
ಕರ್ನಾಟಕ ಲೋಕಸೇವಾ ಆಯೋಗ
KPSC Scams| ಹಗರಣಗಳಲ್ಲಿ ಮುಳುಗಿದ ಉದ್ಯೋಗ ಸಂಸ್ಥೆ: ಕೆಪಿಎಸ್‌ಸಿಗಿಂತ ಕೆಇಎ ಉತ್ತಮವೇ?
ಇತ್ತೀಚೆಗೆ ಪರೀಕ್ಷಾ ಕೇಂದ್ರದಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಎಸ್ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿದ್ದು, ಒಂದೇ ಕುಟುಂಬದ ನಾಲ್ವರ ಹೆಸರು ಪಟ್ಟಿಯಲ್ಲಿದೆ ಎಂಬ ಆರೋಪವಿದೆ.
ಸರ್ಕಾರಿ ಅಧಿಕಾರಿಯಾಗಬೇಕು ಎಂದು ಹಗಲಿರುಳು ಕಷ್ಟಪಟ್ಟು ಓದುವ ಲಕ್ಷಾಂತರ ಸ್ಪರ್ಧಾರ್ಥಿಗಳ ಪಾಲಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ-KPSC) 'ವಿಶ್ವಾಸದ್ರೋಹ'ದ ಕೇಂದ್ರವಾಗಿ ಮಾರ್ಪಟ್ಟಿದೆ. 1998ರ ಕೆಎಎಸ್ ಹಗರಣದಿಂದ ಹಿಡಿದು ಇತ್ತೀಚಿನ ಎಫ್‌ಡಿಎ ಪೇಪರ್ ಲೀಕ್ ಹಾಗೂ ಒಎಂಆರ್ ತಿದ್ದುವಿಕೆಯವರೆಗೂ ಬಗೆಬಗೆಯ ಹಗರಣಗಳಲ್ಲಿ ಮುಳುಗಿರುವ ಆಯೋಗದ ವಿರುದ್ಧ ಇದೀಗ 2024ರ ಕೆಎಎಸ್ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ಹೈಕೋರ್ಟ್‌ನಿಂದ ಹಲವು ಬಾರಿ ಛೀಮಾರಿ ಹಾಕಿಸಿಕೊಂಡರೂ ತನ್ನ ಕಾರ್ಯವೈಖರಿ ತಿದ್ದಿಕೊಳ್ಳದ ಕೆಪಿಎಸ್‌ಸಿ ಮೇಲಿನ ನಂಬಿಕೆ ಕಳೆದುಕೊಂಡಿದೆ.
ಕೆಪಿಎಸ್‌ಸಿಯ ಕಳೆದ ಮೂರು ದಶಕಗಳ ಕಾರ್ಯವೈಖರಿ ಹಾಗೂ ಇತಿಹಾಸ ಗಮನಿಸಿದರೆ, ಯಾವುದೇ ನೇಮಕಾತಿಯೂ ಕೆಎಟಿ ಅಥವಾ ಕೋರ್ಟ್‌ಗೆ ಹೋಗದೆ ಪೂರ್ಣಗೊಂಡಿಲ್ಲ. ಫಲಿತಾಂಶ ಪ್ರಕಟವಾಗುವ ವೇಳೆಗೆ ಕನಿಷ್ಠ 2ರಿಂದ 3 ವರ್ಷ ಕಳೆದುಹೋಗುತ್ತವೆ. ಎಷ್ಟೋ ಬಾರಿ ಅಭ್ಯರ್ಥಿಗಳು ತಮ್ಮ ವಯೋಮಿತಿ ಮೀರುವವರೆಗೂ ಕೆಪಿಎಸ್‌ಸಿ ಹಾಗೂ ಕೋರ್ಟ್‌ಗೆ ಅಲೆದಾಡಿದ್ದಾರೆ.
