KPSC Controversy | Government decides to form an all-party parliamentary committee for radical reforms in KPSC
x

ಕಂದಾಯ ಸಚಿವ ಕೃಷ್ಣಬೈರೇಗೌಡ

KPSC Controversy | ಕೆಪಿಎಸ್‌ಸಿ ಸುಧಾರಣೆಗೆ ಸರ್ವಪಕ್ಷ ಸಮಿತಿ ರಚನೆ

ಕಳೆದ ವರ್ಷ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಕೆಇಎ ಮೂಲಕವೇ ಒಂದೂ ವಿವಾದಗಳಿಲ್ಲದಂತೆ ನೇಮಕಾತಿಯನ್ನು ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.


Click the Play button to hear this message in audio format

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಯಾವುದೇ ವಂಚನೆಗಳಿಲ್ಲದೆ ಪ್ರಕ್ರಿಯೆ ನಡೆಯುವಂತೆ ಮಾಡುವ ಸಲುವಾಗಿ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಿ, ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಕೆಪಿಎಸ್‌ಸಿಗೆ ಸುಧಾರಣೆ ತರಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡರು ತಿಳಿಸಿದರು.

ಬುಧವಾರ (ಮಾ.17) ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೆಪಿಎಸ್‌ಸಿ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಉತ್ತಮ ಗುಣಮಟ್ಟದ ಚರ್ಚೆಯಾಗಿರುವುದರಿಂದ ಸಂಸ್ಥೆಗೆ ಸುಧಾರಣೆ ತರುವ ಸಲುವಾಗಿ ಎಲ್ಲರೂ ತಮ್ಮ ಸಲಹೆಗಳನ್ನು ನೀಡಲು ಕೂಡಲೇ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಲಾಗುವುದು. ಈ ವೇಳೆ ಸದಸ್ಯರು ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು ಕೆಪಿಎಸ್‌ಸಿಯ ಕಾರ್ಯವೈಖರಿಯಲ್ಲಿ ಸುಧಾರಣೆ ತರಲಾಗುವುದು. ಸಮಿತಿಯಿಂದ ಮುಂದಿನ ಅಧಿವೇಶನದ ಒಳಗೆ ವರದಿಯನ್ನು ಪಡೆದುಕೊಳ್ಳಲಾಗುವುದು ಎಂದರು.

ಕೆಇಎ ಮೇಲೆ ವಿಶ್ವಾಸ ಹೆಚ್ಚು

"ಈ ಹಿಂದೆ ನಾನು ಕೃಷಿ ಸಚಿವರಾಗಿದ್ದಾಗ 120 ಮಂದಿ ಕೃಷಿ ಅಧಿಕಾರಿಗಳ ನೇಮಕಾತಿಯನ್ನು ಕೆಪಿಎಸ್‌ಸಿಯಿಂದ ಹಿಂಪಡೆದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಒಂದೂ ದೂರು ಬಾರದ ರೀತಿಯಲ್ಲಿ ಪಾರದರ್ಶಕವಾಗಿ ನೇಮಕಾತಿಯನ್ನು ಮಾಡಲಾಗಿತ್ತು. ಈಗ ಕಂದಾಯ ಸಚಿವರಾಗಿದ್ದು, ಕಳೆದ ವರ್ಷ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಕೆಇಎ ಮೂಲಕವೇ ಒಂದೂ ವಿವಾದಗಳಿಲ್ಲದಂತೆ ನೇಮಕಾತಿಯನ್ನು ಮಾಡಿದ್ದೇವೆ. ಹಾಗಾಗಿ ನಾನೇ ಕೆಪಿಎಸ್‌ಸಿ ಬಿಟ್ಟು ಕೆಇಎ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿರುವುದು ನನಗೂ ಕೆಪಿಎಸ್‌ಸಿಯ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಈಗ ಕೆಪಿಎಸ್‌ಸಿ ಬಗ್ಗೆ ನಾನೇ ಉತ್ತರ ನೀಡುವಾಗ ನನಗೆ ಜಿಜ್ಞಾಸೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು".

ಕೆಎಎಸ್‌ ಪರೀಕ್ಷೆಯಲ್ಲಿ ಅಕ್ರಮವಾಗಿಲ್ಲ

ಅಕ್ರಮ ನಡೆದಿದೆ ಎಂದು ಹೇಳಿದ ಪರೀಕ್ಷಾ ಕೊಠಡಿಯಲ್ಲಿರುವ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಇನ್ನು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಲ್ಲಿ ಯಾರೂ ಒಂದೇ ಕುಟುಂಬದವರಾಗಿರುವುದಿಲ್ಲ. ಇನ್ಷಿಯಲ್ ಒಂದೇ ಆಗಿರುವುದರಿಂದ ಇಂತಹ ಗೊಂದಲ ಆಗಿದೆ. ಆದರೂ ಕೆಪಿಎಸ್‌ಸಿ ಕಾರ್ಯವೈಖರಿ ಮೇಲೆ ದೂರುಗಳು ಬರುತ್ತಲೇ ಇರುವುದರಿಂದ ಅದರ ಸುಧಾರಣೆಗೆ ಸರ್ಕಾರ ಖಂಡಿತಾವಾಗಿ ಕ್ರಮವಹಿಸಲಿದೆ ಎಂದರು.

