Centre killing dreams of KPSC students: MLA Sunil Kumar outraged
x

ಶಾಸಕ ಸುನೀಲ್‌ ಕುಮಾರ್‌

ಕೆಪಿಎಸ್‌ಸಿ ವಿದ್ಯಾರ್ಥಿಗಳ ಕನಸು ಹತ್ಯೆ ಮಾಡುವ ಕೇಂದ್ರ: ಸುನಿಲ್ ಕುಮಾರ್ ಲೇವಡಿ

ಕೆಪಿಎಸ್‌ಸಿ ಸಂಸ್ಥೆಯ ಬಗ್ಗೆ ಎಲ್ಲರಿಗೂ ಸಾಕಷ್ಟು ಅನುಮಾನವಿದೆ. ಇದೊಂದು ನಿಗೂಢ ಸಂಸ್ಥೆ. ರಹಸ್ಯವಾಗಿ ಪರೀಕ್ಷೆ ಮಾಡಿ, ಅದೇ ರೀತಿ ಫಲಿತಾಂಶ ಕೊಡುತ್ತಾರೆ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದರು.


Click the Play button to hear this message in audio format

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳಿಗೆ ನೇಮಕಾತಿ ಮಾಡಬೇಕು ಎಂದು ವಿದ್ಯಾರ್ಥಿಗಳು ರಾಜ್ಯಾದ್ಯಂತ ಹೋರಾಡುತ್ತಿದ್ದಾರೆ. ಯುವಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರೀಕ್ಷೆ ಬರೆಯಲು ಮುಂದಾದರೆ, ಸ್ಪರ್ಧಾರ್ಥಿಗಳ ಕನಸಿಗೆ ಕೆಪಿಎಸ್‌ಸಿ ಕೊಳ್ಳಿ ಇಡುತ್ತಿದೆ ಎಂದು ಶಾಸಕ ಸುನೀಲ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ (ಮಾ.12) ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ವೇಳೆ ಮಾತನಾಡಿದ ಅವರು, "ವಿದ್ಯಾರ್ಥಿಗಳ ಕನಸನ್ನು ಹತ್ಯೆ ಮಾಡುವ ಕೇಂದ್ರವಾಗಿ ಕೆಪಿಎಸ್‌ಸಿ ಮಾರ್ಪಟ್ಟಿದೆ. ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆ ಸಿಗಬೇಕು. ಅವರು ಕೇವಲ ಸರ್ಕಾರಿ ನೌಕರರು ಮಾತ್ರವಲ್ಲ, ರಾಜ್ಯದ ಭವಿಷ್ಯ ರೂಪಿಸುವವರು. ಭ್ರಷ್ಟಾಚಾರದ ಮೂಲಕ ಬರುವ ವ್ಯಕ್ತಿ ಹೇಗೆ ರಾಜ್ಯವನ್ನು ಕಟ್ಟಲು ಸಾಧ್ಯ?" ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿ ನಿಗೂಢ ಸಂಸ್ಥೆ

ಕೆಪಿಎಸ್‌ಸಿ ಸಂಸ್ಥೆಯ ಬಗ್ಗೆ ಎಲ್ಲರಿಗೂ ಸಾಕಷ್ಟು ಅನುಮಾನವಿದೆ. ಇದೊಂದು ನಿಗೂಢ ಸಂಸ್ಥೆ. ರಹಸ್ಯವಾಗಿ ಪರೀಕ್ಷೆ ಮಾಡಿ, ಅದೇ ರೀತಿ ಫಲಿತಾಂಶ ಕೊಡುತ್ತಾರೆ. ಹೀಗಾಗಿ ಕೆಪಿಎಸ್‌ಸಿ ಸುಧಾರಣೆಯಾಗಬೇಕು. ಈಗ ಆಗಿರುವ ಅಕ್ರಮವನ್ನು ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದರು.

ಒಎಂಆರ್‌ ತಿದ್ದುಪಡಿ

ಈ ಹಿಂದೆ ಎಇಇ ಪರೀಕ್ಷೆ ನಡೆದಿತ್ತು. ಒಎಂಆರ್‌ನಲ್ಲಿ ತಿದ್ದುಪಡಿ ಮಾಡಿ ಹೆಚ್ಚುವರಿ ಅಂಕಗಳನ್ನು ನೀಡಿದ್ದರು ಎಂಬ ಆರೋಪವಿತ್ತು. ಎಫ್‌ಡಿಎ ಪರೀಕ್ಷೆಯಾದಾಗಲೂ ಉತ್ತರ ಪತ್ರಿಕೆಗಳನ್ನು ಯಾರೋ ಮೌಲ್ಯಮಾಪನ ಮಾಡಿದ್ದನ್ನು ಎಲ್ಲರೂ ನೋಡಿದ್ದೆವು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಸುತ್ತದೆ; ಅದು ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅಲ್ಲಿ ಎಂದೂ ಅಕ್ರಮದ ಆರೋಪ ಕೇಳಿಬಂದಿಲ್ಲ. ಆದರೆ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳನ್ನು ಮಾತ್ರ ಅನುಮಾನದಿಂದ ನೋಡುವಂತಾಗಿದೆ ಎಂದು ತಿಳಿಸಿದರು.