ಇದೀಗ ಕೆಪಿಎಸ್‌ಸಿ ಮೇಲೆ 2024ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದೇ ಪರೀಕ್ಷಾ ಕೇಂದ್ರದಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿದ್ದು, ಒಂದೇ ಕುಟುಂಬದ ನಾಲ್ವರ ಹೆಸರು ಪಟ್ಟಿಯಲ್ಲಿವೆ ಎಂದು ವಿರೋಧ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಪಿಎಸ್‌ಸಿ ಕಾರ್ಯದರ್ಶಿಗೆ ಸೂಕ್ತ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಪ್ರಾಮಾಣಿಕ ಆಡಳಿತ ಮಂಡಳಿ ಅಗತ್ಯ
ಹೆಸರೇಳಲಿಚ್ಚಿಸದ ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ, "ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರು ಸೇರಿದಂತೆ ಸದಸ್ಯರೆಲ್ಲರೂ ಪ್ರಮಾಣಿಕರಾಗಿದ್ದರೆ ಕೆಪಿಎಸ್‌ಸಿಯನ್ನುಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ- UPSC)ದಂತೆ ದಕ್ಷ ಸಂಸ್ಥೆಯನ್ನಾಗಿ ಮಾಡಬಹುದು. ಈ ಮೊದಲು ಸಂದರ್ಶನದಲ್ಲಿ ಅಕ್ರಮಗಳು ನಡೆಯುತ್ತವೆ ಎಂಬ ಆರೋಪ ಇತ್ತು. ಆದರೆ ಇದೀಗ 2024ರ ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿಯೇ ಅಕ್ರಮಗಳ ಆರೋಪ ಕೇಳಿಬಂದಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಒಬ್ಬರು ಅಥವಾ ಇಬ್ಬರು ಮುಖ್ಯ ಪರೀಕ್ಷೆಗೆ ಆಯ್ಕೆಯಾದರೆ ಅದೇ ದೊಡ್ಡ ವಿಷಯ. ಆದರೆ ಈ ಬಾರಿ ಒಂದೇ ಪರೀಕ್ಷಾ ಕೇಂದ್ರದಿಂದ 15 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಆಶ್ಚರ್ಯ ಹಾಗೂ ಸಂಶಯ ಮೂಡಿಸಿದೆ" ಎಂದು ಅಭಿಪ್ರಾಯಟ
"ಈ ಹಿಂದೆ ನಡೆದಿದ್ದ ಎಇಇ ಪರೀಕ್ಷೆಯಲ್ಲಿ ಒಎಂಆರ್ ತಿದ್ದಿದ ಆರೋಪವಿತ್ತು. ಯಾವುದೇ ಪರೀಕ್ಷೆಯಲ್ಲಿ ಅಕ್ರಮ, ಒಎಂಆರ್ ತಿದ್ದುವಿಕೆ, ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರೂ ಭಾಗಿಯಾಗಿರುವ ಸಾಧ್ಯತೆ ಇದೆ. ಕೆಲವೊಮ್ಮೆ ಅಧ್ಯಕ್ಷರು ಹಾಗೂ ಅಧಿಕಾರಿಗಳೂ ಶಾಮೀಲಾಗಿರುವುದು ಅಲ್ಲಗಳೆಯುವಂತಿಲ್ಲ. ಕೆಪಿಎಸ್‌ಸಿ ಕಾರ್ಯದರ್ಶಿಗಳಾಗಿ ಅಧಿಕಾರ ವಹಿಸಿಕೊಂಡಿದ್ದ ಸುಬೋಧ್ ಯಾದವ್, ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಕೆ.ಎಸ್. ಲತಾ ಕುಮಾರಿ ಯುಪಿಎಸ್‌ಸಿಯಂತೆ ವಾರ್ಷಿಕ ವೇಳಾಪಟ್ಟಿ, ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಲು ಪ್ರಮಾಣಿಕ ಪ್ರಯತ್ನ ಮಾಡಿದರೂ, ಅವರನ್ನು ಅಲ್ಲಿಂದ ಬೇಗನೇ ಸರ್ಕಾರ ವರ್ಗಾವಣೆಗೊಳಿಸಿತ್ತು,'' ಎಂದು ಆರೋಪಿಸಿದರು.