ಸುಧಾರಣೆ ಅಗತ್ಯ

ಕೆಪಿಎಸ್‌ಸಿ ಯಲ್ಲಿ ಏನೇ ತಪ್ಪಾದರೂ, ಜನರಿಗೆ ಸರ್ಕಾರದ ಮೇಲೆಯೇ ಸಿಟ್ಟು ಬರುತ್ತದೆ. ಆದರೆ ಇದು ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರ ಸಂಪೂರ್ಣ ನಿಯಂತ್ರಣ ಸರ್ಕಾರಕ್ಕೆ ಇರುವುದಿಲ್ಲ. ಆದರೆ ಉತ್ತರ ಕೊಡಬೇಕಾಗುವುದು ಮತ್ತು ಆರೋಪ ಬರುವುದು ಮಾತ್ರ ಸರ್ಕಾರದ ಮೇಲೆ. ಕೆಪಿಎಸ್‌ಸಿಗೆ ಸರ್ಕಾರ ಏನಾದರೂ ಸೂಚನೆ ಕೊಟ್ಟರೆ ನಾವು ಕಮಿಷನ್‌ನಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೂ ನಾವು ಈ ಸಂಸ್ಥೆಯನ್ನು ಸುಧಾರಣೆ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.

ನೇಮಕಾತಿ ಕ್ಯಾಲೆಂಡರ್‌ ಸಿದ್ದಪಡಿಸಲು ಸೂಚನೆ

ಈಗ ಹೆಚ್‌ಆರ್‌ಎಂಎಸ್‌ನಲ್ಲಿ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದು ತಿಳಿಯುವುದರಿಂದ, ಆರ್ಥಿಕ ಇಲಾಖೆಯ ಅಧಿಕಾರಿಗಳು ಮತ್ತು ಡಿಪಿಎಆರ್ ಅವರು ಒಟ್ಟಾಗಿ ಕುಳಿತು, ಮುಂಚಿತವಾಗಿಯೇ ಐದು ವರ್ಷಗಳಿಗೆ ಆಗುವಂತೆ ನೇಮಕಾತಿಗಾಗಿ ಕ್ಯಾಲೆಂಡರ್‌ ಸಿದ್ಧಪಡಿಸಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಕೆಇಎ ನಲ್ಲಿ ನಡೆಯುವ ಪರೀಕ್ಷೆಗಳ ಮೇಲೆ ದೂರುಗಳ ಬಾರದ ಹಿನ್ನೆಲೆಯಲ್ಲಿ ಕೆಇಎ ಅವರು ಹುದ್ದೆಗಳ ಭರ್ತಿಗೆ ಅಳವಡಿಸಿಕೊಂಡಿರುವ ಕೆಲವು ಕ್ರಮಗಳನ್ನು ಕೆಪಿಎಸ್‌ಸಿಯಲ್ಲಿಯೂ ಅಳವಡಿಸಲು ಕ್ರಮವಹಿಸಲಾಗುವುದು. ಇನ್ನು ʼಸಿʼ ಗ್ರೂಪ್ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಸಂದರ್ಶನ ಇಲ್ಲದಿರುವುದರಿಂದ ಅದರ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ, ನಿಗದಿತ ದಿನಗಳ ಪರಿಮಿತಿಯೊಳಗೆ ಮುಗಿಸುವಂತೆ ಮಾಡಲು ಕಾನೂನು ತರಬಹುದೇ ಎಂದು ಪರಿಶೀಲಿಸುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಕೆಪಿಎಸ್‌ಸಿಗೆ ನೇಮಕಾತಿ ಸಂದರ್ಭದಲ್ಲಿ ನಾವೇ ಸಮಯವನ್ನು ನೀಡಿ ನಿರ್ದೇಶನ ನೀಡುತ್ತೇವೆ ಎಂದರು.

ಪ್ರತೀ ವರ್ಷ ಕೆಎಎಸ್‌ ನೇಮಕಾತಿ

ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ನೇಮಕಾತಿಗಳು ಕಾಲ ಕಾಲಕ್ಕೆ ಆಗದಿರುವುದಕ್ಕೆ ಯುವಕರಲ್ಲಿ ಅಸಮಧಾನ ಮತ್ತು ಆಕ್ರೋಶವಿದೆ. ಹಾಗಾಗಿ ಗ್ರೂಪ್‌ ʼಎʼ ಮತ್ತು ಗ್ರೂಪ್‌ ʼಬಿʼ ಹುದ್ದೆಗಳನ್ನು ಪ್ರತಿ ವರ್ಷ ಮಾಡುವಂತೆ ಮತ್ತು ಪ್ರತಿ ವರ್ಷ ನಿರ್ದಿಷ್ಟ ದಿನಾಂಕವನ್ನು ನಿಗದಿ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಅಭ್ಯರ್ಥಿಗಳಿಗೆ ಈ ವರ್ಷ ಆಗದಿದ್ದರೆ ಮುಂದಿನ ವರ್ಷದ ನೇಮಕಾತಿಯಲ್ಲಿ ಭಾಗವಹಿಸಬಹುದು ಎಂಬ ಸಮಾಧಾನ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸದಸ್ಯರ ಸಂಖ್ಯೆ ಇಳಿಕೆ

ತುಂಬಾ ಹಳೆಯದಾಗಿರುವ ಕೆಪಿಎಸ್‌ಸಿ ಕಾಯ್ದೆಯನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು. ಇನ್ನು ಸಂಸ್ಥೆಯ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ಸರ್ಕಾರ ತೀರ್ಮಾನಿಸಿದೆ. ಆದರೆ ಈಗಿರುವ ಸದಸ್ಯರ ಅವಧಿ ಮುಗಿಯುವವರೆಗೆ ಕಾಯಬೇಕಾಗುತ್ತದೆ. 2027 ರ ಮೇ ಅಂತ್ಯಕ್ಕೆ ಕೆಪಿಎಸ್‌ಸಿ ಸದಸ್ಯರ ಸಂಖ್ಯೆ 8 ಕ್ಕೆ ಇಳಿಯುವುದರಿಂದ ಸದಸ್ಯರ ಸಂಖ್ಯೆಯನ್ನು 8 ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

Read More
Next Story