ಕಾಲಮಿತಿಯಲ್ಲಿ ನೇಮಕ ಪೂರ್ಣಗೊಳಿಸಿ

ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳ ಅಕ್ರಮದಿಂದಲೇ ವಿದ್ಯಾರ್ಥಿಗಳು ಬೀದಿಗಿಳಿಯುತ್ತಿದ್ದಾರೆ. ಯಾವುದಾದರೂ ಪರೀಕ್ಷೆ ನಡೆಸಿದರೆ ಫಲಿತಾಂಶ ಕೊಡಲು ಮೂರು ವರ್ಷ ಸಮಯ ವ್ಯರ್ಥ ಮಾಡುತ್ತಾರೆ. ಒಂದು ಪರೀಕ್ಷೆ ಬರೆದ ಬಳಿಕ, ನಾಲ್ವರು ಕಾರ್ಯದರ್ಶಿಗಳು ಬದಲಾಗುತ್ತಾರೆ. ಆದರೆ, ಪರೀಕ್ಷಾ ಕಂಟ್ರೋಲರ್ ಒಬ್ಬರೇ ಇರುತ್ತಾರೆ. ಈ ಸಮಯದಲ್ಲಿ ಅನೇಕ‌ ಹಣದ ಅವ್ಯವಹಾರವಾಗುತ್ತದೆ ಎಂಬ ಆರೋಪವೂ ಇದೆ. ಈ ಸಂದರ್ಭದಲ್ಲಿ ಯಾರ ಮೇಲೆ ನಂಬಿಕೆ ಇಡಬೇಕು? ಕಂಟ್ರೋಲರ್ ಕೆಲಸವನ್ನು ಯಾರು ಮಾಡುತ್ತಾರೆ? ಎಂದು ಪ್ರಶ್ನಿಸಿದರು.

ಸರ್ಕಾರಿ ಹುದ್ದೆ ಸಾಮಾನ್ಯ ಜನರಿಗೆ, ಅರ್ಹತೆ ಇರುವವರಿಗೆ ಸಿಗುವುದು ಬೇಡವೇ? ಹಣ ಇರುವವರಿಗೆ ಮಾತ್ರ ಕೆಲಸ ಸಿಗಬೇಕೇ? ಕೆಎಎಸ್‌ ಮುಖ್ಯ ಪರೀಕ್ಷೆ ಹಲವು ಕೇಂದ್ರಗಳಲ್ಲಿ ನಡೆದಿದೆ. ಆದರೆ, ಒಂದೇ ಕೊಠಡಿಯಲ್ಲಿ, ಒಂದೇ ಸೀರಿಯಲ್‌ ನಂಬರ್‌ನಲ್ಲಿ ಪಾಸ್ ಆಗಿರುವವರ ಮೇಲೆ ಅನುಮಾನವಿದೆ. ಒಂದೇ ಕುಟುಂಬದ ನಾಲ್ಕು ಜನ ಅರ್ಹತೆ ಪಡೆದಿದ್ದಾರೆ ಎನ್ನುವುದು ಈಗ ಪ್ರಶ್ನೆ. ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದರು.

ಪಿ.ಸಿ. ಹೋಟಾ ಸಮಿತಿ ವರದಿ ಅಳವಡಿಸಿಕೊಳ್ಳಿ

ಕೆಪಿಎಸ್‌ಸಿ ವ್ಯಕ್ತಿತ್ವ ಪರೀಕ್ಷೆಯನ್ನು ನಿಲ್ಲಿಸಬೇಕು. ಕೆಎಎಸ್‌ ಮುಖ್ಯ ಪರೀಕ್ಷೆ ನಡೆದಾಗ ಪ್ರಶ್ನೆ ಪತ್ರಿಕೆಯ ಬಂಡಲ್‌ಗೆ ಸೀಲ್ ಇರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಕೆಪಿಎಸ್‌ಸಿ ಮೇಲೆ ಹಲವು ಬಾರಿ ಆರೋಪ‌ ಬಂದಿದೆ. ಅನೇಕ ಬಾರಿ ಸರ್ಕಾರ ಕ್ರಮಕ್ಕೆ ಸೂಚಿಸಿದರೂ, ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಶೀಘ್ರವೇ ಪಿ.ಸಿ. ಹೋಟಾ ಸಮಿತಿ ವರದಿಯನ್ನು ಅಳವಡಿಸಿಕೊಳ್ಳಬೇಕು. ಒಂದು ನೇಮಕಾತಿ ಅಧಿಸೂಚನೆ ಹೊರಡಿಸಿದ ನಂತರ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಬಾರದು ಎಂದು ಸಲಹೆ ನೀಡಿದರು.

Read More
Next Story