿಟ್ಟು ಓದಿನಲ್ಲಿ ತೊಡಗಿರುವ ಮಕ್ಕಳು!
ಸ್ವಯಂ ಪ್ರೇರಿತ ನಿರ್ಧಾರ
ಮಕ್ಕಳು ಅತಿಯಾದ ಮೊಬೈಲ್ ಬಳಕೆ ಮಾಡುತ್ತಿದ್ದರಿಂದ ಅದು ಗೀಳಾಗಿ ಪರಿಣಮಿಸಿತ್ತು. ಮೊಬೈಲ್, ಟಿವಿಯಿಂದ ಸ್ವಲ್ಪ ಸಮಯ ದೂರ ಇದ್ದರೆ ಓದಿನ ಕಡೆ ಗಮನ ಕೊಡುತ್ತಾರೆ. ಈ ವಿನೂತನ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಜಾರಿಗೆ ತಂದಿದ್ದೇವೆ ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ಹಲಗಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಗಜಪತಿ ತಿಳಿಸಿದರು.
ಎಲ್ಲರ ಖುಷಿ ಹೆಚ್ಚಿಸಿದ ಡಿಜಿಟಲ್ ಬಂದ್
ಹಲಗಾ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಅರ್ಜುನ್ ಮಾರಯಾಳ್ಕರ್ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, ಸುಮಾರು 2 ಗಂಟೆಗಳ ಕಾಲ ಮೊಬೈಲ್, ಟಿವಿ ಬಂದ್ ಮಾಡುವ ಡಿಜಿಟಲ್ ಬಂದ್‌ಗೆ ಗ್ರಾಮದ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಮೊಬೈಲ್ ಹಾಗೂ ಟಿವಿಯನ್ನು ನಿರಂತರವಾಗಿ ನೋಡುವುದರಿಂದ ಸಾಕಷ್ಟು ದುಷ್ಪರಿಣಾಮ ಬೀರುತ್ತಿತ್ತು. ರಾತ್ರಿ ಓದುವ ವೇಳೆಯೂ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್ ಹಾಗೂ ಟಿವಿ ಬಳಸುತ್ತಿದ್ದರು ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಆದರೆ ಇದಿಗ ಡಿಜಿಟಲ್ ಬಂದ್‌ನಿಂದ ಎಲ್ಲರೂ ಖುಷಿಪಟ್ಟಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲೂ ನಡೆದಿತ್ತು ಡಿಜಿಟಲ್ ಬಂದ್
ಮಕ್ಕಳನ್ನು ಮೊಬೈಲ್ ಹಾಗೂ ಟಿವಿ ವ್ಯಾಮೋಹದಿಂದ ಮುಕ್ತಗೊಳಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನಹರಿಸಬೇಕೆಂಬ ಉದ್ದೇಶದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತ್ಯಾಂಚೆ ವಡ್ಗಾಂವ್ ಗ್ರಾಮದಲ್ಲಿ ಇಂತಹ ವಿನೂತನ ಯೋಜನೆಯನ್ನು ಸ್ವಯಂ ಪ್ರೇರಿತರಾಗಿ ಗ್ರಾಮಸ್ಥರು ಅನುಸರಿಸಿದ್ದರು. ಪ್ರತೀ ದಿನ ಸಂಜೆ 7 ರಿಂದ 8.30 ರವರೆಗೆ ಮೊಬೈಲ್, ಟಿವಿ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಂತಿಲ್ಲ ಎಂದು ಗ್ರಾಮಸ್ಥರೇ ನಿರ್ಧಾರ ಕೈಗೊಂಡಿದ್ದಾರೆ.
ಮೊದಲು ಗ್ರಾಮದ ಮಕ್ಕಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಓದಲು, ಬರೆಯಲು ಬರುವುದಿಲ್ಲ ಎಂದು ಶಿಕ್ಷಕರು ಆರೋಪ ಮಾಡುತ್ತಿದ್ದರು. ಆದರೆ ಈ ವಿನೂತನ ಕ್ರಮದ ನಂತರ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಿದ್ದು, ಎಲ್ಲರೂ ಡಿಜಿಟಲ್ ಬಂದ್ ಆಚರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಆಶಾ, ಅಂಗನವಾಡಿ ಕಾರ್ಯಕರ್ತರುಗಳು, ನಿವೃತ್ತ ಶಿಕ್ಷಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ ವಾರ್ಡ್‌ವಾರು ಸಮಿತಿ ರಚಿಸಲಾಗಿದೆ ಎಂದು ವಡ್ಗಾಂವ್ ಗ್ರಾಮದ ಸರಪಂಚ್ ಮೋಹಿತ್ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.
ಇದನ್ನೇ ಪ್ರೇರಣೆಯಾಗಿಸಿಕೊಂಡ ಬೆಳಗಾವಿಯ ಹಲಗಾ ಗ್ರಾಮಸ್ಥರು ತಮ್ಮ ಗ್ರಾಮದಲ್ಲೂ ತು ಈ ರೀತಿಯ ಡಿಜಿಟಲ್ ಬಂದ್ ಆಚರಿಸಲು ನಿರ್ಧಾರ ಮಾಡಿದ್ದರು.

