ಕರ್ನೂಲ್ ದುರಂತದ ಎಫೆಕ್ಟ್: ಕೆಎಸ್‌ಆರ್‌ಟಿಸಿ ಬಸ್​ಗಳಲ್ಲಿ ಇನ್ನು ಮುಂದೆ ಈ ವಸ್ತುಗಳಿಗೆ ನಿಷೇಧ
x

ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ಕರ್ನೂಲ್ ದುರಂತದ ಎಫೆಕ್ಟ್: ಕೆಎಸ್‌ಆರ್‌ಟಿಸಿ ಬಸ್​ಗಳಲ್ಲಿ ಇನ್ನು ಮುಂದೆ ಈ ವಸ್ತುಗಳಿಗೆ ನಿಷೇಧ

ಇನ್ನು ಮುಂದೆ ಬಸ್ಸುಗಳಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುವುದು ಸಂಪೂರ್ಣ ನಿಷೇಧಕ್ಕೊಳಗಾಗಲಿದ್ದು, ಪ್ರತಿ ಪ್ರಯಾಣಿಕರ ಲಗೇಜ್‌ಅನ್ನು ಕಡ್ಡಾಯವಾಗಿ ಪರಿಶೀಲಿಸಲು ಆದೇಶಿಸಲಾಗಿದೆ.


Click the Play button to hear this message in audio format

ನೆರೆಯ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದ ಖಾಸಗಿ ಬಸ್ ಅಗ್ನಿ ದುರಂತದಲ್ಲಿ 20 ಮಂದಿ ಸಜೀವ ದಹನವಾದ ಘಟನೆಯು ರಾಜ್ಯ ಸಾರಿಗೆ ಇಲಾಖೆಯನ್ನು ತೀವ್ರವಾಗಿ ತಟ್ಟಿ ಎಚ್ಚರಿಸಿದೆ. ಈ ದುರಂತದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಹತ್ವದ ಕ್ರಮಗಳನ್ನು ಘೋಷಿಸಿದ್ದು, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಪ್ರಯಾಣಿಸಲು ಹೊಸ, ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಇನ್ನು ಮುಂದೆ ಬಸ್ಸುಗಳಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುವುದು ಸಂಪೂರ್ಣ ನಿಷೇಧಕ್ಕೊಳಗಾಗಲಿದ್ದು, ಪ್ರತಿ ಪ್ರಯಾಣಿಕರ ಲಗೇಜ್‌ಅನ್ನು ಕಡ್ಡಾಯವಾಗಿ ಪರಿಶೀಲಿಸಲು ಆದೇಶಿಸಲಾಗಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಾಲ್ಕೂ ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಸುರಕ್ಷತಾ ನಿಯಮಗಳನ್ನು ತಕ್ಷಣದಿಂದಲೇ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. "ಕರ್ನೂಲ್ ದುರಂತ ಅತ್ಯಂತ ದುಃಖಕರ. ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಲು ಸಾಧ್ಯವಿಲ್ಲ, ಅವರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರಾಣಹಾನಿಯನ್ನು ಯಾವುದೇ ನಷ್ಟದಿಂದ ಭರಿಸಲಾಗದು," ಎಂದು ಪತ್ರದಲ್ಲಿ ಒತ್ತಿಹೇಳಿದ್ದಾರೆ. ಈ ಹಿಂದೆ ತಾವು ಸಚಿವರಾಗಿದ್ದಾಗ ಹಾವೇರಿ ಬಳಿ ನಡೆದಿದ್ದ ಜಬ್ಬಾರ್ ಟ್ರಾವೆಲ್ಸ್ ಬಸ್ ದುರಂತವನ್ನು ಸ್ಮರಿಸಿದ ಅವರು, ಆ ಘಟನೆಯ ನಂತರ ರಾಜ್ಯದ ಸುಮಾರು 50,000 ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಿದ್ದ ಅಭಿಯಾನವನ್ನು ನೆನಪಿಸಿಕೊಂಡರು.

ಜಾರಿಗೆ ಬಂದಿರುವ ಪ್ರಮುಖ ಸುರಕ್ಷತಾ ನಿಯಮಗಳು

ಸಚಿವರ ಆದೇಶದ ಅನ್ವಯ, ಪ್ರಯಾಣಿಕರ ಸುರಕ್ಷತೆಗಾಗಿ ಈ ಕೆಳಗಿನ ನಿಯಮಗಳನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ. ಬಸ್ಸುಗಳಲ್ಲಿ ಪಟಾಕಿ, ಗ್ಯಾಸ್ ಸಿಲಿಂಡರ್‌ಗಳು, ಪೆಟ್ರೋಲ್, ಡೀಸೆಲ್, ಆಸಿಡ್ ಅಥವಾ ಇನ್ನಾವುದೇ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು ಹಾಗೂ ಸ್ಪೋಟಕಗಳನ್ನು ವಾಣಿಜ್ಯ ಸರಕಾಗಲಿ, ಲಗೇಜ್ ರೂಪದಲ್ಲಾಗಲಿ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಎಲ್ಲಾ ಹವಾನಿಯಂತ್ರಿತ (ಎಸಿ) ಮತ್ತು ವೋಲ್ವೋ ಮಾದರಿಯ ಬಸ್ಸುಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಗಾಜುಗಳನ್ನು ಒಡೆಯಲು ಅನುಕೂಲವಾಗುವಂತೆ ಸುತ್ತಿಗೆಗಳನ್ನು ಕಡ್ಡಾಯವಾಗಿ ಇರಿಸಬೇಕು. ಬಸ್ಸಿನ ಲಗೇಜ್ ಇರಿಸುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣಿಕರು ಅಥವಾ ಸಿಬ್ಬಂದಿ ಮಲಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಎಲ್ಲಾ ಬಸ್ಸುಗಳ ತಾಂತ್ರಿಕ ಮತ್ತು ಸುರಕ್ಷತಾ ಉಪಕರಣಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಈ ನಿಯಮಗಳನ್ನು ಪಾಲಿಸುವುದರಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ಬಸ್ಸುಗಳ ಸುರಕ್ಷತಾ ಆಡಿಟ್ ನಡೆಸಲು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ, ರಾಜ್ಯಾದ್ಯಂತ ಪರಿಶೀಲನಾ ಕಾರ್ಯ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Read More
Next Story