ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಶಕ್ತಿ ಯೋಜನೆ: 500ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ
x

ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ. 

ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ 'ಶಕ್ತಿ' ಯೋಜನೆ: 500ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ

ಜೂನ್ 11, 2023 ರಿಂದ ಜುಲೈ 25, 2025 ರ ಅವಧಿಯಲ್ಲಿ ಐದು ಬಿಲಿಯನ್, ನಲತ್ತೊಂಬತ್ತು ಮಿಲಿಯನ್, ನಾಲ್ಕು ನೂರ ಎಪ್ಪತ್ತಾರು ಸಾವಿರ, ನಾಲ್ಕು ನೂರ ಹದಿನಾರು ಮಹಿಳೆಯರು ಪ್ರಯಾಣಿಸಿರುವುದರಿಂದ ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದೆ.


ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ಮಹಿಳಾ ಸಬಲೀಕರಣದ ಹೆಗ್ಗುರುತಾದ 'ಶಕ್ತಿ' ಯೋಜನೆಯು, ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಜೂನ್ 11ರಿಂದ ಜುಲೈ 25ರ ಅವಧಿಯಲ್ಲಿ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್​​ಗಳಲ್ಲಿ ಒಟ್ಟು 54 ಕೋಟಿ, 94 ಲಕ್ಷ, 76 ಸಾವಿರದ, 416 (549,476,416) ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ಈ ವಿಶ್ವ ದಾಖಲೆ ನಿರ್ಮಾಣವಾಗಿದೆ.

ಈ ಐತಿಹಾಸಿಕ ಸಾಧನೆಯನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಮಸ್ತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಮರ್ಪಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಶಸ್ಸಿನ ಹಿಂದಿನ ಪರಿಶ್ರಮ ಮತ್ತು ಸವಾಲುಗಳು

ಈ ಯಶಸ್ಸಿನ ಹಿಂದಿನ ಪರಿಶ್ರಮವನ್ನು ಹಂಚಿಕೊಂಡ ಸಚಿವ ರಾಮಲಿಂಗಾ ರೆಡ್ಡಿ, "'ಶಕ್ತಿ' ಯೋಜನೆಯ ಅನುಷ್ಠಾನವು ಅತ್ಯಂತ ಸವಾಲಿನಿಂದ ಕೂಡಿತ್ತು. ನಾವು ಅಧಿಕಾರಕ್ಕೆ ಬರುವ ಮುನ್ನ, ಕಳೆದ ಐದಾರು ವರ್ಷಗಳಿಂದ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್ಸುಗಳು ಸೇರ್ಪಡೆಯಾಗಿರಲಿಲ್ಲ, ಹೊಸ ನೇಮಕಾತಿಗಳಾಗಿರಲಿಲ್ಲ ಮತ್ತು ನಿಗಮಗಳು ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಒಂದು ತಂಡವಾಗಿ ಕಾರ್ಯನಿರ್ವಹಿಸಿ, ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಅತೀವ ಸಂತೃಪ್ತಿ ತಂದಿದೆ," ಎಂದು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ 'ಶಕ್ತಿ' ಯೋಜನೆಯ ಯಶಸ್ಸಿನ ಜೊತೆಗೆ, ಸಾರಿಗೆ ನಿಗಮಗಳ ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳಲಾಗಿದೆ. 5,800 ಹೊಸ ಬಸ್​​ಗಳ ಸೇರ್ಪಡೆ, 10,000 ಹೊಸ ನೇಮಕಾತಿ ಪ್ರಕ್ರಿಯೆ ಹಾಗೂ ನಿಗಮಗಳ ಸಾಲ ಪಾವತಿಗಾಗಿ ಸರ್ಕಾರದಿಂದ 2,000 ಕೋಟಿ ರೂಪಾಯಿ ನೆರವು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ

'ಬಿಯಾಂಡ್ ಫ್ರೀ ರೈಡ್ಸ್' ಎಂಬ ಶೀರ್ಷಿಕೆಯಡಿಯಲ್ಲಿ 'ಸಸ್ಟೈನಬಲ್ ಮೊಬಿಲಿಟಿ ನೆಟ್ವರ್ಕ್' ಸಂಸ್ಥೆಯು ದೇಶದ 10 ನಗರಗಳಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ಈ ಯೋಜನೆಯಿಂದ ಬೆಂಗಳೂರಿನಲ್ಲಿ ಶೇ. 23 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ. 21ರಷ್ಟು ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದು ನೇರವಾಗಿ ರಾಜ್ಯದ ತಲಾ ಆದಾಯ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ವರದಿಯು ಉಲ್ಲೇಖಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ನಾಯಕರು ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಸಬಲೀಕರಣದಲ್ಲಿ ಈ ಯೋಜನೆಯ ಮಹತ್ವವನ್ನು ಬಲವಾಗಿ ನಂಬಿದ್ದರು ಎಂದು ಸಚಿವ ರೆಡ್ಡಿ ಸ್ಮರಿಸಿದರು. "ಈ ವಿಶ್ವ ದಾಖಲೆಯು 'ಶಕ್ತಿ' ಯೋಜನೆಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೆಮ್ಮೆ ಮತ್ತು ಗೌರವದ ಕ್ಷಣವಾಗಿದೆ. ಇತರ ರಾಜ್ಯಗಳು ನಮ್ಮ 'ಶಕ್ತಿ' ಯೋಜನೆಯನ್ನು ಮಾದರಿಯಾಗಿಟ್ಟುಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಜಾರಿಗೆ ತರುತ್ತಿರುವುದೇ ನಮ್ಮ ಸರ್ಕಾರದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ," ಎಂದು ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.

Read More
Next Story