KSRTC Employees Protest: ಬೆಂಗಳೂರು ಚಲೋ ಅಂತ್ಯ: ಬೇಡಿಕೆ ಈಡೇರಿಕೆಗೆ ಮಾ. 2ರವರೆಗೆ ಗಡುವು
x

KSRTC Employees Protest: ಬೆಂಗಳೂರು ಚಲೋ ಅಂತ್ಯ: ಬೇಡಿಕೆ ಈಡೇರಿಕೆಗೆ ಮಾ. 2ರವರೆಗೆ ಗಡುವು

ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳು, ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮಾ.2ರೊಳಗೆ ಈಡೇರಿಸಬೇಕು. ಒಂದು ವೇಳೆ ಈಡೇರಿಕೆ ಮಾಡದಿದ್ದರೆ ಮುಷ್ಕರ ನಡೆಸುವ ಎಚ್ಚರಿಕೆ ನೀಡಲಾಗಿದೆ.


Click the Play button to hear this message in audio format

ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಬೇಡಿಕೆ ಈಡೇರಿಕೆ ಮಾಡಲು ಸರ್ಕಾರಕ್ಕೆ ಮಾ.2ರವರೆಗೆ ಗಡುವು ನೀಡಿದ್ದಾರೆ.

ಸಾರಿಗೆ ನಿಗಮಗಳ ನೌಕರರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ 'ಬೆಂಗಳೂರು ಚಲೋ' ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಾರಿಗೆ ನೌಕರರು ರಾಜಧಾನಿಗೆ ಆಗಮಿಸಿದ್ದರು. ವೇತನ ಪರಿಷ್ಕರಣೆ, 2021ರ ಮುಷ್ಕರದ ವೇಳೆ ದಾಖಲಾದ ಪ್ರಕರಣಗಳ ರದ್ಧತಿ ಸೇರಿದಂತೆ ಹಲವು ದಶಕಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಿದರು. ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ, ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರೂ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗಲಿಲ್ಲ. ಎಂದಿನಂತೆ ಬಸ್‌ಗಳ ಸಂಚಾರವು ಇದ್ದು, ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸಿದರು.

ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳು, ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮಾ.2ರೊಳಗೆ ಈಡೇರಿಸಬೇಕು. ಒಂದು ವೇಳೆ ಬೇಡಿಕೆ ಈಡೇರಿಕೆ ಮಾಡದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಮಾ.2ರ ವೇಳೆಗೆ ಸರ್ಕಾರವು ನೌಕರರ ಪ್ರತಿನಿಧಿಗಳನ್ನು ಮಾತುಕತೆಗೆ ಕರೆದು, ಅವರ ಪ್ರಮುಖ ಬೇಡಿಕೆಗಳ ಬಗ್ಗೆ ಲಿಖಿತ ಭರವಸೆ ನೀಡಬೇಕು. ಒಂದು ವೇಳೆ ಸರ್ಕಾರ ಈ ಗಡುವನ್ನು ನಿರ್ಲಕ್ಷಿಸಿದರೆ, ಮಾ.2ರಿಂದಲೇ ಹಂತ ಹಂತವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತವಾಗಿ ರಾಜ್ಯದ ಎಲ್ಲಾ ವಿಭಾಗೀಯ ಕೇಂದ್ರಗಳಲ್ಲಿ ವಿಭಾಗವಾರು ಪ್ರತಿಭಟನೆ ನಡೆಸಲಾಗುವುದು. ಇದು ಕೇವಲ ಸಾಂಕೇತಿಕವಾಗಿರದೆ, ಮುಂದಿನ ದಿನಗಳಲ್ಲಿ ಸಂಪೂರ್ಣ ಮುಷ್ಕರ ನಡೆಸುವ ಮುನ್ಸೂಚನೆಯಾಗಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಕೆಎಸ್‌ಆರ್‌ಟಿಸಿ ಎಂಡಿ

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ನೌಕರರ ಬಳಿಗೆ ಬಂದು ಅವರ ಅಹವಾಲುಗಳನ್ನು ಆಲಿಸಿದರು. ನೌಕರರ ಬೇಡಿಕೆಗಳ ಪಟ್ಟಿಯನ್ನು ಪಡೆದುಕೊಂಡ ಅವರು, ಆಡಳಿತ ಮಂಡಳಿಯ ಮಿತಿಯಲ್ಲಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವುದಾಗಿ ಮತ್ತು ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ವ್ಯವಸ್ಥಾಪಕ ನಿರ್ದೇಶಕರ ನಡೆ ಸದ್ಯಕ್ಕೆ ನೌಕರರ ಆಕ್ರೋಶವನ್ನು ಸ್ವಲ್ಪ ಮಟ್ಟಿಗೆ ತಣಿಸಿದೆ. ಸಾರಿಗೆ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಕೆ ಮಾಡಿದೆ. ಆದರೂ ಪ್ರತಿಭಟನೆ ನಡೆಸಲಾಗಿದೆ. ಇನ್ನುಳಿದ ಬೇಡಿಕೆಗಳ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೇಡಿಕೆಗೆ ಈಡೇರಿಕೆಗೆ ಕಾಲಾವಕಾಶ

ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಡಿ.ಎಂ. ವಿಜಯ ಭಾಸ್ಕರ್ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರವು ಬೇಡಿಕೆಗಳ ಬಗ್ಗೆ ಕಾಲಾವಕಾಶ ಕೋರಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಮತ್ತು ಸಂಘಟಿತ ಹೋರಾಟಕ್ಕೆ ಮತ್ತೊಂದು ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಮಾ. 2ರವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ. ಅಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಭಟನೆ ನಡೆಸುವುದಿಲ್ಲ. ಒಂದು ವೇಳೆ ಮಾ.2ರೊಳಗೆ ಸರ್ಕಾರ ಸ್ಪಷ್ಟ ಆದೇಶ ಹೊರಡಿಸದಿದ್ದರೆ, ಅಂದಿನಿಂದ ಹೋರಾಟ ಅನಿವಾರ್ಯವಾಗಲಿದೆ" ಎಂದು ಅವರು ಘೋಷಿಸಿದರು.

ಮುಷ್ಕರ ಆರಂಭಿಸಲು ಒತ್ತಾಯ

ಪ್ರತಿಭಟನೆನಿರತ ನೌಕರರ ಪೈಕಿ ಕೆಲವರು, ಪದೇ ಪದೇ ಗಡುವು ನೀಡುವುದು ಬೇಡ, ನಾಳೆಯಿಂದಲೇ ಮುಷ್ಕರ ಆರಂಭಿಸಿ ಎಂದು ಒತ್ತಾಯಿಸಿದರು. ಸರ್ಕಾರವು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಆಡಳಿತ ಮಂಡಳಿಗಳು ಕೇವಲ ಭರವಸೆ ನೀಡುತ್ತಿವೆ. ಹೀಗಾಗಿ ಕೂಡಲೇ ಕೆಲಸ ನಿಲ್ಲಿಸಿ ಪ್ರತಿಭಟಿಸುವುದೇ ಉತ್ತಮ ಎಂದು ಅಭಿಪ್ರಾಯಪಟ್ಟರು.

2021ರ ಕಹಿ ನೆನಪು, ನಾಯಕರ ಎಚ್ಚರಿಕೆ

ಪ್ರತಿಭಟನೆಯ ನಿರ್ಧಾರ ಕೈಗೊಳ್ಳುವಾಗ 2021ರಲ್ಲಿ ನಡೆದ ಬೃಹತ್ ಮುಷ್ಕರದ ನೆನಪುಗಳು ನಾಯಕರನ್ನು ಕಾಡುತ್ತಿವೆ. ಅಂದು ನಡೆದ ಮುಷ್ಕರದ ಸಂದರ್ಭದಲ್ಲಿ ಸಾವಿರಾರು ನೌಕರರನ್ನು ಅಮಾನತುಗೊಳಿಸಲಾಗಿತ್ತು. ಅಂತರ-ನಿಗಮ ವರ್ಗಾವಣೆ ಎಂಬ ಶಿಕ್ಷೆ ನೀಡಲಾಗಿತ್ತು. ಅಲ್ಲದೇ, ಹಲವರ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಜಂಟಿ ಕ್ರಿಯಾ ಸಮಿತಿಯ ಮುಖಂಡರು ಈ ಬಗ್ಗೆ ಮಾತನಾಡಿ, ಅತಿರೇಕದ ನಿರ್ಧಾರ ಕೈಗೊಂಡು ನೌಕರರನ್ನು ಸಂಕಷ್ಟಕ್ಕೆ ತಳ್ಳಲು ಬಯಸುವುದಿಲ್ಲ. 2021ರ ಅನುಭವ ನಮಗಿದೆ. ಅಂದು ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಆದ್ದರಿಂದ ಈ ಬಾರಿ ನಾವು ವ್ಯವಸ್ಥಿತವಾಗಿ, ಕಾನೂನುಬದ್ಧವಾಗಿ ಹೋರಾಟ ರೂಪಿಸಬೇಕಿದೆ. ಸರ್ಕಾರ ಮಾತುಕತೆಗೆ ಬರುವ ಮುನ್ಸೂಚನೆ ನೀಡಿದೆ. ಅದಕ್ಕೆ ಗೌರವ ನೀಡೋಣ. ಆದರೆ ಮಾ.2ರ ನಂತರ ಹೋರಾಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸಮಾಧಾನಪಡಿಸಿದರು.

ಅಲ್ಲದೇ, ಸರ್ಕಾರವು ನೌಕರರ ಶೇ. 75ರಷ್ಟು ಬೇಡಿಕೆಗಳನ್ನು ಈಗಾಗಲೇ ಪರಿಗಣಿಸಲಾಗಿದೆ. ವೇತನ ಪರಿಷ್ಕರಣೆಯ ವಿಚಾರದಲ್ಲಿ ಸರ್ಕಾರವು ಆರ್ಥಿಕ ಹೊರೆಯ ನೆಪ ಹೇಳುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದೆ. ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ನೌಕರರ ಸಂಘಟನೆಗಳೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಆದರೆ, ಈ ಭರವಸೆಗಳು ಕೇವಲ ಕಾಗದದ ಮೇಲಿನ ಭರವಸೆಗಳಾಗಿ ಉಳಿಯಲು ಅವಕಾಶ ನೀಡುವುದಿಲ್ಲ ಎಂದು ಅಶ್ವಾಸನೆ ನೀಡಿದರು.

Read More
Next Story