"ಹಲವು ಪ್ರಕರಣದಲ್ಲಿ ಹೈಕೋರ್ಟ್ ಕೂಡ ಕೆಪಿಎಸ್‌ಸಿ ವಿರುದ್ಧ ಕಟು ಟೀಕೆ ಮಾಡಿತ್ತು. ಸಂವಿಧಾನಾತ್ಮಕ ಸಂಸ್ಥೆಯಾಗಿದ್ದರೂ ಪ್ರಮಾಣಿಕವಾಗಿ ತನ್ನ ಕಾರ್ಯನಿರ್ವಹಿಸುವಲ್ಲಿ ಕೆಪಿಎಸ್‌ಸಿ ತನ್ನ ಬದ್ಧತೆ ಪ್ರದರ್ಶಿಸಿಲ್ಲ. ಯಾವುದೇ ನೇಮಕ ಪ್ರಕ್ರಿಯೆಗಳು ಕೋರ್ಟ್‌ಗೆ ಬರದೆ ಫಲಿತಾಂಶ ಪ್ರಕಟಿಸಿಲ್ಲ. ಎಲ್ಲವೂ ನ್ಯಾಯಾಲಯದಲ್ಲೇ ಬಗೆಹರಿಯುವುದಾದರೆ ಕೆಪಿಎಸ್‌ಸಿಯನ್ನು ಮುಚ್ಚುವುದು ಉತ್ತಮ ಎಂದು ಛೇಡಿಸಿತ್ತು. ರಾಜ್ಯ ಸರ್ಕಾರ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವಾಗ ಪ್ರಮಾಣಿಕ ವ್ಯಕ್ತಿಗಳನ್ನು ನೇಮಕ ಮಾಡಿದರೆ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿತ್ತು,'' ಎಂದು ಅವರು ಹೇಳಿದರು.
ಸಲಹಾ ಸಮಿತಿ ರಚನೆಗೆ ಆಗ್ರಹ
ಅಖಿಲ ಕರ್ನಾಟಕ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್ ಮರೂರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ "ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಬೇಕು. ಕೆಪಿಎಸ್‌ಸಿ ಸ್ವೀಕರಿಸಿರುವ ನೇಮಕ ಪ್ರಸ್ತಾವನೆಗಳನ್ನು ಅಧಿಸೂಚನೆ ಹೊರಡಿಸಿ ಕಾಲಮಿತಿಯೊಳಗೆ ಫಲಿತಾಂಶ ನೀಡಬೇಕು. ಸಾಮಾನ್ಯವಾಗಿ ಎಲ್ಲಾ ನೇಮಕಗಳಲ್ಲೂ ಅಕ್ರಮದ ಆರೋಪಗಳು ಬರುತ್ತಲೇ ಇವೆ. ಆದ್ದರಿಂದ ಕೆಪಿಎಸ್‌ಸಿ ಆಂತರಿಕ ತನಿಖಾ ಸಮಿತಿ ರಚಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಗಳನ್ನು ಕಾಲಮಿತಿಯಲ್ಲಿ ಮುಗಿಸಿ ಫಲಿತಾಂಶ ನೀಡುತ್ತಿದೆ. ಆದೇ ರೀತಿಯಾಗಿ ಕೆಪಿಎಸ್‌ಸಿ ವೇಗ ಪಡೆದುಕೊಂಡು ವಿದ್ಯಾರ್ಥಿಗಳಲ್ಲಿ ನಂಬಿಕೆ ಮೂಡಿಸಬೇಕು. ಮುಂದೆ ನಡೆಯುವ ಎಲ್ಲಾ ನೇಮಕಾತಿಗಳಲ್ಲೂ ಒಳ ಮೀಸಲಾತಿ ಅನ್ವಯವೇ ಅಧಿಸೂಚನೆ ಹೊರಡಿಸಬೇಕು" ಎಂದು ತಿಳಿಸಿದರು.
