Halaga villages digital detox is a model for all villages; Minister Hebbalkar praises
x

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಹಲಗಾ ಗ್ರಾಮದ ʼಡಿಜಿಟಲ್‌ ಡಿಟಾಕ್ಸ್‌ʼ ಬಗ್ಗೆ ಸಚಿವೆ ಹೆಬ್ಬಾಳ್ಕರ್‌ ಹೇಳಿದ್ದೇನು?

ಗ್ರಾಮದಲ್ಲಿ ಸೈರನ್ ಮೊಳಗುತ್ತಿದ್ದಂತೆಯೇ ಎಲ್ಲರೂ ಒಮ್ಮತದಿಂದ ಈ ನಿಯಮ ಪಾಲಿಸುತ್ತಿರುವುದು ನಿಮ್ಮ ಶಿಸ್ತು ಮತ್ತು ಮುಂದಾಲೋಚನೆಗೆ ಸಾಕ್ಷಿಯಾಗಿದೆ ಎಂದು ಸಚಿವೆ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.


Click the Play button to hear this message in audio format

ಮಕ್ಕಳು ಹಾಗೂ ಯುವಜನತೆಯಲ್ಲಿನ ಮೊಬೈಲ್‌ ಗೀಳು ಕಡಿಮೆ ಮಾಡುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಕೈಗೊಂಡಿದ್ದ ʼಡಿಜಿಟಲ್‌ ಡಿಟಾಕ್ಸ್ʼಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ವಿನೂತನ ಮಾದರಿ ಬೇರೆ ಗ್ರಾಮಗಳಿಗೂ ಮಾದರಿಯಾಗಲಿ ಎಂದು ತಿಳಿಸಿದ್ದಾರೆ.

ಈ ಕುರಿತು ಬುಧವಾರ(ಡಿ.24) ಪ್ರಶಂಸನಾ ಪತ್ರ ಬರೆದಿರುವ ಅವರು, "ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಹಾವಳಿಯಿಂದ ಮಕ್ಕಳ ಶಿಕ್ಷಣ ಮತ್ತು ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯ ಹಲಗಾ ಗ್ರಾಮವು ಕೈಗೊಂಡಿರುವ ನಿರ್ಧಾರ ಇಡೀ ದೇಶಕ್ಕೆ ಮಾದರಿಯಾಗಿದೆ" ಎಂದು ತಿಳಿಸಿದ್ದಾರೆ.

"ಪ್ರತಿದಿನ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಮತ್ತು ಟಿವಿ ಆಫ್ ಮಾಡಿ, ಕೇವಲ ಮಕ್ಕಳ ಓದು ಮತ್ತು ಮನೆಯವರೊಂದಿಗೆ ಸಮಯ ಕಳೆಯಲು ಮೀಸಲಿಟ್ಟಿರುವ ನಿಮ್ಮ 'ಡಿಜಿಟಲ್ ಡಿಟಾಕ್ಸ್' ಅಭಿಯಾನವು ಅತ್ಯಂತ ಪ್ರಶಂಸನೀಯ. ಗ್ರಾಮದಲ್ಲಿ ಸೈರನ್ ಮೊಳಗುತ್ತಿದ್ದಂತೆಯೇ ಎಲ್ಲರೂ ಒಮ್ಮತದಿಂದ ಈ ನಿಯಮ ಪಾಲಿಸುತ್ತಿರುವುದು ನಿಮ್ಮ ಶಿಸ್ತು ಮತ್ತು ಮುಂದಾಲೋಚನೆಗೆ ಸಾಕ್ಷಿಯಾಗಿದೆ" ಎಂದು ಉಲ್ಲೇಖಿಸಿದ್ದಾರೆ.

ʼದ ಫೆಡರಲ್‌ ಕರ್ನಾಟಕʼದಿಂದ ವಿಶೇಷ ವರದಿ

ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನೀವು ರೂಪಿಸಿದ ಈ ಯೋಜನೆ ಕೇವಲ ಒಂದು ನಿಯಮವಲ್ಲ, ಅದೊಂದು ಸಮಾಜಮುಖಿ ಕ್ರಾಂತಿ. ಈ ಕ್ರಾಂತಿಕಾರಿ ಹೆಜ್ಜೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಹಲಗಾ ಗ್ರಾಮದ ಈ ಮಾದರಿ ಕಾರ್ಯಕ್ರಮವು ಇತರ ಗ್ರಾಮಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಊರಿನ ಈ ಮಹತ್ವದ ಬದಲಾವಣೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವರು ಪತ್ರದಲ್ಲಿ ಶ್ಲಾಘಿಸಿದ್ದಾರೆ.

ಏನಿದು ಡಿಜಿಟಲ್‌ ಡಿಟಾಕ್ಸ್‌ ?

ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಬೇರೆಡೆ ಇರುವಂತೆಯೇ ವಿದ್ಯಾರ್ಥಿಗಳು ಹಾಗೂ ಯುವಜನತೆ ಮೊಬೈಲ್‌, ಟಿವಿ ಹಾಗೂ ಲ್ಯಾಪ್‌ಟಾಪ್‌ನ ವ್ಯಾಮೋಹಕ್ಕೆ ಒಳಗಾಗಿದ್ದರು. ಯಾರೊಂದಿಗೂ ಮಾತನಾಡ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳಲ್ಲೂ ಓದಿನ ಆಸಕ್ತಿ ಕಡಿಮೆ ಆಗಿತ್ತು. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಗ್ರಾಮದಲ್ಲಿ ರಾತ್ರಿ 7ರಿಂದ 9ಗಂಟೆವರೆಗೂ ಯಾರೂ ಸಹ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌ ಹಾಗೂ ರೇಡಿಯೋ ಬಳಸದಂತೆ ʼಡಿಜಿಟಲ್‌ ಬಂದ್‌ʼ ಆಚರಿಸಬೇಕು ಎಂದು ಸ್ವಯಂ ಪ್ರೇರಿತ ನಿರ್ಧಾರ ಕೈಗೊಂಡಿದ್ದಾರೆ.

