
ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಲಗೇಜು ದರದ ಹೊರೆ; ಸೋಮವಾರದಿಂದ ಶೇ 15 ರಷ್ಟು ಏರಿಕೆ
ʼಶಕ್ತಿʼ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸರಕು ಸಾಗಣೆ ದರಗಳು ಹಿಂದಿನಂತೆಯೇ ಅನ್ವಯವಾಗಲಿವೆ.
ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸರಕು ಸಾಗಣೆ (ಲಗೇಜು) ದರಗಳನ್ನು ಶೇ 15 ರಷ್ಟು ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ. ʼಶಕ್ತಿʼ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೂ ಸರಕು ಸಾಗಣೆ ದರಗಳು ಹಿಂದಿನಂತೆಯೇ ಅನ್ವಯವಾಗಲಿವೆ.
ಪ್ರತಿ ಬಾರಿಯೂ ಲಗೇಜು ದರವನ್ನು ಬಸ್ ಪ್ರಯಾಣ ದರದ ಜತೆಯಲ್ಲೇ ಏರಿಕೆ ಮಾಡಲಾಗುತ್ತಿತ್ತು. ಆದರೆ, ಈಗ ಪ್ರತ್ಯೇಕವಾಗಿ ಪ್ರಯಾಣ ದರ ಹಾಗೂ ಲಗೇಜು ದರವನ್ನು ಏರಿಕೆ ಮಾಡಲಾಗಿದೆ.
ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆಯಾಗಿತ್ತು, ಲಗೇಜು ದರ ಏರಿಕೆ ಮಾಡಿರಲಿಲ್ಲ. ಈಗ ಲಗೇಜು ದರ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ನಾಳೆ (ಸೋಮವಾರ)ಯಿಂದ ಪರಿಷ್ಕೃತ ದರಗಳು ಜಾರಿ ಬರಲಿವೆ.
ಬಸ್ ಪ್ರಯಾಣಿಕರು 30 ಕೆ.ಜಿ. ವರೆಗಿನ ಲಗೇಜನ್ನು ಉಚಿತವಾಗಿ ಸಾಗಿಸಬಹುದು. ಅದಕ್ಕಿಂತ ಹೆಚ್ಚು ತೂಕದ ಲಗೇಜು ಸಾಗಿಸಬೇಕಾದರೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಡಿಸೆಂಬರ್ 2021 ರಲ್ಲಿ ಮಾತ್ರ ಲಗೇಜು ದರ ಏರಿಕೆಯಾಗಿತ್ತು. ಡೀಸೆಲ್ ಬೆಲೆ, ನಿರ್ವಹಣಾ ವೆಚ್ಚಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