ಕೆಇಎಗೆ ಹಲವು ನೇಮಕಾತಿ ವರ್ಗ
ಕೆಪಿಎಸ್‌ಸಿ ನಡೆಸುವ ನೇಮಕಗಳಲ್ಲಿ ಅಕ್ರಮ ಮತ್ತು ವಿಳಂಬವಾಗುತ್ತಿದೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮಮಂಡಳಿಗಳು ಇದೀಗ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೆಇಎಗೆ ಪ್ರಸ್ತಾವನೆ ಸಲ್ಲಿಸುತ್ತಿವೆ. ಕೆಪಿಎಸ್‌ಸಿ ವ್ಯಾಪ್ತಿಯಲ್ಲಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಸ್‌ಡಿಎಲ್), ಕೆಪಿಟಿಸಿಎಲ್ , ಗ್ರೂಪ್ 'ಸಿ' ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಯನ್ನು ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ-KEA )ಮೂಲಕ ಭರ್ತಿ ಮಾಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಟಾಫ್ ನರ್ಸ್ ಮತ್ತು ಇತರ ಕೆಲವು ವೈದ್ಯಕೀಯ ಹುದ್ದೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಯನ್ನು ಇದೀಗ ಕೆಇಎ ನಡೆಸುತ್ತಿದೆ.
ಕೆಇಎಯಿಂದ ಪರೀಕ್ಷೆ ನಿಯಮಗಳಲ್ಲಿ ಸುಧಾರಣೆ
ಹಲವು ಇಲಾಖೆಗಳೇ ನಡೆಸುತ್ತಿದ್ದ ನೇಮಕಗಳನ್ನು ವೇಗವಾಗಿ ಹಾಗೂ ಪಾರದರ್ಶಕವಾಗಿ ಮಾಡುವ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯದಲ್ಲಿ ವಿದ್ಯಾರ್ಥಿಗಳ ವಿಶ್ವಾಸಗಳಿಸಿದೆ. ಬಿಎಂಟಿಸಿಯ 2,500 ನಿರ್ವಾಹಕ ಹುದ್ದೆಗಳು, ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯ 1,001 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು, ವಿವಿಧ ಇಲಾಖೆಗಳ 650 ಗ್ರೂಪ್ ʼಸಿʼ ಹುದ್ದೆಗಳು, ಬಿಬಿಎಂಪಿ ವ್ಯಾಪ್ತಿಯ 404 ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ ಹುದ್ದೆಗಳು, 545 ಹಾಗೂ 402 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಯಶಸ್ವಿಯಾಗಿ ನಡೆಸಿ ಬೇಗ ಫಲಿತಾಂಶ ಪ್ರಕಟಿಸಿತ್ತು. ಇದೀಗ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ತನ್ನ ವ್ಯಾಪ್ತಿಯಲ್ಲಿನ ನೇಮಕಗಳ ಪ್ರಸ್ತಾವನೆ ಕೆಇಎಗೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸುವ ಮೂಲಕ ಸ್ಪರ್ಧಾರ್ಥಿಗಳ ವಿಶ್ವಾಸವನ್ನೂ ಹೆಚ್ಚಿಸಿದೆ.
"ಕೆಇಎ ಸರ್ಕಾರದ ನೇರ ನಿಯಂತ್ರಣದಲ್ಲಿದ್ದು, ಕೆಪಿಎಸ್‌ಸಿಯಂತಹ ಸ್ವಾಯತ್ತ ಸಂಸ್ಥೆಯಲ್ಲ. ಒಂದು ವೇಳೆ, ಅಲ್ಲೂ ಅವ್ಯವಹಾರ ಆರೋಪಗಳು ಕೇಳಿಬಂದರೆ, ನೇರವಾಗಿ ಪ್ರಶ್ನಿಸಲು ಸುಲಭಸಾಧ್ಯವಲ್ಲ. ಒಂದು ರೀತಿಯಲ್ಲಿ ಕೆಪಿಎಸ್‌ಸಿಯ ಅನಾಹುತಗಳಿಂದಾಗಿ ಪ್ರಮುಖ ಪರೀಕ್ಷೆಗಳನ್ನು ಕೆಇಎಗೆ ವರ್ಗಾಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ, ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಹೆಸರು ಹೇಳಲಿಚ್ಚಿಸದ ಕೆಪಿಎಸ್‌ಸಿ ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.