ಪಂಚಾಯಿತಿ ಸದಸ್ಯರಿಂದ ಜಾಗೃತಿ

ಹಲಗಾ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿರುವುದುರಿಂದ ಸುಮಾರು 8ಸಾವಿರ ಜನಸಂಖ್ಯೆ ಹೊಂದಿರುವ ಬೃಹತ್‌ ಗ್ರಾಮವಾಗಿದೆ. ಈ ಗ್ರಾಮದಿಂದ 18 ಗ್ರಾಮ ಪಂಚಾಯತ್ ಸದಸ್ಯರು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಪ್ರತೀ ಮನೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಯೋಜನೆಯ ಕುರಿತು ಜಾಗೃತಿ ಮೂಡಿಸಿದ್ದರು.

ಕಹಳೆಯಂತೆ ಮೊಳಗುವ ಸೈರನ್‌

ಎಂಟು ಸಾವಿರ ಜನರಿರುವ ಗ್ರಾಮದಲ್ಲಿ ಎಲ್ಲರೂ ಒಂದೇ ಸಮಯಕ್ಕೆ ಮೊಬೈಲ್‌ ಹಾಗೂ ಟಿವಿ ಬಂದ್‌ ಮಾಡಬೇಕು ಎಂಬ ಕಾರಣದಿಂದ ಗ್ರಾಮಪಂಚಾಯತಿಯಿಂದ ಸಂಜೆ 6.55ಕ್ಕೆ ಸೈರನ್‌ ಮೊಳಗಿಸಲಾಗುತ್ತದೆ. ಈ ಶಬ್ದ ಕೇಳಿದ ತಕ್ಷಣ ಮೊಬೈಲ್‌, ಟಿವಿ ಹಾಗೂ ಲ್ಯಾಪ್‌ಟಾಪ್‌ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿ ಮಕ್ಕಳು ಓದುವಲ್ಲಿ ತಲ್ಲೀನರಾದರೆ, ಯುವಕರು ಹಾಗೂ ವಯಸ್ಸಾದವರು ಹೊರಗಡೆ ತಮ್ಮ ಸ್ನೇಹಿತರ ಜತೆ ಮಾತನಾಡುತ್ತಾ ಕಾಲ‌ಕಳೆಯುತ್ತಾರೆ.

ಪ್ರತೀ ದಿನ ಸಂಜೆ ಮೊಳಗುವ ಸೈರನ್‌

ಮಹಾರಾಷ್ಟ್ರದಲ್ಲೂ ನಡೆದಿತ್ತು ಡಿಜಿಟಲ್‌ ಬಂದ್‌

ಮಕ್ಕಳನ್ನು ಮೊಬೈಲ್‌ ಹಾಗೂ ಟಿವಿ ವ್ಯಾಮೋಹದಿಂದ ಮುಕ್ತಗೊಳಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನಹರಿಸಬೇಕೆಂಬ ಉದ್ದೇಶದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತ್ಯಾಂಚೆ ವಡ್ಗಾಂವ್ ಗ್ರಾಮದಲ್ಲಿ ಇಂತಹ ವಿನೂತನ ಯೋಜನೆಯನ್ನು ಸ್ವಯಂ ಪ್ರೇರಿತರಾಗಿ ಗ್ರಾಮಸ್ಥರು ಅನುಸರಿಸಿದ್ದರು. ಪ್ರತೀ ದಿನ ಸಂಜೆ 7 ರಿಂದ 8.30 ರವರೆಗೆ ಮೊಬೈಲ್‌, ಟಿವಿ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವಂತಿಲ್ಲ ಎಂದು ಗ್ರಾಮಸ್ಥರೇ ನಿರ್ಧಾರ ಕೈಗೊಂಡಿದ್ದಾರೆ.

ಮೊದಲು ಗ್ರಾಮದ ಮಕ್ಕಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಓದಲು, ಬರೆಯಲು ಬರುವುದಿಲ್ಲ ಎಂದು ಶಿಕ್ಷಕರು ಆರೋಪ ಮಾಡುತ್ತಿದ್ದರು. ಆದರೆ ಈ ವಿನೂತನ ಕ್ರಮದ ನಂತರ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಿದ್ದು, ಎಲ್ಲರೂ ಡಿಜಿಟಲ್‌ ಬಂದ್‌ ಆಚರಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಆಶಾ, ಅಂಗನವಾಡಿ ಕಾರ್ಯಕರ್ತರುಗಳು, ನಿವೃತ್ತ ಶಿಕ್ಷಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ ವಾರ್ಡ್‌ವಾರು ಸಮಿತಿ ರಚಿಸಲಾಗಿದೆ ಎಂದು ವಡ್ಗಾಂವ್ ಗ್ರಾಮದ ಸರಪಂಚ್‌ ಮೋಹಿತ್‌ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ಬೆಳಗಾವಿಯ ಹಲಗಾ ಗ್ರಾಮಸ್ಥರು ತಮ್ಮ ಗ್ರಾಮದಲ್ಲೂ ಈ ರೀತಿಯ ಡಿಜಿಟಲ್‌ ಬಂದ್‌ ಆಚರಿಸಲು ನಿರ್ಧಾರ ಮಾಡಿದ್ದರು.

Read More
Next Story