
ಸಾಂದರ್ಭಿಕ ಚಿತ್ರ
ಸರ್ಕಾರಿ ಎಂಬಿಬಿಎಸ್ ವೈದ್ಯರಿಗೂ ಇನ್ಮುಂದೆ 'ಸ್ಕ್ಯಾನಿಂಗ್' ತರಬೇತಿ; ಯಾವೆಲ್ಲ ಆಸ್ಪತ್ರೆಗಳು ಆಯ್ಕೆ
ಈ ಮಹತ್ವದ ಯೋಜನೆಗಾಗಿ ರಾಜ್ಯದಾದ್ಯಂತ ಒಟ್ಟು 11 ಪ್ರಮುಖ ಆಸ್ಪತ್ರೆಗಳನ್ನು ತರಬೇತಿ ಕೇಂದ್ರಗಳಾಗಿ ಗುರುತಿಸಲಾಗಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆಯನ್ನು ನೀಗಿಸಲು ಮತ್ತು ತಾಯಿ-ಮಗುವಿನ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇನ್ನು ಮುಂದೆ ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯಾಧಿಕಾರಿಗಳಿಗೂ ಅಲ್ಟ್ರಾಸೋನೊಗ್ರಫಿ (ಸ್ಕ್ಯಾನಿಂಗ್) ತರಬೇತಿ ನೀಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದು, ಇದಕ್ಕೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ.
ರೇಡಿಯಾಲಜಿಸ್ಟ್‌ಗಳ ಕೊರತೆಗೆ ಪರಿಹಾರ
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸಕಾಲದಲ್ಲಿ ಪ್ರಸವಪೂರ್ವ ಮತ್ತು ಪ್ರಸವೋತ್ತರ ಸ್ಕ್ಯಾನಿಂಗ್ ಸೇವೆ ಒದಗಿಸುವುದು ಸವಾಲಾಗಿತ್ತು. ಇದನ್ನು ಮನಗಂಡ ಸರ್ಕಾರ, ಹಾಲಿ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರಿಗೆ ಆರು ತಿಂಗಳ ಅಲ್ಟ್ರಾಸೋನೊಗ್ರಫಿ ತರಬೇತಿ ನೀಡಲು ನಿರ್ಧರಿಸಿದೆ. ಈ ತರಬೇತಿಯನ್ನು ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಹಾಗೂ 2014ರ ತರಬೇತಿ ನಿಯಮಗಳ ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ತರಬೇತಿ ಕೇಂದ್ರಗಳು ಮತ್ತು ವೈದ್ಯರ ಆಯ್ಕೆ
ಈ ಮಹತ್ವದ ಯೋಜನೆಗಾಗಿ ರಾಜ್ಯದಾದ್ಯಂತ ಒಟ್ಟು 11 ಪ್ರಮುಖ ಆಸ್ಪತ್ರೆಗಳನ್ನು ತರಬೇತಿ ಕೇಂದ್ರಗಳಾಗಿ ಗುರುತಿಸಲಾಗಿದೆ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಮಂಗಳೂರಿನ ಲೇಡಿ ಘೋಷನ್ ಮತ್ತು ವೆನ್ಲಾಕ್ ಆಸ್ಪತ್ರೆ, ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಚಿಕ್ಕಬಳ್ಳಾಪುರ, ಧಾರವಾಡ, ತುಮಕೂರು, ವಿಜಯಪುರ, ಬಳ್ಳಾರಿ, ಕೋಲಾರ ಮತ್ತು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ತರಬೇತಿ ಲಭ್ಯವಿರುತ್ತದೆ.
ಒಟ್ಟು 23 ನುರಿತ ಅಧ್ಯಾಪಕರ ಮಾರ್ಗದರ್ಶನದಲ್ಲಿ ಮೊದಲ ಹಂತದಲ್ಲಿ 69 ವೈದ್ಯಾಧಿಕಾರಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಯ ಗುಣಮಟ್ಟ ಕಾಪಾಡಲು ಪ್ರತಿ ಒಬ್ಬ ಅಧ್ಯಾಪಕರಿಗೆ ಮೂರು ವಿದ್ಯಾರ್ಥಿಗಳಂತೆ (1:3) ಅನುಪಾತವನ್ನು ನಿಗದಿಪಡಿಸಲಾಗಿದೆ. ಕೇವಲ ಇಲಾಖೆಯಲ್ಲಿ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ಮಾತ್ರ ಈ ತರಬೇತಿಗೆ ಪರಿಗಣಿಸಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯನ್ನು ಬಂಧಪತ್ರ ಕೋಶದ ಮೂಲಕ ನಡೆಸಲಾಗುತ್ತದೆ.
ಷರತ್ತುಗಳು ಮತ್ತು ಪರ್ಯಾಯ ವ್ಯವಸ್ಥೆ
ತರಬೇತಿ ಪಡೆದ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅಲ್ಟ್ರಾಸೋನೊಗ್ರಫಿ ಸೇವೆಗಳನ್ನು ನೀಡಬೇಕೆಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ. ಅಲ್ಲದೆ, ವೈದ್ಯರು ತರಬೇತಿಗೆ ತೆರಳಿದಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ. ತರಬೇತಿಗೆ ನಿಯೋಜನೆಗೊಂಡ ವೈದ್ಯರ ಜಾಗಕ್ಕೆ ಗುತ್ತಿಗೆ ಆಧಾರದ ಮೇಲೆ ಬದಲಿ ವೈದ್ಯರನ್ನು ನೇಮಿಸಿಕೊಳ್ಳಲು ಆಯಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು (SIHFW) ಈ ಯೋಜನೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದೆ.