ಕೆಪಿಎಸ್‌ಸಿ ಹಿಂದಿನ ಪ್ರಮುಖ ಹಗರಣಗಳು
1998ರ ಕೆಎಎಸ್ (KAS) ನೇಮಕಾತಿ ಹಗರಣ
1998 ರ ಕೆಎಎಸ್ ನೇಮಕ ಅಧಿಸೂಚನೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ನಡೆದ ಕಾನೂನು ಸಮರಗಳಲ್ಲಿ ಒಂದಾಗಿದೆ. ಈ ಹಗರಣದಲ್ಲಿ ಅಂಕಗಳ ತಿದ್ದುವಿಕೆ, ಮೀಸಲಾತಿ ನಿಯಮಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಅಂಕಗಳನ್ನು ಹೆಚ್ಚಿಸುವುದು ಮತ್ತು ಸಂದರ್ಶನದಲ್ಲಿ ತಾರತಮ್ಯ ಎಸಗಿದ ಆರೋಪಗಳನ್ನು ಸಿಐಡಿ (CID) ತನಿಖೆ ನಡೆಸಿ ದೃಢಪಡಿಸಿತ್ತು. ಕೆಲವು ಅಭ್ಯರ್ಥಿಗಳು ಕೆಲಸ ಪಡೆಯಲು ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ಪತ್ತೆಯಾಗಿತ್ತು. ಈ ಪ್ರಕರಣವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೆ ಹೋಗಿತ್ತು. ಅಂತಿಮವಾಗಿ, ಸುಪ್ರೀಂ ಕೋರ್ಟ್ 1998ರ ಬ್ಯಾಚ್‌ನ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ನವೆಂಬರ್ 2019 ರಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಅಂತಿಮವಾಗಿ ಕ್ರಮ ಕೈಗೊಂಡು, 36 ಕೆಎಎಸ್ (KAS) ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. 12 ಐಎಎಸ್ (IAS) ಅಧಿಕಾರಿಗಳನ್ನು ಕೆಎಎಸ್ ಶ್ರೇಣಿಗೆ ಹಿಂಬಡ್ತಿ ನೀಡಿತ್ತು. 155 ಅಧಿಕಾರಿಗಳನ್ನು ಇತರ ಇಲಾಖೆಗಳಿಗೆ ವರ್ಗಾಯಿಸಲಾಯಿತು. ಈ ಅಕ್ರಮದಿಂದಾಗಿ ಕೆಲಸ ವಂಚಿತರಾಗಿದ್ದ 28 ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ, ಅವರಿಗೆ 2019ರಲ್ಲಿ ಸರ್ಕಾರ ನೇಮಕಾತಿ ಆದೇಶ ನೀಡಿತ್ತು.
2011ರ ಹಗರಣ
362 ಅಭ್ಯರ್ಥಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಅಂದಿನ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಲಾಗಿತ್ತು. ಈ ಹಗರಣವು ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ನಂತರ ಬಸವರಾಜ ಬೊಮ್ಮಾಯಿ ಸರ್ಕಾರವು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸುಗ್ರೀವಾಜ್ಞೆ ತಂದು ಅಂತಿಮ ಪಟ್ಟಿಯಲ್ಲಿದ್ದ ಎಲ್ಲರಿಗೂ ಹುದ್ದೆ ನೀಡಲಾಯಿತು.
ಎಇಇ ನೇಮಕ ಪ್ರಕರಣ
ಕೆಪಿಎಸ್‌ಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿ ಪರೀಕ್ಷೆ ನಡೆಸಿತ್ತು. ಆದರೆ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿದ ಹಗರಣ ಕಳೆದ ವರ್ಷ ವರದಿಯಾಗಿತ್ತು. ಈ ಕುರಿತು ಹೈಕೋರ್ಟ್ ಕೆಪಿಎಸ್‌ಸಿಗೆ ಮರು ಪರೀಕ್ಷೆ ನಡೆಸಿ ಫಲಿತಾಂಶ ಕಠಿಣ ಆದೇಶ ನೀಡಿ ಎಚ್ಚರಿಕೆ ನೀಡಿತ್ತು.
ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ
ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ನಡೆಸಲು ಜನವರಿ 24, 2021 ರಂದು ಸಿದ್ಧತೆ ನಡೆಸಿತ್ತು. ಆದರೆ ಎಫ್‌ಡಿಎ ಪರೀಕ್ಷೆಯ ಸಾಮಾನ್ಯ ಜ್ಞಾನ ಮತ್ತು ಕನ್ನಡ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ತಕ್ಷಣವೇ ರದ್ದುಗೊಳಿಸಿ ಮುಂದೂಡಲಾಗಿತ್ತು. ತನಿಖೆಯ ವೇಳೆ ಕೆಪಿಎಸ್‌ಸಿ ಕಚೇರಿಯ ಸಿಬ್ಬಂದಿಗಳೇ ಈ ಸೋರಿಕೆಯ ಹಿಂದಿರುವುದು ಪತ್ತೆಯಾಗಿತ್ತು. ಪರೀಕ್ಷಾ ನಿಯಂತ್ರಕರ ವಿಭಾಗದ ಶೀಘ್ರಲಿಪಿಗಾರ್ತಿ ಸನಾ ಬೇಡಿ ಮತ್ತು ದ್ವಿತೀಯ ದರ್ಜೆ ಸಹಾಯಕ ರಮೇಶ್ ಅವರು ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಸೂತ್ರಧಾರಿಗಳು ಎಂದು ಸಿಸಿಬಿ ಪೊಲೀಸರು ತನಿಖೆಯಲ್ಲಿ ತಿಳಿಸಿದ್ದರು.
ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೆಪಿಎಸ್‌ಸಿ ಮೂವರು ಸಿಬ್ಬಂದಿಗಳಾದ ಬಸವರಾಜ ಎಲ್. ಕುಂಬಾರ್, ಸನಾ ಮತ್ತು ರಾಮಪ್ಪ ಎ. ಹೆರಕಲ್‌ನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿತ್ತು. ಸಿಸಿಬಿ ಪೊಲೀಸರು ಬೆಂಗಳೂರು ಮತ್ತು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೆಪಿಎಸ್‌ಸಿ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಸೇರಿದಂತೆ ಹಲವರನ್ನು ಬಂಧಿಸಿದ್ದರು. ಬಂಧಿತ ರಮೇಶ್ ಬೆಂಗಳೂರು ಮತ್ತು ಬಾಗಲಕೋಟೆಯಲ್ಲಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ. ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ, ಒಟ್ಟು 18ಕ್ಕೂ ಮಂದಿಯನ್ನು ಬಂಧಿಸಿದ್ದರು.
ಹೈಕೋರ್ಟ್‌ನಿಂದ ಹಲವು ಬಾರಿ ಛೀಮಾರಿ
ಕರ್ನಾಟಕ ಲೋಕಸೇವಾ ಆಯೋಗ ಹಲವು ಬಾರಿ ತನ್ನ ಯಡವಟ್ಟುಗಳಿಂದ ಹೈಕೋರ್ಟ್ ಹಾಗೂ ಕೆಎಟಿಯಿಂದ ಛೀಮಾರಿ ಹಾಕಿಸಿಕೊಂಡಿದೆ. ಸಹಾಯಕ ಎಂಜಿನಿಯರ್ (AE) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ, ದಾಖಲೆಗಳನ್ನು ಒದಗಿಸಲು ವಿಳಂಬ ಮಾಡುತ್ತಿದ್ದ ಆಯೋಗಕ್ಕೆ ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿತ್ತು. "ನಿಮ್ಮ ಸೊಕ್ಕಿನ ನಡತೆ ಬಿಡಿ, ಕೇಳಿದಾಗ ದಾಖಲೆಗಳನ್ನು ಲಾರಿಯಲ್ಲಿ ತಂದಾದರೂ ಒಪ್ಪಿಸಿ" ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿನ ಅವ್ಯವಸ್ಥೆ ಮತ್ತು ಅಕ್ರಮದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯ ಇಬ್ಬರು ಕಾರ್ಯದರ್ಶಿಗಳ ಪಾತ್ರದ ಬಗ್ಗೆ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿತ್ತು. 1998, 1999 ಮತ್ತು 2004ನೇ ಸಾಲಿನ ಕೆಎಎಸ್ ನೇಮಕಾತಿ ಹಗರಣದ ಸಂದರ್ಭದಲ್ಲೂ ಹೈಕೋರ್ಟ್‌ನ ವಿಭಾಗೀಯ ಪೀಠವು ಆಯೋಗದ ನಡೆಯನ್ನು ಖಂಡಿಸಿತ್ತು.
ಜೈಲು ಸೇರಿದ್ದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ
ಕೆಪಿಎಸ್‌ಸಿ ನಡೆಸಿದ್ದ 1998, 1999 ಮತ್ತು 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಅಧ್ಯಕ್ಷ ಎಚ್.ಎನ್. ಕೃಷ್ಣರನ್ನು ಸಿಸಿಬಿ 2011 ಅಕ್ಟೋಬರ್‌ನಲ್ಲಿ ಬಂಧಿಸಿತ್ತು. ಅರ್ಹ ಅಭ್ಯರ್ಥಿಗಳಿಗೆ ಕಡಿಮೆ ಅಂಕ ನೀಡಿ, ತಮಗೆ ಬೇಕಾದವರಿಗೆ ಸಂದರ್ಶನದಲ್ಲಿ ಅತಿ ಹೆಚ್ಚು ಅಂಕ ನೀಡಿರುವುದು, ನೇಮಕಾತಿ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮಾಡಿ ಅಕ್ರಮ ಎಸಗಿರುವುದು ಹಾಗೂ ಒಬ್ಬ ಅಭ್ಯರ್ಥಿಗೆ ಬೆದರಿಕೆ ಹಾಕಿದ ಆರೋಪ ಕೂಡ ಇವರ ಮೇಲಿತ್ತು.
ವ್ಯಕ್ತಿತ್ವ ಸಂದರ್ಶನ ವೇಳಾಪಟ್ಟಿ ವಾಪಸ್
ಕೆಪಿಎಸ್‌ಸಿ ಇತ್ತೀಚೆಗೆ ಕೆಎಎಸ್ ಸಂದರ್ಶನದ ದಿನಾಂಕವನ್ನು ಪ್ರಕಟಿಸಿತ್ತು. ಆದರೆ ಮುಖ್ಯ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷದ ನಾಯಕರು ವಿಧಾನಸಭೆಯಲ್ಲಿ ಆರೋಪ ಮಾಡಿ, ಸಂದರ್ಶನಕ್ಕೆ ಪ್ರಕಟಿಸಿರುವ ಪ್ರಕಟಣೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ರಾಜ್ಯಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾದ ಹಿನ್ನೆಲೆ, ಕೆಪಿಎಸ್‌ಸಿ ತನ್ನ ಸಂದರ್ಶನಕ್ಕೆ ಹೊರಡಿಸಿದ್ದ ವೇಳಾಪಟ್ಟಿಯನ್ನು ಆಡಳಿತಾತ್ಮಕ ಉದ್ದೇಶದಿಂದ ವಾಪಸ್ ಪಡೆಯಲಾಗಿದೆ. ಪರಿಷ್ಕೃತ ದಿನಾಂಕ ಹಾಗೂ ಸಮಯವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

